ಬಾಹುಬಲಿ ಬಟ್ಲರ್.. ಸೋತ ಕೆಕೆಆರ್! – ಐಪಿಎಲ್ ಗೆಲ್ಲೋದು ಇವ್ರೇನಾ?
9ನೇ ವಿಕೆಟ್ ಪಾರ್ಟ್‌ನರ್ ಶಿಪ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡ 38 ರನ್ ಸೇರಿಸಿತ್ತು.. ಆದ್ರೆ ಒಂದು ಈ ಜೊತೆಯಾಟದಲ್ಲಿ ಭಾಗಿಯಾಗಿದ್ದ ಆವೇಶ್ ಖಾನ್‌ಗೆ ಒಂದೇ ಒಂದು ಬಾಲ್ ಎದುರಿಸಲೂ ಅವಕಾಶ ಸಿಗಲಿಲ್ಲ.. ಅಷ್ಟರಮಟ್ಟಿಗೆ ಒಂದು ಟಿ20 ಗೇಮ್ ಗೆಲ್ಲಬೇಕು ಅಂದ್ರೆ ಹೇಗೆ ರಣತಂತ್ರ ರೂಪಿಸಬೇಕು ಎನ್ನುವುದನ್ನು ಕ್ರಿಕೆಟ್ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ ಜೋಸ್ ಬಟ್ಲರ್.. ಓಪನರ್ ಆಗಿ ಬಂದ ಬಟ್ಲರ್, ವಿನ್ನಿಂಗ್ ಶಾಟ್ ಹೊಡೆಯುವವರೆಗೂ ಆಡಿದ ರೀತಿ ನಿಜಕ್ಕೂ ಅದ್ಭುತ.. ಟಿ20ಯಲ್ಲಿ ಒಂದು ಮ್ಯಾಚ್ ಎಲ್ಲಿಂದ ಬೇಕಿದ್ದರೂ ಟರ್ನ್ ಆಗಬಹುದು ಎನ್ನುವುದಕ್ಕೆ ಕೆಕೆಆರ್ ವಿರುದ್ಧದ ರಾಜಸ್ಥಾನ ರಾಯಲ್ಸ್ ಗೆಲುವೇ ಸಾಕ್ಷಿ.. ಈ ರೋಚಕ ಪಂದ್ಯ ಒಂದಷ್ಟು ದಾಖಲೆಗಳ ನಿರ್ಮಾಣಕ್ಕೂ ಕಾರಣವಾಯಿತು.
ಇದನ್ನೂ ಓದಿ: ಡಿಕೆ ರಣಕೇಕೆ! – ಮೋಸಗಾತಿ.. ಬೆನ್ನಿಗೆ ಚೂರಿ.. ಮೋಡಿಗಾರ – ಹೇಗಿದ್ದ ದಿನೇಶ್ ಹೇಗಾದ್ರು ಗೊತ್ತಾ?
ಕೆಕೆಆರ್ ಈ ಸೀಸನ್‌ನಲ್ಲಿ ಕೊಲ್ಕೊತ್ತಾದ ಈಡನ್ ಗಾರ್ಡನ್‌ನಲ್ಲಿ ಮೂರನೇ ಮ್ಯಾಚ್ ಆಡಿದೆ.. ಈ ಮೂರನೇ ಮ್ಯಾಚ್‌ನಲ್ಲಿ ತನ್ನ ನಾಲ್ಕನೇ ಓವರ್ ಬೌಲಿಂಗ್ ಮಾಡಲು ಬಂದಾಗ ಸುನಿಲ್ ನರೈನ್ ಅವರ ಮೊದಲ ಎಸೆತವನ್ನು ಆರ್‌ಆರ್‌ನ ರೌಮನ್ ಪೊವೆಲ್ ಬೌಂಡರಿಗಟ್ಟಿದರು.. ಅದರಲ್ಲಿ ವಿಶೇಷ ಏನಿದೆ ಅಂತ ನಿಮಗೆ ಅನ್ನಿಸಬಹುದು.. ಟಿ20ಯಲ್ಲಿ ಹೀಗೆ ಬೌಂಡರಿ ಸಿಕ್ಸರ್ ಬಾರಿಸೋದು ಕಾಮನ್ ಅನ್ನೋದು ನಿಜವೇ.. ಆದ್ರೆ ಇದು ಈಡನ್ ಗಾರ್ಡನ್‌ನಲ್ಲಿ ಈ ಸೀಸನ್‌ನಲ್ಲಿ ಸುನಿಲ್ ನರೈನ್ ಹೊಡೆಸಿಕೊಂಡ ಮೊದಲ ಬೌಂಡರಿ ಎನ್ನುವುದೇ ವಿಶೇಷ.. ಮೂರು ಪಂದ್ಯಗಳಲ್ಲಿ 11 ಓವರ್ ಬೌಲಿಂಗ್‌ವರೆಗೂ ಒಂದೇ ಒಂದು ಬೌಂಡರಿಯನ್ನೂ ನರೈನ್ ಬಿಟ್ಟುಕೊಟ್ಟಿಲ್ಲ ಅಂದರೆ ಈ ಬೌಲರ್ ಟಿ20ಯಲ್ಲೂ ಅದೆಂತಾ ಮ್ಯಾಜಿಕ್ ಮಾಡ್ತಾರೆ ಎನ್ನುವುದು ಅರ್ಥವಾಗುತ್ತದೆ.. ಆದ್ರೆ ಮೊದಲ ಬೌಂಡರಿ ಹೊಡೆದ ನಂತರ ಸುಮ್ಮನಾಗದ ಪೊವೆಲ್ ನಂತರ ಸತತ ಎರಡು ಸಿಕ್ಸರ್ ಬಾರಿಸಿದ್ರು.. ಹಾಗಿದ್ದರೂ ಅದೇ ಓವರ್‌ನ ಐದನೇ ಎಸೆತದಲ್ಲಿ ಪೊವೆಲ್ ಅವರನ್ನು LBW ಬಲೆಗೆ ಕೆಡವುವಲ್ಲಿ ನರೈನ್ ಯಶಸ್ವಿಯಾದ್ರು.. ಅದು ನರೈನ್ ಬೌಲಿಂಗ್ ಮೇಲೆ ಹೊಂದಿರುವ ಹಿಡಿತಕ್ಕೆ ಸಾಕ್ಷಿ..
ಆರ್‌ಆರ್ ಮತ್ತು ಕೆಕೆಆರ್ ನಡುವಿನ ಪಂದ್ಯ ಒಂದು ರೀತಿಯಲ್ಲಿ ಸುನಿಲ್ ನರೈನ್ ವರ್ಸಸ್ ಜೋಸ್ ಬಟ್ಲರ್ ನಡುವಿನ ಪಂದ್ಯವಾಗಿತ್ತು.. ಈ ಇಬ್ಬರೂ ಆಟಗಾರರು ತಮ್ಮ ತಂಡಗಳನ್ನು ಗೆಲ್ಲಿಸಲು ಮಾಡಿದ ಪ್ರಯತ್ನ ಇದ್ಯಲ್ಲ.. ಅದು ನಿಜಕ್ಕೂ ಅದ್ಭುತ.. ಮೊದಲು ಬ್ಯಾಟಿಂಗ್ ಮಾಡಿದ ಕೊಲ್ಕೊತ್ತಾ ಪರ ಸುನಿಲ್ ನರೈನ್ ಭರ್ಜರಿ ಶತಕ ಸಿಡಿಸಿದ್ರು.. ಈ ಮೂಲಕ ಐಪಿಎಲ್‌ನಲ್ಲಿ ಶತಕ ಸಿಡಿಸಿದವರ ಸಾಲಿನಲ್ಲಿ ತನ್ನ ಹೆಸರನ್ನೂ ಪಿಂಚ್ ಹಿಟ್ಟರ್ ಆಗಿ ಬಂದ ನರೈನ್ ದಾಖಲಿಸಿಕೊಂಡಿದ್ದಾರೆ.. ಪಂದ್ಯದಿಂದ ಪಂದ್ಯಕ್ಕೆ ಸುನಿಲ್ ನರೈನ್ ಬ್ಯಾಟಿಂಗ್ ಸುಧಾರಿಸುತ್ತಿದೆ.. 56 ಎಸೆತ ಎದುರಿಸಿದ ನರೈನ್, 13 ಬೌಂಡರಿ ಮತ್ತು 6 ಸಿಕ್ಸರ್ ಜೊತೆಗೆ 109 ರನ್ ಬಾರಿಸಿ, ತಂಡದ ಮೊತ್ತ ಇನ್ನೂರು ದಾಟಲೇ ಬೇಕು ಎನ್ನುವುದನ್ನು ಖಾತ್ರಿ ಪಡಿಸಿದ್ರು.. ಅವರಿಗೆ ಉತ್ತಮ ಸಾಥ್ ನೀಡಿದ್ದು ಅಂಗ್‌ಕ್ರಿಶ್ ರಘುವಂಶಿ.. ಈ ಯುವ ಆಟಗಾರ 18 ಎಸೆತಗಳಲ್ಲಿ 30 ರನ್ ಹೊಡೆದ್ರೆ, ಕಡೆಯಲ್ಲಿ ರಿಂಕು ಸಿಂಗ್, 9 ಎಸೆತಗಳಲ್ಲಿ 20 ರನ್ ಬಾರಿಸಿ, ತಂಡದ ಮೊತ್ತ 223ಕ್ಕೆ ತಲುಪುವಂತೆ ಮಾಡಿದ್ದರು.. ಈ ಸೀಸನ್‌ನಲ್ಲಿ ಟಿ20 ಅಂದ್ರೆ ಕೇವಲ ಬ್ಯಾಟ್ಸ್‌ಮನ್‌ಗಳ ಗೇಮ್ ಅಂತ ಹೇಳಿದ್ದ ನರೈನ್, ಈಗ ತಾನೇ ಬ್ಯಾಟ್ಸ್‌ಮನ್ ಆಗಿಬಿಟ್ಟಿದ್ದಾರೆ.. ಹಾಗಂತ ಬೌಲಿಂಗ್‌ನಲ್ಲೂ ನರೈನ್ ಏನು ಕಡಿಮೆ ಇರಲಿಲ್ಲ.. ತನ್ನ ನಾಲ್ಕನೇ ಓವರ್‌ನಲ್ಲಿ 15 ರನ್ ಬಿಟ್ಟುಕೊಟ್ಟರೂ ನರೈನ್ ಒಟ್ಟು ನಾಲ್ಕು ಓವರ್‌ನಲ್ಲಿ ಕೊಟ್ಟಿದ್ದು ಕೇವಲ 30 ರನ್ ಮಾತ್ರ.. ನರೈನ್ ಇಷ್ಟೆಲ್ಲಾ ಚೆನ್ನಾಗಿ ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡಿದರೂ ಕೆಕೆಆರ್ ಸೋಲಬೇಕಾಯ್ತು ಅಂದ್ರೆ ಏಕೈಕ ಕಾರಣ ಜೋಸ್ ಬಟ್ಲರ್.. ಕೊಲ್ಕೊತ್ತಾದ ದೇಹವನ್ನೇ ಬಸಿಯುವ ಶೆಕೆಯ ನಡುವೆಯೂ ಅದೆಲ್ಲಿಂದ ಶಕ್ತಿ ಉಳಿಸಿಕೊಂಡು ಆಡಿದ್ರೋ ಗೊತ್ತಿಲ್ಲ.. ಯಾಕಂದ್ರೆ ಕಡೆ ಕಡೆಗೆ ಓಡೋದಿಕ್ಕೂ ಸಾಧ್ಯವಾಗದೆ ಒದ್ದಾಡಿದ್ರೂ ಬಟ್ಲರ್ ಮಾತ್ರ ಗೆಲುವಿನ ಗುರಿಯಿಂದ ಸ್ವಲ್ವೂ ವಿಚಲಿತರಾಗಲಿಲ್ಲ.. ತಂಡವನ್ನು ಗೆಲ್ಲಿಸಬೇಕು ಅಷ್ಟೇ.. ಎಂಬ ಒಂದೇ ಟಾರ್ಗೆಟ್‌ನಿಂದ ಆಡಿದಂತಿತ್ತು… ಆರ್‌ಆರ್‌ನಲ್ಲಿ ಜೋಸ್ ಬಟ್ಲರ್‌ಗೆ ರಿಯಾನ್ ಪರಾಗ್ ಮತ್ತು ರೌಮನ್ ಪೊವೆಲ್ ಸ್ವಲ್ಪ ಸಾಥ್ ಕೊಟ್ಟಿದ್ದು ಬಿಟ್ಟರೆ, ಉಳಿದವರದ್ದೆಲ್ಲಾ ಬಂದ ಪುಟ್ಟ ಹೋದ ಪುಟ್ಟ ಎಂಬಂತಾಗಿತ್ತು.. ಅದರಲ್ಲೂ ಪೊವೆಲ್ ಔಟಾದಾಗ ತಂಡದ ಗೆಲುವಿನ ಇನ್ನೂ 46 ರನ್ ಬೇಕಿತ್ತು.. ಮತ್ತು ಆ ಎಲ್ಲಾ 46 ರನ್‌ಗಳನ್ನು ಜೋಸ್ ಬಟ್ಲರ್ ಒಬ್ಬರೇ ಹೊಡೆಯಬೇಕಿತ್ತು.. ಬಟ್ಲರ್ ಒಂದು ವೇಳೆ ಸ್ಟ್ರೈಕ್ ಚೇಂಜ್ ಮಾಡಿದರೆ ವಿಕೆಟ್ ಎಲ್ಲಿ ಉರುಳಿ ಹೋಗಬಹುದು ಎಂಬ ಭೀತಿಯಿತ್ತು.. ಇದೇ ಕಾರಣಕ್ಕಾಗಿ ತಾನೊಬ್ಬನೇ ಸ್ಟ್ರೈಕ್ ಉಳಿಸಿಕೊಂಡೇ ಆಟವಾಡಿದ್ರು ಬಟ್ಲರ್.. ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಬಟ್ಲರ್ ಸ್ವಲ್ಪವೂ ವಿಚಲಿತರಾಗದೆ ಹಾಗೂ ಕಡೆಯ ಓವರ್‌ನಲ್ಲಿ ಜಾಸ್ತಿ ಒತ್ತಡ ಬೀಳದಂತೆ ನೋಡಿಕೊಳ್ಳಲು 18 ಮತ್ತು 19 ನೇ ಓವರ್‌ನಲ್ಲಿ ಸಂಪೂರ್ಣ ಮೇಲುಗೈ ಸಾಧಿಸಿ, ಕಡೆಯ ಓವರ್‌ಗೆ ಕೇವಲ 9 ರನ್ ಮಾತ್ರ ಗಳಿಸುವಂತಹ ಸಿಂಪಲ್ ಟಾರ್ಗೆಟ್ ಸೆಟ್ ಮಾಡ್ಕೊಂಡರು.. ಅಲ್ಲದೆ ಮೊದಲ ಎಸೆತವನ್ನೇ ಸಿಕ್ಸರ್‌ಗಟ್ಟಿದ್ದರಿಂದ ಬಟ್ಲರ್‌ಗೆ ಅಂದುಕೊಂಡ ರೀತಿಯಲ್ಲೇ ಮ್ಯಾಚ್ ಫಿನಿಶ್ ಮಾಡಲು ಸಾಧ್ಯವಾಯ್ತು.. ಬಾಹುಬಲಿಯ ರೂಪ ತಾಳಿದ ಬಟ್ಲರ್ ಆಟದ ಮುಂದೆ ಕೆಕೆಆರ್‌ನ ಎಲ್ಲಾ ತಂತ್ರಗಳು ವಿಫಲಾದವು.. ಕಡೆಯ ಎಸೆತದಲ್ಲಿ ಬಟ್ಲರ್ ವಿನ್ನಿಂಗ್ ಶಾಟ್ ಹೊಡೆಯುತ್ತಿದ್ದಂತೆ ಆರ್‌ಆರ್ ಆಟಗಾರರ ಸೆಲೆಬ್ರೇಷನ್ ಮುಗಿಲುಮುಟ್ಟಿತ್ತು..
ಈ ಪಂದ್ಯದ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತಿಹೆಚ್ಚು ರನ್ ಚೇಸ್ ಮಾಡಿದ ದಾಖಲೆಯನ್ನು ಆರ್‌ಆರ್ ನಿರ್ಮಿಸಿದೆ.. ಈ ಹಿಂದೆ ಕೆಕೆಆರ್ ಹೆಸರಿನಲ್ಲಿದ್ದ ದಾಖಲೆ ಈಗ ಆರ್‌ಆರ್ ಪಾಲಾಗಿದೆ. ಅಲ್ಲದೆ ರಾಜಸ್ಥಾನ ರಾಯಲ್ಸ್ ಪಾಯಿಂಟ್ ಟೇಬಲ್‌ನಲ್ಲಿ ನಂ.1 ಸ್ಥಾನವನ್ನು ಕಾಪಾಡಿಕೊಂಡಿದೆ. ಐಪಿಎಲ್‌ನ ಮೊದಲ ಸುತ್ತಿನ ಮುಖಾಮುಖಿಯ ಏಳು ಪಂದ್ಯಗಳಲ್ಲಿ 12 ಪಾಯಿಂಟ್ ಗಳಿಸಿರುವ ಆರ್‌ಆರ್ ಇನ್ನು ಎರಡೇ ಎರಡು ಪಂದ್ಯ ಗೆದ್ದರೂ ಸಾಕು.. ಪ್ಲೇಆಫ್ ತಲುಪಿಬಿಡುತ್ತದೆ.. ಈ ಬಾರಿಯ ಐಪಿಎಲ್‌ನಲ್ಲಿ ತುಂಬಾ ಬ್ಯಾಲೆನ್ಸ್ ಇರುವ ತಂಡವಾಗಿ ಆರ್‌ಆರ್ ಹೊರಹೊಮ್ಮಿದೆ.. ಈ ಮೂಲಕ ಐಪಿಎಲ್ ಟ್ರೋಫಿ ಗೆಲ್ಲುವ ಫೇವರೇಟ್ ತಂಡಗಳಲ್ಲಿ ಒಂದು ಎಂಬ ಸ್ಥಾನಗಳಿಸಿದೆ