ನಿಮ್ಮ ಕಾರಿನಲ್ಲಿ ಸಮಸ್ಯೆ ಬರ್ತಿದ್ಯಾ- ವಾಸ್ತು ಪ್ರಕಾರ ಈ ವಸ್ತುಗಳನ್ನ ಕಾರಿನೊಳಗೆ ಇಟ್ಟುನೋಡಿ

ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕಾರಿನೊಳಗೆ ಕೆಲವು ಶಕ್ತಿಶಾಲಿ ವಸ್ತುಗಳನ್ನು ಇಟ್ಟುಕೊಂಡರೆ ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ ಮತ್ತು ಅಪಘಾತಗಳ ಸಂಭವ ಕಡಿಮೆಯಾಗುತ್ತದೆ ಎಂಬ ನಂಬಿಕೆ ಇದೆ. ನಿಮ್ಮ ಪ್ರಯಾಣಕ್ಕೆ ಸುರಕ್ಷಿತ ಹಾಗೂ ಮನಸ್ಸಿಗೆ ನೆಮ್ಮದಿ ನೀಡುವ ಹಾಗೆ ಏನು ಮಾಡಬೇಕು ಅನ್ನೋದ್ದನ್ನ ನೋಡೋಣ.
ಗಣೇಶನ ವಿಗ್ರಹ:
ಅಡೆತಡೆಗಳನ್ನು ನಿವಾರಿಸುವ ದೇವರಾಗಿರುವ ಗಣೇಶನನ್ನು ಶುಭಾರಂಭದ ಸಂಕೇತವಾಗಿ ಪರಿಗಣಿಸಲಾಗುತ್ತದೆ. ಕಾರಿನಲ್ಲಿ ಸಣ್ಣ ಗಣೇಶನ ವಿಗ್ರಹವನ್ನು ಇಡುವುದರಿಂದ ಪ್ರಯಾಣದ ವೇಳೆ ಎದುರಾಗುವ ಅಡಚಣೆಗಳು ದೂರವಾಗುತ್ತವೆ ಹಾಗೂ ಅಪಘಾತಗಳಿಂದ ರಕ್ಷಣೆ ದೊರೆಯುತ್ತದೆ ಎಂಬ ನಂಬಿಕೆ ಇದೆ.
ಕಲ್ಲುಪ್ಪು:
ಕಲ್ಲುಪ್ಪು ನಕಾರಾತ್ಮಕ ಶಕ್ತಿಯನ್ನು ನಿಯಂತ್ರಿಸುವ ಗುಣ ಹೊಂದಿದೆ ಎಂದು ಹೇಳಲಾಗುತ್ತದೆ. ಸ್ವಲ್ಪ ಕಲ್ಲುಪ್ಪನ್ನು ಅಡುಗೆ ಸೋಡಾದೊಂದಿಗೆ ಮಿಶ್ರಣ ಮಾಡಿ, ಕಾಗದದಲ್ಲಿ ಸುತ್ತಿ ಕಾರಿನ ಸೀಟಿನ ಕೆಳಗೆ ಇಡುವುದರಿಂದ ದುಷ್ಟ ಶಕ್ತಿಯ ಪ್ರಭಾವ ಕಡಿಮೆಯಾಗುತ್ತದೆ. ಇದರಿಂದ ಪ್ರಯಾಣ ಹೆಚ್ಚು ಶಾಂತಿಯುತವಾಗುತ್ತದೆ.
ಹನುಮಂತನ ವಿಗ್ರಹ:
ಶಕ್ತಿ ಮತ್ತು ರಕ್ಷಣೆಯ ಪ್ರತೀಕವಾಗಿರುವ ಹನುಮಂತನ ಸಣ್ಣ ಪ್ರತಿಮೆಯನ್ನು ಕಾರಿನಲ್ಲಿ ಇಡುವುದರಿಂದ ದುಷ್ಟ ಶಕ್ತಿ ದೂರವಾಗುತ್ತದೆ. ಇದೇ ಕಾರಣಕ್ಕೆ ಅನೇಕರು ತಮ್ಮ ವಾಹನಗಳಲ್ಲಿ ಹನುಮಂತನ ಚಿತ್ರ ಅಥವಾ ವಿಗ್ರಹವನ್ನು ಇಟ್ಟುಕೊಳ್ಳುತ್ತಾರೆ.
ಕಪ್ಪು ಆಮೆ:
ವಾಸ್ತುಶಾಸ್ತ್ರದಲ್ಲಿ ಆಮೆ ಸ್ಥಿರತೆ ಮತ್ತು ದೀರ್ಘಾಯುಷ್ಯದ ಸಂಕೇತ. ಕಾರಿನಲ್ಲಿ ಸಣ್ಣ ಕಪ್ಪು ಆಮೆಯನ್ನು ಇಟ್ಟುಕೊಳ್ಳುವುದರಿಂದ ನಕಾರಾತ್ಮಕ ಶಕ್ತಿ ದೂರವಾಗಿ ಸಕಾರಾತ್ಮಕ ವಾತಾವರಣ ನಿರ್ಮಾಣವಾಗುತ್ತದೆ ಎಂದು ನಂಬಲಾಗುತ್ತದೆ. ಇದು ಸುರಕ್ಷಿತ ಪ್ರಯಾಣಕ್ಕೆ ಸಹಾಯಕ.
ಯಂತ್ರ:
ಶ್ರೀ ಯಂತ್ರ ಅಥವಾ ನವಗ್ರಹ ಯಂತ್ರದಂತಹ ಪವಿತ್ರ ಯಂತ್ರಗಳನ್ನು ಕಾರಿನಲ್ಲಿ ಇಡುವುದರಿಂದ ಗ್ರಹದೋಷಗಳ ಪ್ರಭಾವ ಕಡಿಮೆಯಾಗುತ್ತದೆ. ಇದು ಪ್ರಯಾಣದ ವೇಳೆ ರಕ್ಷಣಾ ಕವಚದಂತೆ ಕಾರ್ಯನಿರ್ವಹಿಸುತ್ತವೆ ಎಂಬ ವಿಶ್ವಾಸವಿದೆ.
ಕೆಂಪು ಹವಳ:
ಮಂಗಳ ಗ್ರಹಕ್ಕೆ ಸಂಬಂಧಿಸಿದ ರತ್ನವಾಗಿರುವ ಕೆಂಪು ಹವಳವು ಶಕ್ತಿ ಮತ್ತು ಧೈರ್ಯವನ್ನು ಹೆಚ್ಚಿಸುತ್ತದೆ. ಈ ರತ್ನವನ್ನು ಕಾರಿನಲ್ಲಿ ಇಡುವುದರಿಂದ ಚಾಲನಾ ಆತ್ಮವಿಶ್ವಾಸ ಹೆಚ್ಚಾಗಿ, ಅಪಘಾತಗಳ ಸಾಧ್ಯತೆ ಕಡಿಮೆಯಾಗುತ್ತದೆ ಎಂಬ ನಂಬಿಕೆ ಇದೆ.
ನಿಂಬೆ ಮತ್ತು ಹಸಿರು ಮೆಣಸಿನಕಾಯಿ:
ದುಷ್ಟ ದೃಷ್ಟಿ ಮತ್ತು ನಕಾರಾತ್ಮಕ ಶಕ್ತಿಯನ್ನು ತಡೆಗಟ್ಟಲು ನಿಂಬೆ ಹಸಿರು ಮೆಣಸಿನಕಾಯಿ ಪರಿಣಾಮಕಾರಿಯಾಗಿದ್ದು, ಜ್ಯೋತಿಷ್ಯದಲ್ಲಿ ಇದಕ್ಕೆ ಮಹತ್ವದ ಸ್ಥಾನ ಇದೆ. ಕಾರಿನ ಒಳಗಿನ ಕನ್ನಡಿಯ ಬಳಿ ಇವುಗಳನ್ನು ನೇತುಹಾಕುವುದರಿಂದ ಅಪಘಾತಗಳಿಂದ ರಕ್ಷಣೆ ದೊರೆಯುತ್ತದೆ ಎಂದು ಹೇಳಲಾಗುತ್ತದೆ.

ನೋಡಿರಿ

