ಬ್ಯಾಂಕ್‌ಗೆ ಏಕಾಏಕಿ ನುಗ್ಗಿದ ಗೂಳಿ! – ಹೋರಿ ಕಂಡು ಕಾಲ್ಕಿತ್ತ ಬ್ಯಾಂಕ್​ ಸಿಬ್ಬಂದಿ, ಗ್ರಾಹಕರು  

ಬ್ಯಾಂಕ್‌ಗೆ ಏಕಾಏಕಿ ನುಗ್ಗಿದ ಗೂಳಿ! – ಹೋರಿ ಕಂಡು ಕಾಲ್ಕಿತ್ತ ಬ್ಯಾಂಕ್​ ಸಿಬ್ಬಂದಿ, ಗ್ರಾಹಕರು  

ಸ್ಕೂಲ್‌, ಕಚೇರಿಗಳಿಗೆ ಪ್ರಾಣಿ ಪಕ್ಷಿಗಳು ಆಗಾಗ ನುಗ್ಗುತ್ತವೆ. ಹೀಗೆ ಏಕಾಏಕಿ ನುಗ್ಗಿ ಅಲ್ಲಿರುವ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡುತ್ತವೆ. ಕೆಲಕಾಲ ಅಲ್ಲಿರುವವರನ್ನು ಆತಂಕಕ್ಕೆ ಒಳಗಾಗುವಂತೆ ಮಾಡುತ್ತಿರುತ್ತವೆ. ಇದೀಗ ಇಲ್ಲೊಂದು ಇಂತಹದ್ದೇ ಘಟನೆ ನಡೆದಿದೆ. ಬ್ಯಾಂಕ್‌ನೊಳಗೆ ಗೂಳಿಯೊಂದು ನುಗ್ಗಿ, ಬ್ಯಾಂಕ್‌ ಸಿಬ್ಬಂದಿಗಳನ್ನು ಗಾಬರಿಗೊಳಿಸಿದೆ. ಗೂಳಿ ಬ್ಯಾಂಕ್‌ ಒಳಗೆ ನುಗ್ಗಿರುವ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗಿದೆ.

ಇದನ್ನೂ ಓದಿ: ಭಾರತ ಮತ್ತು ಅಫ್ಘಾನಿಸ್ತಾನ ನಡುವೆ ಮೊದಲ ಪಂದ್ಯಕ್ಕೆ ಕ್ಷಣಗಣನೆ- ಕಿಂಗ್ ಕೊಹ್ಲಿ ಆಡಲ್ಲ ಯಾಕೆ?

ಉತ್ತರ ಪ್ರದೇಶದ ಉನ್ನಾವೊದ ಶಹಗಂಜ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ.  ಶಹಗಂಜ್ ನಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಗೆ ಗೂಳಿಯೊಂದು ಎಂಟ್ರಿ ಕೊಟ್ಟಿದೆ. ಈ ವೇಳೆ ಬ್ಯಾಂಕಿನೊಳಗೆ ಇದ್ದ ಗ್ರಾಹಕರು ಹಾಗೂ ಸಿಬ್ಬಂದಿಗಳು ಒಮ್ಮೆ ಗಲಿಬಿಲಿಯಾಗಿದ್ದಾರೆ. ಬ್ಯಾಂಕಿನೊಳಗೆ ಪ್ರವೇಶಿಸಿದ ಗೂಳಿ ಯಾರಿಗೂ ತೊಂದರೆ ಕೊಡದೆ ತನ್ನ ಪಾಡಿಗೆ ನಿಂತು ಬಿಟ್ಟಿದೆ ಇದನ್ನು ಕಂಡ ಕೆಲ ಗ್ರಾಹಕರು ಬೇಗ ಬೇಗನೆ ಕೆಲಸ ಮುಗಿಸಿ ಬ್ಯಾಂಕ್ ನಿಂದ ಹೊರ ಹೋಗಿದ್ದಾರೆ. ಇನ್ನೂ ಕೆಲವರು ಕೆಲಸವನ್ನು ಅರ್ಧಕ್ಕೆ ನಿಲ್ಲಿಸಿ ಬದುಕಿದೆಯಾ ಬಡ ಜೀವ ಎನ್ನುತ್ತಾ ಸ್ಥಳದಿಂದ ಜಾಗ ಖಾಲಿ ಮಾಡಿದ್ದಾರೆ.

ಇದರ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸುಮಾರು ಮೂವತ್ತು ಸೆಕುಂಡುಗಳ ವಿಡಿಯೋದಲ್ಲಿ ಗೂಳಿ ಸುಮ್ಮನೆ ನಿಂತಿದ್ದು ಅದನ್ನು ಕಂಡ ಕೆಲ ಗ್ರಾಹಕರು ಆಶ್ಚರ್ಯದಿಂದ ನೋಡಿದರೆ ಇನ್ನು ಕೆಲವರು ಭಯಗೊಂಡು ಹೊರ ಓಡಿದ್ದಾರೆ. ಬಳಿಕ ಬಂದ ಭದ್ರತಾ ಸಿಬಂದಿ ಗೂಳಿಯನ್ನು ಬ್ಯಾಂಕ್ ನಿಂದ ಹೊರ ಓಡಿಸಿದ್ದಾರೆ.

ಮಾಹಿತಿ ಪ್ರಕಾರ ಬ್ಯಾಂಕ್ ನ ಹೊರಭಾಗದಲ್ಲಿ ಎರಡು ಗೂಳಿಗಳು ಕಾದಾಡಿಕೊಂಡಿವೆ ಈ ವೇಳೆ ಒಂದು ಗೂಳಿ ಸೀದಾ ಬ್ಯಾಂಕ್ ಒಳಗೆ ಪ್ರವೇಶಿದೆ ಎಂದು ಹೇಳಲಾಗಿದೆ. ಗೂಳಿ ಬ್ಯಾಂಕ್ ಪ್ರವೇಶಿಸುವ ವೇಳೆ ಭದ್ರತಾ ಸಿಬಂದಿ ಪ್ರವೇಶ ದ್ವಾರದಲ್ಲಿ ಇರಲಿಲ್ಲ ಹಾಗಾಗಿ ಗೂಳಿ ಆರಾಮವಾಗಿ ಬ್ಯಾಂಕ್ ಪ್ರವೇಶಿಸಿದೆ ಎನ್ನಲಾಗಿದೆ. ಘಟನೆಯಿಂದ ಯಾರಿಗೂ ತೊಂದರೆ ಆಗಲಿಲ್ಲ. ಬ್ಯಾಂಕಿನಲ್ಲೂ ಕಡಿಮೆ ಗ್ರಾಹಕರು ಇದ್ದ ಪರಿಣಾಮ ಹೆಚ್ಚಿನ ತೊಂದರೆ ಆಗಲಿಲ್ಲ.

Shwetha M