ಬುಮ್ರಾಗೆ ಬೆನ್ನು ನೋವಿನ ಭೂತ – ಕ್ಯಾಪ್ಟನ್ಸಿಯನ್ನೂ ಕಿತ್ತುಕೊಳ್ತಿದ್ಯಾ ಇಂಜುರಿ?

ಜಸ್ಪ್ರಿತ್ ಬುಮ್ರಾ ಟೀಂ ಇಂಡಿಯಾದ ಬೌಲಿಂಗ್ ಸ್ಟ್ರೆಂಥ್. ಇತ್ತೀಚೆಗಷ್ಟೇ ಮುಕ್ತಾಯಗೊಂಡ ಆಸಿಸ್ ಸರಣಿಯಲ್ಲೂ ಬುಮ್ರಾ ಅದೆಂಥಾ ಮ್ಯಾಜಿಕಲ್ ಬೌಲರ್ ಅನ್ನೋದು ಇಡೀ ಜಗತ್ತಿಗೇ ಗೊತ್ತಾಗಿದೆ. 5 ಪಂದ್ಯಗಳಲ್ಲಿ ಭರ್ಜರಿ 32 ವಿಕೆಟ್ ಕಿತ್ತು ಹೈಯೆಸ್ಟ್ ವಿಕೆಟ್ ಟೇಕರ್ ಎನಿಸಿಕೊಂಡಿದ್ರು. ಆದ್ರೀಗ ಮುಂದಿನ ಸರಣಿಗೆ ಆಡ್ತಾರೋ ಇಲ್ವೋ ಅನ್ನೋದೇ ಡೌಟ್ ಇದೆ. ಚಾಂಪಿಯನ್ಸ್ ಟ್ರೋಫಿ ಮಿಸ್ ಮಾಡಿಕೊಳ್ಳೋ ಆತಂಕ ಎದುರಾಗಿದೆ. ಅದಕ್ಕೆ ಕಾರಣ ಇಂಜುರಿ ಭೂತ.
ಬಾರ್ಡರ್ ಗವಾಸ್ಕರ್ ಸರಣಿಯ ಸಿಡ್ನಿ ಪಂದ್ಯದಲ್ಲಿ ಎರಡನೇ ಇನ್ನಿಂಗ್ಸ್ ವೇಳೆ ಪಂದ್ಯದ ನಡುವೆಯೇ ಬುಮ್ರಾ ಅವರು ಬೆನ್ನುನೋವಿನ ಕಾರಣದಿಂದ ಸ್ಥಳೀಯ ಆಸ್ಪತ್ರೆಗೆ ತೆರಳಿ ಸ್ಕ್ಯಾನ್ ಮಾಡಿಸಿಕೊಂಡು ಬಂದಿದ್ದರು. ಆದ್ರೆ ಬೆನ್ನುನೋವು ಇನ್ನೂ ನಿವಾರಣೆಯಾಗಿಲ್ಲ. ಹೀಗಾಗಿ ಜಸ್ಪ್ರೀತ್ ಬುಮ್ರಾ ಅವರು ನ್ಯೂಜಿಲೆಂಡ್ ಮೂಲದ ಖ್ಯಾತ ಮೂಳೆ ಶಸ್ತ್ರಚಿಕಿತ್ಸಕ ಡಾ ರೋವನ್ ಶೌಟನ್ ಅವರನ್ನು ಭೇಟಿ ಮಾಡಿ ಸಲಹೆಗಳನ್ನು ಪಡೆದಿದ್ದಾರೆ. ಬುಮ್ರಾರನ್ನ ಪರಿಶೀಲನೆ ನಡೆಸಿರುವ ವೈದ್ಯರು ಬೆನ್ನುನೋವಿನ ತೀವ್ರತೆ ಎಷ್ಟರ ಮಟ್ಟಿಗೆ ಇದೆ ಅನ್ನೋದನ್ನ ಪರೀಕ್ಷೆ ಮಾಡಲಿದ್ದಾರೆ. ಆ ನಂತ್ರ ಎಷ್ಟು ವಾರಗಳ ವಿಶ್ರಾಂತಿಯ ಅಗತ್ಯ ಇದೆ ಅನ್ನೋದನ್ನ ನಿರ್ಧಾರ ಮಾಡಲಿದ್ದಾರೆ. ಟೀಂ ಇಂಡಿಯಾದ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾದ ಮೊದಲ ಆಯ್ಕೆಯ ವೇಗಿಯಾಗಿರುವ ಬುಮ್ರಾ ಈ ಹಿಂದೆಯೂ ಸಾಕಷ್ಟು ಬಾರಿ ಡಾ ರೋವನ್ ಶೌಟನ್ ಅವರನ್ನ ಭೇಟಿಯಾಗಿ ಚಿಕಿತ್ಸೆ ಪಡೆದಿದ್ದಾರೆ.
ಇದನ್ನೂ ಓದಿ :ಸ್ಟಾರ್ ಡಂ ಬಿಟ್ಟು ಆಡುವ ಆಟಗಾರರಿಗೆ ಅವಕಾಶ ಕೊಡ್ತಾರಾ? -36 ಆಟಗಾರರ ಶಾರ್ಟ್ ಲಿಸ್ಟ್ ರೆಡಿ ಮಾಡಿದ ಬಿಸಿಸಿಐ!
2018ರಲ್ಲಿ ಟಿ-20 ಸರಣಿಯನ್ನಾಡೋಕೆ ಟೀಂ ಇಂಡಿಯಾ ಐರ್ಲೆಂಡ್ ಪ್ರವಾಸ ಕೈಗೊಂಡಿದ್ದಾಗ ಕ್ಯಾಚ್ ಪಡೆಯುವ ವೇಳೆ ಬುಮ್ರಾ ಹೆಬ್ಬೆರಳಿಗೆ ಗಾಯವಾಗಿತ್ತು. ಮೂರು ವಾರಗಳ ಕಾಲ ಬುಮ್ರಾ ವಿಶ್ರಾಂತಿ ಪಡೆಯಬೇಕಾಯ್ತು. ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೊದಲ ಎರಡು ಮ್ಯಾಚ್ಗಳನ್ನ ಮಿಸ್ ಮಾಡಿಕೊಂಡಿದ್ರು. ಚೇತರಿಸಿಕೊಂಡ ಬಳಿಕ ಕೊನೆಯ ಮೂರು ಟೆಸ್ಟ್ಗಳಲ್ಲಿ ಒಟ್ಟು 14 ವಿಕೆಟ್ಗಳನ್ನ ಪಡೆದಿದ್ರು. 2019ರಲ್ಲಿ ವೆಸ್ಟ್ಇಂಡೀಸ್ ಪ್ರವಾಸ ಕೈಗೊಂಡಿದ್ದ ವೇಳೆ ಜಸ್ಪ್ರಿತ್ ಬುಮ್ರಾ ಸೊಂಟದಲ್ಲಿ ಫ್ಯಾಕ್ಚರ್ ಆಗಿತ್ತು. ಇಂಗ್ಲೆಂಡ್ನಲ್ಲಿ ಶಸ್ತ್ರಚಿಕಿತ್ಸೆಗೊಳಗಾದ್ರು. ಹೀಗಾಗಿ ಭಾರತದಲ್ಲೇ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಿಂದ ಬುಮ್ರಾ ಹೊರಗುಳಿಯಬೇಕಾಯ್ತು. ಮೂರು ತಿಂಗಳ ನಂತರ ಚೇತರಿಸಿಕೊಂಡ ಬುಮ್ರಾ ತಮ್ಮ ಫಿಟ್ನೆಸ್ನ್ನ ಸಾಬೀತುಪಡಿಸಬೇಕಿತ್ತು. ಹೀಗಾಗಿ ಗುಜರಾತ್ ಪರ ರಣಜಿ ಪಂದ್ಯವನ್ನ ಕೂಡ ಆಡಿದ್ರು. ಬಳಿಕ 2020ರಲ್ಲಿ ನ್ಯೂಜಿಲ್ಯಾಂಡ್ ವಿರುದ್ಧದ ಸರಣಿ ವೇಳೆ ಮತ್ತೆ ಟೀಂ ಇಂಡಿಯಾಗೆ ಕಮ್ಬ್ಯಾಕ್ ಮಾಡಿದ್ರು.
2021ರಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ಟೂರ್ ಕೈಗೊಂಡಿತ್ತು. ಬಾರ್ಡರ್-ಗವಾಸ್ಕರ್ ಸರಣಿಯ ಮೂರನೇ ಟೆಸ್ಟ್ ಪಂದ್ಯದ ವೇಳೆ ಫೀಲ್ಡಿಂಗ್ ಸಂದರ್ಭದಲ್ಲಿ ಬುಮ್ರಾ ಹೊಟ್ಟೆಗೆ ಗಾಯವಾಗಿತ್ತು. ಹೀಗಾಗಿ 4ನೇ ಟೆಸ್ಟ್ ಪಂದ್ಯದಲ್ಲಿ ಆಡಿರಲಿಲ್ಲ. ಮೂರು ವಾರಗಳ ನಂತರ ಭಾರತದಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಗೆ ಬುಮ್ರಾ ಕಮ್ಬ್ಯಾಕ್ ಮಾಡಿದ್ರು. 2022ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೂ ಮುನ್ನ ಪ್ರಾಕ್ಟೀಸ್ ಮ್ಯಾಚ್ ಸಂದರ್ಭ ಇದ್ದಕ್ಕಿದ್ದಂತೆ ಬುಮ್ರಾ ಬೆನ್ನಿನಲ್ಲಿ ನೋವು ಕಾಣಿಸಿಕೊಂಡಿತ್ತು. ಕೂಡಲೇ ಬೆಂಗಳೂರಿನಲ್ಲಿ ಸ್ಕ್ಯಾನ್ ಮಾಡಿಸಿಕೊಂಡಾಗ ಬುಮ್ರಾ ಬೆನ್ನಿಗೆ ಸಮಸ್ಯೆಯಾಗಿರೋದು ಖಚಿತವಾಗಿತ್ತು. ಬಳಿಕ ದಕ್ಷಿಣ ಆಫ್ರಿಕಾ ಸೀರಿಸ್ ಮತ್ತು ಆಸ್ಟ್ರೇಲಿಯಾದಲ್ಲಿ ನಡೆದ ಟಿ-20 ವಿಶ್ವಕಪ್ನಿಂದಲೂ ಬುಮ್ರಾ ಔಟ್ ಆಗಿದ್ರು. ವರ್ಲ್ಡ್ಕಪ್ನಲ್ಲಿ ಕೂಡ ಬುಮ್ರಾ ಆಡಿರಲಿಲ್ಲ. ಆಸ್ಟ್ರೇಲಿಯಾದಲ್ಲಿ ನಡೆದ ವಿಶ್ವಕಪ್ನಲ್ಲೂ ಬುಮ್ರಾಗೆ ಆಡೋಕೆ ಸಾಧ್ಯವಾಗಿರಲಿಲ್ಲ.. ಇನ್ನೇನು ಚೇತರಿಸಿಕೊಂಡು 2023ರ ಜನವರಿಯಲ್ಲಿ ಶ್ರಿಲಂಕಾ ವಿರುದ್ಧ ಸರಣಿಗೆ ಬುಮ್ರಾ ಮತ್ತೆ ಕಮ್ಬ್ಯಾಕ್ ಮಾಡ್ತಾರೆ ಅಂತಾನೆ ಅಂದುಕೊಳ್ಳಲಾಗಿತ್ತು. ಬೆಂಗಳೂರಿನಲ್ಲಿರುವ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಕೂಡ ಬುಮ್ರಾ ಫಿಟ್ನೆಸ್ ಟ್ರೈನಿಂಗ್ ಪಡೆದಿದ್ರು. ಬಿಸಿಸಿಐ ಕೂಡ ಬುಮ್ರಾ ಟೀಂ ಇಂಡಿಯಾ ಸ್ಕ್ವಾಡ್ಗೆ ಆಯ್ಕೆ ಮಾಡೋಕೆ ಮುಂದಾಗಿತ್ತು. ಅಷ್ಟರಲ್ಲೇ ಬುಮ್ರಾ ಮತ್ತೊಮ್ಮೆ ಬೆನ್ನು ನೋವಾಗುತ್ತಿದೆ ಅಂತಾ ಬಿಸಿಸಿಐಗೆ ಮಾಹಿತಿ ನೀಡಿದ್ರು. ಹೀಗಾಗಿ ಶ್ರೀಲಂಕಾ ಸರಣಿಯಿಂದಲೂ ಬುಮ್ರಾರನ್ನ ಕೈಬಿಡಲಾಯ್ತು. ಬಳಿಕ ಫೆಬ್ರವರಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧ ಸರಣಿಯಲ್ಲೂ ಬುಮ್ರಾರನ್ನ ಟೀಂಗೆ ಪಿಕ್ ಮಾಡಿರಲಿಲ್ಲ.
ಹೀಗೆ ಬುಮ್ರಾ ವರ್ಷದಿಂದ ವರ್ಷಕ್ಕೆ ಬೆಸ್ಟ್ ಪರ್ಫಾಮೆನ್ಸ್ ನೀಡುತ್ತಾ ಜಗತ್ತಿನಾದ್ಯಂತ ಬೆಸ್ಟ್ ಬೌಲರ್ ಎನಿಸಿಕೊಳ್ತಿದ್ದಾರೆ. ಘಟಾನುಘಟಿ ಕ್ರಿಕೆಟರ್ಗಳೇ ಬುಮ್ರಾ ಪ್ರದರ್ಶನವನ್ನ ಹಾಡಿ ಹೊಗಳುತ್ತಿದ್ದಾರೆ. ಆದ್ರೆ ಜೊತೆ ಜೊತೆಗೆ ಇಂಜುರಿ ಸಮಸ್ಯೆ ಕೂಡ ಹೆಚ್ಚಾಗುತ್ತಲೇ ಇದೆ. ಇದೀಗ ಆಸಿಸ್ ಸರಣಿ ಬಳಿಕ ಬೆನ್ನುನೋವಿನ ಸಮಸ್ಯೆ ಮತ್ತೊಮ್ಮೆ ಕಾಡ್ತಿದೆ. ಹೀಗಾಗಿ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ಬುಮ್ರಾಗೆ ರೆಸ್ಟ್ ಕೊಡೋ ಚಾನ್ಸಸ್ ಇದೆ. ಬಟ್ ಚಾಂಪಿಯನ್ಸ್ ಟ್ರೋಫಿಗೆ ರಿಕವರ್ ಆಗ್ತಾರೋ ಅಥವಾ ಹೊರ ಬೀಳ್ತಾರೋ ಅನ್ನೋ ಆತಂಕ ಇದೆ. ಹಾಗೇನಾದ್ರೂ ಬುಮ್ರಾ ಐಸಿಸಿ ಟೂರ್ನಿಯಿಂದ ಹೊರಗುಳಿದ್ರೆ ಟೀಂ ಇಂಡಿಯಾಗೆ ದೊಡ್ಡ ಮೈನಸ್ ಆಗೋದ್ರಲ್ಲಿ ಡೌಟೇ ಇಲ್ಲ.