ನಾಡಹಬ್ಬ ದಸರಾ ಮೇಲೆ ಬರದ ಕರಿ ನೆರಳು -ಖಾಸಗಿ ಪ್ರಾಯೋಜಕತ್ವಕ್ಕೆ ಮೊರೆ ಹೋದ ಸರ್ಕಾರ!

ನಾಡಹಬ್ಬ ದಸರಾ ಮೇಲೆ ಬರದ ಕರಿ ನೆರಳು -ಖಾಸಗಿ ಪ್ರಾಯೋಜಕತ್ವಕ್ಕೆ ಮೊರೆ ಹೋದ ಸರ್ಕಾರ!

ಮೈಸೂರು: ರಾಜ್ಯದಲ್ಲಿ ಈ ಬಾರಿ ಮಳೆಯ ಕೊರತೆ ಉಂಟಾಗಿದ್ದು, ಬರದ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆ ವಿಶ್ವ ವಿಖ್ಯಾತ ಮೈಸೂರು ದಸಾರವನ್ನು ಸರಳವಾಗಿ ಆಚರಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಆದರೆ, ಬರದ ನೆಪದಲ್ಲಿ ಪ್ರವಾಸೋದ್ಯಮಕ್ಕೆ ಹೊಡೆತ ಬೀಳಬಾರದೆಂಬ ಉದ್ದೇಶದಿಂದ ಜಿಲ್ಲಾಡಳಿತ ಪ್ರಾಯೋಜಕತ್ವದಲ್ಲಿ ಕೆಲವೊಂದು ಕಾರ್ಯಕ್ರಮಗಳನ್ನು ನಡೆಸಲು ತೀರ್ಮಾನಿಸಿದೆ. ಅದರಂತೆ ಕೆಲವು ಖಾಸಗಿ ಕಂಪನಿಗಳು, ಸಂಸ್ಥೆಗಳ ಜತೆ ಮಾತುಕತೆ ನಡೆಸುತ್ತಿದೆ.

ಕರ್ನಾಟಕದಲ್ಲಿ ಮಳೆ ಕೊರತೆಯಿಂದಾಗಿ ಬರ ಎದುರಾಗಿದೆ. ಹೀಗಾಗಿ ರಾಜ್ಯ ಸರ್ಕಾರ ಮೈಸೂರು ದಸರಾವನ್ನು ಸಾಂಪ್ರದಾಯಿಕವಾಗಿ ಆಚರಿಸಲು ಮುಂದಾಗಿದೆ. ಹೀಗಾಗಿ ರಾಜ್ಯ ಸರಕಾರದಿಂದ ಎಷ್ಟು ಅನುದಾನ ಸಿಗಬಹುದೆಂಬ ನಿಖರ ಮಾಹಿತಿ ಲಭ್ಯವಿಲ್ಲದ ಕಾರಣ ಜಿಲ್ಲಾಡಳಿತ ಪ್ರಾಯೋಜಕತ್ವದ ಮೊರೆ ಹೋಗುವಂತಾಗಿದೆ. ಈಗಾಗಲೇ ಕಡಿಮೆ ಅಂದಾಜು ವೆಚ್ಚದ ಕಾರ್ಯಕ್ರಮ ರೂಪಿಸುತ್ತಿರುವ ಜಿಲ್ಲಾಡಳಿತ ಅನಗತ್ಯ ದುಂದು ವೆಚ್ಚಕ್ಕೆ ಕಡಿವಾಣ ಹಾಕಲು ಮುಂದಾಗಿದೆ.

ಇದನ್ನೂ ಓದಿ:ದಸರಾಗೆ ಸಜ್ಜಾಗುತ್ತಿದೆ ಮೈಸೂರು –  ಅರಮನೆ ಸುತ್ತಮುತ್ತ ಡ್ರೋನ್ ಕ್ಯಾಮರಾ ಬಳಕೆಗೆ ನಿರ್ಬಂಧ

ಮೈಸೂರು ದಸರಾ ವೇಳೆ ಒಂಬತ್ತು ದಿನಗಳ ಕಾಲ ಅರಮನೆ ಮುಂಭಾಗ ಸಾಂಸ್ಕೃತಿ ಕಾರ್ಯಕ್ರಮಗಳು ನಡೆಸಲಾಗುತ್ತದೆ. ಸಾಂಸ್ಕೃತಿಕ ಕಾರ್ಯಕ್ರಮ, ದೀಪಾಲಂಕಾರ ವ್ಯವಸ್ಥೆ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳಿಗೆ ಪ್ರತಿ ವರ್ಷ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ಸೈಕಲ್‌ ಪ್ಯೂರ್‌ ಅಗರಬತ್ತಿ, ಟಿವಿಎಸ್‌ ಕಂಪನಿ ಸೇರಿದಂತೆ ಕೆಲವು ಕಂಪನಿಗಳು ಪ್ರಾಯೋಜಕತ್ವ ಕೊಡುತ್ತಿವೆ. ಈ ಬಾರಿ ಈ ಕಂಪನಿಗಳಲ್ಲದೆ ಇತರ ಐಟಿ-ಬಿಟಿ ಸೇರಿದಂತೆ ಪ್ರಮುಖ ಸಂಸ್ಥೆಗಳ ಪ್ರಾಯೋಜಕತ್ವ ಪಡೆಯಲು ಅಧಿಕಾರಿಗಳು ಮುಂದಾಗಿದ್ದು, ಪ್ರಸ್ತಾವನೆ ಸಲ್ಲಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳುತ್ತಿವೆ.

ಸರಕಾರದಿಂದ ಎಷ್ಟು ಅನುದಾನ ಸಿಗಬಹುದು ಎಂಬ ನಿಖರತೆ ಇನ್ನೂ ಸಿಗದ ಕಾರಣ ರೈತ ದಸರಾವನ್ನು ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನಾ ಇಲಾಖೆ ಹಾಗೂ ಮೀನುಗಾರಿಕೆ ಇಲಾಖೆ ಸೇರಿಕೊಂಡು ಹಣಕಾಸು ವೆಚ್ಚವನ್ನು ನಿರ್ವಹಿಸುವಂತೆ ತಿಳಿಸಲಾಗಿದೆ. ವಸ್ತು ಪ್ರದರ್ಶನದ ಖರ್ಚಿನ ಹೊಣೆಯನ್ನು ತೋಟಗಾರಿಕೆ ಇಲಾಖೆಯಿಂದಲೇ ನಿರ್ವಹಣೆ ಮಾಡುವಂತೆ ಹೇಳಲಾಗಿದೆ. ಅದೇ ರೀತಿ ದಸರಾ ಚಲನಚಿತ್ರೋತ್ಸವ, ಆಹಾರ ಮೇಳ, ಫಲಪುಷ್ಪ ಪ್ರದರ್ಶನ, ಕವಿಗೋಷ್ಠಿ, ಪುಸ್ತಕಮೇಳ ಮೊದಲಾದ ಕಾರ್ಯಕ್ರಮಗಳನ್ನು ಇಲಾಖೆಯ ಆಂತರಿಕ ಸಂಪನ್ಮೂಲದಿಂದಲೇ ಮಾಡುವಂತೆ ಹೇಳಲಾಗಿದೆ. ದಸರಾ ಕ್ರೀಡಾಕೂಟಕ್ಕೆ ರಾಜ್ಯ ಕ್ರೀಡಾ ಪ್ರಾಧಿಕಾರ ಜವಾಬ್ದಾರಿ ಹೊರುವಂತೆ ಮನವಿ ಮಾಡಲಾಗಿದೆ ಮೂಲಗಳು ಹೇಳುತ್ತಿವೆ.

Shwetha M