ಸನ್ ರೂಫ್ ಮೇಲೆ ನಿಂತಿದ್ದ ಬಾಲಕನ ತಲೆಗೆ ಬಡಿದ ಕಬ್ಬಿಣದ ರಾಡ್! – ಕೇಸ್ ದಾಖಲು.. ಶಿಕ್ಷೆ ಏನು ಗೊತ್ತಾ?

ಈಗೀಗ ಸನ್ ರೂಫ್ನಲ್ಲಿ ನಿಂತು ಪೋಸ್ ಕೊಡೋದು ಟ್ರೆಂಡ್ ಆಗಿದೆ.. ಮಕ್ಕಳು ಹಠ ಮಾಡ್ತಾರೆ ಅಂತ ಪೋಷಕರು ಕೂಡ ಸನ್‌ರೂಫ್‌ನಲ್ಲಿ ನಿಲ್ಲಲು ಬಿಡ್ತಾರೆ. ಆದ್ರೀಗ ಬೆಂಗಳೂರಿನಲ್ಲಿ ವಿದ್ಯಾರಣ್ಯಪುರದಲ್ಲಿ ನಡೆದ ಘಟನೆ ಬೆಚ್ಚಿ ಬೀಳಿಸಿದೆ. ಬಾಲಕನೊಬ್ಬ ಸನ್‌ರೂಫ್‌ನಲ್ಲಿ ನಿಂತಿದ್ದ ವೇಳೆ ಹೈ ಬೇರಿಯರ್ ತಗುಲಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ.
ಏನಿದು ಘಟನೆ?
ಸೆಪ್ಟಂಬರ್ 6 ರ ಮಧ್ಯಾಹ್ನ 1 ಗಂಟೆ ವೇಳೆಗೆ ಬೆಂಗಳೂರಿನ ವಿದ್ಯಾರಣ್ಯಪುರದ 7 ನೇ ಬ್ಲಾಕ್ ಜಿಕೆವಿಕೆ ಡಬಲ್ ರಸ್ತೆಯಲ್ಲಿ ಕೆಂಪು ಬಣ್ಣದ ಮಹೀಂದ್ರ ಸಂಚರಿಸಿತ್ತು. ಕಾರಿನ ಸನ್‌ರೂಫ್‌ನಲ್ಲಿ ಬಾಲಕ ನಿಂತಿದ್ದ ವೇಳೆ ಆತನ ತಲೆಗೆ ಹೈ ಬೇರಿಯರ್ ತಗುಲಿತ್ತು. ಇದ್ರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈ ಬೆನ್ನಲ್ಲೇ ಈ ಪ್ರಕರಣ ಸಂಬಂಧ ಯಲಹಂಕ ಸಂಚಾರ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಬಿಎನ್ಎಸ್ ಕಾಯ್ದೆಯ ಸೆಕ್ಷನ್ 125(a) ಮತ್ತು 281 ಸೆಕ್ಷನ್ ಅಡಿ ಕೇಸ್ ದಾಖಲಾಗಿದೆ. ಪೊಲೀಸರು ಕಾನೂನು ರೀತಿ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.
ಈ ಘಟನೆ ಈಗ ಸನ್ ರೂಫ್ ಹೊಂದಿರುವ ಕಾರ್ ಮಾಲೀಕರಿಗೆ ಎಚ್ಚರಿಕೆಯ ಗಂಟೆ. ಕಾರ್ ಸನ್ ರೂಫ್ ನಲ್ಲಿ ಎಂಜಾಯ್ ಮಾಡಲೆಂದು ಮಕ್ಕಳನ್ನು ನಿಲ್ಲಿಸುವ ಮುನ್ನ ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕು. ಇನ್ನೂ ರಾಜ್ಯದ ಪೊಲೀಸರು ಕೂಡ ಸನ್ ರೂಫ್ ನಲ್ಲಿ ಮಕ್ಕಳನ್ನು ನಿಲ್ಲಿಸಿ ಜಾಲಿ ರೈಡ್ ಹೋಗುವ ಕಾರ್ ಮಾಲೀಕರ ವಿರುದ್ಧ ಕೇಸ್ ದಾಖಲಿಸುತ್ತಿದ್ದಾರೆ. ಹೀಗಾಗಿ ಕೇಸ್ ಸಹವಾಸವೇ ಬೇಡ ಅಂತ ಪೋಷಕರು ಈಗ ಸನ್ ರೂಫ್ ಕಾರ್ ಖರೀದಿಸುವುದನ್ನು ನಿಲ್ಲಿಸುತ್ತಿದ್ದಾರೆ.
ನಿರ್ಲಕ್ಷ್ಯದ ಅಥವಾ ದುಡುಕಿನ ಕೃತ್ಯದಿಂದ ಇತರರ ಜೀವಕ್ಕೆ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯ ಉಂಟುಮಾಡಿದರೆ ಬಿಎನ್ಎಸ್ ಕಾಯ್ದೆಯ ಸೆಕ್ಷನ್ 125(A) ಅಡಿ ಶಿಕ್ಷೆ ವಿಧಿಸಲಾಗುತ್ತದೆ. ಗಾಯಗಳು ಉಂಟಾಗಿವೆಯೋ ಅಥವಾ ಇಲ್ಲವೋ ಎಂಬುದರ ಮೇಲೆ ಶಿಕ್ಷೆಯ ಪ್ರಮಾಣ ಅವಲಂಬಿಸಿರುತ್ತದೆ. ಯಾವುದೇ ಗಾಯ ಉಂಟಾಗದಿದ್ದರೆ ಮೂರು ತಿಂಗಳವರೆಗೆ ಜೈಲು ಶಿಕ್ಷೆ, 2,500 ರೂ. ವರೆಗೆ ದಂಡ ಅಥವಾ ಎರಡೂ ವಿಧಿಸಬಹುದಾಗಿದೆ. ಇನ್ನು
ಗಂಭೀರ ಗಾಯವಾದರೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ 10,000 ರೂ. ವರೆಗೆ ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿದೆ. BNS ಸೆಕ್ಷನ್ 281, ಸಾರ್ವಜನಿಕ ರಸ್ತೆಯಲ್ಲಿ ದುಡುಕಿನ ಅಥವಾ ನಿರ್ಲಕ್ಷ್ಯದ ರೀತಿಯಲ್ಲಿ ವಾಹನ ಚಲಾಯಿಸುವುದನ್ನು ನಿಷೇಧಿಸುತ್ತದೆ. ನಿರ್ಲಕ್ಷ್ಯದ ಚಾಲನೆಯು ಮಾನವ ಜೀವಕ್ಕೆ ಅಪಾಯವನ್ನುಂಟುಮಾಡಬಹುದಾದದ್ದು ಎಂದು ಪರಿಗಣಿಸಲಾಗುತ್ತದೆ. ಅಪಾಯಕಾರಿ ಚಾಲನೆಗೆ ಆರು ತಿಂಗಳವರೆಗೆ ಜೈಲು ಶಿಕ್ಷೆ ಹಾಗೂ 1,000 ರೂ. ವರೆಗೆ ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿದೆ.

ನೋಡಿರಿ

