ಕಾಂಗ್ರೆಸ್‌ನ ಸಭೆಯಲ್ಲಿ ಕ್ಯಾಂಡಿಕ್ರಶ್‌ ಆಡುತ್ತಾ ಕುಳಿತ ಛತ್ತೀಸ್​ಗಢ ಸಿಎಂ ಭೂಪೇಶ್​ ಬಾಘೇಲ್​!

ಕಾಂಗ್ರೆಸ್‌ನ ಸಭೆಯಲ್ಲಿ ಕ್ಯಾಂಡಿಕ್ರಶ್‌ ಆಡುತ್ತಾ ಕುಳಿತ ಛತ್ತೀಸ್​ಗಢ ಸಿಎಂ ಭೂಪೇಶ್​ ಬಾಘೇಲ್​!

ಕಾಂಗ್ರೆಸ್‌ ನ ಪ್ರಮುಖ ಸಭೆಯೊಂದರಲ್ಲಿ ಛತ್ತೀಸ್‌ಗಢದ ಮುಖ್ಯಮಂತ್ರಿ ಭೂಪೇಶ್‌ ಬಾಘೇಲ್‌ ಕ್ಯಾಂಡಿಕ್ರಶ್‌ ಆಟವಾಡಿದ್ದಾರೆ. ಅವರು ಕ್ಯಾಂಡಿಕ್ರಷ್‌ ಆಡುತ್ತಿರುವ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗುತ್ತಿದೆ. ಇದೀಗ ಕ್ಯಾಂಡಿಕ್ರಶ್‌ ಆಟವಾಡಿ ಬಿಜೆಪಿ ನಾಯಕರ ಬಾಯಿಗೆ ಆಹಾರವಾಗಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಬಿಜೆಪಿ ಐಟಿ ಸೆಲ್​ನ ಮುಖ್ಯಸ್ಥ ಅಮಿತ್ ಮಾಳವೀಯ, ಹೇಗೂ ಈ ಬಾರಿ ಛತ್ತೀಸ್​ಗಢದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದಿಲ್ಲ ಎಂಬುದು ಸ್ಪಷ್ಟವಾದಂತಿದೆ ಹಾಗಾಗಿಯೇ ಸಭೆಯಲ್ಲಿ ಮುಖ್ಯಮಂತ್ರಿಗಳು ಕ್ಯಾಂಡಿ​ಕ್ರಶ್ ಆಡುತ್ತಿದ್ದರು ಎಂದು ಗೇಲಿ ಮಾಡಿದ್ದಾರೆ.‌

ಇದನ್ನೂ ಓದಿ: ಇಸ್ರೇಲ್ ಪರ ಬಿಜೆಪಿ.. ಪ್ಯಾಲೆಸ್ತೀನ್ ಬೆಂಬಲಕ್ಕೆ ನಿಂತ ಕಾಂಗ್ರೆಸ್ – ಚರ್ಚೆಗೆ ಗ್ರಾಸವಾಯ್ತು ಪಕ್ಷಗಳ ಭಿನ್ನ ನಿಲುವು

ಈ ಟ್ವೀಟ್‌ ಗೆ ಇದೀಗ ಸಿಎಂ ಭೂಪೇಶ್‌ ಬಾಘೇಲ್‌ ಪ್ರತಿಕ್ರಿಯಿಸಿದ್ದಾರೆ. ನಾನು ಗಿಲ್ಲಿ ದಾಂಡನ್ನೂ ಆಡುತ್ತೇನೆ, ಕ್ಯಾಂಡಿಕ್ರಷ್​ನ್ನು ಆಡುತ್ತೇನೆ, ನಾನು ಲೆವೆಲ್ ಚೆನ್ನಾಗಿ ಪಾಸಾಗಿದ್ದೇನೆ, ಅದು ಇನ್ನು ಮುಂದೆ ಕೂಡ ಮುಂದುವರೆಯುತ್ತದೆ. ಯಾರಿಗೆ ಮತ ಹಾಕಬೇಕು, ಹಾಕಬಾರದು ಎಂಬುದು ಛತ್ತೀಸ್​ಗಢದ ಜನತೆಗೆ ತಿಳಿದಿದೆ ಎಂದು ಖಾರವಾಗಿ ಟ್ವೀಟ್ ಮಾಡಿದ್ದಾರೆ.

ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದಂತೆ ರಾಯ್‌ಪುರದಲ್ಲಿ ಮೊದಲು ಕಾಂಗ್ರೆಸ್ ರಾಜ್ಯ ಚುನಾವಣಾ ಸಮಿತಿ ಸಭೆ ನಡೆದಿತ್ತು. ನಂತರ ರಾತ್ರಿ ಕಾಂಗ್ರೆಸ್ ಸ್ಕ್ರೀನಿಂಗ್ ಸಮಿತಿ ಸಭೆ ನಡೆದಿದೆ. ಈ ವೇಳೆ ಸಿಎಂ ಕ್ಯಾಂಡಿಕ್ರಶ್‌ ಆಟವಾಡಿದ್ದಾರೆ ಎಂದು ಹೇಳಲಾಗಿದೆ.

ಛತ್ತೀಸ್‌ಗಢ ರಾಜ್ಯ ವಿಧಾನಸಭಾ ಚುನಾವಣೆಗೆ ತಯಾರಿ ನಡೆಸುತ್ತಿದ್ದು, ನವೆಂಬರ್ 7 ಮತ್ತು 17 ರಂದು ಎರಡು ಹಂತಗಳಲ್ಲಿ ನಡೆಯಲಿದ್ದು, ಡಿಸೆಂಬರ್ 3 ರಂದು ಫಲಿತಾಂಶ ಹೊರಬರಲಿದೆ.

Shwetha M