1 WIN.. 3 ಟೀಂ ಹಿಂದಿಕ್ಕಿದ RCB – ಪ್ಲೇ ಆಫ್ ಗೇರಲು 3 ದಾರಿಗಳೇನು?
RCBಯ ಅಸಲಿ Challenge ಇವ್ರೇ!

1 WIN.. 3 ಟೀಂ ಹಿಂದಿಕ್ಕಿದ RCB – ಪ್ಲೇ ಆಫ್ ಗೇರಲು 3 ದಾರಿಗಳೇನು?RCBಯ ಅಸಲಿ Challenge ಇವ್ರೇ!

ಒಂದು ಮ್ಯಾಚ್. ಜಸ್ಟ್ ಒಂದೇ ಒಂದು ಮ್ಯಾಚ್. 10ನೇ ಸ್ಥಾನದಲ್ಲಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 7ನೇ ಸ್ಥಾನಕ್ಕೆ ಜಿಗಿತ ಕಂಡಿದೆ. ಗುಜರಾತ್ ತಂಡವನ್ನ ಬೆಂಗಳೂರು ನೆಲದಲ್ಲಿ ಸೋಲಿಸಿ ಪಾಯಿಂಟ್ಸ್ ಟೇಬಲ್​ನಲ್ಲಿ ತುಂಬಾ ದಿನಗಳ ನಂತರ ಜಂಪ್ ಆಗಿದೆ. ಮತ್ತೊಂದೆಡೆ 5 ಬಾರಿ ಚಾಂಪಿಯನ್​ ಆಗಿದ್ದ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್ ಸೀಸನ್ 17ನಲ್ಲಿ ಪ್ಲೇಆಫ್​ನಿಂದ ಹೊರಬಿದ್ದ ಮೊದಲ ಟೀಂ ಆಗಿದೆ. ಹಾಗಾದ್ರೆ ಆರ್​ಸಿಬಿ ಪ್ಲೇಆಫ್ ಪಕ್ಕನಾ..? ಇರೋ ಮೂರು ಮ್ಯಾಚ್ ಗೆದ್ರೆ ಚಾನ್ಸ್ ಇದ್ಯಾ..? ಬೆಂಗಳೂರು ತಂಡದ ಮಿಡಲ್ ಆರ್ಡರ್ ಬ್ಯಾಟರ್ಸ್ ಕೈ ಕೊಡ್ತಿರೋದೇಕೆ..? ಈ ಬಗೆಗಿನ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ..

ಇದನ್ನೂ ಓದಿ: ಮುಂಬೈ vs ಹೈದರಾಬಾದ್ ನಡುವೆ ಹೈ-ವೋಲ್ಟೇಜ್ ಪಂದ್ಯ – ಈ ಮ್ಯಾಚ್‌ನಲ್ಲಿ ಗೆದ್ದರೆ ಆರೆಂಜ್‌ ಆರ್ಮಿ ಪ್ಲೇ-ಆಫ್‌ಗೆ ಹತ್ತಿರ

ಆರ್​ಸಿಬಿ ಈವರೆಗೂ ಹನ್ನೊಂದು ಪಂದ್ಯಗಳನ್ನ ಆಡಿದ್ದು ನಾಲ್ಕರಲ್ಲಿ ಗೆಲುವು ಕಂಡಿದೆ. ಕೊನೆಯ ಮೂರು ಪಂದ್ಯಗಳಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದೆ. ಒಟ್ಟಾರೆ 8 ಅಂಕಗಳನ್ನು ಗಳಿಸುವ ಮೂಲಕ ಅಂಕಪಟ್ಟಿಯಲ್ಲಿ ಕೊನೇ ಸ್ಥಾನದಿಂದ 7ನೇ ಸ್ಥಾನಕ್ಕೆ ಜಿಗಿದಿದೆ. ಸತತ ಸೋಲುಗಳಿಂದ ಕಂಗೆಟ್ಟು ಬಳಿಕ ಹ್ಯಾಟ್ರಿಕ್ ಗೆಲುವು ಪಡೆದ ಆರ್​ಸಿಬಿಯ ಪ್ಲೇಆಫ್ ಕನಸನ್ನ ಜೀವಂತವಾಗಿ ಇರಿಸಿದ್ದೇ ಶನಿವಾರದ ಪಂದ್ಯ. ಒಂದೇ ಒಂದು ಪಂದ್ಯ ಮೂರು ತಂಡಗಳನ್ನ ಹಿಂದಿಕ್ಕುವಂತೆ ಮಾಡಿದೆ. ಆ ರೋಚಕ ಪಂದ್ಯದ ಬಗ್ಗೆ ನಿಮಗೆ ಹೇಳಲೇಬೇಕು. ಚಿನ್ನಸ್ವಾಮಿ ಸ್ಟೇಡಿಯಮ್​ನಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದ ಆರ್​ಸಿಬಿ ಗುಜರಾತ್ ಆಟಗಾರರನ್ನ ಆಲ್​ಔಟ್ ಮಾಡುವ ಮೂಲಕ  19.3 ಓವರ್‌ಗಳಲ್ಲಿ ಜಸ್ಟ್ 147 ರನ್ ಕಲೆ ಹಾಕುವಂತೆ ಮಾಡಿತು. ಬೌಲಿಂಗ್​ನ ಈ ಮಾರಕ ದಾಳಿಯೇ ಆರ್​ಸಿಬಿಗೆ ಮೇನ್ ಪ್ಲಸ್​ ಪಾಯಿಂಟ್ ಆಗಿದೆ. 148 ರನ್ ಗಳ ಗುರಿ ಬೆನ್ನತ್ತಿದ ಆರ್ ಸಿಬಿ ಇನ್ನೂ 38 ಎಸೆತಗಳು ಬಾಕಿ ಇರುವಂತೆಯೇ 13. 4 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 152 ರನ್ ಬಾರಿಸಿ ಗೆದ್ದು ಬೀಗಿತು.

ಆಫ್ಟರ್​ ಎ ಲಾಂಗ್ ಟೈಂ ಆರ್​ಸಿಬಿಯ ಬೌಲಿಂಗ್ ಟೀಂ ತುಂಬಾನೇ ಸ್ಟ್ರಾಂಗ್ ಆಗಿ ಕಂಡಿದೆ. ಜಿಟಿ ತಂಡವನ್ನ ಆಲೌಟ್ ಮಾಡುವ ಮೂಲಕ ಟೀಕಾಕಾರರಿಗೆ ನಮ್ಮ ಬೌಲರ್ಸ್ ತಿರುಗೇಟು ನೀಡಿದ್ದಾರೆ. ಮೊಹಮ್ಮದ್ ಸಿರಾಜ್, ಯಶ್ ದಯಾಳ್ ಮತ್ತು ವಿಜಯಕುಮಾರ್ ವೈಶಾಖ್ ತಲಾ 2 ವಿಕೆಟ್ ಪಡೆದ್ರೆ, ಕ್ಯಾಮರೂನ್ ಗ್ರೀನ್ ಮತ್ತು ಕರ್ಣ್ ಶರ್ಮಾ ತಲಾ 1 ವಿಕೆಟ್ ಉರುಳಿಸಿದರು. ಅಲ್ಲದೆ ಗುಜರಾತ್ ತಂಡಕ್ಕೆ ಪವರ್‌ಪ್ಲೇನಲ್ಲಿ ಕೇವಲ 23 ರನ್ ನೀಡಿ, ಈ ಆವೃತ್ತಿಯಲ್ಲಿ ಪವರ್‌ಪ್ಲೇನಲ್ಲಿ ಅತಿ ಕಡಿಮೆ ರನ್ ನೀಡಿದ ತಂಡ ಎಂಬ ದಾಖಲೆ ಬರೆಯಿತು.

ಸದ್ಯ ಹ್ಯಾಟ್ರಿಕ್ ಗೆಲುವು ಕಂಡಿರುವ ಆರ್​ಸಿಬಿಗೆ ಇನ್ನು ಮೂರು ಪಂದ್ಯಗಳಿವೆ. ಈ ಮೂರೂ ಮ್ಯಾಚ್​ಗಳನ್ನ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಮೇ 9ರಂದು ಅಂದ್ರೆ ಗುರುವಾರ ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಸೆಣಸಾಡಲಿವೆ. ಹಾಗೇ ಮೇ 12 ಅಂದ್ರೆ ಮುಂದಿನ ಭಾನುವಾರ  ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವೆ ಪಂದ್ಯ ನಡೆಯಲಿದೆ.

ಇನ್ನು ಮೇ 18ರಂದು ಬದ್ಧ ವೈರಿಗಳಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಮತ್ತೊಮ್ಮೆ ಎದುರಾಳಿಗಳಾಗಲಿದ್ದಾರೆ. ಐಪಿಎಲ್ ಸೀಸನ್ 17 ಟೂರ್ನಿಯಲ್ಲಿ ಮೊದಲ ಪಂದ್ಯದಲ್ಲೇ ಸಿಎಸ್​ಕೆ ಮತ್ತು ಆರ್​ಸಿಬಿ ತಂಡಗಳು ಎದುರು ಬದುರಾಗಿದ್ವು. ಈ ಪಂದ್ಯದಲ್ಲಿ ಆರ್​ಸಿಬಿ ಸೋಲು ಕಂಡಿತ್ತು. ಇದೀಗ ಮೇ 18ರಂದು ಬೆಂಗಳೂರಿನಲ್ಲೇ ಪಂದ್ಯ ನಡೆಯಲಿದ್ದು, ಚೆನ್ನೈ ವಿರುದ್ಧ ಸೇಡು ತೀರಿಸಿಕೊಳ್ಳೋ ತವಕದಲ್ಲಿದ್ದಾರೆ ಬೆಂಗಳೂರು ಆಟಗಾರರು. ಆದ್ರೆ ಸಿಎಸ್​ಕೆ ಕೂಡ ಗೆಲುವಿನ ಟ್ರ್ಯಾಕ್​ಗೆ ಮರಳಿರೋದ್ರಿಂದ ಸೋಲಿಸೋದು ಸುಲಭವಿಲ್ಲ. ಸೀಸನ್ ಮೊದಲಾರ್ಧದಲ್ಲಿ ಆರ್‌ಸಿಬಿ ಪಾಲಿಗೆ ಗಗನ ಕುಸುಮವಾಗಿದ್ದ ಗೆಲುವು, ದ್ವಿತಿಯಾರ್ಧದಲ್ಲಿ ಹತ್ತಿರವಾಗಿದೆ. ಈ ಮೂಲಕ ಗುಜರಾತ್ ವಿರುದ್ಧ ಗೆದ್ದಿರುವ ಆರ್​ಸಿಬಿಗೆ ಪ್ಲೇ ಆಫ್​ ಕನಸು ಜೀವಂತವಾಗಿದೆ ನಿಜ. ಆದ್ರೆ ಅದು ಅಷ್ಟು ಸುಲಭವಾಗಿಲ್ಲ. ಮುಂದೆ ತಂಡದ ಮುಂದಿರುವ ಎಲ್ಲಾ ಮೂರು ಪಂದ್ಯಗಳಲ್ಲಿ ಗೆದ್ದರೂ, ಇತರ ತಂಡಗಳ ಸೋಲು-ಗೆಲುವಿನ ಮೇಲೆ ತಂಡದ ಭವಿಷ್ಯ ನಿಂತಿದೆ.

ಗುರುವಾರ ಆಡಲಿರುವ ಮುಂದಿನ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ತಂಡ ಸೋತರೆ, ಟೂರ್ನಿಯಿಂದ ಹೊರಬಿದ್ದಂತೆಯೇ ಲೆಕ್ಕ. ಇಲ್ಲದಿದ್ರೂ ಡೆಲ್ಲಿ ಅಥವಾ ಚೆನ್ನೈ ವಿರುದ್ಧ ಸೋತ್ರೂ ಈ ಸಲ ಕಪ್ ಇರ್ಲಿ ಪ್ಲೇಆಫ್​ಗೂ ಹೋಗಲ್ಲ. ಯಾಕಂದ್ರೆ ನಾವು ಗುಜರಾತ್ ವಿರುದ್ಧದ ಪಂದ್ಯವನ್ನ ಗೆದ್ದಿರಬಹುದು. ಆದ್ರೆ ಬ್ಯಾಟಿಂಗ್ ಬಲ ನೋಡಿದ್ರೆ ನಿಜಕ್ಕೂ ಆರ್​ಸಿಬಿ ಪಾಲಿಗೆ ಇದು ಆತಂಕಕಾರಿ ವಿಚಾರ. ಜಿಟಿ ವಿರುದ್ಧ ಕಿಂಗ್ ಕೊಹ್ಲಿ ಮತ್ತು ನಾಯಕ ಫಾಫ್ ಡುಪ್ಲೆಸಿಸ್ ಅಬ್ಬರಿಸಿದ್ದು ಬಿಟ್ರೆ ಉಳಿದವ್ರೆಲ್ಲಾ ಬಂದ ಪುಟ್ಟ ಹೋದ ಪುಟ್ಟ ಅಂತಾ ಪೆವಿಲಿಯನ್ ಪರೇಡ್ ನಡೆಸಿದ್ರು. ಅಷ್ಟೇ ಯಾಕೆ ಟೀಮ್​ಗೆ ಕಮ್ ಬ್ಯಾಕ್ ಮಾಡಿದ್ದ ಮ್ಯಾಕ್ಸ್​ವೆಲ್ ಕೂಡ ಯಾವ ಜಾದೂವನ್ನೂ ಮಾಡ್ಲೇ ಇಲ್ಲ. ಒಂದು ಫೋರ್ ಬಾರಿಸಿದ್ದೇ ದೊಡ್ಡದು ಎಂಬಂತೆ ಕ್ಯಾಚ್ ಕೊಟ್ಟು ವಿಕೆಟ್ ಒಪ್ಪಿಸಿದ್ರು.

ಇನ್ನು ಕಳೆದ ಪಂದ್ಯದಲ್ಲಿ ಇದೇ ಗುಜರಾತ್ ವಿರುದ್ಧ 41 ಬಾಲ್​ಗಳಲ್ಲಿ ಸೆಂಚುರಿ ಬಾರಿಸಿದ್ದ ವಿಲ್ ಜಾಕ್ಸ್ ಶನಿವಾರದ ಪಂದ್ಯದಲ್ಲಿ ಗಳಿಸಿದ್ದು ಜಸ್ಟ್ 1 ರನ್ ಮಾತ್ರ. ಇನ್ನು ರಜತ್ ಪಟೀದಾರ್ 2 ರನ್, ಕ್ಯಾಮರೂನ್ ಗ್ರೀನ್ 1 ರನ್ ಗಳಿಸಿ ಔಟಾದ್ರು. ಈ ಟೈಮಲ್ಲಿ ಆರ್​ಸಿಬಿಗೆ ಎಂದಿನಂತೆ ಆಸರೆಯಾಗಿದ್ದೇ ಡಿಕೆ ಬಾಸ್. 12 ಬಾಲ್​ನಲ್ಲಿ 21 ರನ್ ಗಳಿಸಿದ್ರು. ಡಿಕೆಗೆ ಸಾಥ್ ನೀಡಿದ್ದ ಸ್ವಪ್ನಿಲ್ ಸಿಂಗ್ ಸಿಕ್ಸರ್ ಮೂಲಕ ಪಂದ್ಯ ಗೆಲ್ಲಿಸಿದ್ರು. ಅಂದ್ರೆ ಇಲ್ಲಿ ಫಾಫ್ ಔಟಾದ ಬಳಿಕ ಬಂದ ನಾಲ್ವರು ಆಟಗಾರರು ಒಂದಂಕಿಯನ್ನ ದಾಟಲೇ ಇಲ್ಲ. ಹೀಗಾಗಿ ಮುಂದಿನ ಪಂದ್ಯಗಳಲ್ಲೂ ಇದೇ ಕಥೆಯಾದ್ರೆ ಆರ್​ಸಿಬಿ ಗೆಲ್ಲೋದು ಸುಲಭವಿಲ್ಲ. ಅಷ್ಟೇ ಯಾಕೆ ನೆಟ್​ರನ್ ರೇಟ್ ಕೂಡ ಸಿಗೋದು ಕಷ್ಟ. ಹಾಗೇ ಇತರ ತಂಡಗಳ ಸೋಲು ಗೆಲುವು ಕೂಡ ಮುಖ್ಯವಾಗುತ್ತೆ. ಕೆಕೆಆರ್ ಮತ್ತು ಆರ್​ಆರ್​ ಈಗಾಗ್ಲೇ ಪ್ಲೇಆಫ್ ಸ್ಥಾನಕ್ಕೇರುವ ಫೇವರೆಟ್ ಟೀಮ್​ಗಳಾಗಿವೆ.

ಇನ್ನು ಭಾನುವಾರ ಪಂಜಾಬ್ ಅನ್ನ ಸೋಲಿಸೋ ಮೂಲಕ ಸಿಎಸ್​ಕೆ 3ನೇ ಸ್ಥಾನಕ್ಕೆ ಜಿಗಿದ್ದು ಮುಂದಿನ ಮೂರು ಮ್ಯಾಚ್​ಗಳ ಪೈಕಿ ಎರಡರಲ್ಲಿ ಗೆದ್ರೂ ಪ್ಲೇಆಫ್​ ಗೇರಲಿದೆ. ಹೀಗಾಗಿ ನಾಲ್ಕನೇ ಸ್ಥಾನದಲ್ಲಿರೋ ಎಸ್​ಆರ್​ಹೆಚ್, ಐದನೇ ಸ್ಥಾನದಲ್ಲಿರೋ ಎಲ್​ಎಸ್​ಜಿ ಹಾಗೂ ಆರನೇ ಸ್ಥಾನದಲ್ಲಿರೋ ಡಿಸಿ ತಂಡಗಳು ಮುಂದಿನ ಪಂದ್ಯಗಳಲ್ಲಿ ಸೋತ್ರೆ ಮಾತ್ರ ಆರ್ಸಿಬಿ ಪ್ಲೇಆಫ್​ ಚಾನ್ಸ್ ಇರಲಿದೆ. ಹೀಗಾಗೇ ಆರ್​ಸಿಬಿಯ ಈ ಫ್ಲೇ ಆಫ್ ಲೆಕ್ಕಾಚಾರ ಫ್ಯಾನ್ಸ್ ಸೇರಿದಂತೆ ಕ್ರಿಕೆಟ್ ಜೋರಾಗೇ ನಡೀತಿದೆ. ಈ ಬಗ್ಗೆ ಮಾತನಾಡಿರುವ ಭಾರತದ ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ ಆರ್‌ಸಿಬಿಯ ಪ್ಲೇ ಆಫ್‌ ಕುರಿತು ಸಂಕ್ಷಿಪ್ತವಾಗಿ ಮಾತನಾಡಿದ್ದಾರೆ. ಆರ್‌ಸಿಬಿ ತಂಡಕ್ಕೆ ಸದ್ಯ ವೆಂಟಿಲೇಟರ್‌ನ ಅಗತ್ಯವಿಲ್ಲ. ಆದರೆ ತಂಡ ಇನ್ನೂ ಐಸಿಯುನಲ್ಲಿದೆ ಎಂದು ಹೇಳಿದ್ದಾರೆ. ಇದರೊಂದಿಗೆ ತಂಡವು ನಾಕೌಟ್‌ ಹಂತ ಪ್ರವೇಶಿಸುವುದು ಭಾರಿ ಕಷ್ಟದ ಸಂಭಾವ್ಯತೆ ಎಂದಿದ್ದಾರೆ.

Shwetha M