ಕಾವೇರಿದ ಕಾವೇರಿ ಕಿಚ್ಚು – ಸೆ. 26 ರಂದು ಸ್ತಬ್ಧವಾಗಲಿದೆ ರಾಜ್ಯ ರಾಜಧಾನಿ

ಕಾವೇರಿದ ಕಾವೇರಿ ಕಿಚ್ಚು – ಸೆ. 26 ರಂದು ಸ್ತಬ್ಧವಾಗಲಿದೆ ರಾಜ್ಯ ರಾಜಧಾನಿ

ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಕಾವೇರಿ ಕಿಚ್ಚು ತೀವ್ರಗೊಂಡಿದೆ. ತಮಿಳುನಾಡಿಗೆ ಕಾವೇರಿ ನೀರು ಹರಿಸದಂತೆ ಆಗ್ರಹಿಸಿ ಕರ್ನಾಟಕ ಜಲ ಸಂರಕ್ಷಣಾ ಸಮಿತಿ ನೀಡಿರುವ ‘ಬೆಂಗಳೂರು ಬಂದ್‌’ ಕರೆಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಹೀಗಾಗಿ ರಾಜಧಾನಿ ಸ್ತಬ್ಧವಾಗುವುದು ಬಹುತೇಕ ನಿಶ್ಚಿತವಾಗಿದೆ.

ಬೆಂಗಳೂರು ಬಂದ್‌ ಹಿನ್ನೆಲೆ ರಾಜ್ಯ ರಾಜಧಾನಿಯಲ್ಲಿ ಹಲವು ಸೇವೆಗಳು ವ್ಯತ್ಯಯವಾಗುವ ಸಾಧ್ಯತೆಗಳಿವೆ. ಕುರುಬೂರು ಶಾಂತಕುಮಾರ್‌ ನೇತೃತ್ವದಲ್ಲಿ ರಚನೆಯಾಗಿರುವ, 92 ಸಂಘಟನೆಗಳು ಬೆಂಬಲ ಸೂಚಿಸಿದ್ದು, ಕರ್ನಾಟಕ ಜಲ ಸಂರಕ್ಷಣಾ ಸಮಿತಿಯು ಸೆ. 26ರಂದು ಬೆಂಗಳೂರು ಬಂದ್‌ಗೆ ಕರೆ ನೀಡಿದೆ. ಆದರೆ, ಅದಕ್ಕೆ ವಾಟಾಳ್‌ ಪಕ್ಷದ ವಾಟಾಳ್‌ ನಾಗರಾಜ್‌ ಸೇರಿದಂತೆ 20ಕ್ಕೂ ಹೆಚ್ಚಿನ ಕನ್ನಡಪರ ಸಂಘಟನೆಗಳ ಮುಖಂಡರು ಬೆಂಬಲ ನೀಡದೆ ಸೆ. 29ರಂದು ರಾಜ್ಯ ಬಂದ್‌ಗೆ ಕರೆ ನೀಡಲು ಮುಂದಾಗಿದ್ದಾರೆ. ಈ ಕುರಿತು ಸೋಮವಾರ ಸಭೆ ನಡೆಸಿ ದಿನಾಂಕ ಘೋಷಿಸುವುದಾಗಿಯೂ ತಿಳಿಸಿದ್ದಾರೆ.

ಇದನ್ನೂ ಓದಿ: ಮಂಡ್ಯದಲ್ಲೇ ಕಬ್ಬು, ಭತ್ತಕ್ಕಿಲ್ಲ ಕೆಆರ್ ಎಸ್ ನೀರು – ಆಗಸ್ಟ್, ಸೆಪ್ಟೆಂಬರ್ ತಿಂಗಳಲ್ಲಿಯೇ ಕಾವೇರಿ ವಿವಾದ ಉದ್ವಿಘ್ನ ಯಾಕೆ..?

ಬೆಂಗಳೂರು ಬಂದ್‌ ಹಿನ್ನೆಲೆ ಆಟೋ, ಟ್ಯಾಕ್ಸಿ ಸೇರಿದಂತೆ ಹಲವು ಉದ್ಯಮಗಳು ಬಂದ್‌ ಆಗುವ ಸಾಧ್ಯತೆ ಇದೆ. ಹೀಗಾಗಿ ನಾಳೆ ರಾಜಧಾನಿ ಬೆಂಗಳೂರು ಸ್ತಬ್ಧವಾಗುವ ಸಾಧ್ಯತೆ ಕಂಡುಬರುತ್ತಿದೆ.

ಬೆಂಗಳೂರು ಬಂದ್‌ನಿಂದಾಗಿ ಮಂಗಳವಾರ ಬೆಂಗಳೂರಿನಲ್ಲಿ ಹಲವು ಸೇವೆಗಳಲ್ಲಿ ವ್ಯತ್ಯಯವಾಗಲಿದೆ. ಬಿಎಂಟಿಸಿ ಬಸ್‌ಗಳು ಭಾಗಶಃ ಸ್ಥಗಿತಗೊಳ್ಳುವ ಸಾಧ್ಯತೆಗಳಿವೆ. ಅದರ ಜತೆಗೆ ಒಲಾ-ಉಬರ್‌ ಆಟೋ, ಕ್ಯಾಬ್‌ಗಳು ಸಂಚರಿಸುವುದಿಲ್ಲ. ಅಲ್ಲದೆ, ಎಪಿಎಂಸಿ ನೌಕರರು ಬೆಂಬಲ ನೀಡಿರುವುದರಿಂದ ಮಾರುಕಟ್ಟೆಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುವುದಿಲ್ಲ. ಆಭರಣ ಮಳಿಗೆಗಳು, ಚಲನಚಿತ್ರ, ಧಾರಾವಾಹಿ ಚಿತ್ರೀಕರಣ ಸ್ಥಗಿತಗೊಳ್ಳಲಿದೆ. ಮಂಗಳವಾರ ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಹಲವು ಸೇವೆಗಳು ವ್ಯತ್ಯಯವಾಗಲಿವೆ.

ಬಂದ್‌ ಹಿನ್ನೆಲೆ ಏನಿರಲ್ಲ?

ಬೆಂಗಳೂರು ಬಂದ್‌ ಹಿನ್ನೆಲೆ  ಖಾಸಗಿ ಸಾರಿಗೆ, ರುಪ್ಸಾ ಸಂಘಟನೆ ವ್ಯಾಪ್ತಿಯ ಖಾಸಗಿ ಶಾಲೆಗಳು, ಎಪಿಎಂಸಿ. ಭಾಗಶಃ ಬಿಎಂಟಿಸಿ ಬಸ್‌ಗಳು, ಆಭರಣ ಮಳಿಗೆಗಳು, ಚಲನಚಿತ್ರ, ಧಾರಾವಾಹಿ ಚಿತ್ರೀಕರಣ, ಭಾಗಶಃ ಬಿಬಿಎಂಪಿ ಸೇವೆಗಳು ಬಂದ್‌ ಆಗಲಿವೆ ಎಂದು ವರದಿಯಾಗಿದೆ.

ಬಂದ್‌ ವೇಳೆ ಏನಿರುತ್ತೆ ?

ಬಂದ್‌ ವೇಳೆ ಕೆಲ ಹೋಟೆಲ್‌, ಶಾಲಾ –ಕಾಲೇಜು, ಮೆಡಿಕಲ್‌ ಸ್ಟೋರ್‌, ಹಾಪ್‌ಕಾಮ್ಸ್‌, ಕೆಎಸ್‌ಆರ್‌ಟಿಸಿ ಬಸ್‌ಗಳು, ಕೆಲ ಮಾರುಕಟ್ಟೆಗಳು ಎಂದಿನಂತೆ ಸೇವೆ ಒದಗಿಸಲಿವೆ ಎಂದು ವರದಿಯಾಗಿದೆ.

Shwetha M