ಸಿಪಿವೈ ಭವಿಷ್ಯ ಹೆಚ್ಡಿಕೆ ‘ಕೈ’ಯಲ್ಲಿ- ಚನ್ನಪಟ್ಟಣದಲ್ಲಿ ಮೈತ್ರಿಗೆ ಡಿಕೆಶಿ ಡಿಚ್ಚಿ
JDS ತಂತ್ರಕ್ಕೆ CPY ರಣತಂತ್ರ

ಸಿಪಿವೈ ಭವಿಷ್ಯ ಹೆಚ್ಡಿಕೆ ‘ಕೈ’ಯಲ್ಲಿ- ಚನ್ನಪಟ್ಟಣದಲ್ಲಿ ಮೈತ್ರಿಗೆ ಡಿಕೆಶಿ ಡಿಚ್ಚಿJDS ತಂತ್ರಕ್ಕೆ CPY ರಣತಂತ್ರ

By Election

ಚುನಾವಣಾ ಆಯೋಗ ಉಪ ಚುನಾವಣೆಗೆ ದಿನಾಂಕ ಘೋಷಣೆ ಮಾಡಿದ್ದೇ ಮಾಡಿದ್ದು. ರಾಜ್ಯದಲ್ಲಿ ಕದನ ಕಣ ಕುತೂಹಲ ರೋಚಕದತ್ತ ಸಾಗುತ್ತಿದೆ. ಅದರಲ್ಲೂ, ಪ್ರಮುಖವಾಗಿ ಚನ್ನಪಟ್ಟಣ ಅಸೆಂಬ್ಲಿ ಕ್ಷೇತ್ರದಲ್ಲಿ ಮೈತ್ರಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಯಾರು ಎನ್ನುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಮೈತ್ರಿಯಲ್ಲಿ ಅಭ್ಯರ್ಥಿ ಜೆಡಿಎಸ್ ಪಾರ್ಟಿಯವರೋ ಅಥವಾ ಬಿಜೆಪಿಯವರೋ ಅನ್ನೋದು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ. ಅದಕ್ಕೂ ಮುಂಚೆಯೇ ಟಿಕೆಟ್ ಆಕಾಂಕ್ಷಿಗಳು ನನಗೆ ಟಿಕೆಟ್ ಸಿಗುತ್ತೆ.. ನನಗೆ ಟಿಕೆಟ್ ಸಿಗುತ್ತೆ ಅಂತಾ ಹೇಳಿಕೊಳ್ಳುತ್ತಿದ್ದಾರೆ. ಚನ್ನಪಟ್ಟಣದ ಕೈ ಅಭ್ಯರ್ಥಿ ಬಗ್ಗೆ ಜಾತಕದ ಮೊರೆ ಹೋಗಿದ್ರೆ, ಮೈತ್ರಿಯಲ್ಲಿ  ಬಿಜೆಪಿ ಟಿಕೆಟ್ ಆಕಾಂಕ್ಷಿ ಸಿಪಿ ಯೋಗೇಶ್ವರ್ ಮನವೊಲಿಕೆಗೆ ಜೆಡಿಎಸ್ ಕಸರತ್ತು ನಡೆಸುತ್ತಿದೆ.

ಇದನ್ನೂ ಓದಿ:ಅತ್ತೆ ಕೈಚಳಕ ಭಾಗ್ಯ ಲಕಲಕ! -ಹೆಂಡ್ತಿ ನೋಡಿ ಕಳೆದು ಹೋದ ತಾಂಡವ್

ಉಪ ಚುನಾವಣೆಯಲ್ಲಿ ಹಲ್‌ಚಲ್ ಎಬ್ಬಿಸಿದ ಕ್ಷೇತ್ರ ಅಂದ್ರೆ ಅದು ಚನ್ನಪಟ್ಟಣ.. ಇಲ್ಲಿ ಇನ್ನೂ ಕಾಂಗ್ರೆಸ್ ಹಾಗೂ ಮೈತ್ರಿ ಅಭ್ಯರ್ಥಿ ಅನ್ನೋದು ಕನ್ಫರ್ಮ್ ಆಗಿಲ್ಲ. ಹೀಗಾಗಿ 3 ಪಕ್ಷಗಳ ನಾಯಕರು ಸರಣಿ ಸಭೆಗಳನ್ನ ನಡೆಸುತ್ತಿದ್ದಾರೆ.  ಯಾರಿಗೆ ಟಿಕೆಟ್ ನೀಡಬೇಕು? ಯಾರಿಗೆ ಟಿಕೆಟ್ ಕೊಟ್ಟರೇ ಚನ್ನಪಟ್ಟಣ ಕ್ಷೇತ್ರ ತಮ್ಮ ವಶ ಆಗುತ್ತೆ?  ಅನ್ನೋದ್ರ ಬಗ್ಗೆ ತಂತ್ರ, ರಣತಂತ್ರ ಮಾಡುತ್ತಿದ್ದಾರೆ. ತನ್ನ ಗೆಲುವಿಗೆ ಕಾರಣವಾದ ಚನ್ನಪಟ್ಟಣವನ್ನ ಬಿಜೆಪಿಗೆ ಬಿಟ್ಟು ಕೊಡೋಕೆ ಹೆಚ್‌ಡಿಕೆಗೆ ಮನಸ್ಸಲ್ಲ. ಆದ್ರೆ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರೋ ಸಿಪಿ ಯೋಗೇಶ್ವರ್ ಹೋದಲ್ಲಿ ಬಂದಲ್ಲಿ ನಾನೇ ಬಿಜೆಪಿ ಅಭ್ಯರ್ಥಿ ಗೊಂದಲ ಬೇಡೆ ಎನ್ನುತ್ತಿದ್ದಾರೆ. ಇದು ಎರಡು ಪಕ್ಷದ ಕಾರ್ಯಕರ್ತರಿಗೆ ಇಕ್ಕಟ್ಟಿಗೆ ಸಿಲುಕಿಸಿದಂತಾಗಿದೆ.

ಚನ್ನಪಟ್ಟಣ ರಣಕಣ ಬಿಡಲು ಹೆಚ್‌ಡಿಕೆಗೆ ಇಷ್ಟವಿಲ್ಲ

ಹೆಚ್‌ಡಿಕೆ ಇತ್ತೀಚೆಗೆ ಪುತ್ರ ನಿಖಿಲ್ ಕುಮಾರಸ್ವಾಮಿ ಜೊತೆ ಹೋಬಳಿ ಮಟ್ಟದಲ್ಲಿ ಪಕ್ಷದ ಕಾರ್ಯಕರ್ತರ ಸರಣಿ ಸಭೆ ನಡೆಸಿರುವ ಅವರು, ತಮ್ಮ ಮಾತುಗಳಲ್ಲಿ ಪುತ್ರನನ್ನೇ ಕಣಕ್ಕಿಳಿಸಿ ಕ್ಷೇತ್ರವನ್ನು ಉಳಿಸಿಕೊಳ್ಳುವ ಸುಳಿವು ಕೊಟ್ಟಿದ್ದಾರೆ. ಪಕ್ಷದೊಳಗಿನ ಇತ್ತೀಚಿನ ರಾಜಕೀಯ ಬೆಳವಣಿಗೆಗಳು ಅದಕ್ಕೆ ಪೂರಕವಾಗಿಯೇ ನಡೆಯುತ್ತಿವೆ. ಬಿಡದಿ ಬಳಿಯ ತಮ್ಮ ಮನೆಯಲ್ಲಿ ಪಕ್ಷದ ಶಾಸಕರು, ಮಾಜಿ ಶಾಸಕರು ಹಾಗೂ ಕ್ಷೇತ್ರದ ಪ್ರಮುಖ ಮುಖಂಡರೊಂದಿಗೆ ಎಚ್‌ಡಿಕೆ ನಡೆಸಿರುವ ಸಭೆಯಲ್ಲೂ, ಕ್ಷೇತ್ರ ಬಿಡುವುದಕ್ಕೆ ವಿರೋಧ ವ್ಯಕ್ತವಾಗಿದೆ. ನಿಮ್ಮಿಂದ ತೆರವಾಗಿರುವ ಕ್ಷೇತ್ರದಲ್ಲಿ ಪುತ್ರ ನಿಖಿಲ್ ಅವರನ್ನು ಅಭ್ಯರ್ಥಿ ಮಾಡಿ ಗೆಲ್ಲಿಸಬೇಕು’ ಎಂಬ ಅಭಿಪ್ರಾಯವನ್ನು ಸಭೆಯಲ್ಲಿದ್ದವರು ವ್ಯಕ್ತಪಡಿಸಿದ್ದಾರೆ.

ಮೈತ್ರಿ ಅಭ್ಯರ್ಥಿ ಘೋಷಣೆ ನಂತ್ರ ಡಿಕೆಶಿ ಪ್ಲ್ಯಾನ್

ಚನ್ನಪಟ್ಟಣದಿಂದ ಹೊಸ ರಾಜಕೀಯ ಅಧ್ಯಾಯ ಶುರು’ ಎಂದು ಕ್ಷೇತ್ರಕ್ಕೆ ಮೂರು ತಿಂಗಳ ಹಿಂದೆಯೇ ಲಗ್ಗೆ ಇಟ್ಟಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚುನಾವಣೆಯ ಕಾವು ಹೆಚ್ಚಿಸಿದ್ದಾರೆ. ಕ್ಷೇತ್ರಕ್ಕೆ ಆಗಾಗ ಭೇಟಿ ನೀಡುತ್ತಾ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸುತ್ತಾ, ಅಭಿವೃದ್ಧಿ ಹೆಸರಿನಲ್ಲಿ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಕ್ಷೇತ್ರಕ್ಕೆ ಅಭ್ಯರ್ಥಿ ಯಾರೆಂಬ ಗುಟ್ಟನ್ನು ಇಲ್ಲಿಯವರೆಗೆ ಬಿಡದ ಡಿಕೆಶಿ, ‘ಯಾರೇ ನಿಂತರೂ ನಾನೇ ಅಭ್ಯರ್ಥಿ. ನನ್ನ ಮುಖ ನೋಡಿಯೇ ಜನ ಮತ ಹಾಕಬೇಕು’ ಎಂಬ ಮಾತನ್ನು ಹೇಳುತ್ತಿದ್ದಾರೆ. ಅವರ ಸಹೋದರ ಡಿ.ಕೆ. ಸುರೇಶ್ ಹೆಸರು ಮುಂಚೂಣಿಯಲ್ಲಿದ್ದರೂ, ಅದನ್ನು ದೃಢಿಕರಿಸುವಂತಹ ಬೆಳವಣಿಗೆಗಳು ನಡೆಯುತ್ತಿಲ್ಲ. ತಮ್ಮ ಸ್ಪ  ರ್ಧೆಯನ್ನು ಸ್ವತಃ ಸುರೇಶ್‌ ನಿರಾಕರಿಸಿದ್ದಾರೆ. ಆದರೂ, ಪಕ್ಷದ ಕೆಲವರು ಇತ್ತೀಚೆಗೆ ಕ್ಷೇತ್ರಕ್ಕೆ ಅವರ ಹೆಸರನ್ನು ಜಪ ಮಾಡುತ್ತಿದ್ದಾರೆ. ಇದರ ಜೊತೆಗೆ ಬಿಎಂಐಸಿಪಿಎ ಅಧ್ಯಕ್ಷ ರಘುನಂದನ್ ರಾಮಣ್ಣ ಹೆಸರು ಚಾಲ್ತಿಯಲ್ಲಿದೆ. ಬಿಜೆಪಿ-ಜೆಡಿಎಸ್‌ನಲ್ಲಿ ಸೃಷ್ಟಿಯಾಗಿರುವ ಅಭ್ಯರ್ಥಿ ಗೊಂದಲದಲ್ಲಿ ಅಂತಿಮವಾಗಿ ಯಾರ ಹೆಸರು ಘೋಷಣೆಯಾಗುತ್ತದೆ ಎಂಬುದನ್ನು ಕಾದು ನೋಡುತ್ತಿರುವ ಡಿಕೆಶಿ, ನಂತರ ತಮ್ಮ ಪಕ್ಷದ ಅಭ್ಯರ್ಥಿಯನ್ನು ಘೋಷಿಸುವ ಆಲೋಚನೆಯಲ್ಲಿದ್ದಾರೆ. ಕಾಂಗ್ರೆಸ್ ಗೆಲುವಿಗೆ ಪೂರಕ ವಾತಾವರಣ ಇದೆ ಎನಿಸಿದರೆ ಕಡೆ ಗಳಿಗೆಯಲ್ಲಿ ಅವರ ಸಹೋದರನ ಹೆಸರನ್ನೇ ಘೋಷಿಸುವ ಅಥವಾ ಬೇರೆಯವರನ್ನು ಕಣಕ್ಕಿಳಿಸಿ ಕ್ಷೇತ್ರದಲ್ಲಿ ‘ಕೈ’ ಪಾರುಪತ್ಯ ಸ್ಥಾಪಿಸುವ ತಂತ್ರ ಹೆಣೆದಿದ್ದಾರೆ.

ತನಗೆ ಟಿಕೆಟ್ ಫಿಕ್ಸ್ ಎನ್ನುತ್ತಿದ್ದಾರೆ ಸಿ.ಪಿ.ಯೋಗೇಶ್ವರ್ 

ತಮಗೆ ಟಿಕೆಟ್ ಕೊಡಲು ಕುಮಾರಸ್ವಾಮಿ ಅವರಿಗೆ ಮನಸ್ಸಿಲ್ಲ ಎಂಬುದು ಸಿಪಿ ಯೋಗೇಶ್ವರ್‌ಗೆ ಗೊತ್ತಿದೆ. ಆದರೂ ದಿನದಿಂದ ದಿನಕ್ಕೆ ಬದಲಾಗುತ್ತಿರುವ ಕ್ಷೇತ್ರದ ಚಿತ್ರಣ ಗಮನಿಸಿ ಕಡೆ ಗಳಿಗೆಯಲ್ಲಿ ತನಗೆ ಟಿಕೆಟ್ ಘೋಷಿಸಬಹುದು ಎಂಬ ಆಶಾಭಾವನೆಯನ್ನು ಇನ್ನೂ ಉಳಿಸಿಕೊಂಡಿದ್ದಾರೆ. ಅಭ್ಯರ್ಥಿ ಕುರಿತು ಎಚ್‌ಡಿಕೆ ತಮ್ಮ ನಿರ್ಧಾರ ಪ್ರಕಟಿಸಿದ ಬಳಿಕ ತಮ್ಮ ಮುಂದಿನ ತೀರ್ಮಾನ ಕೈಗೊಳ್ಳುವುದಕ್ಕಾಗಿ ಕಾದು ತಂತ್ರದ ಮೊರೆ ನೋಡುತ್ತಿದ್ದಾರೆ. ಇದರ ನಡುವೆ ಬೆಂಗಳೂರಿನಲ್ಲಿ ಜೆಡಿಎಸ್‌ ನಾಯಕರ   ಸಿಪಿವೈ ಅವರನ್ನು ಭೇಟಿ ಮಾಡಿ ಮನವೊಲಿಕೆಗೆ ಯತ್ನಿಸಿದೆ. ಈ ಚುನಾವಣೆ ತಮ್ಮ ರಾಜಕೀಯ ಅಸ್ತಿತ್ವದ ಪ್ರಶ್ನೆಯಾಗಿರುವುದರಿಂದ ಸಿಪಿವೈ ಏನು ತೀರ್ಮಾನ ಕೈಗೊಳ್ಳುತ್ತಾರೆ ಎಂಬ ಕುತೂಹಲ ಬಿಜೆಪಿ ಕಾರ್ಯಕರ್ತರಲ್ಲಿದೆ. ಬಿಜೆಪಿಯ ಪ್ರಬಲ ಆಕಾಂಕ್ಷಿ ಸಿ.ಪಿ.ಯೋಗೇಶ್ವರ್ ಅವರನು ಮನವೊಲಿಸುವ ಪ್ರಯತ್ನವನ್ನು ಜೆಡಿಎಸ್‌ ನಾಯಕರು ನಡೆಸಿದರೂ ಫಲ ನೀಡಿದಂತಿಲ್ಲ. ತಮ್ಮ ನಿರ್ಧಾರದಿಂದ ಹಿಂದೆ ಸರಿಯದ ಯೋಗೇಶ್ವರ್, ‘ನಾನು ಸ್ಪರ್ಧಿಸುವೆ. ನನಗೇ ನೀವು ಬೆಂಬಲ ನೀಡಿ’ ಎಂದು ತಮ್ಮನ್ನು ಮನವೊಲಿಸಲು ಯತ್ನಿಸಿದ ಜೆಡಿಎಸ್‌ ನಾಯಕರ ಬಳಿ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ   ಜೆಡಿಎಸ್‌ನ ಮುಖಂಡರಾದ ಸಿ.ಎಸ್.ಪುಟ್ಟರಾಜು, ಕೆ.ಅನ್ನದಾನಿ, ಎ. ಮಂಜು, ಮಾಗಡಿ ಮಂಜು, ಸುರೇಶ್ ಗೌಡ ಸಭೆ ನಡೆಸಿದರು. ಸಭೆಯಲ್ಲಿ ಜೆಡಿಎಸ್‌ಗೆ ಕ್ಷೇತ್ರವನ್ನು ಬಿಟ್ಟುಕೊಡುವಂತೆ ಸಿಪಿ ಯೋಗೇಶ್ವರ್ ಮನವೊಲಿಕೆ ಮಾಡಲಾಯಿತು. ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ಸೂಚಿಸುವಂತೆ ಮನವಿ ಮಾಡಲಾಯಿತು. ಆದರೆ, ಜೆಡಿಎಸ್‌ ಮುಖಂಡರಮನವೊಲಿಕೆಗೆ ಯೋಗೇಶ್ವರ್ ಮಣಿಯದೇ ತಮ್ಮ ಸ್ಪರ್ಧೆ ಬಗ್ಗೆ ಪ್ರತಿಪಾದಿಸಿದ್ದಾರೆ ಎನ್ನಲಾಗಿದೆ. ಜೆಡಿಎಸ್ ಅಭ್ಯರ್ಥಿಯನ್ನು ಚನ್ನಪಟ್ಟಣದಲ್ಲಿ ಕಣಕ್ಕಿಳಿಸಿದರೆ ಆಗುವ ನಷ್ಟದ ಬಗ್ಗೆ ಜೆಡಿಎಸ್ ಮುಖಂಡರಿಗೆ ಯೋಗೇಶ್ವ‌ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದ್ದಾರೆ.  ಚುನಾವಣಾ ಫಲಿತಾಂಶದಲ್ಲಿ ಹೆಚ್ಚು-ಕಡಿಮೆಯಾದರೆ ಕೇಂದ್ರ ಸಚಿವರಾಗಿರುವಎಚ್‌.ಡಿ.ಕುಮಾರಸ್ವಾಮಿ ಅವರಿಗೇ ಮುಜುಗರವಾಗಲಿದೆ. ಅದಕ್ಕೆ ಯಾಕೆ ಆಸ್ಪದ ಮಾಡಿಕೊಡಬೇಕು? ಎನ್‌ಡಿಎ ಅಭ್ಯರ್ಥಿಯಾಗಲು ಸಹಕಾರ ಮಾಡಿ ಎಂಬುದಾಗಿ ತಿಳಿಸಿದ್ದಾರಂತೆ. ಬೈ ಎಲೆಕ್ಷನ್‌ನಲ್ಲಿ ಜೆಡಿಎಸ್‌ಗೆ ಬಿಟ್ಟು ಕೊಟ್ಟರೆ ಮುಂದಿನ ಬಾರಿ ಬಿಜೆಪಿಗೆ ಚನ್ನಪಟ್ಟಣ ಕ್ಷೇತ್ರ ಬಿಟ್ಟು ಕೊಡುವ ಬಗ್ಗೆಯೂ ಚರ್ಚೆ ನಡೆದಿದೆ ಅನ್ನೋ ಮಾತು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರ್ತಿದೆ.

ಗೆಲುವಿಗಾಗಿ ದೇವರ ಮೊರೆ ಹೋದ ಕಾಂಗ್ರೆಸ್‌

ಇನ್ನು, ಕಾಂಗ್ರೆಸ್ ನಲ್ಲಿ ಯಾರು ಅಭ್ಯರ್ಥಿ ಎನ್ನುವುದು ಇನ್ನೂ ಗೌಪ್ಯವಾಗಿಯೇ ಉಳಿದಿದೆ. ಕಾಂಗ್ರೆಸ್ ನಾಯಕರು ಡಿ.ಕೆ.ಸುರೇಶ್ ಅವರೇ ಅಭ್ಯರ್ಥಿ ಎಂದು ಸಾರ್ವಜನಿಕವಾಗಿಯೇ ಹೇಳಿದ್ದಾರೆ. ಚನ್ನಪಟ್ಟಣದ ಮಾಜಿ ಶಾಸಕರೊಬ್ಬರು, ಸುರೇಶ್ ಗೆಲುವಿಗಾಗಿ ಕೊಲ್ಲೂರು ಮೂಕಾಂಬಿಕೆ ಸನ್ನಿಧಾನದಲ್ಲಿ ಚಂಡಿಕಾ ಹೋಮವನ್ನೂ ನಡೆಸಿಕೊಂಡು ಬಂದಿದ್ದಾರೆ. ಅಭ್ಯರ್ಥಿ ಆಯ್ಕೆಗೆ ಜಾತಕದ ಮೊರೆ ಹೋಗಲಾಗಿದೆ, ಇಬ್ಬರ ಜಾತಕವನ್ನು ಜ್ಯೋತಿಷಿಗಳಿಗೆ ಕಳುಹಿಸಲಾಗಿದೆ ಎನ್ನುವ ಸುದ್ದಿಯೂ ಹರಿದಾಡುತ್ತಿದೆ. ಡಿ.ಕೆ.ಸುರೇಶ್ ಮತ್ತು ರಘುನಂದನ್ ರಾಮಣ್ಣ ಅವರ ಜಾತಕವನ್ನು ಕಳುಹಿಸಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಅಭ್ಯರ್ಥಿ ಯಾರಾಗ ಬೇಕು ಎನ್ನುವುದನ್ನು ಈಗಾಗಲೇ ನಿರ್ಧರಿಸಲಾಗಿದೆ ಎನ್ನುವ ಬಲವಾದ ಮಾತುಗಳು ಕೇಳಿ ಬರುತ್ತಿವೆ.

Kishor KV

Leave a Reply

Your email address will not be published. Required fields are marked *