ಥೈಲ್ಯಾಂಡ್ Vs ಕಾಂಬೋಡಿಯಾ ಸಂಘರ್ಷಕ್ಕೆ ಬ್ರೇಕ್ – ಕದನ ವಿರಾಮಕ್ಕೆ ಒಪ್ಪಿದ ಎರಡು ದೇಶಗಳು

ಥೈಲ್ಯಾಂಡ್ Vs ಕಾಂಬೋಡಿಯಾ ಸಂಘರ್ಷಕ್ಕೆ ಬ್ರೇಕ್ – ಕದನ ವಿರಾಮಕ್ಕೆ ಒಪ್ಪಿದ ಎರಡು ದೇಶಗಳು

ಥೈಲ್ಯಾಂಡ್  ಮತ್ತು  ಕಾಂಬೋಡಿಯಾ ಸಂಘರ್ಷಕ್ಕೆ ಬ್ರೇಕ್ ಬಿದ್ದಿದೆ.  ಗಡಿಯಲ್ಲಿ ಥೈಲ್ಯಾಂಡ್ ಜೊತೆ ನಡೆಯುತ್ತಿದ್ದ ಸಂಘರ್ಷಕ್ಕೆ ಕದನ ವಿರಾಮ ಘೋಷಿಸಲು ಕಾಂಬೋಡಿಯಾ ಒಪ್ಪಿದೆ.  ದೀರ್ಘಕಾಲದ ಗಡಿ ವಿವಾದದ ಹಿನ್ನೆಲೆಯಲ್ಲಿ ಗುರುವಾರ ಜೆಟ್‌ಗಳು, ಫಿರಂಗಿ, ಟ್ಯಾಂಕರ್​ಗಳು ಮತ್ತು ಭೂ ಸೇನಾ ಪಡೆಗಳೊಂದಿಗೆ ಎರಡೂ ದೇಶಗಳು ಪರಸ್ಪರ ತೀವ್ರ ದಾಳಿ ಆರಂಭಿಸಿದ್ದವು. ಈ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಶುಕ್ರವಾರ ಬಿಕ್ಕಟ್ಟಿನ ಕುರಿತು ತುರ್ತು ಸಭೆ ನಡೆಸಿತ್ತು. ಕಾಂಬೋಡಿಯಾ ಬೇಷರತ್ತಾಗಿ ತಕ್ಷಣದ ಕದನ ವಿರಾಮಕ್ಕೆ ಆಗ್ರಹಿಸಿದೆ. ನಾವು ಸಮಸ್ಯೆಗೆ ಶಾಂತಿಯುತ ಪರಿಹಾರ ಕಂಡುಕೊಳ್ಳುವಂತೆ ಕರೆ ನೀಡುತ್ತೇವೆ ಎಂದು ಕೌನ್ಸಿಲ್‌ನ ರಹಸ್ಯ ಸಭೆ ಬಳಿಕ ಫ್ನೋಮ್ ಪೆನ್‌ನ ವಿಶ್ವಸಂಸ್ಥೆಯ ರಾಯಭಾರಿ ಛಿಯಾ ಕಿಯೊ ಹೇಳಿದರು. ಈ ಸಭೆಯಲ್ಲಿ, ಕಾಂಬೋಡಿಯಾ ಮತ್ತು ಥೈಲ್ಯಾಂಡ್​ನ ಪ್ರತಿನಿಧಿಗಳು ಭಾಗವಹಿಸಿದ್ದರು.

ಯುದ್ಧದ ಭೀತಿ ಹಿನ್ನೆಲೆಯಲ್ಲಿ, ಥೈಲ್ಯಾಂಡ್‌ನ ಗಡಿ ಪ್ರದೇಶಗಳಿಂದ 1,38,000ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಅದರ ಆರೋಗ್ಯ ಸಚಿವಾಲಯ ತಿಳಿಸಿದೆ. 14 ಮಂದಿ ನಾಗರಿಕರು ಮತ್ತು ಒಬ್ಬ ಸೈನಿಕ ಸೇರಿದಂತೆ 15 ಜನರು ಸಾವನ್ನಪ್ಪಿದ್ದಾರೆ. ಹಾಗೂ 15 ಸೈನಿಕರು ಸೇರಿದಂತೆ 46 ಜನರು ಗಾಯಗೊಂಡಿದ್ದಾರೆ ಎಂದು ವರದಿಗಳಾಗಿದೆ.

ಶುಕ್ರವಾರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಮೂರು ಕಡೆಗಳಲ್ಲಿ ಹೋರಾಟ ಪುನರಾರಂಭವಾಗಿತ್ತು. ಕಾಂಬೋಡಿಯನ್ ಪಡೆಗಳು ಭಾರೀ ಶಸ್ತ್ರಾಸ್ತ್ರಗಳು, ಫೀಲ್ಡ್ ಫಿರಂಗಿ ಮತ್ತು BM-21 ರಾಕೆಟ್​ ದಾಳಿ ನಡೆಸಿವು. ಅದಕ್ಕೆ ಪ್ರತಿಯಾಗಿ, ನಮ್ಮ ಪಡೆಗಳು ಸೂಕ್ತ ಗುಂಡಿನ ದಾಳಿಯೊಂದಿಗೆ ಪ್ರತಿಕ್ರಿಯಿಸುತ್ತಿವೆ ಎಂದು ಥಾಯ್ ಸೇನೆ ತಿಳಿಸಿತ್ತು.

ಉಭಯ ದೇಶಗಳ ಸೈನಿಕರ ನಡುವಿನ ಘರ್ಷಣೆ ಹಿನ್ನೆಲೆಯಲ್ಲಿ ಭಾರತ ಶುಕ್ರವಾರ ಥೈಲ್ಯಾಂಡ್‌ನಲ್ಲಿರುವ ತನ್ನ ನಾಗರಿಕರಿಗೆ ಎಚ್ಚರಿಕೆ ನೀಡಿ, ಏಳು ಪ್ರಾಂತ್ಯಗಳಿಗೆ ಪ್ರಯಾಣಿಸುವುದನ್ನು ತಪ್ಪಿಸುವಂತೆ ತಿಳಿಸಿದೆ. ಥಾಯ್ ರಾಜಧಾನಿಯಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಎಲ್ಲಾ ಭಾರತೀಯರು ತೊಂದರೆಗೊಳಗಾದ ಪ್ರದೇಶಗಳಲ್ಲಿನ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡುವ ಮುನ್ನ ಅಲ್ಲಿನ ಅಧಿಕಾರಿಗಳಿಂದ ಮಾಹಿತಿ ಪಡೆಯುವಂತೆ ಸೂಚಿಸಿದೆ. ಥೈಲ್ಯಾಂಡ್‌ನಲ್ಲಿ ಭಾರತೀಯ ಮೂಲದ ನಾಲ್ಕರಿಂದ ಐದು ಲಕ್ಷ ಜನರು ಇದ್ದಾರೆ ಎಂದು ಅಂದಾಜಿಸಲಾಗಿದೆ. ಇದರಲ್ಲಿ 25,000ಕ್ಕೂ ಹೆಚ್ಚು ಅನಿವಾಸಿ ಭಾರತೀಯರು ಸೇರಿದ್ದಾರೆ. ಅವರಲ್ಲಿ ಹೆಚ್ಚಿನವರು ರಾಜಧಾನಿ ಬ್ಯಾಂಕಾಕ್‌ನಲ್ಲಿ ನೆಲೆಸಿದ್ದಾರೆ.

 

Kishor KV