‘ನಂದಿನಿ’ ಉಳಿಸಲು ಕಾಂಗ್ರೆಸ್ಸಿಗರ ಅಭಿಯಾನ – ‘ಅಮುಲ್’ ವಿರುದ್ಧ ಕನ್ನಡಪರ ಸಂಘಟನೆಗಳ ಆಕ್ರೋಶ!

‘ನಂದಿನಿ’ ಉಳಿಸಲು ಕಾಂಗ್ರೆಸ್ಸಿಗರ ಅಭಿಯಾನ – ‘ಅಮುಲ್’ ವಿರುದ್ಧ ಕನ್ನಡಪರ ಸಂಘಟನೆಗಳ ಆಕ್ರೋಶ!

ಕರ್ನಾಟಕದ ಲಕ್ಷಾಂತರ ರೈತರಿಗೆ ಬದುಕು ಕಟ್ಟಿಕೊಟ್ಟಿರುವ ನಂದಿನಿ (Nandini) ಹಾಲಿಗೆ ಹುಳಿ ಹಿಂಡಲು ಹೊರಟಿರುವ ಗುಜರಾತ್ ಮೂಲದ ಅಮುಲ್ (Amul) ಹಾಲಿನ ವಿರುದ್ಧ ಭಾರೀ ವಿರೋಧ ವ್ಯಕ್ತವಾಗಿದೆ. ನಂದಿನಿ ಹಾಲಿನ ಅಸ್ತಿತ್ವ ಕಾಪಾಡಲು ರಾಜ್ಯಾದ್ಯಂತ ಬೆಂಬಲ ನೀಡಲಾಗುತ್ತಿದೆ. ಇದೀಗ ಬೃಹತ್ ಬೆಂಗಳೂರು ಹೋಟೆಲ್ ಅಸೋಸಿಯೇಷನ್ ರಾಜ್ಯದ ಡೈರಿ ರೈತರನ್ನು ಬೆಂಬಲಿಸುವ ಸಲುವಾಗಿ ನಂದಿನಿ ಹಾಲನ್ನು ಮಾತ್ರ ಬಳಸಲು ನಿರ್ಧರಿಸಿದೆ.

ಬೆಂಗಳೂರು ಡೈರಿ ಮಾರುಕಟ್ಟೆಗೆ ಅಮುಲ್ ನುಗ್ಗುವ ಆತಂಕದ ನಡುವೆಯೇ ಈ ಬೆಳವಣಿಗೆ ನಡೆದಿದೆ. ಬೃಹತ್ ಬೆಂಗಳೂರು ಹೋಟೆಲ್ ಅಸೋಸಿಯೇಷನ್(Bruhat Bengaluru Hotels Association) ಅಮುಲ್ ಹೆಸರನ್ನು ಹೆಸರಿಸದೆ, ಕನ್ನಡಿಗರು ನಂದಿನಿ ಹಾಲಿನ ಉತ್ಪನ್ನಗಳನ್ನು ಮಾತ್ರ ಪ್ರಚಾರ ಮಾಡಬೇಕು. ನಮ್ಮ ರೈತರು ಉತ್ಪಾದಿಸುವ ಕರ್ನಾಟಕದ ನಂದಿನಿ ಹಾಲಿನ ಬಗ್ಗೆ ನಮಗೆಲ್ಲರಿಗೂ ಹೆಮ್ಮೆ ಇದೆ ಮತ್ತು ಅದನ್ನು ಪ್ರೋತ್ಸಾಹಿಸಬೇಕು. ನಮ್ಮ ನಗರದಲ್ಲಿ ಶುಚಿಯಾದ ಮತ್ತು ರುಚಿಕರವಾದ ಕಾಫಿ ತಿಂಡಿಗಳ ಬೆನ್ನೆಲುಬಾಗಿ ನಿಂತಿದೆ. ನಾವು ಅದನ್ನ ಬಹಳ ಹೆಮ್ಮೆಯಿಂದ ಪ್ರೋತ್ಸಾಹಿಸುತ್ತೇವೆ ಎಂದಿದ್ದಾರೆ.

ಇದನ್ನೂ ಓದಿ : ಫಸ್ಟ್ ತಿನ್ನಿ ಆಮೇಲೆ ಬಿಲ್ ಪೇ ಮಾಡಿ! – ಮಾವು ಖರೀದಿಗೂ ಬಂತು ಇಎಂಐ!

ಕಾಂಗ್ರೆಸ್ ನಾಯಕರು ಕೂಡ ಅಮುಲ್ ಹಾಲಿನ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ನಂದಿನಿ Vs ಅಮುಲ್ ಕದನ ನಡೆಯುತ್ತಿದ್ದು, ‘ನಂದಿನಿ ಉಳಿಸಿ’ ಅಭಿಯಾನ ಆರಂಭಿಸಿದ್ದಾರೆ. HSR ಬಡಾವಣೆಯ ಪಾರ್ಕ್‌ಗಳಲ್ಲಿ ನಂದಿನಿ ಹಾಲು ಉಚಿತವಾಗಿ ವಿತರಿಸಿದ್ದಾರೆ. ದಿ.ಪುನೀತ್ ರಾಜ್‌ಕುಮಾರ್ ಕೆಎಂಎಫ್‌ಗೆ ಉಚಿತವಾಗಿ ಪ್ರಚಾರ ನೀಡಿದ್ದರು. ಇಂತಹ ಸಂಸ್ಥೆ ಉಳಿಸಿ, ಸ್ಥಳೀಯ ರೈತರಿಗೆ ನೆರವಾಗಬೇಕು ಎಂದು ಮನವಿ ಮಾಡಿದ್ದಾರೆ.

ಕನ್ನಡಿಗರ ಅಸ್ಮಿತೆಯಾದ ನಂದಿನಿ ಹಾಲು ಮತ್ತು ನಂದಿನಿ ಹಾಲಿನ ಉತ್ಪನ್ನಗಳನ್ನು ಬದಿಗೆ ತಳ್ಳಿ ಗುಜರಾತ್ ಮೂಲದ ಅಮುಲ್ ಹಾಲು ಕರ್ನಾಟಕದಲ್ಲಿ ಪಾರುಪತ್ಯ ಸ್ಥಾಪಿಸಲು ನೋಡುತ್ತಿದೆ. ಇದಕ್ಕೆ ಬಿಜೆಪಿ ಸರ್ಕಾರ ಸಹಕಾರ ನೀಡುತ್ತಿದೆ ಎಂದು ಪ್ರತಿಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ನಾಯಕರು ಹಾಗೂ ಜನಸಾಮಾನ್ಯರು ಕೂಡ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದರ ನಡುವೆ ಹಾಸನದ ನಂದಿನಿ ಹಾಲು ಮತ್ತು ಉತ್ಪನ್ನಗಳ ಮಾರಾಟ ಕೇಂದ್ರವೊಂದಕ್ಕೆ ಭೇಟಿ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಖರೀದಿಸಿ ಅಮುಲ್ ಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಹಾಲು, ತುಪ್ಪ, ಮಜ್ಜಿಗೆ, ಮೈಸೂರು ಪಾಕ್ ಸೇರಿ ಎರಡೂವರೆ ಸಾವಿರ ಮೌಲ್ಯದ ನಂದಿನಿ ಉತ್ಪನ್ನಗಳನ್ನ ಖರೀದಿಸಿ ನಂತರ ಅವುಗಳನ್ನು ಸ್ಥಳದಲ್ಲಿದ್ದವರಿಗೆ ಹಂಚಿದ್ದಾರೆ. ನಂದಿನಿ ಉಳಿಸಿಕೊಳ್ಳೋದು ಕರ್ನಾಟಕ ರೈತರ ಬದುಕಿನ ಪ್ರಶ್ನೆಯಾಗಿದೆ. ಸುಮಾರು 80 ಲಕ್ಷ ರೈತರು ಹಾಲು ಉತ್ಪಾದನೆ‌ ಮಾಡುತ್ತಾರೆ. ಎಲ್ಲರೂ ಕೆಎಂಎಫ್​​ ಹಾಲು ಒಕ್ಕೂಟಕ್ಕೆ ಹಾಲು ಹಾಕುತ್ತಾರೆ, ರೈತರು ಕಟ್ಟಿದ ನಂದಿನಿ ಇದು. ಲೀಟರ್ ಗೆ 27-28 ರೂ ಕೊಡುತ್ತಾರೆ. ಸರ್ಕಾರ 5 ರೂಪಾಯಿ ಸಹಾಯಧನ ಕೊಡುತ್ತಿದೆ. ಅಮುಲ್ ಗುಜರಾತ್​​ನದ್ದು, ಅದು ಕೂಡ ರೈತರದ್ದು ನಮ್ಮದೇನು ತಕರಾರಿಲ್ಲ. ಆದರೆ ನಮ್ಮನ್ನು ಹಿಂದಕ್ಕೆ ಹಾಕಿ, ಅದನ್ನು ಮುಂದೆ ಮಾಡುತ್ತಿರೋದು ಸರ್ಕಾರದ ಕ್ರಮ‌ ಸರಿಯಿಲ್ಲ. ನಂದಿನಿ ನಮ್ಮವಳು, ನಮ್ಮ ಹಾಲು ನಮ್ಮ ಬದುಕು ಎಂದು ಹೇಳಿದರು. ನಮ್ಮ ರೈತರು ಬೆಲೆ ಏರಿಕೆ ನಡುವೆ ಹಾಲು ಉತ್ಪಾದನೆ ಮಾಡುತ್ತಾರೆ ಅವರಿಗೆ ಸರ್ಕಾರ ಏನೂ ಸಹಾಯ ಮಾಡಿಲ್ಲ. ನಮ್ಮ ಹಾಲನ್ನೇ ಮಾರಾಟ ಮಾಡಲು ಅಗುತ್ತಿಲ್ಲ. ಹಾಗಾಗಿ ನಾವೇ ಪ್ರೊತ್ಸಾಹ ಕೊಟ್ಟು ಹಾಲು ಉತ್ಪಾದನೆ ಮಾಡಬೇಕು ಎಂದರು.  ಅಮುಲ್ ಹಾಲಿನ ಪಾರುಪತ್ಯ ತಡೆಗೆ ಕನ್ನಡಪರ ಸಂಘಟನೆಗಳು ಕೂಡ ಬೆಂಬಲ ವ್ಯಕ್ತಪಡಿಸಿದೆ. ಕರವೇ ಬಣದಿಂದ ಪ್ರತಿಭಟನೆಗೆ ಕರೆ ನೀಡಲಾಗಿದೆ.

suddiyaana