2022ರಲ್ಲಿ ಜಗತ್ತಿನಾದ್ಯಂತ ಗರಿಷ್ಟ ಪ್ರಮಾಣದ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆ – ಅಧ್ಯಯನ ವರದಿಯಿಂದ ಬಹಿರಂಗ
ನ್ಯೂಯಾರ್ಕ್: ಕೊವಿಡ್ -19 ಬಳಿಕ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಮಾನವ ಪರಿಸರ ವಿರೋಧಿ ಚಟುವಟಿಕೆಗಳನ್ನು ಮತ್ತೆ ಮುಂದುವರಿಸಿದ್ದಾನೆ. ಇದರಿಂದಾಗಿ ವಾತಾವರಣದಲ್ಲಿ ಅನೇಕ ಬದಲಾವಣೆಗಳು ಆಗುತ್ತಿದೆ. ಇದಕ್ಕೆ ನಿದರ್ಶನವೆಂಬಂತೆ ಕಳೆದ ವರ್ಷ ಜಗತ್ತಿನಾದ್ಯಂತ ಭಾರಿ ಪ್ರಮಾಣದಲ್ಲಿ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆ ದಾಖಲಾಗಿದೆ ಎಂದು ಅಂತರರಾಷ್ಟ್ರೀಯ ಇಂಧನ ಸಂಸ್ಥೆ (ಐಇಎ) ಪ್ರಕಟಿಸಿರುವ ವರದಿಯಲ್ಲಿ ಬಹಿರಂಗವಾಗಿದೆ.
1900 ರಿಂದ ಇಲ್ಲಿಯವರೆಗೆ ಅನಿಲ ಹೊರಸೂಸುವಿಕೆ ಪ್ರಮಾಣವನ್ನು ಪರಿಗಣಿಸಿದರೆ 2022ರಲ್ಲಿ ಗರಿಷ್ಟ ಪ್ರಮಾಣದಲ್ಲಿ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆ ದಾಖಲಾಗಿರುವುದು ಕಂಡುಬಂದಿದೆ ಎಂದು ಐಇಎ ಪ್ರಕಟಿಸಿರುವ ಅಧ್ಯಯನ ವರದಿಯಿಂದ ಗೊತ್ತಾಗಿದೆ.
ಇದನ್ನೂ ಓದಿ: ನಂಬರ್-1 ಕಲುಷಿತ ನಗರ ದೆಹಲಿಯಲ್ಲ ಮುಂಬೈ – ಕೈ ಮೀರಿದ ಪರಿಸ್ಥಿತಿ.. ವೈದ್ಯರ ಎಚ್ಚರಿಕೆ ಏನು..?
ಕೊವಿಡ್ – 19 ಕಾಲದಲ್ಲಿ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆ ಕೊಂಚ ಪ್ರಮಾಣದಲ್ಲಿ ಇಳಿಕೆಯಾಗಿತ್ತು. ಆದರೆ ಜನಜೀವನ ಸಹಜ ಸ್ಥಿತಿಗೆ ಮರಳಿದ ನಂತರ ವಿಮಾನಗಳಲ್ಲಿ ಪ್ರಯಾಣಿಸುವವರ ಸಂಖ್ಯೆಯಲ್ಲಿ ದಿಢೀರ್ ಏರಿಕೆ ಕಂಡುಬಂತು. ಅಲ್ಲದೇ ವಿಶ್ವದ ಅನೇಕ ನಗರಗಳಲ್ಲಿ ಕಲ್ಲಿದ್ದಲನ್ನು ಕಡಿಮೆ ವೆಚ್ಚದ ಇಂಧನವಾಗಿ ಬಳಸುವುದು ಹೆಚ್ಚಾಗಿದೆ. ಇದರಿಂದಾಗಿ ಇಂಗಾಲದ ಡೈಆಕ್ಸೈಡ್ ಹೆಚ್ಚಿನ ಪ್ರಮಾಣದಲ್ಲಿ ಪರಿಸರ ಸೇರುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಪಳೆಯುಳಿಕೆ ಇಂಧನಗಳಾದ ಕಲ್ಲಿದ್ದಲು, ನೈಸರ್ಗಿಕ ಅನಿಲ, ಪೆಟ್ರೋಲಿಯಂ ಉತ್ಪನ್ನಗಳನ್ನು ದಹಿಸಿದಾಗ ಇಂಗಾಲದ ಡೈಆಕ್ಸೆಡ್ ಉತ್ಪತ್ತಿಯಾಗುತ್ತದೆ. ಈ ಅನಿಲ ಪರಿಸರವನ್ನು ಸೇರಿ, ವಾತಾವರಣದ ತಾಪಮಾನ ಹೆಚ್ಚುವಂತೆ ಮಾಡುತ್ತದೆ. ಇದರಿಂದಾಗಿ ಇಂಗಾಲ ಹೊರಸೂಸುವಿಕೆ ಪ್ರಮಾಣ ಹೆಚ್ಚಾಗಲು ಮುಖ್ಯ ಕಾರಣ ಎಂದು ವರದಿಯಲ್ಲಿ ವಿವರಿಸಲಾಗಿದೆ.