ಗುಜರಾತ್ ಎಲೆಕ್ಷನ್: ಕಾಂಗ್ರೆಸ್ ಚುನಾವಣಾ ರ್‍ಯಾಲಿ ವೇಳೆ ನುಗ್ಗಿದ ಗೂಳಿ  – ಬಿಜೆಪಿ ಷಡ್ಯಂತ್ರ ಎಂದ ಗೆಹ್ಲೋಟ್

ಗುಜರಾತ್ ಎಲೆಕ್ಷನ್: ಕಾಂಗ್ರೆಸ್ ಚುನಾವಣಾ ರ್‍ಯಾಲಿ ವೇಳೆ ನುಗ್ಗಿದ ಗೂಳಿ  – ಬಿಜೆಪಿ ಷಡ್ಯಂತ್ರ ಎಂದ ಗೆಹ್ಲೋಟ್

ಅಹಮದಾಬಾದ್: ಗುಜರಾತ್‌ ಚುನಾವಣಾ ರ್‍ಯಾಲಿ ವೇಳೆ ರಾಜಸ್ಥಾನ ಮುಖ್ಯಮಂತ್ರಿ  ಅಶೋಕ್ ಗೆಹ್ಲೋಟ್ ಮೆಹ್ಸಾನಾದಲ್ಲಿ ಭಾಷಣ ಮಾಡುತ್ತಿದ್ದರು. ಈ ವೇಳೆ ಗೂಳಿಯೊಂದು ಸಭೆಯ ಮಧ್ಯೆ ನುಗ್ಗಿ,ಕೋಲಾಹಲ ಸೃಷ್ಟಿಸಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅಲ್ಲದೇ ಈ ಬಗ್ಗೆ ಬಿಜೆಪಿಗೆ ಹಿಡಿಶಾಪ ಹಾಕಿರುವ ಅಶೋಕ್ ಗೆಹ್ಲೋಟ್, ನಾನು ಚಿಕ್ಕಂದಿನಿಂದಲೂ ಕಾಂಗ್ರೆಸ್ ಸಭೆ ನಡೆದಾಗಲೆಲ್ಲ ಈ ಬಿಜೆಪಿಗರು ಗೂಳಿ, ಹಸುಗಳನ್ನು ಬಿಡುವುದನ್ನು ನೋಡುತ್ತಿದ್ದೇನೆ ಎಂದಿದ್ದಾರೆ.

ನಮ್ಮ ಸಭೆಗೆ ಅಡ್ಡಿಪಡಿಸಲು ಬಿಜೆಪಿಯವರು ಈ ಗೂಳಿಯನ್ನು ಕಳುಹಿಸಿದ್ದಾರೆ. ಚುನಾವಣೆಗೂ ಮುನ್ನ ಬಿಜೆಪಿ ನಮ್ಮ ಸಭೆಗಳಿಗೆ ಅಡ್ಡಿಪಡಿಸಲು ಇಂತಹ ಇನ್ನಷ್ಟು ತಂತ್ರಗಳನ್ನು ಅನುಸರಿಸಲಿದೆ. ಗೂಳಿ ಸಭೆಗೆ ಪ್ರವೇಶಿಸಿದಾಗ ಗೊಂದಲ ಉಂಟಾಯಿತು.  ಈ ವೇಳೆ ಗೂಳಿ ತಾನಾಗಿಯೇ ಹೊರಹೋಗುತ್ತದೆ, ಎಲ್ಲರೂ ಶಾಂತವಾಗಿರಿ ಎಂದು ಜನರಿಗೆ ಧೈರ್ಯ ತುಂಬಿದರು.

ಇದನ್ನೂ ಓದಿ: ಸೈಲೆಂಟ್ ಸುನಿಲ್ ಗೆ ಬಿಜೆಪಿ ಸೇರ್ಪಡೆಯಾಗಲು ಅವಕಾಶವಿಲ್ಲ -ನಳೀನ್ ಕುಮಾರ್ ಕಟೀಲ್

ಚುನಾವಣಾ ರ್ಯಾಲಿ ವೇಳೆ ನುಗ್ಗಿದ ಗೂಳಿ ಅತ್ತಿಂದಿತ್ತ ಬೇಕಾಬಿಟ್ಟಿ ಓಡಾಡಿತ್ತು. ಈ ವೇಳೆ ಗೂಳಿಯಿಂದ ತಪ್ಪಿಸಲು ಜನರು ಕೂಡ ಎಲ್ಲೆಂದರಲ್ಲಿ ಓಡಾಡುತ್ತಿದ್ದರು. ಇಷ್ಟೆಲ್ಲ ಗದ್ದಲದ ನಡುವೆ  ಅಶೋಕ್ ಗೆಹ್ಲೋಟ್ ವೇದಿಕೆಯಲ್ಲೇ ನಿಂತು ಶಾಂತವಾಗಿರುವಂತೆ ಜನರಿಗೆ ಸಲಹೆ ನೀಡುತ್ತಿದ್ದರು. ಅಲ್ಲದೇ ಈ ಸಮಾವೇಶಕ್ಕೆ ಗೂಳಿ ಬಂದಿರುವುದು ಬಿಜೆಪಿಯ ಷಡ್ಯಂತ್ರ ಎಂದು ವಾಗ್ದಾಳಿ ನಡೆಸಿದ್ದಾರೆ.

suddiyaana