200 ಕೋಟಿ ಮೌಲ್ಯದ ಆಸ್ತಿ ದಾನ! – ಇಷ್ಟೊಂದು ಸಂಪತ್ತು ಬೇಡ ಅಂದಿದ್ದೇಕೆ?

200 ಕೋಟಿ ಮೌಲ್ಯದ ಆಸ್ತಿ ದಾನ! – ಇಷ್ಟೊಂದು ಸಂಪತ್ತು ಬೇಡ ಅಂದಿದ್ದೇಕೆ?

ಆಸ್ತಿ ಎಷ್ಟೇ ಇದ್ದರೂ ಬದುಕಿಗೆ ಬೇಕಾಗಿರುವುದು ನೆಮ್ಮದಿ. ಈ ದಂಪತಿಗೂ ಅಷ್ಟೇ. ಕೂತು ತಿನ್ನುವಷ್ಟು ಆಸ್ತಿಯಿದೆ. ಆದರೆ, ಮಕ್ಕಳಿಗೆ ಆಸ್ತಿ ಬೇಡ. ಸಂಪತ್ತನ್ನ ತ್ಯಾಗ ಮಾಡಿ, ಹೆತ್ತವರಿಂದಲೂ ದೂರವಾಗಿ ಸನ್ಯಾಸತ್ವ ಸ್ವೀಕಾರ ಮಾಡಿದ್ದರು. ಮಕ್ಕಳಿಗೆ ಬೇಡದ ಆಸ್ತಿ ನಮಗ್ಯಾಕೆ ಬೇಕು ಅಂತಾ ಈಗ ಶ್ರೀಮಂತ ದಂಪತಿ ದೃಢ ನಿರ್ಧಾರವೊಂದಕ್ಕೆ ಬಂದಿದ್ದಾರೆ. ಹಾಗಾದ್ರೆ ಕೋಟಿ ಕೋಟಿ ಆಸ್ತಿ ಏನಾಯ್ತು? ದಂಪತಿ ಆ ನಿರ್ಧಾರ ಯಾವುದು ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಅಯ್ಯೋ ಎಂಥಾ ಕಾಲ ಬಂತಪ್ಪಾ!.. – ಫೋನ್‌ ಮೂಲಕವೇ ದೇವರಿಗೆ ಪ್ರಾರ್ಥನೆ ಸಲ್ಲಿಸಿದ ಮಹಿಳೆ!

ಗುಜರಾತ್‌ನ  ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರು ಭವೇಶ್ ಭಾಯ್ ಭಂಡಾರಿ. ಸಬರ್ಕಾಂತ್ ಜಿಲ್ಲೆಯ ಹಿಮ್ಮತ್‌ನಗರದ ನಿವಾಸಿ. ಉದ್ಯಮಿ ಭವೇಶ್ ಭಾಯ್ ಭಂಡಾರಿ ಕೂಡಿಟ್ಟಿದ್ದು ಬರೋಬ್ಬರಿ 200 ಕೋಟಿ ರೂಪಾಯಿ ಆಸ್ತಿ. ಕೈತುಂಬಾ ದುಡ್ಡು, ಕಾಲ್‌ ತುಂಬಾ ಆಳುಗಳು, ಮೈತುಂಬಾ ಹೊನ್ನು, ಓಡಾಡಲು ಐಷಾರಾಮಿ ಕಾರುಗಳು. ಕೋಟಿ ಸಂಪತ್ತಿನ ಒಡೆಯರಾದರೂ ಭವೇಶ್ ಭಂಡಾರಿ ಮನಸಿಗೆ ನೆಮ್ಮದಿಯಿರಲಿಲ್ಲ. ಈ ಶ್ರೀಮಂತ ದಂಪತಿಗೆ ಒಂದು ಕೊರಗಿತ್ತು. ಅದೇನೇಂದರೆ, ಹೆತ್ತವರ ಕೋಟಿ ಕೋಟಿ ಆಸ್ತಿ ನಿರಾಕರಿಸಿ ಮಕ್ಕಳು ಸನ್ಯಾಸತ್ವ ಸ್ವೀಕರಿಸಿದ್ದರು. ಭವೇಶ್ ದಂಪತಿಯ ಮಕ್ಕಳು 2 ವರ್ಷಗಳ ಹಿಂದೆ ದೀಕ್ಷೆ ಪಡೆದಿದ್ದರು. ಎಷ್ಟೇ ಕೋಟಿ ಸಂಪಾದಿಸಿದ್ರೂ ಮಕ್ಕಳಿಗೆ ಬೇಡವೆಂದ ಮೇಲೆ ನಮಗೂ ಯಾಕೆ ಈ ಶ್ರೀಮಂತ ಬದುಕು ಎಂಬ ತೀರ್ಮಾನಕ್ಕೆ ಹೆತ್ತವರು ಕೂಡಾ ಬಂದಿದ್ದಾರೆ. ಹೀಗಾಗಿ ಆಸ್ತಿ ಸಂಪತ್ತನ್ನು ತ್ಯಜಿಸಿ ಸನ್ಯಾಸತ್ವ ಸ್ವೀಕರಿಸಲು ಮುಂದಾಗಿದ್ದಾರೆ.

ಇನ್ನು ಈ ದಂಪತಿ 200 ಕೋಟಿ ರೂ. ಸಂಪತ್ತನ್ನು ದತ್ತಿ ಸಂಸ್ಥೆಗೆ ದಾನ ಮಾಡಿದ್ದಾರೆ. ಒಳ್ಳೇ ದಿನ ನೋಡಿ ಅಧಿಕೃತವಾಗಿಯೂ ಸನ್ಯಾಸತ್ವ ಸ್ವೀಕರಿಸಲಿದ್ದಾರೆ. ಬಳಿಕ ಲೌಕಿಕ ಜೀವನವನ್ನು ತ್ಯಜಿಸಲಿದ್ದಾರೆ. ಜೈನ ಸಮಾಜದಲ್ಲಿ ದೀಕ್ಷೆಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ದೀಕ್ಷೆ ತೆಗೆದುಕೊಳ್ಳುವವರು ಭಿಕ್ಷೆ ಬೇಡುವ ಮೂಲಕ ಜೀವನ ಸಾಗಿಸಬೇಕು. ಐಷಾರಾಮಿ ಜೀವನವನ್ನು ತ್ಯಜಿಸಬೇಕು. ಅಷ್ಟೇ ಅಲ್ಲದೇ ಜೀವನ ಪರ್ಯಂತ ಬರಿಗಾಲಿನಲ್ಲಿ ಇಡೀ ಭಾರತದಾದ್ಯಂತ ತಿರುಗಾಡಬೇಕಾಗುತ್ತದೆ. ಹುಟ್ಟಿನಿಂದಲೇ ಶ್ರೀಮಂತ ಮನೆತನದಲ್ಲಿ ಬೆಳೆದ ಭವೇಶ್ ಭಂಡಾರಿ ಅವರ ಸನ್ಯಾಸತ್ವದ ನಿರ್ಧಾರ ಎಲ್ಲರ ಗಮನಸೆಳೆದಿದ್ದು, ಈ ಸುದ್ದಿ ಸಿಕ್ಕಾಪಟ್ಟೆ ಚರ್ಚೆಯಲ್ಲಿದೆ. ಇನ್ನು ಈ ದಂಪತಿ ಆಸ್ತಿ ದಾನ ಮಾಡಿದ್ದು ಕೂಡಾ ವಿಶೇಷ ಸನ್ನಿವೇಶಕ್ಕೆ ಕಾರಣವಾಗಿತ್ತು. ಭವೇಶ್ ದಂಪತಿ ಇತರೆ 35 ಮಂದಿಯೊಂದಿಗೆ ಸುಮಾರು 4 ಕಿ.ಮೀ ಮೆರವಣಿಗೆ ತೆರಳಿ ಬಳಿಕ ತಮ್ಮಲ್ಲಿದ್ದ ಮೊಬೈಲ್ ಸೇರಿದಂತೆ ಸಮಸ್ತ ಆಸ್ತಿಯನ್ನು ದಾನ ಮಾಡಿದ್ದಾರೆ.

Shwetha M