ಈ ಊರಿನಲ್ಲಿ ಬೆಕ್ಕೇ ಗ್ರಾಮ ದೇವತೆ… ಬೆಕ್ಕನ್ನ ಪೂಜಿಸಿದರೆ ಇಷ್ಟಾರ್ಥ ಸಿದ್ದಿ!

ಈ ಊರಿನಲ್ಲಿ ಬೆಕ್ಕೇ ಗ್ರಾಮ ದೇವತೆ… ಬೆಕ್ಕನ್ನ ಪೂಜಿಸಿದರೆ ಇಷ್ಟಾರ್ಥ ಸಿದ್ದಿ!

ಬೆಕ್ಕು ಸಾಕು ಪ್ರಾಣಿ. ಆದರೆ ಎಲ್ಲಿಗಾದರೂ ಹೋಗುವಾಗ ಬೆಕ್ಕು ರಸ್ತೆಗೆ ಅಡ್ಡ ಬಂದರೆ, ಜನ ಭಯ ಪಡುತ್ತಾರೆ ಏಕೆಂದರೆ ಇದು ತುಂಬಾ ಅಶುಭವೆಂದು ಪರಿಗಣಿಸಲಾಗಿದೆ. ಇದು ಕೆಲವು ಕೆಟ್ಟ ಘಟನೆಗಳು ಸಂಭವಿಸುವ ಸಂಕೇತವಾಗಿದೆ. ಅಂದುಕೊಂಡ ಕೆಲಸ ಆಗಲ್ಲ ಎಂದು ಅನೇಕ ಜನರು ನಂಬುತ್ತಾರೆ. ಆದರೆ ನಮ್ಮ ರಾಜ್ಯದಲ್ಲೇ ಬೆಕ್ಕಿಗೆ ವಿಶೇಷ ಸ್ಥಾನಮಾನ ನೀಡಿ ಪೂಜಿಸುತ್ತಾರೆ!

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಬೆಕ್ಕಳಲೆ ಗ್ರಾಮದಲ್ಲಿ ಬೆಕ್ಕಿಗೆ ಪೂಜ್ಯಸ್ಥಾನ ನೀಡಲಾಗಿದ್ದು, ಬೆಕ್ಕನ್ನು ಗ್ರಾಮದೇವತೆಯಾಗಿ ಪೂಜಿಸುತ್ತಾರೆ. ಆದ್ದರಿಂದ ಈ ಗ್ರಾಮಕ್ಕೆ ಬೆಕ್ಕಳಲೆ ಎಂಬ ಹೆಸರು ಬಂದಿದೆ. ಅಲ್ಲದೇ ಬೆಕ್ಕಿಗೆ ದೇವಾಲಯ ಕಟ್ಟಿ ಗ್ರಾಮಸ್ಥರು ಬೆಕ್ಕಿನ ಮಂಗಮ್ಮ ಹೆಸರಲ್ಲಿ ಪ್ರತಿ ಮಂಗಳವಾರ ವಿಶೇಷ ಪೂಜೆ ಸಲ್ಲಿಸಿ ಭಕ್ತಿ ಮೆರೆಯುತ್ತಾರೆ. ಹಲವು ವರ್ಷಗಳ ಹಿಂದೆ ಸಮಾಧಿ ಮಾಡಲಾದ ಬೆಕ್ಕಿನ ಗದ್ದುಗೆಗೆ ಗ್ರಾಮಸ್ಥರು ಪೂಜೆ ಮಾಡುತ್ತಾರೆ. ವರ್ಷಕ್ಕೊಮ್ಮೆ ಇಲ್ಲಿ ಜಾತ್ರೆ ಕೂಡ ನಡೆಯುತ್ತದೆ. ಹಬ್ಬ ಹರಿದಿನಗಳಲ್ಲಿ ಬೆಕ್ಕಿಗೆ ಎಡೆಕೊಟ್ಟು ಬೆಕ್ಕು ಬಿಟ್ಟ ಎಂಜಲನ್ನೇ ಪ್ರಸಾದವಾಗಿ ಸ್ವೀಕರಿಸುವ ಸಂಪ್ರದಾಯ ಇಲ್ಲಿದೆ. ಬೆಕ್ಕನ್ನೇ ದೇವರೆಂದು ನಂಬಿರುವ ಇಲ್ಲಿನ ಜನರು ಪ್ರತಿದಿನ ಕೆಲಸಕ್ಕೆ ಹೋಗುವ ಮುನ್ನ ಬೆಕ್ಕಿನ ದರ್ಶನ ಪಡೆಯುವುದನ್ನು ರೂಢಿಸಿಕೊಂಡಿದ್ದಾರೆ.

ಬೆಕ್ಕಳಲೆ ಗ್ರಾಮದ ಬೆಕ್ಕಿನ ಮಂಗಮ್ಮ ದೇವರನ್ನು ಸುತ್ತಮುತ್ತಲಿನ ಗ್ರಾಮಸ್ಥರು ಕುಲ ದೇವತೆ ಎಂದು ನಂಬುತ್ತಾ ಬಂದಿದ್ದಾರೆ. ಹಬ್ಬ ಹರಿದಿನಗಳಲ್ಲಿ ಗ್ರಾಮಸ್ಥರು ದೇವಾಲಯಕ್ಕೆ ಬಂದು ವಿಶೇಷ ಪೂಜೆ ಸಲ್ಲಿಸುತ್ತಾರೆ. ಭಕ್ತಿ ಭಾವದಿಂದ ಪೂಜೆ ಸಲ್ಲಿಸಿ ಪ್ರಾರ್ಥಿಸಿದರೆ ಬೆಕ್ಕಿನ ಮಂಗಮ್ಮ ಇಷ್ಟಾರ್ಥ ನೆರವೇರಿಸುತ್ತಾರೆ ಎಂಬ ನಂಬಿಕೆ ಇಲ್ಲಿನ ಜನರಲ್ಲಿದೆ. ಆರೋಗ್ಯ ಸಮಸ್ಯೆ, ಮನೆ ಸಮಸ್ಯೆ, ವೈವಾಹಿಕ ಸಮಸ್ಯೆ ಹೀಗೆ ಯಾವುದೇ ಸಮಸ್ಯೆ ಇದ್ದರು ಹರಕೆ ಹೊತ್ತು ಶುದ್ಧ ಮನಸ್ಸಿನಿಂದ ಬೇಡಿದರೆ ಬೆಕ್ಕಿನ ಮಂಗಮ್ಮ ಈಡೇರಿಸುತ್ತಾಳೆ ಎಂಬ ನಂಬಿಕೆ. ಹಾಗಾಗಿ ದೂರದ ಊರುಗಳಿಂದ ಬೆಕ್ಕಳಲೆ ಗ್ರಾಮಕ್ಕೆ ಆಗಮಿಸುವ ಜನರು ಬೆಕ್ಕಿನ ಮಂಗಮ್ಮ ದೇವರಿಗೆ ಭಕ್ತಿಯಿಂದ ಪೂಜೆ ಸಮರ್ಪಿಸಿ ಹೋಗುತ್ತಾರೆ.

ಬೆಕ್ಕನ್ನೇ ದೇವರೆಂದು ಪೂಜಿಸುವ ಇವರು, ಗ್ರಾಮದಲ್ಲಿ ಯಾವುದಾದರೂ ಬೆಕ್ಕು ಸತ್ತರೆ ಮನುಷ್ಯರಂತೆ ಅಂತ್ಯಸಂಸ್ಕಾರ ನೆರವೇರಿಸುತ್ತಾರೆ. ಅಷ್ಟೇ ಅಲ್ಲದೇ ಬೆಕ್ಕಿಗೆ ಹೊಡೆಯುವುದು ಬಡಿಯುವುದು ಈ ಗ್ರಾಮದಲ್ಲಿ ನಿಷೇಧ. ಯಾರಾದರೂ ಬೆಕ್ಕು ಹಿಂಸಿಸಿದರೆ ತೊಂದರೆ ಅನುಭವಿಸುತ್ತಾರೆ ಅನ್ನುವುದು ಇಲ್ಲಿನ ಜನರ ನಂಬಿಕೆ.

suddiyaana