ಕ್ಯಾಪ್ಟನ್ ಕೂಲ್ @42 – ಹ್ಯಾಪಿ ಬರ್ತ್‌ಡೇ ಎಂ.ಎಸ್ ಧೋನಿ
ಕ್ಯಾಪ್ಟನ್ ಕೂಲ್ ಎಂದೇ ಖ್ಯಾತಿ ಪಡೆದ ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಜುಲೈ 7ರಂದು 42ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಚಾಂಪಿಯನ್ ಕ್ಯಾಪ್ಟನ್, ಕ್ರಿಕೆಟ್ ಜಗತ್ತು ಕಂಡ ಶ್ರೇಷ್ಠ ಫಿನಿಷರ್, ಒತ್ತಡದ ಸಮಯದಲ್ಲಿ ಅದ್ಭುತ ನಿರ್ಧಾರಗಳನ್ನು ತೆಗೆದುಕೊಳ್ಳುವ ಚಾಣಕ್ಯ ಹೀಗೆ ಕ್ರಿಕೆಟ್‌ನಲ್ಲಿ ಧೋನಿ ತಮ್ಮದೇ ಛಾಪನ್ನು ಅಚ್ಚಳಿಯದಂತೆ ಮೂಡಿಸಿದ ಧೋನಿಗೆ ಹುಟ್ಟುಹಬ್ಬದ ಸಂಭ್ರಮ. 2004ರಲ್ಲಿ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಆಗಿ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಬದುಕು ಆರಂಭಿಸಿದ ಎಂಎಸ್ ಧೋನಿ, ನೋಡ ನೋಡುತ್ತಿದ್ದಂತೆಯೇ ದೈತ್ಯ ತಾರೆಯಾಗಿ ಬೆಳೆದುನಿಂತರು.
ಇದನ್ನೂ ಓದಿ: ‘ಧೋನಿ’ಯಂಥಾ ನಾಯಕನನ್ನು ಕ್ರಿಕೆಟ್ ಜಗತ್ತು ಈ ಹಿಂದೆಂದೂ ಕಂಡಿಲ್ಲ – ಗವಾಸ್ಕರ್ ಮನಗೆದ್ದ ಕೂಲ್ ಕ್ಯಾಪ್ಟನ್
2007ರ ಒಡಿಐ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಲೀಗ್ ಹಂತದಲ್ಲೇ ಸೋತು ಕಂಗಾಲಾಗಿತ್ತು. ಇದರ ಬೆನ್ನಲ್ಲೇ ನಡೆದ ಚೊಚ್ಚಲ ಆವೃತ್ತಿಯ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ ಬಿಸಿಸಿಐ ಯುವ ನಾಯಕನನ್ನ ಆಯ್ಕೆ ಮಾಡಲು ಮುಂದಾದಾಗ, ತಂಡದಲ್ಲಿದ್ದ ಮ್ಯಾಚ್ ವಿನ್ನರ್ ಯುವರಾಜ್ ಸಿಂಗ್ ಬದಲು ಎಂಎಸ್ ಧೋನಿಗೆ ಕ್ಯಾಪ್ಟನ್ ಪಟ್ಟ ಕಟ್ಟಿತ್ತು. ನಂತರ ನಡೆದದ್ದು ಈಗ ಇತಿಹಾಸ. ಧೋನಿ ಸಾರಥ್ಯದಲ್ಲಿ ಫೈನಲ್ ತಲುಪಿದ್ದ ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಹೈ-ವೋಲ್ಟೇಜ್ ಫೈನಲ್ ಗೆದ್ದು ಟ್ರೋಫಿ ಎತ್ತಿ ಹಿಡಿದಿತ್ತು. ಆ ರೋಚಕ ಫೈನಲ್‌ನಲ್ಲಿ ಧೋನಿ ತಮ್ಮ ಮೇಲಿನ ಒತ್ತಡ ನಿಭಾಯಿಸಿ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಕ್ಯಾಪ್ಟನ್ ಕೂಲ್ ಎಂಬ ಬಿರುದನ್ನು ಸಂಪಾದಿಸಿದ್ದರು. ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಭಾರತ ತಂಡದ ನಾಯಕತ್ವ ವಹಿಸಿಕೊಂಡರು.
ಇನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿರುವ ಧೋನಿ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಕ್ರಿಕೆಟ್ ಹೊರತಾಗಿ ಇತರ ಕ್ರೀಡೆಗಳ ಬಗ್ಗೆಯೂ ಆಸಕ್ತಿ ಹೊಂದಿರುವ ಧೋನಿ, ಫುಟ್ಬಾಲ್ ತಂಡ ಚೆನ್ನೈ ಎಫ್ಸಿ, ಮಾಹಿ ರೇಸಿಂಗ್ ಟೀಮ್ ಇಂಡಿಯಾ ಮತ್ತು ಫೀಲ್ಡ್ ಹಾಕಿ ತಂಡ ರಾಂಚಿ ರೇಸ್‌ನ ಸಹ-ಮಾಲೀಕರಾಗಿದ್ದಾರೆ.