ಹಬ್ಬದ ಶುಭಾಶಯ ಕೋರಲು ಸಹೋದರಿಗೆ ಪೋನ್ ಮಾಡಿದ್ಲು! – ಆ ಒಂದು ಕರೆಯಿಂದ ಜೀವವೇ ಹೋಯ್ತು!
ದೇಶದಾದ್ಯಂತ ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಪ್ರತಿ ಮನೆಗಳಲ್ಲೂ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಹಬ್ಬದ ಸಂದರ್ಭ ನಮ್ಮ ಪ್ರೀತಿ ಪಾತ್ರರಿಗೆ ಶುಭಾಶಯ ತಿಳಿಸುವುದು ಸಾಮಾನ್ಯ. ಇಲ್ಲೊಬ್ಬಳು ಕೂಡ ಹಬ್ಬದ ಸಲುವಾಗಿ ಸಹೋದರಿಗೆ ಶುಭಾಶಯ ತಿಳಿಸಲು ಕರೆಮಾಡಿದ್ದಾಳೆ. ಈ ಫೋನ್ ಕಾಲ್ ಆಕೆಯ ಜೀವಕ್ಕೆ ಮುಳುವಾಗಿದೆ.
ಅಷ್ಟಕ್ಕೂ ಆಗಿದ್ದೇನು?
ಹಬ್ಬದ ದಿನದಂದು ಮಹಿಳೆಯೊಬ್ಬಳು ಶುಭಾಶಯ ಕೋರಲು ತನ್ನ ಸಹೋದರಿಗೆ ಕರೆ ಮಾಡಿದ್ದಾಳೆ. ಈ ವೇಳೆ ಮನೆ ಕೆಲಸ ಮಾಡದೇ ತನ್ನ ಸಹೋದರಿಯೊಂದಿಗೆ ಗಂಟೆಗಟ್ಟಲೇ ಮಾತನಾಡುತ್ತಿದ್ದಾಳೆ ಎಂಬ ಕಾರಣಕ್ಕೆ ವ್ಯಕ್ತಿಯೋರ್ವ ತನ್ನ ಹೆಂಡತಿಯನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಉತ್ತರಪ್ರದೇಶದ ಬುಲಂದರ್ಶಹರ್ನಲ್ಲಿ ನಡೆದಿದೆ.
ಇದನ್ನೂ ಓದಿ: ಒಂದೇ ಮಹಿಳೆಗೆ ಎರಡು ಗರ್ಭಕೋಶ, ಎರಡು ಭ್ರೂಣ – ಗರ್ಭಿಣಿಯನ್ನು ಪರೀಕ್ಷಿಸಿದ ವೈದ್ಯರಿಗೆ ಅಚ್ಚರಿಯಾಗಿದ್ದೇಕೆ?
ಸುಶೀಲಾ (45) ಮೃತ ದುರ್ದೈವಿ ಎಂದು ತಿಳಿದು ಬಂದಿದೆ. ಘಟನೆ ಸಂಬಂಧ ಸೆಕ್ಯೂರಿಟಿ ಗಾರ್ಡ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಆರೋಪಿ ದೇವಪಾಲ್ ವರ್ಮಾ (50) ಪೊಲೀಸರಿಗೆ ಶರಣಾಗಿದ್ದಾನೆ.
ದೀಪಾವಳಿ ಪೂಜೆಯ ಬಳಿಕ ಸುಶೀಲಾ ತನ್ನ ಸಹೋದರಿಗೆ ಹಬ್ಬದ ಶುಭಾಶಯಗಳನ್ನು ತಿಳಿಸಲು ಕರೆ ಮಾಡಿದ್ದಾರೆ. ತುಂಬಾ ಹೊತ್ತು ಮಾತನಾಡುತ್ತಿದ್ದನ್ನು ಗಮನಿಸಿದ ಆರೋಪಿ ದೇವಪಾಲ್ ಕುಪಿತಗೊಂಡು ತನ್ನ ಬಳಿ ಇದ್ದ ರೈಫಲ್ನಿಂದ ಆಕೆಯ ಕತ್ತು ಹಾಗೂ ಎದೆಯ ಭಾಗಕ್ಕೆ ಗುಂಡು ಹಾರಿಸಿದ್ದಾನೆ. ತೀವ್ರ ರಕ್ತಸ್ರಾವದಿಂದ ಸುಶೀಲಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಆರೋಪಿ ಹತ್ತಿರದ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾನೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುರೇಂದ್ರನಾಥ್ ತಿವಾರಿ ತಿಳಿಸಿದ್ದಾರೆ.
ಘಟನೆ ನಡೆದ ವೇಳೆ ಆತ ಪಾನಮತ್ತನಾಗಿದ್ದ ಎಂದು ತಿಳಿದು ಬಂದಿದೆ. ಇದಲ್ಲದೆ ಆತ ತನ್ನ ಹೆಂಡತಿಯನ್ನು ಶಂಕಿಸುತ್ತಿದ್ದ ಎಂದು ತಿಳಿದು ಬಂದಿದೆ. ದಂಪತಿಯ ಪುತ್ರ ಹಿಮಾಂಶು ನೀಡಿದ ದೂರಿನ ಮೇರೆಗೆ FIR ದಾಖಲಿಸಲಾಗಿದ್ದು, ಚಾರ್ಜ್ಶೀಟ್ ಸಿದ್ದಪಡಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುರೇಂದ್ರನಾಥ್ ತಿವಾರಿ ತಿಳಿಸಿದ್ದಾರೆ.