ಕೆಲ ಕ್ಷೇತ್ರಗಳಲ್ಲಿ ಅಭ್ಯರ್ಥಿ ಆಯ್ಕೆಯೇ ಬಿಜೆಪಿಗೆ ಕಗ್ಗಂಟು- ಭುಗಿಲೆದ್ದ ಅಸಮಾಧಾನ, ನಾಯಕರಿಗೆ ತಲೆನೋವು..!

ಕೆಲ ಕ್ಷೇತ್ರಗಳಲ್ಲಿ ಅಭ್ಯರ್ಥಿ ಆಯ್ಕೆಯೇ ಬಿಜೆಪಿಗೆ ಕಗ್ಗಂಟು- ಭುಗಿಲೆದ್ದ ಅಸಮಾಧಾನ, ನಾಯಕರಿಗೆ ತಲೆನೋವು..!

ಬಿ.ಎಸ್ ಯಡಿಯೂರಪ್ಪ ರಾಜ್ಯ ಬಿಜೆಪಿಯಲ್ಲಿ ಪ್ರಶ್ನಾತೀತ ನಾಯಕ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಆದ್ರೆ ಪಕ್ಷದ ನೂತನ ರಾಜ್ಯಾಧ್ಯಕ್ಷರಾಗಿ ಅವರ ಪುತ್ರ ಬಿ.ವೈ. ವಿಜಯೇಂದ್ರ ನೇಮಕಗೊಂಡ ನಂತರ ಬಿಜೆಪಿಯಲ್ಲಿ ಅಸಮಾಧಾನ ಭುಗಿಲೆದ್ದಿದೆ. ಈ ಆಂತರಿಕ ಭಿನ್ನಮತ ತಣ್ಣಗಾಗುವ ಮುನ್ನವೆ ಅಭ್ಯರ್ಥಿಗಳ ಆಯ್ಕೆ ಪಕ್ಷದ ನಾಯಕತ್ವಕ್ಕೆ ತಲೆ ನೋವು ತಂದೊಡ್ಡಿದೆ. ಮತ್ತೊಂದೆಡೆ ಲೋಕಸಭಾ ಚುನಾವಣೆಗೆ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿರೋ ಬಿಜೆಪಿ 28 ಕ್ಷೇತ್ರಗಳನ್ನೂ ಗೆಲ್ಲೋ ನಿರೀಕ್ಷೆಯಲ್ಲಿದೆ. ಆದ್ರೆ ಕೆಲ ಕ್ಷೇತ್ರಗಳಲ್ಲಿ ಅಭ್ಯರ್ಥಿ ಆಯ್ಕೆಯೇ ಕಗ್ಗಂಟಾಗ್ತಿದೆ. ಮೈಸೂರು-ಕೊಡಗು ಕ್ಷೇತ್ರ, ಬೆಂಗಳೂರು ಉತ್ತರ ಕ್ಷೇತ್ರ, ಉಡುಪಿ-ಚಿಕ್ಕಮಗಳೂರು ಹಾಗೂ ಉತ್ತರ ಕನ್ನಡ ಕ್ಷೇತ್ರದ ಟಿಕೆಟ್ ವಿಚಾರ ಕಗ್ಗಂಟಾಗ್ತಿದೆ.

ಇದನ್ನೂ ಓದಿ: ಸುಧಾಕರ್ Vs ಪ್ರದೀಪ್ ಈಶ್ವರ್? – ಈ ಬಾರಿಯೂ ರಣರಂಗವಾಗುತ್ತಾ ಚಿಕ್ಕಬಳ್ಳಾಪುರ ಅಖಾಡ?

ಬೆಂಗಳೂರು ಉತ್ತರ ಕ್ಷೇತ್ರ

ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದಗೌಡ ಪ್ರತಿನಿಧಿಸುತ್ತಿರುವ ಕ್ಷೇತ್ರ ಬೆಂಗಳೂರು ಉತ್ತರ. ಆದ್ರೆ ಮೂರು ತಿಂಗಳ ಹಿಂದೆ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದರು. ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಸದಾನಂದ ಗೌಡರು ಹೇಳಿಕೆ ನೀಡಿದ ಮರು ಕ್ಷಣವೇ ಮಾಜಿ ಸಚಿವ ಸಿ.ಟಿ. ರವಿ ಅಲರ್ಟ್ ಆಗಿದ್ದಾರೆ. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಯಾಗಲು ತೆರೆ ಮರೆಯಲ್ಲಿ ಪ್ರಯತ್ನಗಳನ್ನು ಆರಂಭಿಸಿದ್ದಾರೆ. ಆದ್ರೆ ಸಿ.ಟಿ. ರವಿ ವಿರುದ್ಧ ಬಿಜೆಪಿಯ ಇನ್ನೊಂದು ಗುಂಪು ಚುರುಕಾಗಿದೆ. ಕೇಂದ್ರ ಸಚಿವೆ ಆಗಿರುವ ಚಿಕ್ಕಮಗಳೂರು- ಉಡುಪಿ ಕ್ಷೇತ್ರದ ಸದಸ್ಯೆ ಶೋಭಾ ಕರಂದ್ಲಾಜೆಯವರ ಹೆಸರೂ ಕೇಳಿ ಬರ್ತಿದೆ. ಶೋಭಾ ಕರಂದ್ಲಾಜೆ ಸ್ಪರ್ಧಿಸಿದರೆ ಗೆಲುವು ನಿರಾಯಾಸ ಎಂಬ ಲೆಕ್ಕಾಚಾರ ಬೆಂಬಲಿಗರದ್ದು. ಇದರ ನಡುವೆಯೇ ಚುನಾವಣಾ ನಿವೃತ್ತಿ ಘೋಷಿಸಿದ್ದ ಡಿ.ವಿ.ಸದಾನಂದ ಗೌಡರು ನಿವೃತ್ತಿಯ ನಿರ್ಧಾರದಿಂದ ಹಿಂದೆ ಸರಿಯುವುದಾಗಿ ಘೋಷಿಸಿ ಟ್ವಿಸ್ಟ್ ನೀಡಿದ್ದಾರೆ. ಹೀಗಾಗಿ ಕ್ಷೇತ್ರ ಭಾರೀ ಕುತೂಹಲ ಕೆರಳಿಸಿದೆ.

ಅಷ್ಟೇ ಅಲ್ಲದೆ ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರು ಉತ್ತರ ಕ್ಷೇತ್ರ ಪ್ರಾಮುಖ್ಯತೆ ಪಡೆದುಕೊಂಡಿದೆ. ರಿಯಲ್ ಎಸ್ಟೇಟ್ ವ್ಯವಹಾರ ರಾಜಕೀಯ ಪಕ್ಷಗಳು ಹಾಗೂ ನಾಯಕರ ಪಾಲಿಗೆ ಆಕರ್ಷಣೆಯ ಕೇಂದ್ರವಾಗಿದೆ. ಒಂದು ರೀತಿಯಲ್ಲಿ ರಾಜಕೀಯ ಪಕ್ಷಗಳಿಗೆ, ನಾಯಕರುಗಳಿಗೆ ಇದು ಆದಾಯದ ಮೂಲವೂ ಹೌದು. ಹೀಗಾಗೇ ಬೆಂಗಳೂರು ನಗರದ ಕ್ಷೇತ್ರಗಳು ಹೆಚ್ಚು ಮಹತ್ವ ಪಡೆದುಕೊಂಡಿವೆ.

ಮೈಸೂರು ಕೊಡಗು ಕ್ಷೇತ್ರ

ಮೈಸೂರು ಕೊಡಗು ಕ್ಷೇತ್ರದ ಸಂಸದ ಪ್ರತಾಪ ಸಿಂಹ ಹೆಸ್ರು ಇತ್ತೀಚೆಗೆ ಭಾರೀ ಸುದ್ದಿಯಲ್ಲಿದೆ. ಯಾಕಂದ್ರೆ ಪ್ರತಾಪ್ ಸಿಂಹ ವಿರುದ್ಧ ಸ್ಥಳೀಯ ಬಿಜೆಪಿ ನಾಯಕರೇ ಸಿಡಿದೆದ್ದಿದ್ದಾರೆ. ಯಾವುದೇ ಕಾರಣಕ್ಕೂ ಅವರಿಗೆ ಈ ಬಾರಿ ಟಿಕೆಟ್ ನೀಡುವುದು ಬೇಡ ಎಂಬ ಒತ್ತಡ ಸ್ಥಳೀಯ ಮುಖಂಡರಿಂದಲೇ ಬರುತ್ತಿದೆ. ಸ್ಥಳೀಯ ನಾಯಕರನ್ನು ನಿರ್ಲಕ್ಷಿಸಿ ಪ್ರತಾಪ್ ಸಿಂಹ ಏಕ ಚಕ್ರಾಧಿಪತ್ಯ ಮೆರೆಸಲು ಹೊರಟಿದ್ದಾರೆ ಎನ್ನುತ್ತಿದ್ದಾರೆ. ಅದಕ್ಕಿಂತ ಹೆಚ್ಚಾಗಿ ಇತ್ತೀಚೆಗೆ ಲೋಕಸಭೆಯಲ್ಲಿ ಪ್ರೇಕ್ಷಕರ ಗ್ಯಾಲರಿಯಿಂದ ಕೆಲವು ಯುವಕರು ಸದನದೊಳಕ್ಕೆ ನುಗ್ಗಿ ದಾಂಧಲೆ ನಡೆಸಿದ್ದರು. ಆದ್ರೆ ಆರೋಪಿಗೆ ಲೋಕಸಭೆ ಕಲಾಪ ವೀಕ್ಷಣೆಗೆ  ಪ್ರತಾಪ ಸಿಂಹ ಅವರೇ ಪಾಸ್ ನೀಡಿರುವ ಪ್ರಕರಣವೂ ದೊಡ್ಡ ರಾದ್ಧಾಂತವಾಗಿದ್ದು. ಇದು ಪ್ರತಿಪಕ್ಷಗಳಿಗೆ ಬಿಜೆಪಿ ವಿರುದ್ಧದ ಟೀಕೆಗೆ ಆಹಾರ ಒದಗಿಸಿದೆ. ಹೀಗಾಗಿ ಪ್ರತಾಪ್ ಸಿಂಹಗೆ ಟಿಕೆಟ್ ಸಿಗುತ್ತೋ ಇಲ್ವೋ ಹೇಳೋಕೆ ಆಗಲ್ಲ.

ಇಷ್ಟೇ ಅಲ್ಲದೆ ಪ್ರತಾಪ್ ಸಿಂಹ ಸೋದರ ವಿಕ್ರಂ ಸಿಂಹ ಮರಕಳ್ಳತನ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದರು. ಇದೂ ಕೂಡ ವಿಪಕ್ಷಗಳ ಟೀಕೆಗೆ ಕಾರಣವಾಗಿತ್ತು. ಅಲ್ಲದೆ ಕ್ಷೇತ್ರದಲ್ಲಿ ಪ್ರತಾಪ್ ಸಿಂಹ ವಿರೋಧಿ ಅಲೆ ಇದೆ ಎನ್ನುವ ಆರೋಪವೂ ಇದೆ.

ಚಿಕ್ಕಮಗಳೂರು-ಉಡುಪಿ ಕ್ಷೇತ್ರ! 

ಚಿಕ್ಕಮಗಳೂರು-ಉಡುಪಿ ಕ್ಷೇತ್ರ ಕೂಡ ಈ ಬಾರಿ ತಿಕ್ಕಾಟಕ್ಕೆ ಸಾಕ್ಷಿಯಾಗುವ ಸಾಧ್ಯತೆ ಇದೆ. ಯಾಕಂದ್ರೆ ಲೋಕಸಭಾ ಚುನಾವಣೆಗೆ ತಾವೇ ಸ್ಪರ್ಧಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಘೋಷಿಸಿದ್ದಾರೆ. ಆದ್ರೆ  ಈ ಕ್ಷೇತ್ರದಲ್ಲೂ ಸಿ.ಟಿ. ರವಿ ಮತ್ತು ಶೋಭಾ ನಡುವಿನ ರಾಜಕೀಯ ಹೊಂದಾಣಿಕೆ ಚೆನ್ನಾಗಿಲ್ಲ. ಇಡೀ ಜಿಲ್ಲೆಯ ರಾಜಕಾರಣದಲ್ಲಿ ನಾನಾ ಕಾರಣಕ್ಕೆ ರವಿ ಪಕ್ಷದೊಳಗೇ ವಿರೋಧಿಗಳ ದೊಡ್ಡ ಪಡೆಯನ್ನೇ ಸೃಷ್ಟಿಸಿಕೊಂಡಿದ್ದಾರೆ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಇಳಿದ ನಂತರ ಅವರಿಗೆ ಪಕ್ಷದಲ್ಲೀಗ ಯಾವುದೇ ಹುದ್ದೆ ನೀಡಿಲ್ಲ. ಅವರೂ ಈಗ ಪ್ರತಾಪ ಸಿಂಹ ರಂತೆ ಒಂಟಿಯಾಗಿದ್ದಾರೆ.

ಉತ್ತರ ಕನ್ನಡ ಕ್ಷೇತ್ರ! 

ಇತ್ತ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಅನಂತಕುಮಾರ ಹೆಗಡೆ ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲೇ ಪ್ರತ್ಯಕ್ಷರಾಗಿದ್ದಾರೆ. ಕಳೆದ ಬಾರಿ ಆಯ್ಕೆಯಾದ ನಂತರ ಅಜ್ಞಾತವಾಸಕ್ಕೆ ತೆರಳಿದ್ದ ಅವರು ಪಕ್ಷದ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಿಂದಲೂ ದೂರ ಇದ್ದರು. ಈ ಬಾರಿ ಅವರು ಮತ್ತೆ ಚುನಾವಣೆಗೆ ಸ್ಪರ್ಧಿಸಲು ತಯಾರಾಗುತ್ತಿದ್ದಾರೆ. ಆದರೆ ಬಹು ಸಂಖ್ಯೆಯ ಕಾರ್ಯಕರ್ತರಿಗೆ ಅವರ ಬಗ್ಗೆ ಒಲವಿಲ್ಲ. ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅಭ್ಯರ್ಥಿಯಾಗಲು ಪ್ರಯತ್ನ ನಡೆಸಿದ್ದಾರೆ. ಅವರಿಗೆ ಯಡಿಯೂರಪ್ಪ, ವಿಜಯೇಂದ್ರ ಬೆಂಬಲವಿದೆ.

ಬಿಜೆಪಿ ಪಾಲಿಗೆ ಈ ನಾಲ್ಕು ಕ್ಷೇತ್ರಗಳಷ್ಟೇ ಅಲ್ಲ. ಹಳೇ ಮೈಸೂರು ಭಾಗದಲ್ಲೂ ಟಿಕೆಟ್​ಗಾಗಿ ಭಾರೀ ಪೈಪೋಟಿ ನಡೆಯುವ ಸಾಧ್ಯತೆ. ಇದೆಲ್ಲಕ್ಕಿಂತ ಮೊದಲು ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿರುವ ಬಿಜೆಪಿ ದಳಪತಿಗಳಿಗೆ ಎಷ್ಟು ಕ್ಷೇತ್ರಗಳನ್ನ ಬಿಟ್ಟು ಕೊಡುತ್ತದೆ. ತಾವು ಯಾವ್ಯಾವ ಕ್ಷೇತ್ರದಿಂದ ಅಖಾಡಕ್ಕೆ ಇಳೀತಾರೆ. ಕಳೆದ ಬಾರಿ 25 ಸ್ಥಾನ ಗೆದ್ದಿದ್ದನ್ನ ಉಳಿಸಿಕೊಳ್ತಾರಾ ಅಥವಾ ಸ್ಥಾನ ಕಳೆದುಕೊಳ್ತಾರಾ ಅನ್ನೋದನ್ನ ಕಾದು ನೋಡ್ಬೇಕು.

Sulekha