ಕುಂತಲ್ಲೇ ಮಾಲ್ ನೋಡಿ ರೇಟ್ ಫಿಕ್ಸ್! – ಅಡಕೆ, ತೆಂಗು ಬೆಳೆಗೂ ಬೇಕಿದೆ ಏಲಕ್ಕಿ ರೀತಿಯ ಮಾರುಕಟ್ಟೆ!
ರೈತರಿಗೆ ಕಾಡುವ ಅತಿದೊಡ್ಡ ಸಮಸ್ಯೆ ಅಂದ್ರೆ ಮಾರುಕಟ್ಟೆ. ಚಿನ್ನದಂಥ ಬೆಳೆ ಬೆಳೆದ್ರೂ ಹರಾಜು ಕೂಗುವಾಗ ಸೂಕ್ತ ಬೆಲೆ ಸಿಗೋದೇ ಇಲ್ಲ. ವಾಣಿಜ್ಯ ಬೆಳೆಗಾರರಂತೂ ಸರಿಯಾಗಿ ವ್ಯಾಪಾರ ಆಗದೆ ಲಕ್ಷ ಲಕ್ಷ ನಷ್ಟ ಅನುಭವಿಸ್ತಾರೆ. ಆದ್ರೆ ಈ ಥರ ಮಾರ್ಕೆಟ್ ಇದ್ರೆ ಲಾಸ್ ಆಗೋಕೆ ಚಾನ್ಸೇ ಇಲ್ಲ.
ಹರಾಜಿನಲ್ಲಿ ಎರಡು ವಿಧ ಇದೆ. ಒಂದು ಆನ್ ದಿ ಸ್ಪಾಟ್ನಲ್ಲಿ ಬಾಯಿ ಮೂಲಕ ಬೆಲೆಯನ್ನ ನಿಗದಿ ಪಡಿಸಿ ಕೂಗೋದು. ಯಾರು ಎಷ್ಟು ರೇಟ್ ಕೂಗಿದ್ದಾರೆ, ಎಷ್ಟಕ್ಕೆ ಹರಾಜು ಆಯ್ತು ಅನ್ನೋದು ಗೊತ್ತಾಗುತ್ತೆ. ಆದ್ರೆ ಇಲ್ಲಿ ವ್ಯಾಪಾರಿಗಳು ಡೀಲ್ ಮಾಡಿಕೊಂಡು ಕಡಿಮೆ ದರ ಕೂಗುವ ಅಪಾರ ಇರುತ್ತೆ. ಇನ್ನೊಂದು ಇ-ಆಕ್ಷನ್. ಅಂದ್ರೆ ಎಲೆಕ್ಟ್ರಾನಿಕ್ ಹರಾಜು. ಇಲ್ಲಿ ಯಾರು ಎಷ್ಟು ದರ ನಿಗದಿ ಪಡಿಸಿದ್ದಾರೆ ಅನ್ನೋದೇ ಗೊತ್ತಾಗಲ್ಲ. ಇದು ಏಲಕ್ಕಿ ಹರಾಜು ವೇಳೆ ನಡೆಯುತ್ತೆ. ಕೇರಳದ ಇಡೂಕಿ ಜಿಲ್ಲೆಯ ವಂಡನಮೆಟ್ಟೂವಿನಲ್ಲಿ ಕೇಂದ್ರ ಸಾಂಬಾರ ಮಂಡಳಿಯ ಏಲಕ್ಕಿ ಇ- ಆಕ್ಷನ್ ಸೆಂಟರ್ ಇದೆ. ಇದು ಭಾರತ ದೇಶದ ಕೃಷಿ ಮಾರುಕಟ್ಟೆಯಲ್ಲಿಯೇ ಹೊಸ ಹೆಜ್ಜೆ. ಈ ರೀತಿಯ ಮಾರುಕಟ್ಟೆ ನಮ್ಮ ದೇಶದಲ್ಲಿ ಇರೋದೇ ತಮಿಳುನಾಡಿನ ಬೂದಿನಾಯಕನ ಊರು ಮತ್ತು ಕೇರಳದ ವಂಡನಮೆಟ್ಟೂ ಏಲಕ್ಕಿ ಮಾರುಕಟ್ಟೆ ಮಾತ್ರ.
ಕೇಂದ್ರ ಸಾಂಬಾರ ಮಂಡಳಿಯವರು 2007 ರಲ್ಲಿ ಈ ರೀತಿಯ ಆಕ್ಷನ್ ಪದ್ಧತಿ ಯನ್ನು ಜಾರಿಗೆ ತಂದಿದ್ದಾರೆ. ಅಂದಿನಿಂದ ಇಂದಿನವರೆಗೂ ಈ ಹರಾಜು ಪ್ರಕ್ರಿಯೆ ಯಶಸ್ವಿಯಾಗಿ ನಡೆದುಕೊಂಡು ಬರ್ತಿದೆ. ಅಷ್ಟಕ್ಕೂ ಏನಿದು ಇ-ಆಕ್ಷನ್ ಅನ್ನೋದನ್ನ ಹೇಳ್ತೇನೆ. ವ್ಯಾಪಾರಿಗಳು ಮಾರುಕಟ್ಟೆಯಲ್ಲಿ ಬಿಡ್ ಮಾಡಲು ಲೈಸೆನ್ಸ್ ಹೊಂದಿರಬೇಕು. ಅವರಿಗೆಲ್ಲಾ ಒಂದು ಯೂಸರ್ ಐಡಿ ಮತ್ತು ಪಾಸ್ ವರ್ಡ್ ಕೊಡಲಾಗುತ್ತದೆ. ನಂತರ ಈ ಹರಾಜು ಕೇಂದ್ರದಲ್ಲೇ 40ರಿಂದ50 ಕಂಪ್ಯೂಟರ್ ಗಳನ್ನು ಇಡಲಾಗಿರುತ್ತದೆ. ಇಲ್ಲಿ ಲೈಸನ್ಸ್ ಹೊಂದಿದ ಬಿಡ್ ದಾರರು ಕುಳಿತುಕೊಂಡಿರುತ್ತಾರೆ. ಬಿಡ್ದಾರರ ಮುಂದೆ ಒಂದು ಬಟ್ಟಲು ಹಾಗೂ ಸಿಸ್ಟಮ್ ಇಡಲಾಗಿರುತ್ತದೆ. ಒಬ್ಬ ಹುಡುಗ ಬಿಡ್ ದಾರರ ಮುಂದೆ ಇರುವ ಬಟ್ಟಲಿಗೆ ಏಲಕ್ಕಿಯ ಸ್ವಲ್ಪ ಸ್ಯಾಂಪಲ್ ಅನ್ನು ಎಲ್ಲರ ಬುಟ್ಟಿಗೂ ಎಸೆಯುತ್ತಾ ಹೋಗುತ್ತಾನೆ. ಆಗ ಕಂಪ್ಯೂಟರ್ನ ಮುಖ್ಯ ಡಿಸ್ಪ್ಲೇನಲ್ಲಿ ಲಾಟ್ ನಂಬರ್, ತೂಕ, ಚೀಲಗಳ ಸಂಖ್ಯೆಯನ್ನು ತೋರಿಸುತ್ತದೆ. ಈ ವೇಳೆ ಏಲಕ್ಕಿ ಇಷ್ಟ ಆದ ಬಿಡ್ದಾರರು ತಮ್ಮ ಕೋಟ್ ದರವನ್ನು ತಮ್ಮ ಕಂಪ್ಯೂಟರ್ ನಲ್ಲಿ ನಮೂದಿಸುತ್ತಾರೆ. ಕೂಡಲೇ ಹೀಗೆ ನಮೂದಿಸಿದ ಎಲ್ಲಾ ಬಿಡ್ ದಾರರ ದರಗಳು ಮುಖ್ಯ ಸರ್ವರ್ ಗೆ ಹೋಗುತ್ತದೆ.
ಸರ್ವರ್ ನಲ್ಲಿ ಯಾರದ್ದು ಗರಿಷ್ಠ ದರ ಎಂಬುದು ಆಟೋಮ್ಯಾಟಿಕ್ ಆಗಿ ಎಲ್ಲರಿಗೂ ಕಾಣುವಂತೆ ಇಟ್ಟಿರುವ ಟಿವಿ ಪರದೆಯ ಮೇಲೆ ತೋರಿಸುತ್ತದೆ. ಆಕ್ಷನ್ ದಾರರ ಹೆಸರು, ಬಿಡ್ ದರ, ಚೀಲಗಳ ಸಂಖ್ಯೆ, ತೂಕ ಸೇರಿದಂತೆ ಎಲ್ಲವನ್ನೂ ತೋರಿಸುತ್ತದೆ. ಪ್ರತಿಯೊಂದು ಲಾಟಿಗೂ ಹತ್ತು ನಿಮಿಷ ಸಮಯ ತೆಗೆದುಕೊಳ್ಳಲಾಗುತ್ತದೆ. ಈ ಪ್ರಕ್ರಿಯೆ ಮೂಲಕವೇ ಒಂದು ದಿನದಲ್ಲಿ ನೂರಾರು ಲಾಟ್ ಗಳು ಮಾರಾಟವಾಗುತ್ತವೆ. ಈ ರೀತಿಯ ಹರಾಜಿನಿಂದ ಬೆಳೆಗಾರರಿಗೆ ನಷ್ಟ ಆಗೋದಿಲ್ಲ. ಯಾಕಂದ್ರೆ ಯಾರು ಎಷ್ಟು ಬಿಡ್ ಮಾಡ್ತಾರೆ ಅನ್ನೋದು ಅಲ್ಲಿರುವ ವ್ಯಾಪಾರಿಗಳಿಗೂ ಗೊತ್ತಿರೋದಿಲ್ಲ. ಹೀಗಾಗಿ ಆರೋಗ್ಯಕರ ಸ್ಪರ್ಧೆ ಮತ್ತು ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಸಿಗುತ್ತದೆ. ಎಲೆಕ್ಟ್ರಾನಿಕ್ ಹರಾಜು ಪ್ರಕ್ರಿಯೆ ಕೇವಲ ಏಲಕ್ಕಿಗೆ ಸೀಮಿತವಾಗಿ ಅಡಕೆ, ತೆಂಗು ಸೇರಿದಂತೆ ಪ್ರಮುಖ ಬೆಳೆಗಳಿಗೂ ಅನ್ವಯವಾಗಬೇಕು. ಆಗ ರೈತರಿಗೆ ಆಗುವ ನಷ್ಟವೂ ಕಡಿಮೆಯಾಗುತ್ತದೆ.