ಸ್ಕೂಟರ್ ಸಮೇತ ಸವಾರರನ್ನ ಎಳೆದೊಯ್ದ ಕಾರು – ವಿದ್ಯಾರ್ಥಿಗಳ ಎಣ್ಣೆ ‘ಮತ್ತು’.. ಎಂಥಾ ಎಡವಟ್ಟು..!?
ಅಪಘಾತ ಮಾಡಿ ವಾಹನ ಸವಾರರನ್ನ ಎಳೆದೊಯ್ಯುವ ಪ್ರಕರಣಗಳು ವಿಪರೀತವಾಗಿ ಹೆಚ್ಚಳವಾಗುತ್ತಿವೆ. ರಾಷ್ಟ್ರ ರಾಜಧಾನಿಯಲ್ಲಿ ಇತ್ತೀಚೆಗಷ್ಟೇ ವ್ಯಕ್ತಿಯೊಬ್ಬರಿಗೆ ಡಿಕ್ಕಿ ಹೊಡೆದಿದ್ದ ಕಾರು ಆತನನ್ನ ಕಿಲೋ ಮೀಟರ್ಗಟ್ಟಲೆ ಎಳೆದೊಯ್ದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಆತ ಜೀವವನ್ನೇ ಬಿಟ್ಟಿದ್ದ. ಈ ಪ್ರಕರಣ ಮಾಸುವ ಮುನ್ನವೇ ಇಂಥಾದ್ದೇ ಮತ್ತೊಂದು ಪ್ರಕರಣ ದೆಹಲಿಯಲ್ಲಿ ವರದಿಯಾಗಿದೆ.
ಶುಕ್ರವಾರ ಮುಂಜಾನೆ ದೆಹಲಿಯ ಕೇಶವಪುರಂನಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ಮೊದಲಿಗೆ ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಬಳಿಕ ಸವಾರನನ್ನ ಕಾರ್ ಬಾನೆಟ್ ಮೇಲೆ ಸುಮಾರು 350 ಮೀಟರ್‌ವರೆಗೆ ಎಳೆದೊಯ್ಯಲಾಗಿದೆ. ಪರಿಣಾಮ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೋರ್ವ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಇದನ್ನೂ ಓದಿ : ಹಾರಾಟ ನಡೆಸುವಾಗಲೇ ವಾಯುಪಡೆಯ ಯುದ್ಧವಿಮಾನಗಳು ಡಿಕ್ಕಿ – ಪೈಲಟ್ಗಳು ಬಚಾವಾಗಿದ್ದೇ ರೋಚಕ!
ದೆಹಲಿ ಪೊಲೀಸರು ನೀಡಿರೋ ಮಾಹಿತಿ ಪ್ರಕಾರ ಟಾಟಾ ಜೆಸ್ಟ್ ಕಾರಿನಲ್ಲಿ 19 ರಿಂದ 21 ವರ್ಷದೊಳಗಿನ ಐವರು ವಿದ್ಯಾರ್ಥಿಗಳು ಸಂಚಾರ ಮಾಡುತ್ತಿದ್ದರು. ಮದುವೆ ಸಮಾರಂಭವೊಂದರಲ್ಲಿ ಭಾಗಿಯಾಗಿ ವಾಪಸ್ ಆಗುತ್ತಿದ್ರು. ಮುಂಜಾನೆ 3 ಗಂಟೆ ಸುಮಾರಿಗೆ ದೆಹಲಿಯ ಕನ್ನಯ್ಯಾ ನಗರದಲ್ಲಿ ಪ್ರೇರಣಾ ಚೌಕ್‌ನಲ್ಲಿ ಹೋಂಡಾ ಆಕ್ಟೀವಾ ಸ್ಕೂಟರ್‌ಗೆ ಕಾರು ಡಿಕ್ಕಿಯಾಗಿತ್ತು. ಈ ಅಪಘಾತವನ್ನ ಕೇಶವಪುರಂ ಪೊಲೀಸ್ ಠಾಣೆಯ ಎರಡು ಪಿಸಿಆರ್ ವ್ಯಾನ್‌ಗಳಲ್ಲಿ ಗಸ್ತು ಕರ್ತವ್ಯದಲ್ಲಿದ್ದ ಪೊಲೀಸರು ಗಮನಿಸಿದ್ರು.
ಕೈಲಾಶ್ ಭಟ್ನಾಗರ್ ಮತ್ತು ಸುಮಿತ್ ಖಾರಿ ಅನ್ನೋ ಇಬ್ಬರು ಸ್ಕೂಟರ್ ಓಡಿಸುತ್ತಿದ್ದು, ಅಪಘಾತದ ರಭಸಕ್ಕೆ ಕಾರಿನ ಬಾನೆಟ್ ತೆರೆದುಕೊಂಡಿದೆ. ಸ್ಕೂಟರ್ ಓಡಿಸುತ್ತಿದ್ದ ಕೈಲಾಶ್ ಕಾರ್‌ನ ಗಾಜು ಮತ್ತು ಬಾನೆಟ್ ನಡುವೆ ಸಿಲುಕಿಕೊಂಡಿದ್ದಾನೆ. ಸುಮಿತ್ ಕೂಡ ಡಿಕ್ಕಿ ರಭಸಕ್ಕೆ ಹಾರಿ ಕಾರ್‌ನ ಚಾವಣಿ ಮೇಲೆ ಬಿದ್ದಿದ್ದಾನೆ. ಆಗ ಸ್ಕೂಟರ್ ಕಾರ್‌ನ ಬಂಪರ್‌ಗೆ ಸಿಲುಕಿಕೊಂಡಿದೆ. ಭೀಕರ ಅಪಘಾತ ನಡೆದ ಹಿನ್ನೆಲೆ ಭಯಗೊಂಡ ಕಾರ್‌ನಲ್ಲಿದ್ದವರು ಕಾರನ್ನು ನಿಲ್ಲಿಸುವ ಬದಲು ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾರೆ. ಹೀಗಾಗಿ ಕಾರ್‌ನಲ್ಲಿ ಸಿಲುಕಿಕೊಂಡಿದ್ದ ಕೈಲಾಶ್‌ನನ್ನು ಹಾಗೆಯೇ ಎಳೆದುಕೊಂಡು ಹೋಗಿದ್ದಾರೆ. ಇದನ್ನು ಗಮನಿಸುತ್ತಿದ್ದ ಕೇಶವಪುರಂ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್‌ಗಳಾದ ಸುರ್ಜೀತ್ ಸಿಂಗ್ ಮತ್ತು ಕಾನ್ಸ್ಟೇಬಲ್ ರಾಮ್ ಕಿಶೋರ್ ಕಾರನ್ನು ಸುಮಾರು 350 ಮೀಟರ್‌ವರೆಗೂ ಹಿಂಬಾಲಿಸಿಕೊಂಡು ಹೋಗಿದ್ದಾರೆ. ಕಾರನ್ನ ಪೊಲೀಸರು ಅಡ್ಡಗಟ್ಟಿದಾಗ ಕಾರ್‌ನಲ್ಲಿದ್ದ ಪ್ರವೀಣ್ ಅಲಿಯಾಸ್ ಸಿಲ್ಲಿ (20) ಮತ್ತು ದಿವ್ಯಾಂಶ್ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಲು ಯತ್ನಿಸಿದ್ದಾರೆ. ಆದರೆ ಪೊಲೀಸರು ಅವರನ್ನು ಹಿಡಿದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಯಲ್ಲಿ ಕೈಲಾಶ್ ಸ್ಥಳದಲ್ಲೇ ಮೃತಪಟ್ಟಿದ್ರೆ ಸುಮಿತ್ ಆಸ್ಪತ್ರೆಯಲ್ಲಿ ಜೀವ ಬಿಟ್ಟಿದ್ದಾರೆ.
ಬಳಿಕ ಗಾಯಾಳುಗಳಾದ ಕೈಲಾಶ್ ಮತ್ತು ಸುಮಿತ್ರನ್ನ ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದ್ರೆ ಗಂಭೀರವಾಗಿ ಗಾಯಗೊಂಡಿದ್ದ ಕೈಲಾಶ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಸುಮಿತ್ ಸ್ಥಿತಿಯೂ ಗಂಭೀರವಾಗಿದ್ದು, ಚಿಕಿತ್ಸೆ ನೀಡಲಾಗ್ತಿದೆ. ಅಪಘಾತ ನಡೆದ ಕಾರಿನಲ್ಲಿದ್ದ ಆರೋಪಿಗಳ ಪೈಕಿ ಬಹುತೇಕರು ಪಿಯುಸಿ ವಿದ್ಯಾರ್ಥಿಗಳಾಗಿದ್ದು, ಮದ್ಯದ ಅಮಲಿನಲ್ಲಿದ್ದರು ಎಂದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಪೊಲೀಸರು ಎಲ್ಲರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.