ಡಿಕೆಶಿಗೆ ಸಂಪತ್ತೇ ಮುಳುವಾಯ್ತಾ? – ಸಿಎಂ ಆಗುವ ಬದಲು ಮತ್ತೆ ಜೈಲಿಗೆ?   

ಡಿಕೆಶಿಗೆ ಸಂಪತ್ತೇ ಮುಳುವಾಯ್ತಾ? – ಸಿಎಂ ಆಗುವ ಬದಲು ಮತ್ತೆ ಜೈಲಿಗೆ?   

ಕರ್ನಾಟಕ ಕಾಂಗ್ರೆಸ್ಸೇ ಇರಲಿ, ರಾಷ್ಟ್ರಮಟ್ಟದ ಕಾಂಗ್ರೆಸ್​ನಲ್ಲೇ ಆಗಲಿ.. ಏನಾದ್ರೂ ಪ್ರಾಬ್ಲಂ ಅಂದ್ರೆ ಥಟ್ ಅಂತಾ ನೆನಪಾಗೋದೇ ಡಿ.ಕೆ ಶಿವಕುಮಾರ್ ಹೆಸ್ರು. ಇದಕ್ಕೇ ಏನೋ ಅವ್ರನ್ನ ಟ್ರಬಲ್ ಶೂಟರ್ ಅಂತಾ ಕರೆಯಲಾಗುತ್ತೆ. ಆದ್ರೀಗ ಅದೇ ಟ್ರಬಲ್ ಶೂಟರ್ ಗೆ ಅಕ್ರಮ ಆಸ್ತಿ ಗಳಿಕೆ ಪ್ರಕರಣ ಪದೇಪದೆ ಉರುಳಾಗಿ ಕಾಡ್ತಿದೆ. ನಿಟ್ಟುಸಿರು ಬಿಡುವಷ್ಟರಲ್ಲೇ ಮತ್ತೆ ಬಂದು ಸುತ್ತಿಕೊಳ್ತಿದೆ. ಈಗಾಗ್ಲೇ ತಿಹಾರ್ ಜೈಲಿಗೆ ಹೋಗಿ ಬಂದಿರುವ ಡಿಕೆಶಿ ಮತ್ತೆ ಜೈಲಿಗೆ ಹೋಗೋಕೂ ರೆಡಿ ಅಂದಿದ್ದಾರೆ. ಕೇರಳದ ಚಾನೆಲ್ ವೊಂದಕ್ಕೆ ಡಿಕೆಶಿ ಹೂಡಿಕೆ ಮಾಡಿರುವ ಆರೋಪದಲ್ಲಿ ನೋಟಿಸ್ ನೀಡಲಾಗಿದೆ.

ಇದನ್ನೂ ಓದಿ: 3 ದಶಕಗಳ ಹಿಂದಿನ ಗಲಭೆಗೆ ಮರುಜೀವ – ರಾಮನ ಹೆಸರಲ್ಲಿ ದ್ವೇಷ ಸಾಧಿಸ್ತಿದ್ಯಾ ಕಾಂಗ್ರೆಸ್?

ಕೇರಳ ಮೂಲದ ಜೈಹಿಂದ್ ಚಾನೆಲ್‌ಗೆ ಸಿಬಿಐ ನೋಟಿಸ್ ರವಾನಿಸಿದ್ದು, ಅದರಲ್ಲಿ ಕರ್ನಾಟಕದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಹೂಡಿಕೆಯ ವಿವರವನ್ನು ಒದಗಿಸುವಂತೆ ಕೇಳಿದೆ. ಜ. 11ರಂದು ತನಿಖಾಧಿಕಾರಿಯು ಕೋರಿರುವ ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ವಿಚಾರಣೆಗೆ ಹಾಜರಾಗಿ ಎಂದು ಸುದ್ದಿವಾಹಿನಿಯನ್ನು ನಡೆಸುತ್ತಿರುವ ಜೈಹಿಂದ್‌ ಕಮ್ಯುನಿಕೇಷನ್ಸ್‌ ಪ್ರೈವೇಟ್‌ ಲಿ.ನ ಮುಖ್ಯಸ್ಥರಿಗೆ ಸಿಬಿಐನ ಬೆಂಗಳೂರು ಘಟಕದ ಅಧಿಕಾರಿಗಳು ಸೂಚಿಸಿದ್ದಾರೆ. ಸಿಆರ್‌ಪಿಸಿ ಸೆಕ್ಷನ್‌ 91ರ ಅಡಿಯಲ್ಲಿ ಈ ನೋಟಿಸ್‌ ನೀಡಲಾಗಿದೆ. ನೋಟಿಸ್‌ನಲ್ಲಿ, ಡಿಕೆ ಶಿವಕುಮಾರ್ ಮತ್ತು ಅವರ ಪತ್ನಿ ಉಷಾ ಶಿವಕುಮಾರ್ ಅವರು ಜೈಹಿಂದ್‌ ಕಮ್ಯುನಿಕೇಷನ್ಸ್‌ ಪ್ರೈವೇಟ್‌ ಲಿಮಿಟೆಡ್​​ನಲ್ಲಿ ಮಾಡಿರುವ ಹೂಡಿಕೆಗಳು, ಅವರಿಗೆ ಪಾವತಿಸಿದ ಲಾಭಾಂಶಗಳು, ಷೇರು ವಹಿವಾಟುಗಳು, ಹಣಕಾಸಿನ ವಹಿವಾಟುಗಳ ಜೊತೆಗೆ ಬ್ಯಾಂಕ್ ವಿವರಗಳನ್ನು ಒದಗಿಸುವಂತೆ ಚಾನಲ್‌ಗೆ ಸೂಚನೆ ನೀಡಲಾಗಿದೆ.

ಇದು ಒಂದ್ಕಡೆಯಾದ್ರೆ ಅಕ್ರಮ ಆಸ್ತಿ ಗಳಿಕೆ ಪ್ರಕರಣ ಕೂಡ ದುಸ್ವಪ್ನವಾಗಿ ಕಾಡ್ತಿದೆ. ಇತ್ತೀಚೆಗಷ್ಟೇ ರಾಜ್ಯ ಸರ್ಕಾರ ಡಿ.ಕೆ ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆಗೆ ಎಳ್ಳು ನೀರು ಬಿಟ್ಟಿತ್ತು. ಡಿ.ಕೆ ಶಿವಕುಮಾರ್ ವಿರುದ್ಧದ ಪ್ರಕರಣವನ್ನ ಹಿಂಪಡೆಯುವ ಬಗ್ಗೆ ಗೃಹ ಇಲಾಖೆ ಸಚಿವ ಸಂಪುಟಕ್ಕೆ ಪ್ರಸ್ತಾವನೆ ಸಲ್ಲಿಸಿ ಒಪ್ಪಿಗೆ ಪಡೆದುಕೊಂಡಿತ್ತು. ಹಾಗೂ ಲೋಕಾಯುಕ್ತಕ್ಕೂ ತನಿಖೆಗೆ ಒಪ್ಪಿಸಿತ್ತು. ಇದು ವಿಪಕ್ಷನಾಯಕರ ಕಣ್ಣು ಕೆಂಪಾಗುವಂತೆ ಮಾಡಿತ್ತು. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣವನ್ನು ಸಿಬಿಐಗೆ ವಹಿಸಿ ಆದೇಶ ನೀಡಿದ್ದರು. ಸರ್ಕಾರದ ಈ ಆದೇಶವನ್ನು ಪ್ರಶ್ನಿಸಿದ್ದ ಡಿ.ಕೆ.ಶಿವಕುಮಾ‌ರ್ ಅವರು 2020ರಲ್ಲಿ ಕರ್ನಾಟಕ ಹೈ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯ ಈ ಅರ್ಜಿಯನ್ನು 2023ರ ಅಕ್ಟೋಬರ್ ಅಕ್ಟೋಬರ್ 18 ರಂದು ವಜಾಗೊಳಿಸಿತ್ತು.  ಆದಾಯ ಮೀರಿ ಆಸ್ತಿ ಗಳಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಸಿಬಿಐ ದಾಖಲಿಸಿರುವ ಎಫ್‌ಐಆರ್ ರದ್ದುಪಡಿಸಲು ನಿರಾಕರಿಸಿದ ಹೈಕೋರ್ಟ್‌, ತನಿಖೆ ಮುಂದುವರಿಸಲು ಅನುಮತಿ ನೀಡಿತ್ತು.  ಅಕ್ರಮ ಆಸ್ತಿ ಗಳಿಕೆ ಕೇಸ್​ನಲ್ಲೇ ಡಿಕೆಶಿ ತಿಹಾರ್ ಜೈಲಿಗೂ ಹೋಗಿ ಬಂದಿದ್ರು.

ಏನಿದು ಪ್ರಕರಣ..? 

ಆದಾಯ ಮೀರಿ ಆಸ್ತಿ ಗಳಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಡಿ.ಕೆ. ಶಿವಕುಮಾರ್ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿತ್ತು. ಭ್ರಷ್ಟಾಚಾರ ನಿಗ್ರಹ ಕಾಯ್ದೆ-1988ರ ವಿವಿಧ ಕಲಂಗಳ ಅಡಿಯಲ್ಲಿ 2020ರ ಅಕ್ಟೋಬರ್  3ರಂದು ಸಿಬಿಐ ಕೇಸ್ ದಾಖಲಿಸಿತ್ತು. ಸಿಬಿಐ ದಾಖಲಿಸಿರುವ ಎಫ್‌ ಐಆರ್ ಕಾನೂನು ಬಾಹಿರವಾಗಿದ್ದು, ತನಿಖೆ ರದ್ದುಪಡಿಸಬೇಕು ಎಂದು ಕೋರಿ‌ ಡಿ.ಕೆ ಶಿವಕುಮಾರ್, 2022ರ ಜುಲೈನಲ್ಲಿ ಹೈಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಪೀಠ, 2023ರ ಫೆಬ್ರವರಿ 10ರಂದು ತನಿಖೆಗೆ ಮಧ್ಯಂತರ ತಡೆ ನೀಡಿತ್ತು.‌ ಈ ತಡೆ ಆದೇಶವನ್ನು ಈ ತನಕ ವಿಸ್ತರಿಸಿಕೊಂಡು ಬರಲಾಗಿತ್ತು. ವಿಚಾರಣೆಯನ್ನು 2023ರ ಜುಲೈ 31ರಂದು ಪೂರ್ಣಗೊಳಿಸಿದ್ದ ನ್ಯಾಯಪೀಠ ತೀರ್ಪು ಕಾಯ್ದಿರಿಸಿತ್ತು. ಪ್ರಕರಣವನ್ನು ಸಿಬಿಐ ತನಿಖೆಗೆ ಹಸ್ತಾಂತರಿಸಿದ್ದ ರಾಜ್ಯ ಸರ್ಕಾರದ ಆದೇಶ ರದ್ದುಪಡಿಸಬೇಕು ಎಂದು ಕೋರಿ‌‌ ಡಿ.ಕೆ.ಶಿವಕುಮಾರ್‌ ಸಲ್ಲಿಸಿದ್ದ ಮತ್ತೊಂದು ಅರ್ಜಿಯನ್ನು ನಾಲ್ಕು ತಿಂಗಳ ಹಿಂದಷ್ಟೇ ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿತ್ತು.

ರಾಜ್ಯ ರಾಜಕೀಯದಲ್ಲಿ ಪವರ್ ಫುಲ್ ಲೀಡರ್ ಆಗಿ ಬೆಳೆದಿರುವ ಡಿಕೆಶಿ ಸಿಎಂ ಕುರ್ಚಿ ಮೇಲೂ ಕಣ್ಣಿಟ್ಟಿದ್ದಾರೆ. ಡಿಕೆಶಿ ಒಂದು ಹೆಜ್ಜೆ ಮುಂದಿಟ್ಟಂತೆಲ್ಲಾ ಅಕ್ರಮ ಆಸ್ತಿ ಉರುಳು, ಹಣ ಹೂಡಿಕೆ ಪ್ರಕರಣಗಳು ಅವ್ರನ್ನ ಮತ್ತೆ ಮತ್ತೆ ಹಿಂದಕ್ಕೆ ಎಳೆಯುತ್ತಿದೆ. ವರ್ಷದಿಂದ ವರ್ಷಕ್ಕೆ ಡಬಲ್ ಆಗುತ್ತಿರುವ ಅವ್ರ ಸಂಪತ್ತೇ ಅವರ ಕನಸಿಗೆ ಸವಾಲ್ ಆಗುತ್ತಿದೆ. ಆದ್ರೆ ಡಿಕೆಶಿ ಮಾತ್ರ ನನ್ನ ವಿರುದ್ಧ ಷಡ್ಯಂತ್ರ ಮಾಡ್ತಿದ್ದಾರೆ. ಜೈಲಿಗಾದರೂ ಹಾಕಲಿ. ಎಲ್ಲದಕ್ಕೂ ರೆಡಿಯಾಗಿದ್ದೇನೆ. ನಾನು ಹೆದರಲ್ಲ ಅಂತ ಖಡಕ್ ಸವಾಲು ಹಾಕಿದ್ದಾರೆ.

Shwetha M