ಹಿರಿಯ ನಾಗರಿಕರಿಗೆ ಚುನಾವಣಾ ಆಯೋಗದಿಂದ ವಿಶೇಷ ಸೌಲಭ್ಯ – ಮನೆ ಬಾಗಿಲಿಗೆ ಬರಲಿದೆ ಕ್ಯಾಬ್..!
ಬೆಂಗಳೂರಿನ ಮತದಾರರಿಗೆ ಚುನಾವಣಾ ಆಯೋಗವು ಹೊಸ ಸೌಲಭ್ಯವೊಂದನ್ನು ಕಲ್ಪಿಸಿದೆ. ಬೆಂಗಳೂರಿನಲ್ಲಿ ಮತದಾನಕ್ಕಾಗಿ ತೆರಳುವ ಹಿರಿಯ ನಾಗರಿಕರು ಹಾಗೂ ವಿಕಲಚೇತನರಿಗೆ ಚುನಾವಣೆಯ ದಿನವಾದ ಮೇ 10ರಂದು ಮತಗಟ್ಟೆಗೆ ತೆರಳಲು ಕ್ಯಾಬ್ ಸೌಕರ್ಯವನ್ನು ಕಲ್ಪಿಸಲು ಮುಂದಾಗಿದೆ. ಮತದಾನದ ಪ್ರಮಾಣ ಏರಿಕೆಗಾಗಿ ವಯೋವೃದ್ಧರು ಮತ್ತು ಅಂಗವಿಕಲರಿಗೆ ಓಲಾ, ಉಬರ್ ಕ್ಯಾಬ್ ಸೌಲಭ್ಯ ಸಿಗಲಿದೆ.
ಇದನ್ನೂ ಓದಿ: ‘ಆಲ್ ಇಂಡಿಯಾ ರೇಡಿಯೋ’ ಹೆಸರು ಬದಲು! – ಆದೇಶದಲ್ಲಿ ಏನಿದೆ?
ವಯೋವೃದ್ಧರು ಹಾಗೂ ಅಂಗವಿಕಲರಿಗೆ ಮತಗಟ್ಟೆಗೆ ಬಂದು ಮತದಾನ ಮಾಡಲು ಸಾಧ್ಯವಾಗುವುದಿಲ್ಲ. ಇದರಿಂದ ಮತದಾನ ಪ್ರಕ್ರಿಯೆಯಿಂದ ದೂರ ಉಳಿಯುವ ಸಾಧ್ಯತೆ ಇದೆ. ಇದನ್ನು ತಪ್ಪಿಸಲು ಓಲಾ ಹಾಗೂ ಉಬರ್ ಕ್ಯಾಬ್ ಸಂಸ್ಥೆಗಳ ಜೊತೆ ಚುನಾವಣಾ ಆಯೋಗ ಒಡಂಬಡಿಕೆ ಮಾಡಿಕೊಂಡಿದೆ. ಓಲಾ, ಉಬರ್ ಕ್ಯಾಬ್ ಮೂಲಕ ಮನೆಯಿಂದ ಮತಗಟ್ಟೆಗೆ ಕರೆತಂದು ವೋಟ್ ಮಾಡಿಸಿ ಮನೆಗೆ ಮರಳಿ ಡ್ರಾಫ್ ಮಾಡಲಾಗುತ್ತದೆ. ಮತದಾನದ ದಿನ ಚುನಾವಣಾ ಆ್ಯಪ್ನಲ್ಲಿ ನೊಂದಾಯಿಸಿಕೊಂಡ ವೃದ್ದರು ಹಾಗೂ ಅಂಗವಿಕಲರಿಗೆ ಚುನಾವಣಾ ಆಯೋಗ ಕ್ಯಾಬ್ ಸೇವೆ ನೀಡಲಿದೆ. ಚುನಾವಣಾ ಆಯೋಗದ ‘ಸಕ್ಷಮ’ ಆ್ಯಪ್ ಮೂಲಕ ಈ ಸೌಲಭ್ಯವನ್ನು ಪಡೆಯಬಹುದಾಗಿದೆ. ಅಲ್ಲದೆ, ಮೇ 8ರೊಳಗೆ ಈ ಸೌಲಭ್ಯಕ್ಕಾಗಿ ಹೆಸರು ನೋಂದಾಯಿಸಲು ಕೋರಲಾಗಿದೆ. ಕ್ಯಾಬ್ ಸೌಲಭ್ಯ ಪಡೆಯೋದು ಹೇಗೆ? ಅನ್ನೋದನ್ನು ನೋಡುವುದಾದರೆ,
ಚುನಾವಣಾ ಆ್ಯಪ್ ಇನ್‌ಸ್ಟಾಲ್ ಮಾಡಿಕೊಳ್ಳಿ
ವಾಹನ ಸೇವೆಗಳು ಎಂಬ ಅಂಶದ ಮೇಲೆ ಕ್ಲಿಕ್ ಮಾಡಿ
ನಿಮ್ಮ ಜಿಲ್ಲೆ ಆಯ್ಕೆ ಮಾಡಿ
ಬಳಿಕ ನಿಮ್ಮ ವಿಧಾನಸಭಾ ಕ್ಷೇತ್ರವನ್ನು ಆಯ್ಕೆ ಮಾಡಿ
ನಂತರ ನಿಮ್ಮ ಮತಗಟ್ಟೆ ಆಯ್ಕೆ ಮಾಡಿ
ವೋಟರ್ ಐಡಿ ನಂಬರ್, ಹೆಸರು, ಇಮೇಲ್ ನಮೂದಿಸಿ
ನೀವು ವಯೋವೃದ್ದರೋ ಅಥವಾ ಅಂಗವಿಕಲರೋ ಎಂಬ ಆಯ್ಕೆಯನ್ನು ಗುರುತು ಮಾಡಿ
ಪಿಕಪ್ ಮತ್ತು ಡ್ರಾಪ್ ಆಯ್ಕೆನ್ನು ಗುರುತು ಮಾಡಿ ಸಬ್ಮಿಟ್ ಕೊಡಿ
ಈ ನೊಂದಣಿಗೆ ಮೇ.08 ಕೊನೆಯ ದಿನಾಂಕವಾಗಿದೆ. ಈ ಕುರಿತು ಚುನಾವಣಾ ಅಧಿಕಾರಿ ಜಡಿಯಪ್ಪ ಅವರು ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ಈ ವ್ಯವಸ್ಥೆ ಜಾರಿಗೆ ಬಂದಿದ್ದು ಇದೇ ಮೊದಲು. ಹೀಗೆ ಮನೆಯಿಂದ ಮತದಾನ ಮಾಡುವಂಥ ಸೌಲಭ್ಯವನ್ನು ಪಡೆಯಲು ವಯೋವೃದ್ಧರು ಹಾಗೂ ವಿಕಲಚೇತನರು ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಬೇಕಿದೆ.