ತಿರುಪತಿ ಲಡ್ಡಿನಲ್ಲಿ ಕಲಬೆರಕೆ ಕೇಸ್ – ನಾಲ್ವರನ್ನ ಅರೆಸ್ಟ್ ಮಾಡಿದ ಸಿಬಿಐ

ತಿರುಪತಿ ತಿರುಮಲದಲ್ಲಿ ನಡೆದಿದೆ ಎನ್ನಲಾದ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಮಿಶ್ರಣ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ಭಾನುವಾರ ನಾಲ್ವರನ್ನು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ತನಿಖೆ ನಡೆಸಿದ್ದ ಹೈದರಾಬಾದ್ ವಿಭಾಗದ ಜಂಟಿ ನಿರ್ದೇಶಕ ವೀರೇಶ್ ಪ್ರಭು, ವಿಶಾಖಪಟ್ಟಣಂ ಸಿಬಿಐ ಎಸ್ಪಿ ಮುರಳೀರಾಂಬ, ವಿಶಾಖಪಟ್ಟಣಂ ಡಿಐಜಿ ಗೋಪಿನಾಥ್ ಜೆಟ್ಟಿ, ಗುಂಟೂರು ಐಜಿ ಸರ್ವಶ್ರೇಷ್ಠಿ ತ್ರಿಪಾಠಿ ಮತ್ತು ಎಫ್‌ಎಸ್‌ಎಸ್‌ಎಐ ಅಧಿಕಾರಿ ಸತ್ಯಕುಮಾರ್ ಪಾಂಡಾ ನೇತೃತ್ವದ ತಂಡ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಭೋಲೆ ಬಾಬಾ ಡೈರಿಯ ಮಾಜಿ ನಿರ್ದೇಶಕರಾದ ವಿಪಿನ್ ಜೈನ್ ಮತ್ತು ಪೊಮಿಲ್ ಜೈನ್ , ವೈಷ್ಣವಿ ಡೈರಿಯ ಸಿಇಒ ಅಪೂರ್ವ ವಿನಯ್ ಕಾಂತ್ ಚಾವ್ಡಾ ಮತ್ತು ಎಆರ್ ಡೈರಿ ಎಂಡಿ ರಾಜು ರಾಜಶೇಖರನ್ ಇವರುಗಳು ಲಡ್ಡು ಪ್ರಸಾದ ಕಲಬೆರಕೆ ಹಗರಣದಲ್ಲಿ ಬಂಧಿತರಾಗಿರುವ ಆರೋಪಿಗಳಾಗಿದ್ದಾರೆ. ಎಲ್ಲಾ ಆರೋಪಿಗಳನ್ನು ವಶಕ್ಕೆ ಪಡೆದಿರುವ ಎಸ್‌ಐಟಿ ಅಧಿಕಾರಿಗಳು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ತನಿಖಾ ತಂಡ ತಿಳಿಸಿದೆ.
ಮೂಲಗಳ ಪ್ರಕಾರ ಆರೋಪಿಗಳನ್ನು ಅಪರಾಧ ಸಂಖ್ಯೆ 470/24 ರ ಅಡಿಯಲ್ಲಿ ಬಂಧಿಸಿ ತಿರುಪತಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ತನಿಖೆಯಲ್ಲಿ ತುಪ್ಪ ಪೂರೈಕೆಯಲ್ಲಿ ಪಾಲಿಸಬೇಕಾದ ನಿಯಮಗಳ ಉಲ್ಲಂಘನೆಯಾಗಿರುವುದು ಬಹಿರಂಗವಾಗಿದೆ. ಇದರಲ್ಲಿ ಟೆಂಡರ್ ಪಡೆಯಲು ನಕಲಿ ದಾಖಲೆಗಳು ಮತ್ತು ಸ್ಟ್ಯಾಂಪ್‌ಗಳನ್ನು ಬಳಸಿರುವುದು ಕೂಡ ಸೇರಿಕೊಂಡಿದೆ. ವೈಷ್ಣವಿ ಡೈರಿಯು ಭೋಲೆ ಬಾಬಾ ಡೈರಿಯ ತುಪ್ಪ ಪೂರೈಕೆಯ ನಿಯಮಗಳನ್ನು ತಿರುಚಿರುವುದು ಬೆಳಕಿಗೆ ಬಂದಿದೆ. ವಿಚಾರಣೆಯಲ್ಲಿ ಪೂರೈಕೆಯಲ್ಲಿ ಹಲವು ವ್ಯತ್ಯಾಸಗಳು ಮತ್ತು ಸುಳ್ಳು ದಾಖಲೆಗಳನ್ನು ನೀಡಿರುವುದು ಕಂಡುಬಂದಿವೆ.