ಸ್ಥೂಲಕಾಯದ ಬಗ್ಗೆ ಎಚ್ಚೆತ್ತುಕೊಳ್ಳದಿದ್ರೆ ಆಪತ್ತು – 2035ರ ವೇಳೆಗೆ ವಿಶ್ವದ ಅರ್ಧದಷ್ಟು ಜನರಿಗೆ ಅಧಿಕ ತೂಕ!
ಜಗತ್ತಿನಾದ್ಯಂತ ಇವತ್ತು ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ಅತೀ ಹೆಚ್ಚು ಕಾಳಜಿ ವಹಿಸುವ ಸಮಯ ಇದಾಗಿದೆ. ಆರೋಗ್ಯಕರ ಭವಿಷ್ಯಕ್ಕಾಗಿ ನಾನಾ ರೀತಿಯಲ್ಲಿ ಜಾಗೃತಿ ಕಾರ್ಯಕ್ರಮಗಳು ಕೂಡಾ ನಡೆಯುತ್ತಿವೆ. ಇಂತಹ ಸಮಯದಲ್ಲಿ ವಿಶ್ವ ಸ್ಥೂಲಕಾಯ ಒಕ್ಕೂಟವು ಅಧಿಕ ತೂಕದ ವಿರುದ್ಧ ಹೋರಾಡುವ ಅಗತ್ಯತೆಯ ಬಗ್ಗೆ ಎಚ್ಚರಿಸಿದೆ. 2035 ರ ವೇಳೆಗೆ ವಿಶ್ವದ ಜನಸಂಖ್ಯೆಯ ಅರ್ಧದಷ್ಟು ಮಂದಿ ಅಧಿಕ ತೂಕದಿಂದ ಬಳಲಲಿದ್ದಾರೆ ಎಂದು ವರ್ಲ್ಡ್ ಒಬೆಸಿಟಿ ಫೆಡರೇಶನ್ ಎಚ್ಚರಿಕೆಯನ್ನ ನೀಡಿದೆ. ಮುಖ್ಯವಾಗಿ ಕಡಿಮೆ ಮತ್ತು ಮಧ್ಯಮ ಆದಾಯದ ಖಂಡಗಳಾದ ಆಫ್ರಿಕಾ ಮತ್ತು ಏಷ್ಯಾವೂ ಈ ಸಮಸ್ಯೆಯನ್ನ ಅತೀ ಹೆಚ್ಚಾಗಿ ಎದುರಿಸಲಿದೆ ಎಂದು ವರದಿ ಮಾಡಿದೆ.
ಇದನ್ನೂ ಓದಿ : ಸೂರ್ಯನ ದೊಡ್ಡ ಭಾಗ ಒಡೆದು ಸೃಷ್ಟಿಯಾಯ್ತು ಸುಳಿ – ಭಾಸ್ಕರನ ಕೋಪಕ್ಕೆ ವಿಜ್ಞಾನಲೋಕವೇ ದಿಗ್ಭ್ರಮೆ..!
ವಿಶ್ವ ಸ್ಥೂಲಕಾಯ ಒಕ್ಕೂಟದ ಪ್ರಕಾರ ಜಗತ್ತಿನಾದ್ಯಂತ 2035 ರ ವೇಳೆಗೆ ನಾಲ್ಕು ಬಿಲಿಯನ್ ಜನರು ಅಧಿಕ ತೂಕದಿಂದ ಬಳಲಲಿದ್ದಾರೆ. ಅದರಲ್ಲೂ ಮಕ್ಕಳಲ್ಲಿ ಇದರ ಪ್ರಮಾಣವೂ ವೇಗವಾಗಿ ಏರುತ್ತಿದೆ ಎಂದು ಎಚ್ಚರಿಸಿದೆ. ಫೆಡರೇಶನ್‌ನ ಅಧ್ಯಕ್ಷ ಪ್ರೊ.ಲೂಯಿಸ್ ಬೌರ್ ಈ ಬಗ್ಗೆ ಎಚ್ಚರಿಕೆಯ ಗಂಟೆ ಬಾರಿಸಿದ್ದಾರೆ. ಹಾಗೇ ದೇಶಗಳು ಈ ಕೂಡಲೇ ಈ ಕುರಿತಾಗಿ ಎಚ್ಚೆತ್ತುಕೊಳ್ಳಬೇಕು ಇಲ್ಲವಾದಲ್ಲಿ ಭವಿಷ್ಯದಲ್ಲಿ ಇದರ ಪರಿಣಾಮಗಳನ್ನ ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.
ವರದಿಯು ಮುಖ್ಯವಾಗಿ ಮಕ್ಕಳಲ್ಲಿ ಮತ್ತು ಹದಿಹರೆಯರಲ್ಲಿ ಏರುತ್ತಿರುವ ಸ್ಥೂಲಕಾಯದ ಪ್ರಮಾಣವನ್ನ ಎತ್ತಿ ತೋರಿಸುತ್ತಿದೆ. ಯುವ ಪೀಳಿಗೆಗೆ ಆರೋಗ್ಯ, ಸಾಮಾಜಿಕ ಮತ್ತು ಆರ್ಥಿಕ ವೆಚ್ಚಗಳನ್ನ ತಪ್ಪಿಸಲು ಪ್ರಪಂಚದಾದ್ಯಂತ ಸರ್ಕಾರಗಳು ತಯಾರಿಯಾಗಬೇಕಾಗಿದೆ ಎಂದು ಹೇಳಿದ್ದಾರೆ. ಕಡಿಮೆ ಆದಾಯದ ದೇಶದ ಮೇಲೆ ಸ್ಥೂಲಕಾಯದ ಹರಡುವಿಕೆಯ ಪರಿಣಾಮದ ಬಗ್ಗೆ ಕೂಡಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಪ್ರಪಂಚದಾದ್ಯಂತ ಸ್ಥೂಲಕಾಯತೆಯ ದರದಲ್ಲಿ ಏರಿಕೆಯು ಜಾಗತಿಕ ಆರ್ಥಿಕತೆಯ ಮೇಲೆ ಗಮನಾರ್ಹ ಪರಿಣಾಮವನ್ನು ಬೀರುತ್ತದೆ ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ.
ಸಂಸ್ಕರಿಸಿದ ಆಹಾರಗಳ ಕಡೆಗೆ ಯುವ ಜನಾಂಗದ ಒಲವು, ಹೆಚ್ಚಿನ ಮಟ್ಟದ ಜಡತ್ವ, ಆಹಾರ ಪೂರೈಕೆ ಮತ್ತು ಮಾರುಕಟ್ಟೆಯನ್ನು ನಿಯಂತ್ರಿಸುವ ದುರ್ಬಲ ನೀತಿಗಳು ಮತ್ತು ತೂಕ ನಿರ್ವಹಣೆ ಮತ್ತು ಆರೋಗ್ಯ ಶಿಕ್ಷಣದಲ್ಲಿ ಸಹಾಯ ಮಾಡಲು ಕಡಿಮೆ ಸಂಪನ್ಮೂಲ ಹೊಂದಿರುವ ಆರೋಗ್ಯ ಸೇವೆಗಳು ಸ್ಥೂಲಕಾಯದ ಪ್ರಮಾಣದ ಏರಿಕೆಗೆ ಮುಖ್ಯ ಕಾರಣವಾಗುತ್ತಿವೆ.