ಒಂದೇ ವರ್ಷದಲ್ಲಿ 1 ಲಕ್ಷ ಜನರನ್ನು ಕೊಂದ ‘ಚೈನೀಸ್ ಗರ್ಲ್’ – ಅಮೆರಿಕಕ್ಕೆ ಚೀನಾದ ಫೆಂಟನಿಲ್ ಪಾಯ್ಸನ್!

ಒಂದೇ ವರ್ಷದಲ್ಲಿ 1 ಲಕ್ಷ ಜನರನ್ನು ಕೊಂದ ‘ಚೈನೀಸ್ ಗರ್ಲ್’ – ಅಮೆರಿಕಕ್ಕೆ ಚೀನಾದ ಫೆಂಟನಿಲ್ ಪಾಯ್ಸನ್!

ವಿಶ್ವದ ದೊಡ್ಡಣ್ಣ ಅಂತಾನೇ ಕರೆಸಿಕೊಳ್ಳುವ ಅಮೆರಿಕ ಜಗತ್ತಿನ ಅಗ್ರಗಣ್ಯ ರಾಷ್ಟ್ರ. ಆರ್ಥಿಕವಾಗಿ, ಸಾಮಾಜಿಕವಾಗಿ ಬಲಿಷ್ಠವಾಗಿರುವ ಅಮೆರಿಕ ತನ್ನ ಸೇನೆ ವಿಚಾರದಲ್ಲೂ ಶಕ್ತಿಶಾಲಿಯಾಗಿದೆ. ಇದೇ ಕಾರಣಕ್ಕೆ ಅಮೆರಿಕ ಎಂದೊಡನೆ ವಿಶ್ವದ ಇತರೆ ರಾಷ್ಟ್ರಗಳ ಕಿವಿ ನೆಟ್ಟಗಾಗುತ್ತದೆ. ಆದ್ರೆ ಇಂಥಾ ಪ್ರಬಲ ರಾಷ್ಟ್ರವನ್ನೇ ಚೈನೀಸ್ ಗರ್ಲ್ ಅಲುಗಾಡಿಸಿ ಬಿಟ್ಟಿದ್ದಾಳೆ. ಕನಸು ಮನಸಿನಲ್ಲೂ ಭಯ ಬೀಳುವಂಥ ಏಟು ಕೊಟ್ಟಿದ್ದಾಳೆ. ಈ ಹೆಮ್ಮಾರಿ ದೇಶದೊಳಗೆ ನುಸುಳದಂತೆ ಕಡಿವಾಣ ಹಾಕಲು ಅಮೆರಿಕ ಅಧ್ಯಕ್ಷ ಜೋ ಬೈಡನ್ ಚೀನಾಧಿಪತಿ ಕ್ಸಿ ಜಿನ್ ಪಿಂಗ್ ಜೊತೆ ಗಂಟೆಗಟ್ಟಲೆ ಮಾತುಕತೆ ನಡೆಸಿದ್ದಾರೆ. ಚೈನೀಸ್ ಗರ್ಲ್ ಅಮೆರಿಕದ ಗಡಿ ದಾಟದಂತೆ ನೋಡಿಕೊಳ್ಳಿ ಎಂದು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

ನವೆಂಬರ್ ತಿಂಗಳ ಮಧ್ಯಭಾಗದಲ್ಲಿ ಅಮೆರಿಕದಲ್ಲಿ ಏಷ್ಯಾ- ಪೆಸಿಫಿಕ್ ಆರ್ಥಿಕ ಸಹಕಾರ ಸಭೆ ನಡೆದಿತ್ತು. ಸಭೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಚೀನಾಧಿಪತಿ ಕ್ಸಿ ಜಿನ್ ಪಿಂಗ್ ಬರೋಬ್ಬರಿ 4 ಗಂಟೆಗಳ ಕಾಲ ಮಾತುಕತೆ ನಡೆಸಿದ್ದರು. ಬಲಿಷ್ಠ ದೇಶಗಳ ನಾಯಕರ ಈ ಸುದೀರ್ಘ ಮಾತುಕತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಕುತೂಹಲ ಮೂಡಿಸಿತ್ತು. ಆದ್ರೆ ಅದು ಕಾಟಾಚಾರಕ್ಕಾಗಿ ಮಾತ್ರವೇ ನಡೆದಿದ್ದ ಸಭೆ ಅನ್ನೋದು ಆಮೇಲೆ ಗೊತ್ತಾಗಿತ್ತು. ಯಾಕಂದ್ರೆ ಸಭೆ ಮುಗಿದ ಬಳಿಕ ಅಮೆರಿಕ ಶಾಂತಿ ಕದಡುವ ಕೆಲಸ ಮಾಡುತ್ತಿದೆ ಎಂದು ಚೀನಾ ಆರೋಪ ಮಾಡಿತ್ತು. ಮತ್ತೊಂದೆಡೆ ಚೀನಾ ಅಧಿಪತಿ ಕ್ಸಿ ಜಿನ್ ಪಿಂಗ್ ರನ್ನ ಜೋ ಬೈಡನ್ ಸರ್ವಾಧಿಕಾರಿ ಎಂದು ಕರೆದಿದ್ದರು. ಈ ಮೂಲಕ ಎರಡೂ ರಾಷ್ಟ್ರಗಳ ನಡುವಿನ ಮುನಿಸು ಮತ್ತೊಮ್ಮೆ ಜಗಜ್ಜಾಹೀರಾಗಿತ್ತು. ಆದ್ರೆ ಇಲ್ಲಿ ಒಂದು ವಿಚಾರವಾಗಿ ಎರಡೂ ರಾಷ್ಟ್ರಹಳ ನಡುವೆ ಗಂಭೀರ ಚರ್ಚೆ ನಡೆದಿತ್ತು. ಅದುವೇ ಫೆಂಟನಿಲ್ ಬಗ್ಗೆ. ಚೈನೀಸ್ ಗರ್ಲ್ ಅಂತಾನೇ ಕರೆಯುವ ಈ ಫೆಂಟನಿಲ್ ಒಂದು ಭಯಾನಕ ಡ್ರಗ್ಸ್. ಚೀನಾ ಗರ್ಲ್ ಎನ್ನುವುದು ಫೆಂಟನಿಲ್‌ಗೆ ಬಹುತೇಕರು ಹೇಳುವ ಒಂದು ಕೋಡ್‌ವರ್ಡ್‌. ಅತ್ಯಂತ ಅಪಾಯಕಾರಿ ಮಾದಕ ವಸ್ತು. ಈ ಫೆಂಟನಿಲ್ ಡ್ರಗ್ಸ್ ಸ್ಟ್ರೀಟ್‌ ಡ್ರಗ್‌ ಆಗಿ ಮಾರ್ಪಟ್ಟಿದ್ದು, ಬೀದಿ ಬೀದಿಗಳಲ್ಲೂ ಜನರಿಗೆ ಸುಲಭವಾಗಿ ಸಿಗ್ತಿದೆ.  ಒಂದೇ ವರ್ಷದಲ್ಲಿ ಅಮೆರಿಕದಲ್ಲಿ 1 ಲಕ್ಷಕ್ಕೂ ಅಧಿಕ ಜನ ಫೆಂಟನಿಲ್ ಸೇವನೆಯಿಂದ ಜೀವ ಬಿಟ್ಟಿದ್ದಾರೆ. ಲಕ್ಷಾಂತರ ಯುವಕರು ಈ ಮಾದಕ ವಸ್ತುವಿಗೆ ದಾಸರಾಗಿದ್ದಾರೆ. ಇದೇ ಕಾರಣಕ್ಕೆ ಬೈಡನ್ ಚೈನೀಸ್ ಗರ್ಲ್ ಅನ್ನು ಅಮೆರಿಕ ಗಡಿ ಪ್ರವೇಶಿಸದಂತೆ ನೋಡಿಕೊಳ್ಳಿ ಎಂದು ವಾರ್ನ್ ಮಾಡಿದ್ದರು.

ಇದನ್ನೂ ಓದಿ : BRICS ಸೇರಲು ಹೊರಟ ಪಾಕ್ ಬಗ್ಗೆ ರಷ್ಯಾ ಕಾರ್ಟೂನ್ – ಶತ್ರು ಎಂಟ್ರಿಗೆ ಒಪ್ತಾರಾ ಮೋದಿ?

ಫೆಂಟನಿಲ್ ಅನ್ನೋದು ನೋವು ನಿವಾರಕ ಪೇನ್‌ ಕಿಲ್ಲರ್‌ ಔಷಧಗಳಲ್ಲಿ ಬಳಕೆಯಾಗುವ ಸಂಯೋಜಿತ ರಾಸಾಯನಿಕ. ನೋವು ನಿವಾರಕವಾಗಿ ಪರಿಣಾಮ ಬೀರುವಂತಹ ಅತಿಪ್ರಬಲ ಔಷಧ. ಕಿಮೊಥೆರಪಿ ಅಥವಾ ಯಾವುದೇ ಪ್ರಮುಖ ಚಿಕಿತ್ಸೆ ಬಳಿಕ ಕ್ಯಾನ್ಸರ್‌ ರೋಗಿಗಳಿಗೆ ಇದನ್ನು ಹೆಚ್ಚಾಗಿ ನೀಡುತ್ತಾರೆ. ಇದರ ನೋವು ನಿವಾರಕ ಪರಿಣಾಮ 30 ರಿಂದ 60 ನಿಮಿಷಗಳವರೆಗೆ ಇರುವ ಶಕ್ತಿ ಇದೆ. ಮಧ್ಯಮದಿಂದ ತೀವ್ರ ರೀತಿಯ ನೋವುಗಳನ್ನು ನಿವಾರಿಸುವಂಥ ಮಾರ್ಫಿನ್‌ ರಾಸಾಯನಿಕಗಿಂತ ಫೆಂಟನಿಲ್‌ 100 ಪಟ್ಟು ಪರಿಣಾಮಕಾರಿ. ಅಂದರೆ, ನೋವು ನಿವಾರಣೆಗೆ 10 ಮಿಲಿ ಗ್ರಾಂ ಮಾರ್ಫಿನ್‌ ಅಗತ್ಯವಿದ್ದರೆ, ಅದೇ ಪರಿಣಾಮವನ್ನು ಫೆಂಟನಿಲ್‌ ಕೇವಲ 0.1 ಮಿಲಿ ಗ್ರಾಂನಲ್ಲಿ ನೀಡುತ್ತದೆ. ಹೀಗಿದ್ದಾಗ ಇದರ ಮಾರಕತೆ ಎಂತಹದ್ದು ಅನ್ನೋದನ್ನ ನೀವೇ ಊಹಿಸಿಕೊಳ್ಳಿ. ಹೆರಾಯಿನ್‌ ಗಿಂತ ಸುಮಾರು 50 ಪಟ್ಟು ಹೆಚ್ಚು ಮಾರಕವಾಗಿರುವ ಫೆಂಟನಿಲ್‌ ಅಮೆರಿಕಕ್ಕೆ ಹೆಚ್ಚು ಸಪ್ಲೈ ಆಗ್ತಿದೆ. ಅಮೆರಿಕದ ಇತಿಹಾಸದಲ್ಲೇ ಕಾನೂನುಬಾಹಿರ ಮಾದಕವಸ್ತು ಇಷ್ಟೊಂದು ಪ್ರಮಾಣದಲ್ಲಿ ಸಪ್ಲೈ ಆಗ್ತಿರೋದು ಇದೇ ಮೊದಲು. ಈ ಫೆಂಟನಿಲ್ ಎಷ್ಟು ಡೇಂಜರಸ್ ಆಗಿದೆ ಅಂದ್ರೆ ಪ್ರತಿ ಐದು ನಿಮಿಷಗಳಿಗೊಮ್ಮೆ ಅಮೇರಿಕದ ಒಬ್ಬ ಪ್ರಜೆಯನ್ನ ಬಲಿ ಪಡೆದುಕೊಳ್ಳುತ್ತಿದೆ. ಕಳ್ಳದಾರಿಯಲ್ಲಿ ಅಮೆರಿಕ ಪ್ರವೇಶಿಸುತ್ತಿರುವ ಈ ಮಾದಕ ಭದ್ರವಾಗಿ ಬೇರೂರಿದೆ. ಲಕ್ಷಾಂತರ ಜನ ಮಾದಕ ವ್ಯಸನಿಗಳಾಗಿದ್ದಾರೆ.

ಅಮೆರಿಕದ ಸೆಂಟರ್‌ ಫಾರ್‌ ಡಿಸೀಸ್‌ ಕಂಟ್ರೋಲ್‌ ಆ್ಯಂಡ್‌ ಪ್ರಿವೆನ್ಷನ್‌ ಅಂದ್ರೆ ಸಿಡಿಸಿ ಪ್ರಕಾರ, ಪೆನ್ಸಿಲ್‌ ನ ತುದಿ ಬಿಂದುವಿನಷ್ಟು ಫೆಂಟನಿಲ್‌ ಸೇವಿಸಿದರೂ ಕ್ಷಣಮಾತ್ರದಲ್ಲಿ ನಶೆ ಹೆಚ್ಚಾಗಿ ಮೈ ಮರೆತು ಬಿಡ್ತಾರೆ. ಇದಕ್ಕೆ ಅಡಿಕ್ಟ್ ಆಗಿ ಅಳತೆ ಮೀರಿ ಸೇವಿಸಿದರೆ ಕ್ಷಣಾರ್ಧದಲ್ಲೇ ಸಾವು ಸಂಭವಿಸುವ ಸಾಧ್ಯತೆ ಇರುತ್ತೆ.  ಕೆಲವೇ ನಿಮಿಷಗಳಲ್ಲಿ ಜೀವ ಹೋಗುವ ಅಪಾಯವೂ ಹೆಚ್ಚಾಗಿರುತ್ತೆ. ಪ್ರಯೋಗಾಲಯದಲ್ಲಿ ಅತ್ಯಂತ ಅಗ್ಗವಾಗಿ ತಯಾರಿಸಬಹುದಾದಂಥ ಈ ಫೆಂಟನಿಲ್‌ಗೆ ಯಾವುದೇ ರುಚಿ ಅಥವಾ ವಾಸನೆ ಇರುವುದಿಲ್ಲ. ಇಷ್ಟೊಂದು ಅಪಾಯಕಾರಿಯಾದ್ರೂ ಅಮೆರಿಕದ ಬೀದಿ ಬೀದಿಗಳಲ್ಲಿಯೂ ಸುಲಭವಾಗಿ ಜನರ ಕೈ ಸೇರ್ತಿದೆ. ಇದೇ ಕಾರಣಕ್ಕೆ ಅಮೆರಿಕದ ಲಕ್ಷಾಂತರ ಯುವಜನರು ಇದಕ್ಕೆ ಅಡಿಕ್ಟ್ ಆಗಿದ್ದಾರೆ. ಅಲ್ಲದೆ ಹೆಚ್ಚಿನ ಮಾದಕತೆ ಉಂಟುಮಾಡಲು ಫೆಂಟನಿಲ್‌ ಅನ್ನು ಹಲವು ಔಷಧಗಳಲ್ಲಿ ಬೆರೆಸಿ ತೆಗೆದುಕೊಳ್ಳುವ ಪ್ರವೃತ್ತಿಯೂ ಅಮೆರಿಕಕ್ಕೆ ತಲೆನೋವಾಗಿದೆ. ಇಂಥ ಔಷಧ ಸೇವಿಸಿದ ಬಳಿಕ ಮಿದುಳಿನ ಮೇಲೆ ನೇರ ಪರಿಣಾಮವಾಗುವುದಲ್ಲದೆ, ವ್ಯಕ್ತಿ ತಕ್ಷಣವೇ ಮೂರ್ಛೆಗೆ ಜಾರುತ್ತಾನೆ. ಕೆಲವು ಸಂದರ್ಭಗಳಲ್ಲಿ ವಾಂತಿ ಸಂಭವಿಸುತ್ತದೆ. 2021-22ರ ಅವಧಿಯಲ್ಲಿ ಬರೋಬ್ಬರಿ 1 ಲಕ್ಷದ 10 ಸಾವಿರದ 236 ಮಂದಿ ಫೆಂಟನಿಲ್‌ ಸೇವಿಸಿ ಸಾವನ್ನಪ್ಪಿದ್ದಾರೆ.

ಹೌದು. ಒಂದಲ್ಲ ಎರಡಲ್ಲ ಬರೋಬ್ಬರಿ 1 ಲಕ್ಷಕ್ಕೂ ಹೆಚ್ಚು ಅಮೆರಿಕನ್ನರು ಈ ಫೆಂಟನಿಲ್ ಸೇವಿಸಿ ಪ್ರಾಣ ಬಿಟ್ಟಿದ್ದಾರೆ. ಇನ್ನೂ ಲಕ್ಷಾಂತರ ಜನ ಈ ಡ್ರಗ್ಸ್ ಗೆ ದಾಸರಾಗಿದ್ದಾರೆ.  2019ರ ಮೊದಲು ಅಮೆರಿಕಕ್ಕೆ ಫೆಂಟನಿಲ್‌ ಔಷಧ ನೇರವಾಗಿ ಚೀನಾದಿಂದಲೇ ಬರುತ್ತಿತ್ತು. ಬೀಜಿಂಗ್‌ನಿಂದ ಕೊರಿಯರ್‌ ಮೂಲಕ ಅಮೆರಿಕವನ್ನು ತಲುಪುತ್ತಿತ್ತು. ಆಗಿನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಜತೆಗಿನ ವ್ಯಾಪಾರ ಮಾತುಕತೆಗಳ ನಂತರ, ಚೀನಾ ಸರ್ಕಾರವು ಫೆಂಟನಿಲ್ ಸಂಬಂಧಿತ ಔಷಧಿಗಳ ಉತ್ಪಾದನೆ, ಮಾರಾಟ ಮತ್ತು ರಫ್ತುಗಳನ್ನು ನಿಷೇಧಿಸಲು ಒಪ್ಪಿಕೊಂಡಿತ್ತು. ಆದಾಗ್ಯೂ, ಪರವಾನಗಿ ಅಡಿಯಲ್ಲಿ ಉತ್ಪಾದನೆ, ಮಾರಾಟ ಮತ್ತು ರಫ್ತಿಗೆ ಯಾವುದೇ ನಿರ್ಬಂಧವಿರಲಿಲ್ಲ. ಪ್ರಸ್ತುತ ಫೆಂಟನಿಲ್‌ ಅಕ್ರಮ ಹಾದಿ ಹಿಡಿದು ದೇಶದೊಳಗೆ ಬರುತ್ತಿದೆ ಎನ್ನುವುದು ಜೋ ಬೈಡನ್‌ ಅವರ ಆರೋಪ. ಇದೇ ಕಾರಣಕ್ಕೆ ಚೀನಾ ಅಧ್ಯಕ್ಷರ ಅಮೆರಿಕ ಪ್ರವಾಸದ ವೇಳೆ ಗಂಭೀರವಾಗಿ ಚರ್ಚಿಸಿದ್ದಾರೆ.

ಆರಂಭದ ದಿನಗಳಲ್ಲಿ ಅಮೆರಿಕದ ಆಹಾರ ಮತ್ತು ಔಷಧ ಆಡಳಿತ ಮಂಡಳಿಯಿಂದಲೇ 1998ರಲ್ಲಿ ಮೊಟ್ಟ ಮೊದಲ ಬಾರಿಗೆ ಔಷಧಗಳಲ್ಲಿ ಫೆಂಟನಿಲ್‌ ಬಳಕೆಗೆ ಅನುಮೋದನೆ ನೀಡಿತು. ಶಸ್ತ್ರಚಿಕಿತ್ಸೆಗಳ ಬಳಿಕ ನೋವು ನಿವಾರಕವಾಗಿ ಮಾತ್ರವೇ ಇದನ್ನ ಬಳಸಬೇಕು ಎಂದೂ ಸೂಚನೆ ನೀಡಿತ್ತು. ಅಷ್ಟೊತ್ತಿಗಾಗಲೇ ಮೆಕ್ಸಿಕೊ, ಲ್ಯಾಟಿನ್‌ ಅಮೆರಿಕ ಭಾಗದಿಂದ ಅಕ್ರಮ ಮಾದಕದ್ರವ್ಯ ಸಾಗಾಟ ಅಮೆರಿಕದ ನೆಮ್ಮದಿ ಕೆಡಿಸಿತ್ತು. ಸಾಕಷ್ಟು ಯುವಕರು  ಫೆಂಟನಿಲ್‌ನಲ್ಲೂ ಡ್ರಗ್‌ ರುಚಿಯನ್ನು ಕಂಡು ಅದಕ್ಕೂ ವ್ಯಸನಿಗಳಾಗುತ್ತಿದ್ರು. ಇಲ್ಲಿನ ಸಾಕಷ್ಟು ಶಾಪ್‌ಗಳಲ್ಲಿ ದ್ರವ ಮತ್ತು ಪುಡಿ ರೂಪದಲ್ಲಿ ಫೆಂಟನಿಲ್‌ ಈಗಲೂ ಸುಲಭವಾಗಿ ಸಿಗುತ್ತಿದೆ. ಹೆಚ್ಚಿನ ಯುವಕರು ಅದನ್ನು ಪುಡಿ ರೂಪದಲ್ಲಿ ಖರೀದಿಸಿ ಇತರ ಔಷಧಿಗಳೊಂದಿಗೆ ಬೆರೆಸಿ ಸೇವಿಸುವುದು ಸಾಮಾನ್ಯವೇ ಆಗಿ ಹೋಗಿದೆ. ಚೀನಾದಿಂದ ಸಪ್ಲೈ ಆಗ್ತಿರುವ ಈ ಮೋಸ್ಟ್ ಡೇಂಜರಸ್ ಫೆಂಟನಿಲ್ ಡ್ರಗ್ಸ್ ಚೀನಾದ ಪಿತೂರಿ ಅಂತಾನೇ ಅಮೆರಿಕ ಆರೋಪಿಸುತ್ತಿದೆ. ತಮ್ಮ ರಾಷ್ಟ್ರದ ಯುವ ಪೀಳಿಗೆಯನ್ನ ಮಾದಕ ವ್ಯಸನಿಗಳನ್ನಾಗಿಸುವ ಕುತಂತ್ರದಿಂದಲೇ ಫೆಂಟನಿಲ್‌ ಅನ್ನು ಬೀಜಿಂಗ್‌ ಅಕ್ರಮವಾಗಿ ಸಾಗಿಸುತ್ತಿದೆ ಅಂತಾ ಅಮೆರಿಕದ ಡಿಇಎ ಹೇಳ್ತಿದೆ. ಯಾಕಂದ್ರೆ 2022ರಲ್ಲಿ ಅಮೆರಿಕದಲ್ಲಿ ಫೆಂಟನಿಲ್‌ ಪೂರೈಕೆದಾರರ ಪ್ರಕರಣದಲ್ಲಿ 38 ಜನರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಈ ಎಲ್ಲಾ ಪ್ರಕರಣಗಳ ಹಿಂದೆಯೂ ಚೀನಾದ ಕೈವಾಡ ಸಾಬೀತಾಗಿದೆ ಎಂದು ಅಮೆರಿಕ ದೃಢಪಡಿಸಿದೆ.

ಫೆಂಟನಿಲ್‌ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸುತ್ತಿರುವುದೇ ಚೀನಾದ ಲ್ಯಾಬ್‌ಗಳು. ಫೆಂಟನಿಲ್‌ ರಫ್ತಿಗೆ ನಿಷೇಧ ಬಿದ್ದ ಮೇಲೆ ಚೀನಾದ ಕಳ್ಳ ವ್ಯಾಪಾರಿಗಳು ಮೆಕ್ಸಿಕೋ ಗಡಿಯಿಂದ ದೊಡ್ಡಣ್ಣನ ನೆಲಕ್ಕೆ ಅಕ್ರಮವಾಗಿ ದಾಟಿಸುತ್ತಿದ್ದಾರೆ. ಅಮೆರಿಕದ ಡಿಇಎ ಅಂದ್ರೆ ಡ್ರಗ್‌ ಎನ್ಫೋರ್ಸ್‌ಮೆಂಟ್‌ ಅಸೋಸಿಯೇಷನ್‌  ಪ್ರಕಾರ, ಫೆಂಟನಿಲ್‌ ಚೀನಾದಿಂದ ಮೆಕ್ಸಿಕೊ, ಕೆನಡಾ ಮತ್ತು ಭಾರತಕ್ಕೆ ಬರುತ್ತದೆ. ಅಲ್ಲಿಂದ ಅಮೆರಿಕಕ್ಕೆ ಸಪ್ಲೈ ಆಗ್ತಿದೆ ಎನ್ನಲಾಗಿದೆ. ಆರ್ಥಿಕವಾಗಿ, ಆಧುನಿಕವಾಗಿ ಅಮೆರಿಕ ಎಷ್ಟೇ ಮುಂದುವರಿದ್ರೂ ಕೂಡ ತನ್ನ ರಾಷ್ಟ್ರದ ಪ್ರಜೆಗಳು ಮಾದಕ ವಸ್ತುಗಳಿಗೆ ದಾಸರಾಗುತ್ತಿರೋದು ಇನ್ನಿಲ್ಲದ ತಲೆನೋವು ತಂದಿದೆ. ಇದೇ ಕಾರಣಕ್ಕೆ ಇತ್ತೀಚೆಗಷ್ಟೇ ಅಮೆರಿಕವು ಮಾದಕ ದ್ರವ್ಯ ಕಳ್ಳಸಾಗಣೆ ಮತ್ತು ಅವುಗಳ ಉತ್ಪಾದನೆಯಲ್ಲಿ ತೊಡಗಿರುವ ದೇಶಗಳ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಒಟ್ಟು 23 ದೇಶಗಳ ಹೆಸರು ಆ ಪಟ್ಟಿಯಲ್ಲಿದ್ದು ಅದ್ರಲ್ಲಿ ಭಾರತದ ಹೆಸರೂ ಇದೆ. ಚೀನಾ, ಅಫ್ಘಾನಿಸ್ತಾನ, ಮಯನ್ಮಾರ್‌, ಪಾಕಿಸ್ತಾನ, ಪನಾಮ, ಪೆರು, ಮೆಕ್ಸಿಕೊ, ಜಮೈಕಾ, ಹೊಂಡುರಾಸ್‌, ನಿಕರಾಗುವಾ, ಈಕ್ವೆಡಾರ್‌, ಬಹಮಾಸ್‌, ಹೈಟಿಯಿಂದ ಮತ್ತೇರಿಸುವ ವಸ್ತುಗಳು ಸಪ್ಲೈ ಆಗ್ತಿದೆ. ಭೌಗೋಳಿಕ, ವಾಣಿಜ್ಯ ಮತ್ತು ಆರ್ಥಿಕ ಕಾರಣಗಳಿಂದಾಗಿ ಈ ದೇಶಗಳಲ್ಲಿ ಡ್ರಗ್ಸ್‌ ಉತ್ಪಾದನೆ, ವ್ಯಾಪಾರ ನಡೆಯುತ್ತಿದೆ ಎಂದು ತಿಳಿಸಿದೆ. ಅದ್ರಲ್ಲೂ ಈ ಡ್ರಗ್ಸ್ ಸಪ್ಲೈನಲ್ಲಿ ಚೀನಾವೇ ಮುಂಚೂಣಿಯಲ್ಲಿದ್ದು, ಕೇವಲ 1 ಕೆಜಿ ಫೆಂಟನಿಲ್‌ ಮಾರಾಟದಿಂದ ಸುಮಾರು 16 ಲಕ್ಷ ಡಾಲರ್‌ ಆದಾಯವನ್ನು ಗಳಿಸುತ್ತಿದೆ ಎಂದು ಅಮೆರಿಕ ಆರೋಪಿಸುತ್ತಿದೆ. ಕಳ್ಳಮಾರ್ಗ, ವ್ಯಾಪಾರ, ಆದಾಯ ಏನೇ ಇದ್ರೂ ಚೈನೀಸ್ ಗರ್ಲ್ ಅಮೆರಿಕದ ನೆಮ್ಮದಿ ಕೆಡಿಸಿರೋದಂತೂ ಸುಳ್ಳಲ್ಲ.

Shantha Kumari