RCBಗೆ ಬುಮ್ರಾ ಎಂಟ್ರಿಯೇ ಸವಾಲ್.. ಕೊಹ್ಲಿ & ಸಾಲ್ಟ್ ಸಿಡಿದ್ರೆ ಗೆಲುವು ಫಿಕ್ಸ್ – ಬ್ಯಾಟಿಂಗ್ ಫ್ಲಾಪ್.. MI ವೀಕ್ನೆಸ್ ಏನು?

ಮೊದಲ ಎರಡು ಪಂದ್ಯ ಗೆದ್ದು ಮೂರನೇ ಮ್ಯಾಚ್ ಸೋತಿರೋ ಬೆಂಗಳೂರು ಟೀಂ ಒಂದ್ಕಡೆ. ಆಡಿರೋ ನಾಲ್ಕು ಮ್ಯಾಚ್ಗಳಲ್ಲಿ ಒಂದು ಪಂದ್ಯವನ್ನಷ್ಟೇ ಗೆದ್ದು ಮೂರು ಸೋಲು ಕಂಡಿರೋ ಮುಂಬೈ ಇಂಡಿಯನ್ಸ್ ಇನ್ನೊಂದ್ಕಡೆ. ಕಳೆದ ಪಂದ್ಯಗಳಲ್ಲಿ ಸೋಲಿನ ಆಘಾತದಿಂದ್ಲೇ ಎದುರು ಬದುರಾಗ್ತಿರೋ ಆರ್‌ಸಿಬಿ ಮತ್ತು ಎಂಐ ಟೀಂಗಳು ವಾಂಖೆಡೆಯಲ್ಲಿ ಮುಖಾಮುಖಿಯಾಗಲಿವೆ. ಗೆಲುವಿನ ಗಿಫ್ಟ್ ಯಾರಿಗೆ ಸಿಗಲಿದೆ? ಕಮ್ಬ್ಯಾಮ್ ಮಾಡಿರೋ ಬುಮ್ರಾ ಆರ್ಸಿಬಿಗೆ ದೊಡ್ಡ ಥ್ರೆಟ್ ಆಗ್ತಾರಾ? ಪಾಂಡ್ಯ ಸಹೋದರರ ವಾರ್ ಹೇಗಿರುತ್ತೆ? ಆರ್ಸಿಬಿಯ ಪ್ಲೇಯಿಂಗ್ 11ನಲ್ಲಿ ಏನೆಲ್ಲಾ ಚೇಂಜಸ್ ಆಗ್ಬೋದು ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ವಿಶ್ವನ ಬಾಳಿಗೆ ಜಾಹ್ನವಿ ಎಂಟ್ರಿ! – ಜೈಲು ಸೇರ್ತಾನಾ ಸೈಕೋ ಜಯಂತ್?
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ನಡುವೆ ಇಂದು ವಾಂಖೆಡೆ ಸ್ಟೇಡಿಯಮ್ನಲ್ಲಿ ಫೈಟ್ ನಡೆಯಲಿದೆ. ಐಪಿಎಲ್ ಇತಿಹಾಸದಲ್ಲಿ ಬೆಂಗಳೂರು ಹಾಗೂ ಮುಂಬೈ ತಂಡಗಳು 33 ಬಾರಿ ಮುಖಾಮುಖಿಯಾಗಿವೆ. ಈ ವೇಳೆ ಮುಂಬೈ ಇಂಡಿಯನ್ಸ್ ತಂಡವು 19 ಬಾರಿ ಗೆಲುವು ದಾಖಲಿಸಿದೆ. ಇನ್ನು ಆರ್‌ಸಿಬಿ ತಂಡ ಮುಂಬೈ ವಿರುದ್ಧ ಗೆದ್ದಿರುವುದು ಕೇವಲ 14 ಪಂದ್ಯಗಳಲ್ಲಿ ಮಾತ್ರ. ಇನ್ನು ಕೊನೆಯ 6 ಪಂದ್ಯಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 4 ಪಂದ್ಯಗಳಲ್ಲಿ ವಿಜಯ ಸಾಧಿಸಿದೆ. ಆರ್‌ಸಿಬಿ ವಿರುದ್ಧ ಮುಂಬೈ ದಾಖಲಿಸಿರುವ ಹೈಸ್ಕೋರ್ 213 ಆಗಿದ್ದು, ಕನಿಷ್ಠ ಸ್ಕೋರ್ 111. ಮುಂಬೈ ವಿರುದ್ಧ ಆರ್‌ಸಿಬಿ ದಾಖಲಿಸಿರುವ ಹೈಸ್ಕೋರ್ 235 ಆಗಿದ್ದು, ಕನಿಷ್ಠ ಮೊತ್ತ 122. ಹೀಗಾಗಿ ಇಂದಿನ ಪಂದ್ಯ ಬಾರೀ ಕುತೂಹಲ ಮೂಡಿಸಿದೆ.
ಕೊಹ್ಲಿ & ಸಾಲ್ಟ್ ಓಪನರ್ಸ್.. ಅಬ್ಬರಿಸಬೇಕಿದೆ ಪಡಿಕ್ಕಲ್!
ಮುಂಬೈ ವಿರುದ್ಧದ ಪಂದ್ಯದಲ್ಲೂ ಆರ್‌ಸಿಬಿ ಪ್ಲೇಯಿಂಗ್ 11ನಲ್ಲಿ ಬದಲಾವಣೆಗಳಾಗೋದು ಕಡಿಮೆ. ಓಪನರ್ಗಳಾಗಿ ವಿರಾಟ್ ಕೊಹ್ಲಿ ಮತ್ತು ಫಿಲ್ ಸಾಲ್ಟ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಮೊದಲ ಎರಡು ಪಂದ್ಯಗಳಲ್ಲಿ ಈ ಜೋಡಿ ಮಿಂಚಿದ್ದರೂ, ಗುಜರಾತ್ ವಿರುದ್ಧ ವಿಫಲವಾಗಿತ್ತು. ಸೋ ಎಂಐ ವಿರುದ್ಧ ಮಿಂಚಲೇಬೇಕಿದೆ. ಬಳಿಕ ದೇವದತ್ ಪಡಿಕ್ಕಲ್ ಮತ್ತು ರಜತ್ ಪಾಟೀದಾರ್ ಬ್ಯಾಟಿಂಗ್ಗೆ ಬರ್ತಾರೆ. ದೇವದತ್ ಪಡಿಕ್ಕಲ್ ಕಳೆದ ಮೂರು ಪಂದ್ಯಗಳಲ್ಲಿ ಸತತ ವೈಫಲ್ಯ ಕಂಡಿದ್ದಾರೆ. ಅವರು ಫಾರ್ಮ್‌ಗೆ ಮರಳದಿದ್ದರೆ ತಂಡಕ್ಕೆ ಒತ್ತಡ ಹೆಚ್ಚಲಿದೆ. ಮಿಡಲ್ ಆರ್ಡರ್ನಲ್ಲಿ ಲಿಯಾಮ್ ಲಿವಿಂಗ್ಸ್ಟೋನ್ ಮತ್ತು ಟಿಮ್ ಡೇವಿಡ್, ಕೃನಾಲ್ ಪಾಂಡ್ಯ ಕಾಣಿಸಿಕೊಳ್ಳಲಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಜೋಶ್ ಹೆಜೆಲ್ವುಡ್, ಭುವನೇಶ್ವರ್ ಕುಮಾರ್, ಯಶ್ ದಯಾಲ್ ಇರಲಿದ್ದು, ಇವರಿಗೆ ಸ್ಪಿನ್ನರ್ ಆಗಿ ಸುಯೇಶ್ ಶರ್ಮಾ ಸಾಥ್ ನೀಡ್ತಾರೆ. ಮೂರು ಪಂದ್ಯಗಳಲ್ಲಿ ಆಡಿರುವ ತಂಡವನ್ನೇ ಣಕ್ಕಿಳಿಸುವ ಸಾಧ್ಯತೆ ಇದೆ. ಕಳೆದ ಪಂದ್ಯದಲ್ಲಿ ರಸಿಕ್ ದಾರ್ ಸುಯಾಶ್ ಬದಲಿಗೆ ಆಡಿದ್ದರು. ಈ ಪಂದ್ಯದಲ್ಲಿ ರಸಿಕ್‌ರನ್ನು ಕೈಬಿಟ್ಟು ಸುಯಾಶ್‌ಗೆ ಅವಕಾಶ ನೀಡುವ ಸಾಧ್ಯತೆ ಇದೆ.
ಬ್ಯಾಟಿಂಗ್ ನಲ್ಲಿ ಫ್ಲಾಪ್ ಆಗಿದೆ ಮುಂಬೈ ಇಂಡಿಯನ್ಸ್!
ಇನ್ನು ಐದು ಬಾರಿಯ ಚಾಂಪಿಯನ್ ಮುಂಬೈ ತಂಡ ಈ ಸೀಸನ್ನಲ್ಲಿ ಕಳಪೆ ಪ್ರದರ್ಶನ ನೀಡ್ತಿದೆ. ಇದುವರೆಗೆ ಆಡಿರುವ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಸೋಲು ಕಂಡಿದೆ. ಬ್ಯಾಟ್ಸ್‌ಮನ್‌ಗಳು ಉತ್ತಮ ಸ್ಕೋರ್ ಕಲೆ ಹಾಕದೆ ಇರೋದೇ ಮುಂಬೈ ತಂಡದ ಸೋಲಿಗೆ ಪ್ರಮುಖ ಕಾರಣವಾಗಿದೆ. ಸೂರ್ಯಕುಮಾರ್ ಯಾದವ್ ಮತ್ತು ರಯಾನ್ ರಿಕಲ್ಟನ್ ಬಿಟ್ಟರೆ ತಂಡದಿಂದ ಮತ್ತ್ಯಾರು ಅರ್ಧಶತಕ ಸಿಡಿಸಿಲ್ಲ. ಇದು ತಂಡದ ಬ್ಯಾಟಿಂಗ್ ವಿಭಾಗ ಎಷ್ಟು ವೀಕ್ ಆಗಿದೆ ಅನ್ನೋದಕ್ಕೆ ಬೆಸ್ಟ್ ಎಕ್ಸಾಂಪಲ್. ಇನ್ನು ಕಳೆದ ಪಂದ್ಯದಲ್ಲಿ ಗಾಯದಿಂದ ಹೊರಗಿದ್ದ ನಾಯಕ ರೋಹಿತ್ ಶರ್ಮಾ ಆರ್‌ಸಿಬಿ ವಿರುದ್ಧ ಆಡ್ತಾರೆ. ಬಟ್ ರೋಹಿತ್ ಕೂಡ ಫಾರ್ಮ್ನಲ್ಲಿಲ್ಲ. ಆದ್ರೆ ಬೌಲಿಂಗ್ ವಿಭಾಗ ಮಾತ್ರ ಸೂಪರ್ ಸ್ಟ್ರಾಂಗ್ ಆಗಿದೆ.
ಮುಂಬೈಗೆ ಬುಮ್ರಾ, ದೀಪಕ್ ಮತ್ತು ಬೌಲ್ಟ್ ಬಲ!
ಸಾಲು ಸಾಲು ಸೋಲು ಕಂಡಿರೋ ಮುಂಬೈ ಇಂಡಿಯನ್ಸ್ಗೆ ಇದೀಗ ಆನೆ ಬಲ ಬಂದಂತಾಗಿದೆ. ಇದೇ ಮೊದಲ ಬಾರಿ ಜಸ್ಪ್ರೀತ್ ಬುಮ್ರಾ, ದೀಪಕ್ ಚಹರ್ ಹಾಗೂ ಟ್ರೆಂಟ್ ಬೌಲ್ಟ್ ಮುಂಬೈ ತಂಡದ ಬೌಲಿಂಗ್ ವಿಭಾಗವನ್ನು ಮುನ್ನಡೆಸಲಿದ್ದಾರೆ. ಅಲ್ದೇ ಈ ಮೂವರು ಕಿಂಗ್ ವಿರಾಟ್ ಕೊಹ್ಲಿಗೂ ಸವಾಲಾಗಬಲ್ಲರು. ಕೊಹ್ಲಿ ಈ ಮೂವರ ವಿರುದ್ಧ ಈವರೆಗೆ 210 ಎಸೆತಗಳನ್ನು ಎದುರಿಸಿದ್ದಾರೆ. ಈ ವೇಳೆ ಕಲೆಹಾಕಿರುವುದು ಕೇವಲ 281 ರನ್ಗಳು ಮಾತ್ರ. ಇನ್ನು 7 ಬಾರಿ ವಿಕೆಟ್ ಒಪ್ಪಿಸಿದ್ದಾರೆ. ಜಸ್ಪ್ರೀತ್ ಬುಮ್ರಾ ಮತ್ತು ವಿರಾಟ್ ಕೊಹ್ಲಿ 16 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು ಬುಮ್ರಾ 5 ಬಾರಿ ವಿರಾಟ್ ಕೊಹ್ಲಿಯ ವಿಕೆಟ್ ಪಡೆದಿದ್ದಾರೆ. ಇನ್ನು ದೀಪಕ್ ಚಹರ್ ಐಪಿಎಲ್ನಲ್ಲಿ ಈವರೆಗೆ 85 ಪಂದ್ಯಗಳನ್ನಾಡಿದ್ದು ಈ ವೇಳೆ 81 ವಿಕೆಟ್ಗಳನ್ನು ಕಬಳಿಸಿದ್ದಾರೆ. ಇದರಲ್ಲಿ 63 ವಿಕೆಟ್ಗಳನ್ನು ಪವರ್ಪ್ಲೇನಲ್ಲೇ ಬೇಟೆಯಾಡಿದ್ದಾರೆ. ಮತ್ತೊಂದೆಡೆ ಐಪಿಎಲ್ ಇತಿಹಾಸದಲ್ಲೇ ಪವರ್ಪ್ಲೇನಲ್ಲಿ ಅತ್ಯಧಿಕ ವಿಕೆಟ್ ಕಬಳಿಸಿದ ವಿದೇಶಿ ಬೌಲರ್ ಟ್ರೆಂಟ್ ಬೌಲ್ಟ್. ಪವರ್ ಪ್ಲೇನಲ್ಲಿ 64 ವಿಕೆಟ್ಗಳನ್ನು ಉರುಳಿಸಿದ್ದಾರೆ. ಬುಮ್ರಾ ಪವರ್ಪ್ಲೇನಲ್ಲಿ ಬರೋಬ್ಬರಿ 76 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಪವರ್ಪ್ಲೇನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ಈ ಮೂವರು ಕೂಡ ಆರ್‌ಸಿಬಿ ಬ್ಯಾಟರ್ಸ್ಗೆ ಸಿಂಹಸ್ವಪ್ನವಾಗಿ ಕಾಡಬಲ್ಲರು.
ಪಾಂಡ್ಯ ಸಹೋದರರ ಕದನಕ್ಕೆ ಸಾಕ್ಷಿಯಾಗಲಿದೆ ವಾಂಖೆಡೆ!
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಇಂದಿನ ಪಂದ್ಯ ಸಹೋದರರ ನಡುವಣ ಕದನವಾಗಿ ಮಾರ್ಪಟ್ಟಿದೆ. ಆರ್‌ಸಿಬಿ ತಂಡದಲ್ಲಿ ಕೃನಾಲ್ ಪಾಂಡ್ಯ ಇದ್ದರೆ, ಮುಂಬೈ ಇಂಡಿಯನ್ಸ್ ಬಳಗದಲ್ಲಿ ಹಾರ್ದಿಕ್ ಪಾಂಡ್ಯ ಇದ್ದಾರೆ. ಇವ್ರಿಬ್ಬರು ಸಹೋದರರಾಗಿದ್ದು ಎದುರಾಳಿಗಳಾಗಿ ಕಣಕ್ಕಿಳಿಯಲಿದ್ದಾರೆ. ಇಬ್ಬರೂ ಆಟಗಾರರು ಈ ಹಿಂದೆ ಮುಂಬೈ ಇಂಡಿಯನ್ಸ್ ಪರ ಜೊತೆಯಾಗಿ ಆಡಿದ್ದರು. ಆ ಬಳಿಕ ಹಾರ್ದಿಕ್ ಪಾಂಡ್ಯ ಗುಜರಾತ್ ಟೈಟಾನ್ಸ್ ಪರ ಕಣಕ್ಕಿಳಿದರೆ, ಕೃನಾಲ್ ಪಾಂಡ್ಯ ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಹಾರ್ದಿಕ್ ಮುಂಬೈ ಇಂಡಿಯನ್ಸ್ ತಂಡಕ್ಕೆ ಮರಳಿದ್ದಾರೆ. ಇತ್ತ ಕಳೆದ ಬಾರಿ ಲಕ್ನೋ ಪರ ಆಡಿದ್ದ ಕೃನಾಲ್ ಪಾಂಡ್ಯ ಆರ್‌ಸಿಬಿ ಜೊತೆ ಹೊಸ ಅಧ್ಯಾಯ ಆರಂಭಿಸಿದ್ದಾರೆ. ಇದೀಗ ಮತ್ತೊಮ್ಮೆ ಎದುರು ಬದುರಾಗೋಕೆ ರೆಡಿಯಾಗಿದ್ದಾರೆ.
ಇನ್ನು ವಾಂಖೆಡೆ ಸ್ಟೇಡಿಯಮ್ ಆರ್ ಸಿಬಿ ಪಾಲಿಗೆ ಕಬ್ಬಿಣದ ಕಡಲೆಯೇ ಆಗಿದೆ. ಮುಂಬೈ ವಿರುದ್ಧ ಕಳೆದ 10 ವರ್ಷಗಳಲ್ಲಿ ವಾಂಖೆಡೆಯಲ್ಲಿ ಒಂದೂ ಪಂದ್ಯ ಗೆದ್ದಿಲ್ಲ. ಇಲ್ಲಿ 2015ರಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿ 39 ರನ್ ಜಯಗಳಿಸಿತ್ತು. ಆ ಬಳಿಕ ತಂಡಕ್ಕೆ ಗೆಲುವು ಸಿಕ್ಕಿಲ್ಲ. ಒಟ್ಟಾರೆಯಾಗಿ, ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ವಿರುವ ಆರ್‌ಸಿಬಿ 11 ಪಂದ್ಯಗಳನ್ನಾಡಿದೆ. ಇದ್ರಲ್ಲಿ 3 ಬಾರಿ ಮಾತ್ರ ಗೆದ್ದಿದ್ದು ಉಳಿದ ಪಂದ್ಯಗಳಲ್ಲಿ ಸೋಲನುಭವಿಸಿದೆ. ಇಂದಿನ ಪಂದ್ಯದಲ್ಲಿ ಗೆದ್ದು 10 ವರ್ಷಗಳ ಬಳಿಕ ಇತಿಹಾಸ ಸೃಷ್ಟಿಸಬೇಕಿದೆ.