ಬಿಜೆಪಿಯಲ್ಲಿ ವಿಜಯೇಂದ್ರ ಸಾರಥ್ಯ ಶುರು – ಅಸಮಾಧಾನಿತ ನಾಯಕರು ಪದಗ್ರಹಣ ಸಮಾರಂಭಕ್ಕೆ ಗೈರು!

ಬಿಜೆಪಿಯಲ್ಲಿ ವಿಜಯೇಂದ್ರ ಸಾರಥ್ಯ ಶುರು – ಅಸಮಾಧಾನಿತ ನಾಯಕರು ಪದಗ್ರಹಣ ಸಮಾರಂಭಕ್ಕೆ ಗೈರು!

ಬೆಂಗಳೂರು: ರಾಜ್ಯ  ಬಿಜೆಪಿಯಲ್ಲಿ ಇಂದಿನಿಂದ ಬಿ.ವೈ.ವಿಜಯೇಂದ್ರ ಸಾರಥ್ಯ ಶುರುವಾಗಿದೆ. ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿ ಬಿ.ಎಸ್ ಯಡಿಯೂರಪ್ಪ ಅವರ ಪುತ್ರ ಅಧಿಕಾರ ಸ್ವೀಕರಿಸಿದ್ದಾರೆ. ನಿರ್ಗಮಿತ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಬಿ.ವೈ.ವಿಜಯೇಂದ್ರ  ಅವರಿಗೆ ಬಿಜೆಪಿಯ ಧ್ವಜ ನೀಡಿ ಅವರಿಗೆ ಅಧಿಕಾರ ಹಸ್ತಾಂತರಿಸಿದ್ದಾರೆ.

ಬಿಜೆಪಿಯ ಶಕ್ತಿ ಕೇಂದ್ರ ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಜಗನ್ನಾಥ ಭವನದಲ್ಲಿ ಶಿಕಾರಿಪುರ ಕ್ಷೇತ್ರದ ಶಾಸಕ, ಯುವ ನಾಯಕ ಬಿ ವೈ ವಿಜಯೇಂದ್ರಗೆ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ರಾಜ್ಯ ಬಿಜೆಪಿಯ ಹಿರಿಯ ನಾಯಕರು, ಸಂಸದರು, ಶಾಸಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ನಿಕಟಪೂರ್ವ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ವಿಜಯೇಂದ್ರ ಅವರಿಗೆ ಕೇಸರಿ ಶಾಲು ತೊಡಿಸಿ ಸನ್ಮಾನಿಸಿ ಅಧಿಕಾರ ಹಸ್ತಾಂತರ ಮಾಡಿದರು.

ಪಕ್ಷದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ಬಿ.ವೈ.ವಿಜಯೇಂದ್ರ, ನನ್ನ ಮೇಲೆ ವಿಶ್ವಾಸವಿಟ್ಟು ಪಕ್ಷವು ಅಧ್ಯಕ್ಷರಾಗಿ ನೇಮಕ ಮಾಡಿದೆ. ಪಕ್ಷದ ಎಲ್ಲಾ ನಾಯಕರ ವಿಶ್ವಾಸ ಉಳಿಸಿಕೊಳ್ಳುವ ಕೆಲಸ ಮಾಡುತ್ತೇನೆ. ಲೋಕಸಭಾ ಚುನಾವಣೆಯಲ್ಲಿ ಎಲ್ಲಾ 28 ಕ್ಷೇತ್ರಗಳಲ್ಲೂ ಗೆಲ್ಲುವ ವಿಶ್ವಾಸವಿದೆ. ನನಗೆ ನೀಡಿರುವ ಸ್ಥಾನದ ಬಗ್ಗೆ ಅರಿವು ಇದೆ. ಜವಾಬ್ದಾರಿ ಹೆಚ್ಚಿದೆ. ರಾಜ್ಯದಲ್ಲಿ ಪಕ್ಷ ಸಂಘಟನೆಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇವೆ. ಕಾರ್ಯಕರ್ತರು ತಲೆತಗ್ಗಿಸುವ ಕೆಲಸ ಮಾಡದಂತೆ ಪಕ್ಷ ಸಂಘಟನೆ ಮಾಡುವೆ ಎಂದು ಹೇಳಿದರು.

ಇದನ್ನೂ ಓದಿ:  ಕರೆಂಟ್‌ ಕಳ್ಳ ಕುಮಾರಸ್ವಾಮಿ ಎಂಬ ಆರೋಪ – ಶುರುವಾಯ್ತು ಮತ್ತೊಂದು ಸುತ್ತಿನ ಕಾಂಗ್ರೆಸ್‌ – ಜೆಡಿಎಸ್‌ ಕಾಳಗ!

ಅಮಿತ್ ಶಾರನ್ನು ಕರೆಸಿ ದೊಡ್ಡ ಸಮಾವೇಶಕ್ಕೆ ಚಿಂತನೆ -ಬಿಎಸ್ ಯಡಿಯೂರಪ್ಪ

ಬಿ.ವೈ.ವಿಜಯೇಂದ್ರ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ಬಿಎಸ್ ಯಡಿಯೂರಪ್ಪ, ವಿಜಯೇಂದ್ರ ಅಧ್ಯಕ್ಷರಾದ ಬಳಿಕ ಕಾರ್ಯಕರ್ತರಲ್ಲಿ ಉತ್ಸಾಹ ಕಾಣ್ತಿದೆ. ಎಲ್ಲಾ ನಾಯಕರು ವಿಜಯೇಂದ್ರಗೆ ಆಶೀರ್ವಾದ ಮಾಡಿದ್ದಕ್ಕೆ ಸಂತೋಷವಾಗಿದೆ. ಅಮಿತ್ ಶಾರನ್ನು ಕರೆಸಿ ದೊಡ್ಡ ಸಮಾವೇಶಕ್ಕೆ ಚಿಂತನೆ ಮಾಡಿದ್ದೇವೆ. ಒಂದು ಲಕ್ಷ ಜನರನ್ನು ಸೇರಿಸಿ ಕಾರ್ಯಕ್ರಮ ಮಾಡುವ ಅಪೇಕ್ಷೆ ಇದೆ. ಮೋದಿ, ಶಾ, ನಡ್ಡಾ ಆದೇಶದಂತೆ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ ಎಂದು ಹೇಳಿದರು.

ನನಗೆ ಕೊಟ್ಟ ಸಹಕಾರವನ್ನು ಬಿ.ವೈ.ವಿಜಯೇಂದ್ರಗೂ ಕೊಡಬೇಕು -ನಳಿನ್ ಕುಮಾರ್ ಕಟೀಲು

ಈ ಕಾರ್ಯಕ್ರಮದಲ್ಲಿ ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ವಿಜಯೇಂದ್ರ ನೇತೃತ್ವದಲ್ಲಿ ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡುತ್ತೇವೆ. ನನಗೆ ಕೊಟ್ಟ ಸಹಕಾರವನ್ನು ಬಿ.ವೈ.ವಿಜಯೇಂದ್ರಗೂ ಕೊಡಬೇಕು. ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಅವರಿಗೆ ನಾವೆಲ್ಲರೂ ಜೊತೆಯಾಗಿ ನಿಲ್ತೇವೆ. ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 28 ಸ್ಥಾನಗಳಲ್ಲೂ ಗೆಲ್ಲುವ ಪ್ರಯತ್ನ ಮಾಡುತ್ತೇವೆ ಎಂದರು.

ವಿಜಯೇಂದ್ರ ಸಾರಥ್ಯದಲ್ಲಿ 28 ಲೋಕಸಭಾ ಕ್ಷೇತ್ರ ಗೆಲ್ಲುವ ವಿಶ್ವಾಸ – ಬೊಮ್ಮಾಯಿ

ವಿಧಾನಸಭೆ ಚುನಾವಣೆಯ ನಂತರ ಬಿಜೆಪಿಗೆ ಶಕ್ತಿ, ಉತ್ಸಾಹ ಬಂದಿದೆ. ಎಲ್ಲರೂ ಒಟ್ಟಾಗಿ ನಡೆದರೆ ಲೋಕಸಭೆಯಲ್ಲಿ ಯಶಸ್ಸು ಸಿಗುತ್ತದೆ. ವಿಜಯೇಂದ್ರ ಸಾರಥ್ಯದಲ್ಲಿ 28 ಲೋಕಸಭಾ ಕ್ಷೇತ್ರ ಗೆಲ್ಲುವ ವಿಶ್ವಾಸವಿದೆ. ಸೂಕ್ತ ಸಮಯದಲ್ಲಿ ವಿಜಯೇಂದ್ರ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ್ದಾರೆ. ವಿಜಯೇಂದ್ರಗೆ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಶುಭ ಹಾರೈಸಿದರು.

ಆರು ತಿಂಗಳ ಹಿಂದೆ ವಿಧಾನಸಭೆ ಚುನಾವಣೆಯಲ್ಲಿ ಸೋತು ಸುಣ್ಣವಾಗಿದ್ದ ಬಿಜೆಪಿ ಈಗ ಬಿ.ವೈ. ವಿಜಯೇಂದ್ರ ಅವರು ಬಿಜೆಪಿ ಅಧ್ಯಕ್ಷರಾಗಿ ನೇಮಕವಾಗುತ್ತಿದ್ದಂತೆ ಯಡಿಯೂರಪ್ಪ ಬಣದಲ್ಲಿ ಸಂಭ್ರಮ ಮನೆ ಮಾಡಿದೆ. ಕಳೆದ ಹಲವು ದಿನಗಳಿಂದ ಹೈಕಮಾಂಡ್ ಅಳೆದು ತೂಗಿ ವಿಜಯೇಂದ್ರ ಅವರಿಗೆ ಕರ್ನಾಟಕ ಬಿಜೆಪಿ ಪಟ್ಟ ಕಟ್ಟಿದೆ. ಇನ್ನು
ಅಧಿಕಾರ ಸ್ವೀಕಾರಕ್ಕೂ ಮೊದಲು ವಿಜಯೇಂದ್ರ ಬುಧವಾರ ಮುಂಜಾನೆ ಬಿಜೆಪಿ ಕಚೇರಿಯಲ್ಲಿ ಗಣಪತಿ ಹೋಮ ಮತ್ತು ಗೌರಿ ಹೋಮದ ಪೂರ್ಣಾಹುತಿಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಸಚಿವರಾದ ಆರಗ ಜ್ಞಾನೇಂದ್ರ, ಮುನಿರತ್ನ, ಪ್ರಭು ಚೌಹಾಣ್, ಸಂಸದರಾದ ರಾಘವೇಂದ್ರ, ತೇಜಸ್ವಿ ಸೂರ್ಯ ಸೇರಿದಂತೆ ಹಲವು ನಾಯಕರು ಹಾಜರಿದ್ದರು.

ಅಸಮಾಧಾನಿತ ನಾಯಕರು ಕಾರ್ಯಕ್ರಮಕ್ಕೆ ಗೈರು

ಬಿಜೆಪಿಯಲ್ಲಿ ಪ್ರಮುಖ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದ ಅಸಮಾಧಾನಿತರು ಎಂದು ಗುರುತಿಸಿಕೊಂಡಿರುವ ವಿ ಸೋಮಣ್ಣ, ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್ ಕಾರ್ಯಕ್ರಮದಲ್ಲಿ ಭಾಗಿಯಾಗಿಲ್ಲ. ಇನ್ನು ಮಧ್ಯಪ್ರದೇಶ ಚುನಾವಣೆ ಪ್ರಚಾರದಲ್ಲಿರುವ ಸಿ ಟಿ ರವಿಯವರು ಅಲ್ಲಿಂದಲೇ ವಿಜಯೇಂದ್ರ ಅವರಿಗೆ ಶುಭಕೋರಿದ್ದಾರೆ.

Shwetha M