ಯತ್ನಾಳ್ ವಿರುದ್ಧ ‘ಹೈ’ ಅಸ್ತ್ರ – ಉಚ್ಚಾಟನೆ ಆಗ್ತಾರಾ ಹಿಂದೂ ಹುಲಿ?
ಕಮಲ ಕಾರ್ಯಕರ್ತರ ರೋಷಾವೇಶ
ಬಿಜೆಪಿಯಲ್ಲಿ ಬಣ ರಾಜಕೀಯ ಬಡಿದಾಟದ ತನಕ ಹೋಗಿದೆ. ಬಿಎಸ್‌ವೈ ಫ್ಯಾಮೀಲಿ ವಿರುದ್ಧ ತೊಡೆ ತಟ್ಟಿದ್ದಾರೆ.. ಆದ್ರೆ ಪಕ್ಷದ ವಿರುದ್ಧ ಸದಾ ಹೇಳಿಕೆಗಳನ್ನು ನೀಡುತ್ತಿರುವ ಯತ್ನಾಳ್ ವಿರುದ್ಧ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಬಣದ ಆಕ್ರೋಶ ತೀವ್ರಗೊಂಡಿದೆ. ಯತ್ನಾಳ್ರನ್ನು ಪಕ್ಷದಿಂದ ಉಚ್ಚಾಟನೆ ಮಾಡಿ ಬಿಸಾಕಿ.. ಅವರದ್ದು ಮುಖವಾಡದ ಹಿಂದುತ್ವ ಎಂದು ಮೈಸೂರಿನಲ್ಲಿ ಪಕ್ಷದ ಕಾರ್ಯಕರ್ತರು, ವಿಜಯೇಂದ್ರ ಬಣದ ನಾಯಕರು ಆಗ್ರಹಿಸಿದ್ದಾರೆ. ಬಿಜೆಪಿಯಲ್ಲಿ ಪ್ರತ್ಯೇಕ ಸಮರ ಸಾರಿರುವ ಯತ್ನಾಳ್ ನಡೆಗೆ ವಿಜಯೇಂದ್ರ ಬಣದ ಕಾರ್ಯಕರ್ತರು ಸಭೆಯಲ್ಲೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗಿದ್ರೆ ಕಮಲ ಪಾಳಯದಲ್ಲಿ ಏನೆಲ್ಲಾ ಬೆಳವಣಿಗೆ ಆಗುತ್ತಿದೆ ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿಯಿಂದ PAK ಔಟ್? -ಭಾರತ Or ಸೌತ್ ಆಫ್ರಿಕಾದಲ್ಲಿ ಟೂರ್ನಿ
ಇಷ್ಟು ದಿನ ತಾಳ್ಮೆಯಿಂದ ಇದ್ದ ವಿಜಯೇಂದ್ರ ಬಣದ ಕಾರ್ಯಕರ್ತರು ಈಗ ರೊಚ್ಚಿಗೆದಿದ್ದು, ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ವಿಜಯೇಂದ್ರ ಬಣದ ನಾಯಕರ ಸುದ್ದಿಗೋಷ್ಠಿ ವೇಳೆ ಕಾರ್ಯಕರ್ತರು ರೋಷಾವೇಶ ಹೊರಹಾಕಿದ್ರು. ಭಾರೀ ಹೈಡ್ರಾಮಾ ನಡೆದು ಯತ್ನಾಳ್‌ರನ್ನ ಉಚ್ಚಾಟನೆ ಮಾಡಿ ಎಂದು ಆಗ್ರಹಿಸಿದ್ರು. ರಾಜ್ಯಾದ್ಯಂತ ದೇಗುಲಗಳಿಗೆ ಭೇಟಿಯ ನೆಪದಲ್ಲಿ ಪ್ರವಾಸ ಆರಂಭಿಸಿರುವ ವಿಜಯೇಂದ್ರ ಟೀಂ, ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ಕೊಟ್ಟಿತು. ಎಂಪಿ ರೇಣುಕಾಚಾರ್ಯ, ಬಿಸಿ ಪಾಟೀಲ್, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಸೇರಿದಂತೆ ಹಲವು ನಾಯಕರು ಜತೆಯಾಗಿ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದರು. ನಂತ್ರ ದೊಡ್ಡ ಗೊಂದಲ ಸೃಷ್ಟಿ ಆಯ್ತು. ಅವನೊಬ್ಬನಿಂದ ಪಕ್ಷದ ಕಾರ್ಯಕರ್ತರಿಗೆ ಮುಜುಗರ, ಬೇಸರವಾಗುತ್ತಿದೆ. ವಿಜಯಪುರದಲ್ಲಿ ಅವನು ಪ್ರೆಸ್ ಮೀಟ್ ಮಾಡ್ತಾನೆ, ಮೈಸೂರಿನಲ್ಲಿ ನೀವು ಪ್ರೆಸ್ ಮೀಟ್ ಮಾಡ್ತೀರಾ. ಇದರಿಂದ ಏನೂ ಪ್ರಯೋಜನವಿಲ್ಲ. ಕೂಡಲೇ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿ ಎಂದು ಕೂಗಾಡ ತೊಡಗಿದರು, ಈ ವೇಳೆ ಬಿಜೆಪಿ ಮುಖಂಡರು, ಕಾರ್ಯಕರ್ತರನ್ನು ಸಮಾಧಾನಪಡಿಸಲು ಹರಸಾಹಸ ಪಟ್ಟಿದ್ದಾರೆ.
ಯತ್ನಾಳ್ ಹಿಂದುಗಳ ಹುಲಿಯಲ್ಲ, ಇಲಿ
ಈ ವೇಳೆ ಮತನಾಡಿದ ಎಂಪಿ ರೇಣುಕಾಚಾರ್ಯ ಯತ್ನಾಳ್ ಹಿಂದುಗಳ ಹುಲಿಯಲ್ಲ, ಇಲಿ. ನಿಮ್ಮ ಆಟ ಇನ್ನು ಹೆಚ್ಚು ದಿನ ನಡೆಯೋದಿಲ್ಲ. ದಾವಣಗೆರೆಯಲ್ಲಿ ಬಿಜೆಪಿಯ ಬೃಹತ್ ಸಮಾವೇಶ ಮಾಡ್ತೀವಿ. ರಾಷ್ಟ್ರ ರಾಜ್ಯದ ಪ್ರಮುಖ ನಾಯಕರನ್ನು ಸಮಾವೇಶಕ್ಕೆ ಕರೆಸುತ್ತೇವೆ. ಯತ್ನಾಳ್ ರನ್ನು ಪಕ್ಷದಿಂದ ಉಚ್ಚಾಟನೆ ಮಾಡುವಂತೆ ಪಕ್ಷದ ಹಿರಿಯ ನಾಯಕರನ್ನು ಒತ್ತಾಯಿಸುತ್ತೇವೆ ಎಂದು ಗುಡುಗಿದರು.
ಉಪಚುನಾವಣೆಯಲ್ಲಿ ಸೋಲಿಗೆ ಯತ್ನಾಳ್ ಕಾರಣ
ಉಪಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಯತ್ನಾಳ್ ಕಾರಣವೆಂದು ರೇಣುಕಾಚಾರ್ಯ ಆಕ್ರೋಶ ಹೊರ ಹಾಕಿದ್ದಾರೆ. ಉಪಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಯತ್ನಾಳ್ ಫಿಕ್ಸಿಂಗ್ ಮಾಡಿ, ಬಿಜೆಪಿ ಸೋಲಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿಯಿಂದ ಉಚ್ಚಾಟನೆ ಆಗ್ತಾರಾ ಯತ್ನಾಳ್?
ಬಿಜೆಪಿಯಿಂದ ಯತ್ನಾಳ್‌ರನ್ನ ಉಚ್ಚಾಟನೆ ಮಾಡಬೇಕು ಎಂಬ ಆಗ್ರಹ ವಿಜಯೇಂದ್ರ ಪರ ನಾಯಕರು ಹಾಗೂ ಕಾರ್ಯಕರ್ತರಿಂದ ಕೇಳಿ ಬರ್ತಿದೆ. ಆದ್ರೆ ಅದು ಅಷ್ಟು ಸುಲಭವಲ್ಲ. ಯತ್ನಾಳ್ ಹಿಂದೂ ಹುಲಿ ಎಂದು ಗುರುತಿಸಿಕೊಂಡಿದ್ದು, ಸಾಕಷ್ಟು ಜನ ಫೋಲೋವರ್ಸ್ ಇವರಿಗೆ ಇದ್ದಾರೆ.. ಹೀಗಾಗಿ ಅಷ್ಟು ಸುಲಭವಾಗಿ ಹೈಕಮಾಂಡ್ ಇವರನ್ನ ಪಕ್ಷದಿಂದ ತೆಗೆದು ಹಾಕುವುದಿಲ್ಲ.. ಅಲ್ಲದೇ ರಾಜ್ಯ ಬಿಜೆಪಿಯಲ್ಲಿನ ಬಣ ಬಡಿದಾಟಕ್ಕೆ ಬ್ರೇಕ್ ಹಾಕಲೇಬೇಕು ಎಂದು ವಿಜಯೇಂದ್ರ ಹೈಕಮಾಂಡ್ ನಾಯಕರ ಭೇಟಿಗೆ ಮುಂದಾಗಿದ್ದಾರೆ. ಯತ್ನಾಳ್ ನಡೆ ಬಗ್ಗೆ ಹೈಕಮಾಂಡ್ ಬಳಿ ಚರ್ಚಿಸಲಿದ್ದಾರೆ.. ಹೀಗಾಗಿ ರೇಣುಕಾಚಾರ್ಯ ಸುಳಿವಿನಂತೆ ಯತ್ನಾಳ್ ಉಚ್ಚಾಟನೆಯಾಗುತ್ತದೆಯೇ ಅನ್ನೋದನ್ನ ಕಾದುನೋಡಬೇಕಿದೆ.