ಯಮುನಾ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ದುರಂತ!- ಬಸ್‌ಗೆ ಬೆಂಕಿ – 9 ಮಂದಿ ಸಾವು!

ಯಮುನಾ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ದುರಂತ!-  ಬಸ್‌ಗೆ ಬೆಂಕಿ – 9 ಮಂದಿ ಸಾವು!

ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ಸಂಭವಿಸಿದ ಭೀಕರ ಬಸ್ ದುರಂತ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾ ವ್ಯಾಪ್ತಿಯ ಜೆವಾರ್ ಸಮೀಪ ಬುಧವಾರ ತಡರಾತ್ರಿ ಖಾಸಗಿ ಸ್ಲೀಪರ್ ಬಸ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ದೆಹಲಿಯಿಂದ ಉತ್ತರ ಪ್ರದೇಶದ ಕಡೆಗೆ ತೆರಳುತ್ತಿದ್ದ ಈ ಬಸ್‌ನಲ್ಲಿ ಸುಮಾರು 35 ಮಂದಿ ಪ್ರಯಾಣಿಕರಿದ್ದರು ಎನ್ನಲಾಗಿದೆ.

ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಬಸ್‌ನೊಳಗೆ ದಟ್ಟ ಹೊಗೆ ಆವರಿಸಿದ್ದು, ಪ್ರಯಾಣಿಕರಲ್ಲಿ ಆತಂಕ ಮತ್ತು ಗೊಂದಲ ಸೃಷ್ಟಿಯಾಗಿದೆ. ಕೆಲವರು ಕಿಟಕಿ ಹಾಗೂ ಬಸ್‌ನಿಂದ ಹಾರಿ ತಮ್ಮ ಪ್ರಾಣ ಉಳಿಸಿಕೊಂಡಿದ್ದಾರೆ. ಆದರೆ ಬೆಂಕಿ ವೇಗವಾಗಿ ಹರಡಿದ್ದರಿಂದ ಹಲವರು ಒಳಗೇ ಸಿಲುಕಿಕೊಂಡಿದ್ದು, 9 ಮಂದಿ ಮೃತಪಟ್ಟಿದ್ದಾರೆ. ಹಲವು ಪ್ರಯಾಣಿಕರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ: ಧನಾತ್ಮಕ ಫಲ ಸಿಗಬೇಕಾ? – ಗುರುವಾರ ಹೀಗೆ ವಿಷ್ಣುವನ್ನು ಪೂಜಿಸಿ!

ಇನ್ನು ಈ ದುರಂತಕ್ಕೆ ಸಂಬಂಧಿಸಿದಂತೆ ಪ್ರಯಾಣಿಕರೊಬ್ಬರು ಗಂಭೀರ ಆರೋಪ ಮಾಡಿದ್ದಾರೆ. ಬಸ್‌ನಿಂದ ಸುಟ್ಟ ವಾಸನೆ ಬರುತ್ತಿದೆ ಎಂದು ಚಾಲಕ ಮತ್ತು ಕಂಡಕ್ಟರ್‌ಗೆ ಮುಂಚಿತವಾಗಿಯೇ ತಿಳಿಸಿದ್ದರೂ, ಅವರು ತಕ್ಷಣ ಬಸ್ ನಿಲ್ಲಿಸಿ ಪರಿಶೀಲಿಸಲಿಲ್ಲ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಜೊತೆಗೆ ಚಾಲಕ ಮತ್ತು ಕಂಡಕ್ಟರ್ ಸಿಗರೇಟ್ ಸೇದುತ್ತಿದ್ದರು ಎಂಬ ಆರೋಪವೂ ಕೇಳಿಬಂದಿದೆ. ಈ ಆರೋಪಗಳ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಆದರೆ ಬೆಂಕಿ ನಿಖರವಾಗಿ ಯಾವ ಕಾರಣಕ್ಕೆ ಹೊತ್ತಿಕೊಂಡಿತು ಎಂಬುದು ಇನ್ನೂ ಅಧಿಕೃತವಾಗಿ ದೃಢಪಟ್ಟಿಲ್ಲ. ಬಸ್‌ನ ತಾಂತ್ರಿಕ ಸ್ಥಿತಿ ಸೇರಿದಂತೆ ಹಲವು ಅಂಶಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಈ ದುರ್ಘಟನೆಯು ಪ್ರಯಾಣಿಕರ ಸುರಕ್ಷತೆ ಮತ್ತು ಬಸ್ ನಿರ್ವಹಣೆಯ ಬಗ್ಗೆ ಮತ್ತೊಮ್ಮೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

Kishor KV

Leave a Reply

Your email address will not be published. Required fields are marked *