ಕಾವೇರಿ ನದಿಗೆ 5 ಬಾರಿ ಬಾಗಿನ ಅರ್ಪಿಸಿ ಬಿ.ಎಸ್ ಯಡಿಯೂರಪ್ಪ ದಾಖಲೆ – ಜೀವನದಿಯ ಇತಿಹಾಸದ ಬಗ್ಗೆ ಇಲ್ಲಿದೆ ಮಾಹಿತಿ!
ಕಾವೇರಿ ನದಿ ಕರ್ನಾಟಕದ ಜೀವನದಿ. ಕೊಡಗು ಜಿಲ್ಲೆಯ ಪಶ್ಚಿಮ ಘಟ್ಟದಲ್ಲಿ ತಲಕಾವೇರಿಯೆಂಬ ಸ್ಥಳದಲ್ಲಿ ಉಗಮಿಸುವ ಈ ನದಿ, ಮೈಸೂರು ಜಿಲ್ಲೆಯ ಮೂಲಕ ತಮಿಳುನಾಡಿಗೆ ಹರಿದು ಬಂಗಾಳಕೊಲ್ಲಿಯನ್ನು ಸೇರುತ್ತದೆ. ಕಾವೇರಿಯ ಉಪನದಿಗಳಲ್ಲಿ ಶಿಂಶಾ, ಹೇಮಾವತಿ, ಅರ್ಕಾವತಿ, ಕಪಿಲಾ, ಕಬಿನಿ, ಲಕ್ಷ್ಮಣ ತೀರ್ಥ ಮತ್ತು ಲೋಕಪಾವನಿ ನದಿಗಳಿವೆ.
ಕಾವೇರಿ ‘ದಕ್ಷಿಣ ಗಂಗೆ’ಯೆಂದು ಪ್ರಸಿದ್ಧಿ ಪಡೆದ ಕರ್ನಾಟಕದ ಮಹಾನದಿ. ತುಲಾಮಾಸದಲ್ಲಿ ಕಾವೇರಿ ಸ್ನಾನ ಮಾಡಿದರೆ ಸಕಲ ಪಾಪಗಳೂ ನಾಶವಾಗುವುದೆಂಬ ನಂಬಿಕೆಯಿದೆ. ಕೊಡಗರು ಕಾವೇರಿಯನ್ನು ತಮ್ಮ ಕುಲದೈವದಂತೆ ಪೂಜಿಸುತ್ತಾರೆ. ಆದರೆ ಈ ವರ್ಷ ಕರ್ನಾಟಕದಲ್ಲಿ ಸರಿಯಾಗಿ ಮಳೆ ಇಲ್ಲದೆ ಕಾವೇರಿ ನದಿ ಬತ್ತಿ ಹೋಗಿದೆ. ಇದೇ ನದಿಗೆ ಅಡ್ಡಲಾಗಿ ಕಟ್ಟಿರುವ ಕೆಆರ್ ಎಸ್ ಡ್ಯಾಂ ಕೂಡ ಖಾಲಿಯಾಗುತ್ತಿದೆ. ಆದರೂ ನೆರೆ ರಾಜ್ಯ ತಮಿಳುನಾಡು ಮಾತ್ರ ನೀರು ಬಿಡಲೇಬೇಕೆಂದು ಪಟ್ಟು ಹಿಡಿದು ಕುಳಿತಿದೆ. ಪ್ರತೀ ವರ್ಷ ತುಂಬಿ ಹರಿಯುತ್ತಿದ್ದ ಕಾವೇರಿ ನದಿಗೆ ಬಾಗಿನ ಅರ್ಪಿಸಲಾಗುತ್ತಿತ್ತು. ಆದರೆ ಈ ಬಾರಿ ನೀರಿಗಾಗಿ ಜಟಾಪಟಿ ಮುಂದುವರಿಯುತ್ತಲೇ ಇದೆ. ಪ್ರತಿ ವರ್ಷ ಕಾವೇರಿ ತುಂಬಿದಾಗ ಅದಕ್ಕೆ ರಾಜ್ಯದ ಮುಖ್ಯಮಂತ್ರಿಗಳು ಬಾಗಿನ ಅರ್ಪಿಸೋದು ವಾಡಿಕೆ. ಆದ್ರೆ ಈ ಬಾಗಿನ (Bagina) ಅರ್ಪಿಸಲು ಪ್ರಾರಂಭ ಮಾಡಿದ್ದು ಯಾರು? ಇದುವರೆಗೂ ಎಷ್ಟು ಜನ ಬಾಗಿನ ಅರ್ಪಿಸಿದ್ದಾರೆ ಗೊತ್ತಾ? ಈ ಬಗೆಗಿನ ಸ್ವಾರಸ್ಯಕರ ಮಾಹಿತಿ ಇಲ್ಲಿದೆ.
ಇದನ್ನೂ ಓದಿ : ತೀರ್ಥರೂಪಿಣಿಯಾಗಿ ಮಧ್ಯರಾತ್ರಿ 1.27ಕ್ಕೆ ಕಾವೇರಿಯ ದರ್ಶನ – ದರ್ಶನ ಪಡೆದ ಸಾವಿರಾರು ಭಕ್ತರು
ಹೌದು ಜೀವ ನದಿ ಕಾವೇರಿ ತುಂಬಿ ಹರಿದಾಗ ಪ್ರತಿ ವರ್ಷ ಕಾವೇರಿ ಮಾತೆಗೆ ಬಾಗಿನ ಅರ್ಪಿಸಲಾಗತ್ತೆ. 1911 ರಲ್ಲಿ ಕಾವೇರಿ ನದಿಗೆ ಅಡ್ಡಲಾಗಿ KRS ಡ್ಯಾಂ ಕಟ್ಟಲು ಪ್ರಾರಂಭ ಮಾಡಲಾಯ್ತು. ಬಳಿಕ 1932 ರಲ್ಲಿ ಡ್ಯಾಂ ಕಾಮಗಾರಿ ಮುಗಿದು ಲೋಕಾರ್ಪಣೆ ಮಾಡಲಾಯಿತು. ಇದಾದ ಬಳಿಕ ಮೊಟ್ಟ ಮೊದಲ ಬಾರಿಗೆ 1979 ರಲ್ಲಿ ಅಂದಿನ ಮುಖ್ಯಮಂತ್ರಿ ಡಿ ದೇವರಾಜ ಅರಸ್ ಅವರು ಮದುವಣಗಿತ್ತಿಯಂತೆ ಮೈದುಂಬಿ ಹರಿಯುತ್ತಿದ್ದ ಕಾವೇರಿ ಮಾತೆಯನ್ನ ಕಂಡು ಬಾಗಿನ ಅರ್ಪಿಸುವ ಪ್ರಕ್ರಿಯೆಗೆ ಚಾಲನೆ ನೀಡಿದ್ರು. ಇನ್ನು KRS ಡ್ಯಾಂ ನಿರ್ಮಿಸಿ ಇಲ್ಲಿಗೆ ಸರಿ ಸುಮಾರು 91 ವರ್ಷ ಕಳೆದಿದ್ದು, ಬಾಗಿನ ಅರ್ಪಿಸುವ ಪ್ರಕ್ರಿಯೆಗೆ 45 ವರ್ಷ ತುಂಬಿದೆ. ಈ 45 ವರ್ಷದಲ್ಲಿ ಸರಿ ಸುಮಾರು 32 ಬಾರಿ ಇದುವರೆಗೂ ಬಾಗಿನ ಅರ್ಪಿಸಲಾಗಿದ್ದು, ಅದರಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡ್ಡಿಯೂರಪ್ಪ 5 ಬಾರಿ ಬಾಗಿನ ಅರ್ಪಿಸುವ ಮೂಲಕ ದಾಖಲೆ ಬರೆದಿದ್ದಾರೆ. ಇನ್ನು ರಾಜ್ಯದ ಹಾಲಿ ಸಿಎಂ ಸಿದ್ದರಾಮಯ್ಯ ಇದುವರೆಗೂ 2 ಬಾರಿ ಬಾಗಿನ ಅರ್ಪಿಸಿದ್ದು, ಸದ್ಯ ಈ ಬಾರಿ ಡ್ಯಾಂ ಭರ್ತಿಯಾಗದ ಕಾರಣ ಬಾಗಿನ ಅರ್ಪಿಸಲು ಸಾಧ್ಯವಾಗಿಲ್ಲ. ಒಂದು ವೇಳೆ ವರುಣ ದೇವ ಕೃಪೆ ತೋರಿದ್ರೆ ಸಿದ್ದರಾಮಯ್ಯ ಮೂರನೇ ಬಾರಿಗೆ ಕಾವೇರಿ ಮಾತೆಗೆ ಬಾಗಿನ ಅರ್ಪಿಸಲಿದ್ದಾರೆ.