ಲಾರಿ, ಆಟೋ ಚಾಲಕರು, ಪೌರಕಾರ್ಮಿಕರಿಂದ ಮುಷ್ಕರಕ್ಕೆ ಕರೆ – ಎಲೆಕ್ಷನ್ ಹೊತ್ತಲ್ಲೇ ಅದೆಷ್ಟು ಪ್ರತಿಭಟನೆ..?

ಲಾರಿ, ಆಟೋ ಚಾಲಕರು, ಪೌರಕಾರ್ಮಿಕರಿಂದ ಮುಷ್ಕರಕ್ಕೆ ಕರೆ – ಎಲೆಕ್ಷನ್ ಹೊತ್ತಲ್ಲೇ ಅದೆಷ್ಟು ಪ್ರತಿಭಟನೆ..?

ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಈಗಾಗ್ಲೇ ಪಕ್ಷಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಜೋರಾಗಿ ನಡೆಯುತ್ತಿದೆ. ಇದ್ರ ನಡುವೆ ಸರ್ಕಾರಕ್ಕೆ ಸಾಲು ಸಾಲು ಪ್ರತಿಭಟನೆಗಳ ಬಿಸಿ ಮುಟ್ಟುತ್ತಿದೆ. ಕೆಲ ದಿನಗಳ ಹಿಂದಷ್ಟೇ ಸರ್ಕಾರಿ ನೌಕರರು ಕರ್ತವ್ಯಕ್ಕೆ ಗೈರಾಗುವ ಮೂಲಕ ಶಾಕ್ ಕೊಟ್ಟಿದ್ರು. ಬಳಿಕ ಸರ್ಕಾರ ವೇತನ ಹೆಚ್ಚಳ ಮಾಡಿತ್ತು. ಈಗ ಕೆಪಿಟಿಸಿಎಲ್ ನೌಕರರು ಮುಷ್ಕರ ಮಾಡೋದಾಗಿ ಘೋಷಣೆ ಮಾಡಿದ ಬೆನ್ನಲ್ಲೇ ಸರ್ಕಾರ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದೆ. ಆದ್ರೆ ಈಗ ಲಾರಿ, ಆಟೋ ಚಾಲಕರು ಹಾಗೂ ಪೌರಕಾರ್ಮಿಕರು ಪ್ರತಿಭಟನೆಗೆ ಮುಂದಾಗಿದ್ದಾರೆ.

ಇದನ್ನೂ ಓದಿ : ಸರ್ಕಾರದಿಂದ ಬೇಡಿಕೆ ಈಡೇರಿಕೆಗೆ ನಿರ್ಧಾರ – ಮುಷ್ಕರಕ್ಕೆ ಒಂದು ದಿನ ಮೊದಲೇ ಸಿಕ್ತು ಜಯ!

ಇದೀಗ ಬಿಬಿಎಂಪಿ ಕಸ ಸಾಗಣೆ ಕಾರ್ಮಿಕರು ಮಾರ್ಚ್ 20ರಂದು ಮುಷ್ಕರಕ್ಕೆ ನಿರ್ಧರಿಸಿದ್ದಾರೆ. ಜೊತೆಗೆ ಯುಗಾದಿ ಹಬ್ಬದ ಒಂದು ದಿನ ಹಿಂದೆ ಅಂದ್ರೆ ಮಾರ್ಚ್ 21ರಂದು ಧರಣಿ ನಡೆಸಲು ಕೆಎಸ್​ಆರ್​ಟಿಸಿ ನಿರ್ಧರಿಸಿದೆ. ಈ ಮುಷ್ಕರಕ್ಕೆ 4 ನಿಗಮಗಳ ನೌಕರರು ಬೆಂಬಲ ವ್ಯಕ್ತಪಡಿಸಿದ್ದು, ಯುಗಾದಿ ಹಬ್ಬಕ್ಕೆ ಊರಿಗೆ ಹೋಗಲು ಸಿದ್ಧತೆ ನಡೆಸುತ್ತಿರುವವರಿಗೆ ಭಾರಿ ಸಮಸ್ಯೆ ಎದುರಾಗಲಿದೆ. ಇವುಗಳ ನಡುವೆ ನಾಳೆಯಿಂದಲೇ ಮುಷ್ಕರ ನಡೆಸಲು ಲಾರಿ ಮಾಲೀಕರು ಮುಂದಾಗಿದ್ದಾರೆ. ಮಧ್ಯಮ ಹಾಗೂ ಲಘು ಸರಕು ಸಾಗಾಣಿಕೆ ವಾಹನಗಳನ್ನು ನಗರದ ಒಳಗೆ ನಿಷೇಧ ಮಾಡಿರುವುದಕ್ಕೆ ಬೆಂಗಳೂರು ನಗರ ಟೆಂಪೋ ಮಾಲೀಕರ ಸಂಘಗಳ ಒಕ್ಕೂಟದಿಂದ ಮುಷ್ಕರಕ್ಕೆ ಕರೆ ಕೊಡಲಾಗಿದೆ. ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ನಾಳೆ ರಾತ್ರಿ 12 ಗಂಟೆಯಿಂದ ಲಾರಿ ಮಾಲೀಕರ ಅನಿರ್ದಿಷ್ಟವಧಿ ಮುಷ್ಕರ ನಡೆಸಲಿದ್ದಾರೆ.

ಹಾಗೇ ಱಪಿಡೋ ಬೈಕ್ ಟ್ಯಾಕ್ಸಿಯನ್ನು ನಿಷೇಧಿಸುವಂತೆ ಬೆಂಗಳೂರಿನ 21 ಆಟೋ ಚಾಲಕರ‌ ಸಂಘಟನೆಗಳು ರಾಜ್ಯ ಸರ್ಕಾರಕ್ಕೆ ಎರಡು ದಿನಗಳ ಗಡುವು ನೀಡಿವೆ. ಮಾರ್ಚ್ 20 ರಂದು ಬೆಂಗಳೂರಲ್ಲಿ ಆಟೋ ಸಂಚಾರವನ್ನು ಸಂಪೂರ್ಣ ಬಂದ್ ಮಾಡಲು ನಿರ್ಧರಿಸಿರೋದಾಗಿ ಆದರ್ಶ ಆಟೋ ಯೂನಿಯನ್ ಅಧ್ಯಕ್ಷ ಮಂಜುನಾಥ್ ಹೇಳಿದ್ದಾರೆ. ಸಾರಿಗೆ ಇಲಾಖೆ ಓಲಾ, ಉಬರ್ ಬೈಕ್ ಟ್ಯಾಕ್ಸಿಗೆ ಅನುಮತಿ ನೀಡಿದೆ. ಇದರಿಂದ ಆಟೋ ಚಾಲಕರ ಆದಾಯಕ್ಕೆ ಹೊಡೆತ ಬಿದ್ದಿದೆ. ಕೂಡಲೇ ಱಪಿಡೋ ಬೈಕ್ ಟ್ಯಾಕ್ಸಿ ಅನುಮತಿ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.

ಬೆಂಗಳೂರಲ್ಲಿ 21 ಆಟೋ ಚಾಲಕರ‌ ಸಂಘಟನೆಗಳಿಂದ‌ ಮಾ.16 ರಿಂದ ಆಟೋಗಳಲ್ಲಿ ಕಪ್ಪು ಬಾವುಟ ಕಟ್ಟಿಕೊಂಡು ಪ್ರತಿಭಟನೆ ಮಾಡಲು ತೀರ್ಮಾನಿಸಲಾಗಿದೆ. ಸೋಮವಾರ ಪ್ರತಿಭಟನೆ ವೇಳೆ 2.10 ಲಕ್ಷ ಆಟೋಗಳ ಸಂಚಾರ ಬಂದ್ ಆಗಲಿದೆ.

ಘನತ್ಯಾಜ್ಯ ಸಾಗಣೆಯಲ್ಲಿ ತೊಡಗಿರುವ ಬಿಬಿಎಂಪಿ ಪೌರಕಾರ್ಮಿಕ ಸಂಘ ಕೂಡ ತ್ಯಾಜ್ಯ ಸಂಗ್ರಹಕಾರರ ಉದ್ಯೋಗವನ್ನು ಖಾಯಂಗೊಳಿಸುವಂತೆ ಒತ್ತಾಯಿಸಿ ಮಾರ್ಚ್ 20 ರಿಂದ ಮುಷ್ಕರ ನಡೆಸಲು ಮುಂದಾಗಿದ್ದಾರೆ. ಕಾಂಪ್ಯಾಕ್ಟ್ ವಾಹನ ಮತ್ತು ಆಟೋ-ಟಿಪ್ಪರ್ ಚಾಲಕರು, ಸಹಾಯಕರು ಮತ್ತು ಲೋಡರ್‌ಗಳಿಗೆ ನೇರ ಪಾವತಿ ವ್ಯವಸ್ಥೆ ಮತ್ತು ಖಾಯಂ ಉದ್ಯೋಗ ಸ್ಥಾನಮಾನಕ್ಕೆ ಒತ್ತಾಯಿಸಿ ಬಿಬಿಎಂಪಿ ಕಸ ಸಾಗಣೆ ಕಾರ್ಮಿಕರು ಮಾರ್ಚ್ 20ರ ಸೋಮವಾರ ಪ್ರತಿಭಟನೆ ನಡೆಸಲಿದ್ದಾರೆ. ಪರಿಣಾಮ ನಗರದಲ್ಲಿ ಕಸ ಸಂಗ್ರಹಣೆಗೆ ತೊಂದರೆಯಾಗುವ ಸಾಧ್ಯತೆ ಇದೆ.

suddiyaana