ತಮ್ಮ ಪ್ರೀತಿಸಿ ಓಡಿಹೋಗಿದ್ದಕ್ಕೆ ಅಣ್ಣನಿಗೆ ಶಿಕ್ಷೆ! – ಅರ್ಚಕನ ಕಿಡ್ನ್ಯಾಪ್ ಮಾಡಿ ಥಳಿಸಿದ ಯುವತಿ ಮನೆಯವರು!

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಿಚಿತ್ರ ಘಟನೆ ನಡೆದಿದೆ. ತಮ್ಮ ಮಾಡಿದ ತಪ್ಪಿಗಾಗಿ ಅಣ್ಣನನ್ನು ಕಿಡ್ನ್ಯಾಪ್ ಮಾಡಿ ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಇದನ್ನೂ ಓದಿ: ಭುವಿ ಮ್ಯಾಜಿಕ್.. ಆರ್‌ಸಿಬಿಗೆ 2 ವಿಕೆಟ್‌ಗಳ ರೋಚಕ ಜಯ- ಪ್ಲೇ ಆಫ್ ರೇಸ್‌ನಿಂದ ಮುಂಬೈಗೆ ಗೇಟ್‌ಪಾಸ್!
ಏನಿದು ಘಟನೆ?
ಬೆಂಗಳೂರಿನ ಬ್ಯಾಡರಹಳ್ಳಿ ಮೂಲದ ಶಿವಕುಮಾರ್ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಇವರ ಪ್ರೀತಿಗೆ ಮನೆಯವರ ವಿರೋಧವಿದ್ದ ಕಾರಣ, ಈ ಜೋಡಿ ಇತ್ತೀಚೆಗೆ ಮನೆ ಬಿಟ್ಟು ಪರಾರಿಯಾಗಿತ್ತು. ಇದರಿಂದ ಆಕ್ರೋಶಗೊಂಡ ಯುವತಿಯ ತಂದೆ ಬಸವರಾಜ್ ಮತ್ತು ಆತನ ಸಂಬಂಧಿಕರು, ಶಿವಕುಮಾರ್‌ನ ಅಣ್ಣ ಕೊಟ್ರೇಶ್ ಮೇಲೆ ಸೇಡು ತೀರಿಸಿಕೊಳ್ಳಲು ಸಂಚು ರೂಪಿಸಿದ್ದರು.
ಬಳಿಕ ಕೊಟ್ರೇಶ್ ಮನೆಗೆ ಬಂದ ಹುಡುಗಿ ಕಡೆಯವರು ಪೊಲೀಸ್ ಸ್ಟೇಷನ್‌ಗೆ ಹೋಗೋಣ ಬಾ ಎಂದು ನಂಬಿಸಿ ಕಾರಿನಲ್ಲಿ ಕರೆದೊಯ್ದಿದ್ದಾರೆ. ಆದರೆ ಸ್ಟೇಷನ್‌ಗೆ ಹೋಗುವ ಬದಲಾಗಿ ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಅಟ್ಟಹಾಸ ಮೆರೆದಿದ್ದಾರೆ. ಕೊಟ್ರೇಶ್ ಅವರ ಕೈಕಾಲುಗಳನ್ನು ಕಟ್ಟಿ ಹಾಕಿ ಕೂಡಿ ಹಾಕಿದ ಹುಡುಗಿಯ ಕಡೆಯವರು ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ಹಲ್ಲೆ ಮಾಡುವ ದೃಶ್ಯವನ್ನು ಚಿತ್ರೀಕರಿಸಿದ ಆರೋಪಿಗಳು, ಕೊಟ್ರೇಶ್ ಕೈಯಲ್ಲಿ ಶಿವು, ನೀನು ಎಲ್ಲಿದ್ದರೂ ಹುಡುಗಿಯನ್ನು ತಂದು ಒಪ್ಪಿಸು ಎಂದು ಹೇಳಿಸಿ ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ಪ್ರಾಣಭಯದಲ್ಲಿದ್ದ ಕೊಟ್ರೇಶ್ ತಮ್ಮನ ಬಳಿ ಅಂಗಲಾಚುವ ವಿಡಿಯೋವನ್ನು ಆರೋಪಿಗಳು ಅವರ ಸಂಬಂಧಿಕರಿಗೆ ಕಳುಹಿಸಿ ಬೆದರಿಕೆ ಹಾಕಿದ್ದಾರೆ.
ವಿಡಿಯೋ ಕಂಡು ಆತಂಕಕ್ಕೊಳಗಾದ ಕೊಟ್ರೇಶ್ ಕುಟುಂಬಸ್ಥರು ತಕ್ಷಣ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣದ ಗಂಭೀರತೆಯನ್ನು ಅರಿತ ಬ್ಯಾಡರಹಳ್ಳಿ ಪೊಲೀಸರು ಕಾರ್ಯಾಚರಣೆ ನಡೆಸಿ, ಕೊಟ್ರೇಶ್ ಅವರನ್ನು ಆರೋಪಿಗಳ ವಶದಿಂದ ಯಶಸ್ವಿಯಾಗಿ ರಕ್ಷಿಸಿದ್ದಾರೆ. ಸದ್ಯಕ್ಕೆ ಸಂತ್ರಸ್ತ ಕೊಟ್ರೇಶ್ ಚಿಕಿತ್ಸೆ ಪಡೆಯುತ್ತಿದ್ದು, ಪೊಲೀಸರು ಯುವತಿಯ ತಂದೆ ಬಸವರಾಜ್ ಹಾಗೂ ಇತರ ಆರೋಪಿಗಳನ್ನು ವಶಕ್ಕೆ ಪಡೆದು ನೋಟಿಸ್ ನೀಡಿ ಕಳುಹಿಸಿದ್ದಾರೆ. ಬ್ಯಾಡರಹಳ್ಳಿ ಪೊಲೀಸರಿಂದ ತನಿಖೆ ಮುಂದುವರಿದೆ.

ನೋಡಿರಿ

