ಕಾನೂನು ಅನ್ವಯ ಅನುಮತಿ ಸಿಗದ ಹೊರತು ಕಾರ್ಖಾನೆ ನಡೆಸುವಂತಿಲ್ಲ – ಯತ್ನಾಳ್ ಕುಟುಂಬಕ್ಕೆ ಹೈಕೋರ್ಟ್ ಸೂಚನೆ
ವಿಜಯಪುರ ನಗರ ಕ್ಷೇತ್ರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಒಡೆತನವಿರುವ ಸಿದ್ಧಸಿರಿ ಸಕ್ಕರೆ ಕಾರ್ಖಾನೆ ಹಾಗೂ ಎಥೆನಾಲ್ ಘಟಕದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವಂತೆ ಕೋರ್ಟ್ ಸೂಚನೆ ನೀಡಿದೆ. ಕಾನೂನು ಅನ್ವಯ ಅನುಮತಿ ಸಿಗದ ಹೊರತು ಕಾರ್ಖಾನೆ ನಡೆಸುವಂತಿಲ್ಲಎಂದು ಹೈಕೋರ್ಟ್ ಹೇಳಿದೆ. ಇದರಿಂದಾಗಿ ಯತ್ನಾಳ್ ಕುಟುಂಬಕ್ಕೆ ಇದು ನುಂಗಲಾರದ ತುತ್ತಾಗಿದೆ.
ಇದನ್ನೂ ಓದಿ: ನಂಬಿಕೆಯಷ್ಟೇ ಅಲ್ಲ.. ಅನಾರೋಗ್ಯಕ್ಕೂ ರಾಮಬಾಣ! – ವಿಭೂತಿ ಹಚ್ಚೋದ್ರಿಂದ ಎಷ್ಟೆಲ್ಲಾ ಪ್ರಯೋಜನ?
ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನಲ್ಲಿರುವ ಎಥೆನಾಲ್ ಮತ್ತು ಪವರ್ ಘಟಕ ಮುಚ್ಚುವಂತೆ ಕಲಬುರಗಿ ವಲಯದ ಹಿರಿಯ ಪರಿಸರ ಅಧಿಕಾರಿ ಜ.18ರಂದು ನೋಟಿಸ್ ಜಾರಿ ಮಾಡಿದ್ದರು. ಬಳಿಕ ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣಾ ಮಂಡಳಿ ಜ.25ರಂದು ಆದೇಶ ಮಾಡಿತ್ತು. ಈ ಎರಡೂ ಆದೇಶವನ್ನು ರದ್ದುಮಾಡಬೇಕು ಎಂದು ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಸಕ್ಕರೆ ಹಾಗೂ ಎಥೆನಾಲ್ ಘಟಕದ ಕಾರ್ಯಾಚರಣೆ ಸ್ಥಗಿತಗೊಳಿಸುವ ಕುರಿತು ಮಾಹಿತಿ ಪಡೆದು ತಿಳಿಸುವಂತೆ ಅರ್ಜಿದಾರರ ಪರ ವಕೀಲರಿಗೆ ಹೈಕೋರ್ಟ್ ಸೂಚನೆ ನೀಡಿದೆ.
ಯತ್ನಾಳ್ ಪುತ್ರ ಹಾಗೂ ಸಂಸ್ಥೆಯ ನಿರ್ದೇಶಕ ರಮಣಗೌಡ ಬಿ.ಪಾಟೀಲ್ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಎಸ್ ದಿನೇಶ್ ಕುಮಾರ್ ಮತ್ತು ನ್ಯಾಯಮೂರ್ತಿ ಟಿ.ಜಿ ಶಿವಶಂಕರೇಗೌಡ ಅವರ ನೇತೃತ್ವದ ವಿಭಾಗೀಯ ಪೀಠ ಈ ಸೂಚನೆ ನೀಡಿ ವಿಚಾರಣೆ ಮುಂದೂಡಿದೆ.
ವಿಚಾರಣೆ ವೇಳೆ ಅರ್ಜಿದಾರರ ವಕೀಲರು, ಘಟಕವನ್ನು ರಾಜಕೀಯ ಉದ್ದೇಶದಿಂದ ಸ್ಥಗಿತಗೊಳಿಸಲು ಒತ್ತಾಯಿಸಲಾಗುತ್ತಿದೆ ಎಂದು ವಾದಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಕಾರ್ಖಾನೆ ನಿಯಮದ ಪ್ರಕಾರ ನಡೆಯುತ್ತಿಲ್ಲ. ಇದರಿಂದಾಗಿ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಪ್ರಕ್ರಿಯೆಯಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ ಎಂದು ನ್ಯಾಯಾಲಯದ ಮುಂದೆ ವಿವರಿಸಿದ್ದಾರೆ.
ಬಳಿಕ ನ್ಯಾಯಾಲಯ, ಕಾರ್ಖಾನೆ ಮುಚ್ಚುವ ಸಂಬಂಧ ಅರ್ಜಿದಾರರಿಂದ ಮಾಹಿತಿ ಪಡೆದು ತಿಳಿಸಬೇಕು ಎಂದು ಸೂಚಿಸಿದೆ. ಅಲ್ಲದೇ ವಿಚಾರಣೆಯನ್ನು ಫೆಬ್ರವರಿ 8ಕ್ಕೆ ಮುಂದೂಡಿದೆ. ಅರ್ಜಿದಾರರು 2021ರಲ್ಲಿ ಕಾರ್ಖಾನೆ ಖರೀದಿಸಿದ್ದು, ನಾವೀಗ 2024ರಲ್ಲಿದ್ದೇವೆ. ಈ ಅವಧಿಯಲ್ಲಿ ಅಗತ್ಯ ಅನುಮತಿ ಪಡೆಯಬೇಕಿತ್ತು. ಕಾನೂನಿನ ಪ್ರಕಾರ ನೀವು ಅನುಮತಿ ಪಡೆಯುವವರೆಗೆ ಕಾರ್ಖಾನೆ ನಡೆಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.