ಜನಾರ್ದನ ರೆಡ್ಡಿ ದಂಪತಿಗೆ ಶಾಕ್‌! – ಆಸ್ತಿ ಜಪ್ತಿಗೆ ಸಿಬಿಐ ವಿಶೇಷ ನ್ಯಾಯಾಲಯ​ ಆದೇಶ

ಜನಾರ್ದನ ರೆಡ್ಡಿ ದಂಪತಿಗೆ ಶಾಕ್‌! – ಆಸ್ತಿ ಜಪ್ತಿಗೆ ಸಿಬಿಐ ವಿಶೇಷ ನ್ಯಾಯಾಲಯ​ ಆದೇಶ

ಬೆಂಗಳೂರು:  ಮಾಜಿ ಸಚಿವ ಹಾಗೂ ಹಾಲಿ ಶಾಸಕ ಜನಾರ್ದನ ರೆಡ್ಡಿಗೆ ಸಿಬಿಐ ವಿಶೇಷ ಕೋರ್ಟ್​ ಶಾಕ್‌ ನೀಡಿದೆ. ರೆಡ್ಡಿ ದಂಪತಿ ಒಡೆತನದಲ್ಲಿರುವ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಆಸ್ತಿ ಜಪ್ತಿ ಮಾಡಬೇಕೆಂದು ಕೋರ್ಟ್‌ ಆದೇಶ ಹೊರಡಿಸಿದೆ.

ಜನಾರ್ದನ ರೆಡ್ಡಿ ದಂಪತಿಗೆ ಸೇರಿದ ಒಟ್ಟು 124 ಆಸ್ತಿಗಳ ಜಪ್ತಿ ಕೋರಿ ಸಿಬಿಐ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು.  ಇದೀಗ ಶಾಸಕ ಜನಾರ್ದನ ರೆಡ್ಡಿ ಹಾಗೂ ಪತ್ನಿ ಅರುಣಾ ಲಕ್ಷ್ಮಿ ಅವರ ಒಡೆತನದ 2009ರ ಜನವರಿ ನಂತರ ಖರೀದಿ ಮಾಡಿದ ಆಸ್ತಿಗಳನ್ನು ಜಪ್ತಿ ಮಾಡುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿದೆ. ನ್ಯಾಯಾಲಯ ಭ್ರಷ್ಟಾಚಾರ ತಡೆ ಕಾಯ್ದೆ, ಕ್ರಿಮಿನಲ್ ಲಾ ತಿದ್ದುಪಡಿ ಕಾಯ್ದೆಯಡಿಯಲ್ಲಿ ಒಟ್ಟು 77  ಆಸ್ತಿಗಳನ್ನು ಜಪ್ತಿ ಮಾಡುವಂತೆ ಆದೇಶ ಹೊರಡಿಸಿದೆ.

ಇದನ್ನೂ ಓದಿ: ಬೆಂಗಳೂರಿಗರೇ ಎಚ್ಚರ.. – ನಗರದಲ್ಲಿ ಸುರಕ್ಷಿತ ಮಟ್ಟಕ್ಕಿಂತ 5.8 ಪಟ್ಟು ಹೆಚ್ಚು ವಾಯುಮಾಲಿನ್ಯ!

ರೆಡ್ಡಿ ಪತ್ನಿ ಅರುಣಾ ಲಕ್ಷ್ಮೀ ಹೆಸರಲ್ಲಿ 75ಕ್ಕೂ ಅಧಿಕ ಆಸ್ತಿಗಳಿವೆ. ಬೆಂಗಳೂರು, ಬಳ್ಳಾರಿ ಹಾಗೂ ಆಂಧ್ರದಲ್ಲಿ ರೆಡ್ಡಿ ದಂಪತಿ ಆಸ್ತಿ ಮಾಡಿದ್ದಾರೆ. ಇದೀಗ ರೆಡ್ಡಿ ದಂಪತಿ ಒಡೆತನದ ನೂರಕ್ಕೂ ಅಧಿಕ ಆಸ್ತಿಗಳನ್ನು ಜಪ್ತಿ ಮಾಡುವಂತೆ ನ್ಯಾಯಾಧೀಶ ಜಯಂತ್​ ಕುಮಾರ್ ಅವರು ಆದೇಶ ಮಾಡಿದ್ದಾರೆ.

ಈ ಹಿಂದೆ ಕೂಡ 2023ರ ಜನವರಿ 12 ರಂದು ಜನಾರ್ದನ ರೆಡ್ಡಿ ಆಸ್ತಿ ಜಪ್ತಿಗೆ ಕರ್ನಾಟಕ ಗೃಹ ಇಲಾಖೆ ಅನುಮತಿ ನೀಡಿ ಆದೇಶ ಹೊರಡಿಸಿತ್ತು. ಹೈಕೋರ್ಟ್​​ ಚಾಟಿ ಬೀಸಿದ ಬಳಿಕ ಎಚ್ಚೆತ್ತುಕೊಂಡಿದ್ದ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರ  ಜನವರಿ 12 ರಂದು ಜನಾರ್ದನ ರೆಡ್ಡಿ ಆಸ್ತಿ ಜಪ್ತಿಗೆ ಪ್ರತಿಕ್ರಿಯೆಗೆ ಅನುಮತಿ ನೀಡಿತ್ತು. ಕಳೆ‌ದ ವರ್ಷ ಆಗಸ್ಟ್ ತಿಂಗಳಲ್ಲಿ ಸಿಬಿಐ ತೆಲಂಗಾಣ, ಆಂಧ್ರಪ್ರದೇಶದಲ್ಲಿನ ಜನಾರ್ದನ ರೆಡ್ಡಿ ಆಸ್ತಿ ಜಪ್ತಿಗೆ ಅನುಮತಿ ಕೇಳಿತ್ತು. ಜನಾರ್ದನ ರೆಡ್ಡಿ ಆಸ್ತಿ ಜಪ್ತಿಗೆ ಕರ್ನಾಟಕ ಸರ್ಕಾರ ಅನುಮತಿ ನೀಡದ ಹಿನ್ನೆಲೆ ಸಿಬಿಐ ಹೈಕೋರ್ಟ್ ಮೆಟ್ಟಿಲೇರಿತ್ತು.

ಈ ಅರ್ಜಿ ವಿಚಾರಣೆ ನಡೆಸಿದ್ದ ಕರ್ನಾಟಕ ಹೈಕೋರ್ಟ್ 5 ತಿಂಗಳಾದರೂ ಸರ್ಕಾರ ಏಕೆ ನಿರ್ಧಾರ ಕೈಗೊಂಡಿಲ್ಲ. ನಿಮ್ಮ ದೃಷ್ಟಿಯಲ್ಲಿ ನಿರ್ಧಾರ ಕೈಗೊಳ್ಳದಿರುವುದೂ ಇಂದು ಕ್ರಮವಿರಬಹುದು. ಆದರೆ ಇದನ್ನು ಕೋರ್ಟ್ ಒಪ್ಪಲು ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿತ್ತು. ಸರ್ಕಾರದ ಪ್ರತಿಕ್ರಿಯೆ ತಿಳಿಸಲು ಖಡಕ್ ಸೂಚನೆ ಕೊಟ್ಟಿತ್ತು. ಇದರ ಬೆನ್ನಲ್ಲೇ ರಾಜ್ಯ ಗೃಹ ಇಲಾಖೆ ಜನಾರ್ದನ್​ ರೆಡ್ಡಿ ಆಸ್ತಿ ಜಪ್ತಿ ಪ್ರಕ್ರಿಯೆ ಅನುಮತಿ ನೀಡಿ ಆದೇಶ ಹೊರಡಿಸಿತ್ತು.

suddiyaana