ಕಾವೇರಿ ಆರತಿಗೆ ಕೌಂಟ್‌ಡೌನ್ ಶುರು! – ಮದುವಣಗಿತ್ತಿಯಂತೆ ಸಿಂಗಾರಗೊಂಡ ಕೆಆರ್‌ಎಸ್

ಗಂಗಾ ಆರತಿ ಮಾದರಿಯಲ್ಲೇ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಕಾವೇರಿ ನದಿಗೆ ಕಾವೇರಿ ಆರತಿ ಕಾರ್ಯಕ್ರಮ ಇಂದಿನಿಂದ ಐದು ದಿನಗಳ ಕಾಲ ನಡೆಯಲಿದೆ. ಕೆಆರ್‌ಎಸ್‌ನ ಬೃಂದಾವನದಲ್ಲಿ ಕಾವೇರಿ ಆರತಿ ನೆರವೇರಲಿದ್ದು, ಕೆಆರ್‌ಎಸ್ ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ. ಡಿಸಿಎಂ ಡಿಕೆ ಶಿವಕುಮಾರ್ ಇಂದು ಸಂಜೆ ಕಾವೇರಿ ಆರತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಇದನ್ನೂ ಓದಿ: ಎಸ್. ಎಲ್ ಭೈರಪ್ಪ ಅಂತಿಮ ಯಾನ – ಅಕ್ಷರ ಮಾಂತ್ರಿಕನಿಗೆ ಭಾವಪೂರ್ಣ ವಿದಾಯ
ರೈತಸಂಘದ ಪ್ರಬಲ ವಿರೋಧದ ನಡುವೆಯೂ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್ ಅಣೆಕಟ್ಟೆ ಬಳಿ ಡಿಸಿಎಂ ಡಿಕೆ ಶಿವಕುಮಾರ್ ಅವರ ಕನಸಿನ ಕಾವೇರಿ ಆರತಿ ಕಾರ್ಯಕ್ರಮಕ್ಕೆ ನಡೆಯುತ್ತಿದೆ. ಇಂದು ಸಂಜೆ 6:00 ಗಂಟೆಗೆ ಡಿ.ಕೆ ಶಿವಕುಮಾರ್ ಅವರು ಕಾವೇರಿ ನದಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟನೆ ಮಾಡಲಿದ್ದಾರೆ. ತರಬೇತಿ ಪಡೆದ 12-13 ಸ್ಥಳೀಯ ಪುರೋಹಿತರು ಗಂಗಾರತಿ ಮಾದರಿಯಲ್ಲಿ ಕಾವೇರಿ ಆರತಿ ನೆರವೇರಿಸಲಿದ್ದಾರೆ. ಸೆ. 30 ರಂದು ಈ ಕಾರ್ಯಕ್ರಮಕ್ಕೆ ತೆರೆಬೀಳಲಿದೆ.
ಇನ್ನು ಕಾವೇರಿ ಆರತಿ ವೀಕ್ಷಣೆಗೆ ಸಾವಿರಾರು ಮಂದಿ ಬರುವ ನಿರೀಕ್ಷೆಯಿದೆ. ಕರ್ನಾಟಕ ಮಾತ್ರವಲ್ಲದೇ ಬೇರೆ ರಾಜ್ಯದಿಂದಲೂ ಪ್ರವಾಸಿಗರು ಬರುವ ನಿರೀಕ್ಷೆ ಇದೆ. ವೀಕ್ಷಣೆಗೆ ಆಗಮಿಸುವ ಪ್ರವಾಸಿಗರಿಗೆ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಇನ್ನು ಕಾವೇರಿ ಆರತಿ ವೀಕ್ಷಿಸಲು ಆಗಮಿಸುವ ಪ್ರವಾಸಿಗರಿಗೆ ಉಚಿತವಾಗಿ ಲಾಡು ವಿತರಿಸಲು ತೀರ್ಮಾನಿಸಲಾಗಿದೆ. ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವರಾದ ಡಿ.ಕೆ.ಶಿವಕುಮಾರ್ ಅವರ ನಿರ್ಧಾರದಂತೆ ಪ್ರತಿನಿತ್ಯ ಲಾಡು ವಿತರಣೆಗೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಕಾವೇರಿ ಆರತಿ ವೀಕ್ಷಿಸಲು ಬರುವ ಪ್ರವಾಸಿಗರಿಗೆ ಪ್ರಸಾದ ರೂಪದಲ್ಲಿ ಈ ಲಾಡುಗಳನ್ನ ವಿತರಿಸಲಾಗುತ್ತೆ.
ಕಾವೇರಿ ಆರತಿ ಹಿನ್ನೆಲೆ ಕೆಆರ್‍ಎಸ್ ಬೃಂದಾವನಕ್ಕೆ ಬರುವ ಪ್ರವಾಸಿಗರಿಗೆ ಉಚಿತ ಪ್ರವೇಶ ನೀಡಲಾಗಿದೆ. ಟೋಲ್ ಸಂಗ್ರಹದಲ್ಲೂ ವಿನಾಯಿತಿ ನೀಡಲಾಗಿದೆ. 5 ದಿನಗಳ ಕಾಲ ಟಿಕೆಟ್ ಹಾಗೂ ಟೋಲ್ ಇರುವುದಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನೋಡಿರಿ

