ವಿಶ್ವದ ಅತಿ ಎತ್ತರದ ಯುದ್ಧಭೂಮಿಗೆ ಮೊದಲ ಮಹಿಳಾ ಕ್ಯಾಪ್ಟನ್ – ಸಿಯಾಚಿನ್ ನಲ್ಲಿ ಕರ್ತವ್ಯಕ್ಕೆ ಹಾಜರ್

ವಿಶ್ವದ ಅತಿ ಎತ್ತರದ ಯುದ್ಧಭೂಮಿಗೆ ಮೊದಲ ಮಹಿಳಾ ಕ್ಯಾಪ್ಟನ್ – ಸಿಯಾಚಿನ್ ನಲ್ಲಿ ಕರ್ತವ್ಯಕ್ಕೆ ಹಾಜರ್

ಶ್ರೀನಗರ: ಸಿಯಾಚಿನ್ ಹಿಮನದಿಯಲ್ಲಿರುವ ಕುಮಾರ್ ಪ್ರದೇಶದ ಯುದ್ಧಭೂಮಿಯಲ್ಲಿ ಕಾರ್ಯಾಚರಣೆಗೆ ಮೊದಲ ಮಹಿಳಾ ಅಧಿಕಾರಿಯಾಗಿ, ಫೈರ್ ಅಂಡ್ ಫ್ಯೂರಿ ಕಾರ್ಪ್ಸ್ ಅಧಿಕಾರಿ ಕ್ಯಾಪ್ಟನ್ ಶಿವ ಚೌಹಾಣ್ ಅವರು ನಿಯೋಜನೆಗೊಂಡಿದ್ದಾರೆ.

ಫೈರ್ ಅಂಡ್ ಫ್ಯೂರಿ ಸ್ಯಾಪರ್ಸ್‌ನ ಕ್ಯಾಪ್ಟನ್ ಶಿವ ಚೌಹಾಣ್ ಅವರು ವಿಶ್ವದ ಎತ್ತರದ ಯುದ್ಧಭೂಮಿ ಕುಮಾರ್ ಪೋಸ್ಟ್‌ನಲ್ಲಿ ಕಾರ್ಯಾಚರಣೆಗೆ ನಿಯೋಜಿಸಲ್ಪಟ್ಟ ಮೊದಲ ಮಹಿಳಾ ಅಧಿಕಾರಿಯಾಗಿದ್ದಾರೆ ಎಂದು ಭಾರತೀಯ ಸೇನೆಯ ಫೈರ್ ಮತ್ತು ಫ್ಯೂರಿ ಕಾರ್ಪ್ಸ್‌ನ ಅಧಿಕೃತ ಖಾತೆ ಟ್ವೀಟ್ ಮಾಡಿದೆ.

ಇದನ್ನೂ ಓದಿ: ವಿಮಾನವೇರಿದ ವ್ಯಕ್ತಿ ಫುಲ್ ಟೈಟ್- ಅಮಲಿನಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿ ಕಿರಿಕ್

ಟ್ವಿಟ್ಟರ್ ಪೋಸ್ಟ್‌ನಲ್ಲಿ ಶಿವ ಚೌಹಾಣ್‌ ಅವರ ಸಾಧನೆ ಶ್ಲಾಘಿಸಿರುವ ಫೈರ್ ಮತ್ತು ಫ್ಯೂರಿ ಕಾರ್ಪ್ಸ್‌ ‘ಬ್ರೇಕಿಂಗ್ ದಿ ಗ್ಲಾಸ್ ಸೀಲಿಂಗ್’ ಎಂಬ ಶೀರ್ಷಿಕೆಯನ್ನು ನೀಡಿದೆ. ಕುಮಾರ್ ಪೋಸ್ಟ್‌ನಲ್ಲಿ ಶಿವ ಅವರು ಮೊದಲು ಕಠಿಣ ತರಬೇತಿಯನ್ನು ಪಡೆಯಬೇಕಾಗಿತ್ತು. ಸಿಯಾಚಿನ್ ಗ್ಲೇಸಿಯರ್ ಭೂಮಿಯ ಮೇಲಿನ ಅತ್ಯಂತ ಎತ್ತರದ ಯುದ್ಧಭೂಮಿಯಾಗಿದ್ದು, 1984 ರಿಂದ ಭಾರತ ಮತ್ತು ಪಾಕಿಸ್ತಾನಗಳು ಮಧ್ಯಂತರವಾಗಿ ಹೋರಾಡುತ್ತಿವೆ. ಎಂಟು ವಿಶೇಷ ಸಾಮರ್ಥ್ಯವುಳ್ಳ ಜನರ ತಂಡವು ಸೆಪ್ಟೆಂಬರ್ 2021ರಲ್ಲಿ ಸಿಯಾಚಿನ್ ಹಿಮನದಿಯಲ್ಲಿ 15,632 ಅಡಿ ಎತ್ತರದಲ್ಲಿರುವ ಕುಮಾರ್ ಪೋಸ್ಟ್ ಅನ್ನು ತಲುಪಿದಾಗ ವಿಶ್ವ ದಾಖಲೆಯನ್ನು ರಚಿಸಿತ್ತು. ಈ ತಂಡ ಉತ್ತರ ಸೇನೆ ಅಡಿಯಲ್ಲಿ ಕೆಲಸ ಮಾಡುತ್ತದೆ. ಈ ಕಾರ್ಪ್ಸ್ ಸಿಯಾಚಿನ್ ಹಿಮನದಿಯನ್ನು ಚೀನಾ ಮತ್ತು ಪಾಕಿಸ್ತಾನದಿಂದ ರಕ್ಷಿಸುತ್ತದೆ ಎಂದು ಟ್ವೀಟ್ ನಲ್ಲಿ ತಿಳಿಸಲಾಗಿದೆ.

ಕ್ಯಾಪ್ಟನ್ ಶಿವ ಚೌಹಾಣ್ ಯಾರು?

ರಾಜಸ್ಥಾನ ಮೂಲದ ಕ್ಯಾಪ್ಟನ್ ಶಿವ ಚೌಹಾಣ್ ಅವರು ಯುದ್ಧ ವಿಮಾನದ ಎಂಜಿನಿಯರ್‌. ಉದಯಪುರದಲ್ಲಿ ಶಾಲಾ ಶಿಕ್ಷಣವನ್ನು ಪಡೆದ ಬಳಿಕ, ಉದಯಪುರದ NJR ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದರು.

ಬಾಲ್ಯದಿಂದಲೂ ಭಾರತೀಯ ಸಶಸ್ತ್ರ ಪಡೆಗಳಿಗೆ ಸೇರುವ ಆಸಕ್ತಿ ಹೊಂದಿದ್ದ ಅವರು, ಅದಕ್ಕೆ ಬೇಕಾದ ಪ್ರೇರಣೆ ಪಡೆದರು. ಅದಕ್ಕೆ ಸರಿಯಾಗಿ ಚೆನ್ನೈನಲ್ಲಿ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿ ತರಬೇತಿಯ ಸಮಯದಲ್ಲಿ ತಮ್ಮ ಅದಮ್ಯ ಉತ್ಸಾಹ ಪ್ರದರ್ಶಿಸಿದರು. 2021ರ ಮೇ ತಿಂಗಳಲ್ಲಿ ಇಂಜಿನಿಯರ್ ರೆಜಿಮೆಂಟ್‌ಗೆ ನಿಯೋಜಿಸಲ್ಪಟ್ಟರು ಎಂದು ಸೇನೆ ಹೇಳಿದೆ.

2022ರ ಜುಲೈನಲ್ಲಿ ಕಾರ್ಗಿಲ್ ವಿಜಯ್ ದಿವಸ್ ಸಂದರ್ಭದಲ್ಲಿ ನಡೆಸಲಾದ ಸಿಯಾಚಿನ್ ಯುದ್ಧ ಸ್ಮಾರಕದಿಂದ ಕಾರ್ಗಿಲ್ ಯುದ್ಧ ಸ್ಮಾರಕದವರೆಗಿನ 508 ಕಿ.ಮೀ.ಗಳ ಸುರಾ ಸೋಯಿ ಸೈಕ್ಲಿಂಗ್ ಯಾತ್ರೆಯನ್ನು ಕ್ಯಾಪ್ಟನ್ ಚೌಹಾಣ್ ಯಶಸ್ವಿಯಾಗಿ ಮುನ್ನಡೆಸಿದರು. ನಂತರ ಅವರು ಸಿಯಾಚಿನ್‌ನಲ್ಲಿ ಸುರಾ ಸೋಯಿ ಇಂಜಿನಿಯರ್ ರೆಜಿಮೆಂಟ್‌ನ ಪುರುಷರ ತಂಡವನ್ನು ಮುನ್ನಡೆಸುವ ಸವಾಲನ್ನು ಸ್ವೀಕರಿಸಿದರು. ಇದನ್ನು ಕೂಡಾ ಯಶಸ್ವಿಯಾಗಿ ಮುನ್ನಡೆಸಿದ ಅವರ ಕಾರ್ಯಕ್ಷಮತೆಯನ್ನು ಗಮನಿಸಿ, ಸಿಯಾಚಿನ್ ಬ್ಯಾಟಲ್ ಸ್ಕೂಲ್‌ನಲ್ಲಿ ತರಬೇತಿ ಪಡೆಯಲು ಆಯ್ಕೆ ಮಾಡಲಾಗಿದೆ. ಇದೀಗ ಸಿಯಾಚಿನ್‌ನಲ್ಲಿ ಕಾರ್ಯಾಚರಣೆಗೆಂದು ನಿಯೋಜಿಸಲ್ಪಡುವ ಮೂಲಕ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮೊದಲ ಮಹಿಳಾ ಅಧಿಕಾರಿ ಎಂಬ ಹಿರಿಮೆಗೆ ಪಾತ್ರರಾಗುತ್ತಿದ್ದಾರೆ.

suddiyaana