ಪೃಥ್ವಿ ಶಾ ವಿರುದ್ಧ ದಾಖಲಾಯ್ತು ಪ್ರಕರಣ – IPL ತೊರೆಯಬೇಕಾಗುತ್ತಾ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಡ್ಯಾಶಿಂಗ್ ಓಪನರ್
16ನೇ ಆವೃತ್ತಿಯ ಐಪಿಎಲ್ ಗೆ ಭಾರೀ ನಿರೀಕ್ಷೆಯಲ್ಲೇ ಕಣಕ್ಕಿಳಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಡ್ಯಾಶಿಂಗ್ ಓಪನರ್ ಪೃಥ್ವಿ ಶಾಗೆ ಸಂಕಷ್ಟ ಎದುರಾಗಿದೆ. ಮೊದಲೇ ಕಳಪೆ ಬ್ಯಾಟಿಂಗ್‌ನಿಂದ ಕಂಗೆಟ್ಟಿದ್ದ ಪೃಥ್ವಿ ಶಾಗೆ ಈಗ ಸೋಷಿಯಲ್ ಮೀಡಿಯಾದ ಸೆಲೆಬ್ರಿಟಿ ಸಪ್ನಾ ಗಿಲ್ ಅವರಿಂದಲೂ ಕಂಟಕ ಎದುರಾಗಿದೆ. ಸಪ್ನಾ ಗಿಲ್ ಪೃಥ್ವಿ ಶಾ ವಿರುದ್ಧ ಹಲ್ಲೆ ಮತ್ತು ಲೈಂಗಿಕ ಕಿರುಕುಳದ ದೂರು ನೀಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಪೃಥ್ವಿ ಶಾ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿದೆ. ಏಪ್ರಿಲ್ 17 ರಂದು ವಿಚಾರಣೆ ನಡೆಯಲಿದೆ.
ಇದನ್ನೂ ಓದಿ: ಸೆಲ್ಫಿ ಕೊಡಲು ನಿರಾಕರಿಸಿದ್ದಕ್ಕೆ ಸಿಟ್ಟು- ಟೀಮ್ ಇಂಡಿಯಾ ಆಟಗಾರ ಪೃಥ್ವಿ ಶಾ ಕಾರಿನ ಮೇಲೆ ದಾಳಿ
ಕಳೆದ ಫೆಬ್ರವರಿಯಲ್ಲಿ ಪೃಥ್ವಿ ಶಾ ಹಾಗೂ ಸಪ್ನಾ ಗಿಲ್ ಸ್ನೇಹಿತರ ನಡುವೆ ಜಗಳವಾಗಿತ್ತು. ಮುಂಬೈನ ಕ್ಲಬ್‌ನಲ್ಲಿ ಪೃಥ್ವಿ ಶಾ ಹಾಗೂ ಸಪ್ನಾ ಗಿಲ್ ಸ್ನೇಹಿತರ ನಡುವೆ ವಾಗ್ವಾದ ನಡೆದಿತ್ತು. ಸೆಲ್ಫಿ ತೆಗೆಯುವ ಸಲುವಾಗಿ ಶುರುವಾದ ಈ ವಾಗ್ವಾದ ನಂತರ ಜಗಳವಾಗಿ ಮಾರ್ಪಟ್ಟಿತ್ತು. ಈ ಬಗ್ಗೆ ಪೃಥ್ವಿ ಶಾ ಪೊಲೀಸರಿಗೆ ದೂರು ನೀಡಿದ್ದರು. ಇದೀಗ ಸಪ್ನಾ ಗಿಲ್ ಪೃಥ್ವಿ ಶಾ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಇದೇ ಘಟನೆಗೆ ಸಂಬಂಧ ಅಂಧೇರಿ ಮ್ಯಾಜಿಸ್ಟ್ರೇಟ್ 66 ನ್ಯಾಯಾಲಯದಲ್ಲಿ ಪೃಥ್ವಿ ಶಾ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರನ ವಿರುದ್ಧ ಐಪಿಸಿ ಸೆಕ್ಷನ್ 354, 509, 324 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ ಶಾ ಜೊತೆಗಿದ್ದ ಸ್ನೇಹಿತ ಕೂಡ ತನಗೆ ಬ್ಯಾಟ್ನಿಂದ ಹೊಡೆದಿದ್ದಾರೆ ಎಂಬುದಕ್ಕೆ ಸಪ್ನಾ ಗಿಲ್ ವೈದ್ಯಕೀಯ ಪ್ರಮಾಣಪತ್ರವನ್ನೂ ನೀಡಿದ್ದು, ಅದರಲ್ಲಿ ಲೈಂಗಿಕ ಶೋಷಣೆಯ ಬಗ್ಗೆ ನಮೂದಿಸಲಾಗಿದೆ ಎಂದು ವರದಿಯಾಗಿದೆ. ಸದ್ಯ ಪೃಥ್ವಿ ಶಾ ಮತ್ತು ಆಶೀಶ್ ಯಾದವ್ ವಿರುದ್ಧ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಸಪ್ನಾ ಗಿಲ್ ಲೈಂಗಿಕ ದೌರ್ಜನ್ಯದ ಪ್ರಕರಣ ದಾಖಲಿಸಿದ್ದು, ಈ ಪ್ರಕರಣದ ವಿಚಾರಣೆಯು ಇದೇ ಏಪ್ರಿಲ್ 17 ರಂದು ನಡೆಯಲಿದೆ. ಇತ್ತ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿರುವ ಪೃಥ್ವಿ ವಿಚಾರಣೆಗೆ ಹಾಜರಾಗಬೇಕಾಗಿ ಬಂದರೆ, ಐಪಿಎಲ್ ಅನ್ನು ಅರ್ಧದಲ್ಲೇ ತೊರೆಯಬೇಕಾದ ಅನಿವಾರ್ಯತೆ ಎದುರಾಗಲಿದೆ.