ನಡು ರಸ್ತೆಯಲ್ಲೇ ಹೊತ್ತಿ ಉರಿದ ಖಾಸಗಿ ಬಸ್! – ತಪ್ಪಿದ ಭಾರೀ ಅನಾಹುತ
ವಿಜಯಪುರದಲ್ಲಿ ಬೆಳ್ಳಂಬೆಳಿಗ್ಗೆ ಭೀಕರ ಅಗ್ನಿ ಅವಘಡವೊಂದು ಸಂಭವಿಸಿದೆ. ಖಾಸಗಿ ಬಸ್ಸೊಂದು ನಡು ರಸ್ತೆಯಲ್ಲೇ ಹೊತ್ತಿ ಉರಿದು, ಸುಟ್ಟು ಕರಕಲಾಗಿದೆ.
ಶುಕ್ರವಾರ ಮುಂಜಾನೆ ಬೆಂಗಳೂರಿನಿಂದ ವಿಜಯಪುರಕ್ಕೆ ಆಗಮಿಸುತ್ತಿದ್ದ ಜನತಾ ಟ್ರಾವೆಲ್ಸ್‌ಗೆ ಸೇರಿದ ಬಸ್ಸೊಂದು ನಡು ರಸ್ತೆಯಲ್ಲೇ ಹೊತ್ತಿ ಉರಿದ ಘಟನೆ ನಡೆದಿದೆ. ಅದೃಷ್ಟವಶಾತ್ ಎಲ್ಲಾ ಪ್ರಯಾಣಿಕರು ಪಾರಾಗಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಹೊಸ ವರ್ಷಕ್ಕೆ ವಾಹನ ಚಾಲಕರಿಗೆ ಬಿಗ್ ಶಾಕ್ – ಕರ್ನಾಟಕದಲ್ಲಿ ಡ್ರೈವಿಂಗ್ ಲೈಸೆನ್ಸ್ ಮತ್ತಷ್ಟು ದುಬಾರಿ!
ಜನತಾ ಟ್ರಾವೆಲ್ಸ್ ಗೆ ಸೇರಿದ ಬಸ್ ರಾಷ್ಟ್ರೀಯ ಹೆದ್ದಾರಿ 50ರ ವಿಜಯಪುರ ತಾಲೂಕಿನ ಹಿಟ್ಟನಹಳ್ಳಿ ಸಮೀಪ ಸಂಚರಿಸುತ್ತಿದ್ದಾಗ ಏಕಾಏಕಿ ಟೈರ್ ಬ್ಲಾಸ್ಟ್ ಆಗಿ ಅವಘಡ ಸಂಭವಿಸಿದೆ. ಟೈರ್ ಬ್ಲಾಸ್ಟ್ ಆಗುತ್ತಿದ್ದಂತೆ ಚಾಲಕ ಬಸ್ ಅನ್ನು ನಿಲ್ಲಿಸಿದ್ದಾನೆ. ತಕ್ಷಣವೇ ಪ್ರಯಾಣಿಕರು ಸುರಕ್ಷಿತವಾಗಿ ಕೆಳಗಿಳಿದಿದ್ದಾರೆ. ನೋಡ ನೋಡುತ್ತಿದ್ದಂತೆಯೇ ಕ್ಷಣಮಾತ್ರದಲ್ಲಿ ಬಸ್ ಗೆ ಬೆಂಕಿ ಹತ್ತಿಕೊಂಡಿದೆ. ಎಲ್ಲ ಪ್ರಯಾಣಿಕರು ಬಸ್ ನಿಂದ ಇಳಿದಿದ್ದರಿಂದ ನಡೆಯಬಹುದಾಗಿದ್ದ ಭಾರೀ ಅನಾಹುತವೊಂದು ತಪ್ಪಿದೆ. ಘಟನೆಯಿಂದ ಪ್ರಯಾಣಿಕರು ಗಾಬರಿಗೊಂಡಿದ್ದಾರೆ.
ಪ್ರಯಾಣಿಕರು ಬಸ್ ನಿಂದ ಕೆಳಗಿಳಿಯವಷ್ಟರಲ್ಲೇ ಬೆಂಕಿ ಹತ್ತಿಕೊಂಡಿದ್ದರಿಂದ ಲಗೇಜ್ ಗಳನ್ನು ಉಳಿಸಿಕೊಳ್ಳಲಾಗಲಿಲ್ಲ. ಎಲ್ಲರ ಲಗೇಜ್ ಗಳು ಬೆಂಕಿಗಾಹುತಿಯಾಗಿವೆ. ಬೆಳೆ ಬಾಳುವ ವಸ್ತುಗಳು, ಬಟ್ಟೆಗಳು, ನಗದು ಒಡವೆ ಲಗೇಜ್ ನಲ್ಲಿ ಇದ್ದವು ಎಂದು ಪ್ರಯಾಣಿಕರು ಅಳಲು ತೋಡಿಕೊಂಡಿದ್ದಾರೆ. ಸ್ಥಳಕ್ಕೆ ವಿಜಯಪುರ ಗ್ರಾಮೀಣ ಪೊಲೀಸರು, ಅಗ್ನಿ ಶಾಮಕದಳದ ಸಿಬ್ಬಂದಿ ದೌಡಾಯಿಸಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.