ಬೆಳ್ಳಂಬೆಳಗ್ಗೆ ಪ್ರಪಾತಕ್ಕೆ ಉರುಳಿದ ಬಸ್ – 12 ಮಂದಿ ಸಾವು, 27 ಜನರಿಗೆ ಗಾಯ
ಮುಂಬೈ: ಬಸ್ಸೊಂದು ಕಮರಿಗೆ ಬಿದ್ದು ಸುಮಾರು 12 ಜನ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಮುಂಬೈ – ಪುಣೆ ಹೆದ್ದಾರಿಯಲ್ಲಿ ಶನಿವಾರ ಮುಂಜಾನೆ ಸಂಭವಿಸಿದೆ.
ಇದನ್ನೂ ಓದಿ: ಆ್ಯಕ್ಸಿಡೆಂಟ್ ಹಾಟ್ ಸ್ಪಾಟ್ ಆಗುತ್ತಿದ್ಯಾ ಸಿಲಿಕಾನ್ ಸಿಟಿ? – 3 ತಿಂಗಳಲ್ಲಿ ಅಪಘಾತಕ್ಕೆ ಬಲಿಯಾದವರೆಷ್ಟು?
ಸಂಗೀತ ತಂಡವೊಂದರ ಸದಸ್ಯರನ್ನು ಪುಣೆಯಿಂದ ಮುಂಬೈಗೆ ಕರೆದೊಯ್ಯುತ್ತಿದ್ದ ವೇಳೆ ಹೆದ್ದಾರಿಯ ಶಿಂಗ್ರೋಬಾ ದೇವಸ್ಥಾನದ ಬಳಿ ಮುಂಜಾನೆ 4.50ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಘಟನೆಯಲ್ಲಿ 12 ಮಂದಿ ಸಾವನ್ನಪ್ಪಿದ್ದು, 27 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಜಿ ಪ್ರಭು ವಾಡಕ್ ಗ್ರೂಪ್‍ನ ಸದಸ್ಯರು ಪುಣೆ ಜಿಲ್ಲೆಯ ಪಿಂಪ್ರಿ ಚಿಂಚ್‍ವಾಡ್‍ನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮುಂಬೈನ ಗೋರೆಗಾಂವ್‍ಗೆ ಹಿಂತಿರುಗುತ್ತಿದ್ದರು. ಶನಿವಾರ ನಡುರಾತ್ರಿ 1 ಗಂಟೆ ಸುಮಾರಿಗೆ ಬಸ್ ಸ್ಥಳದಿಂದ ನಿರ್ಗಮಿಸಿತ್ತು. ಪ್ರಯಾಣಿಕರು ಮುಂಬೈನ ಸಿಯಾನ್ ಮತ್ತು ಗೋರೆಗಾಂವ್‍ನ ನೆರೆಯ ಪಾಲ್ಘರ್ ಜಿಲ್ಲೆಯ ವಿರಾರ್‌ಗೆ ಸೇರಿದವರು ಎಂದು ರಾಯಗಢ ಪೊಲೀಸ್ ವರಿಷ್ಠಾಧಿಕಾರಿ ಸೋಮನಾಥ್ ಘರ್ಗೆ ತಿಳಿಸಿದ್ದಾರೆ.
ಸ್ಥಳೀಯ ಪೊಲೀಸರ ತಂಡ ಮತ್ತು ಚಾರಣಿಗರ ತಂಡ ಸದ್ಯ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ. ಗಾಯಾಳುಗಳನ್ನು ಖೋಪೋಲಿ ಗ್ರಾಮಾಂತರ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.