ವಿಪಕ್ಷಗಳ ಜಾತಿ ಗಣತಿ ಅಸ್ತ್ರಕ್ಕೆ ಬಜೆಟ್ ಮೂಲಕ ಕೌಂಟರ್ – ಲೋಕಸಭೆ ಎಲೆಕ್ಷನ್‌ಗೆ ಸಿಕ್ಕಿತಾ ಬಿಗ್ ಟ್ವಿಸ್ಟ್?

ವಿಪಕ್ಷಗಳ ಜಾತಿ ಗಣತಿ ಅಸ್ತ್ರಕ್ಕೆ ಬಜೆಟ್ ಮೂಲಕ ಕೌಂಟರ್ – ಲೋಕಸಭೆ ಎಲೆಕ್ಷನ್‌ಗೆ ಸಿಕ್ಕಿತಾ ಬಿಗ್ ಟ್ವಿಸ್ಟ್?

ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್​ನಿಂದ ಪ್ರಧಾನಿ ಮೋದಿ ಈಗ ಯಾವ ರೀತಿ ಯೋಚನೆ ಮಾಡ್ತಾ ಇದ್ದಾರೆ ಅನ್ನೋ ಬಗ್ಗೆ ಒಂದಂತೂ ಕ್ಲ್ಯಾರಿಟಿ ಸಿಕ್ಕಿದೆ. 2024ರ ಲೋಕಸಭೆಯನ್ನ ಗೆದ್ದು ಮತ್ತೊಮ್ಮೆ ಅಧಿಕಾರಕ್ಕೇರೋದು ಖಚಿತ ಅನ್ನೋ ನಿರ್ಧಾರಕ್ಕೆ ಮೋದಿ ಈಗಾಗ್ಲೇ ಬಂದಿದ್ದಾರೆ. ಈ ಬಾರಿ ಚುನಾವಣೆ ಗೆಲ್ಲೋಕೆ ಭಾರಿ ಘೋಷಣೆಗಳನ್ನ ಮಾಡಿ, ಜನಪ್ರೀಯ ಬಜೆಟ್ ಮಂಡಿಸಬೇಕಾದ ಅವಶ್ಯಕತೆಯೇ ಇಲ್ಲ ಅನ್ನೋದು ಮೋದಿಗೆ ಅರ್ಥವಾಗಿಬಿಟ್ಟಿದೆ. ಯಾಕಂದ್ರೆ ಬಜೆಟ್​​ನಲ್ಲಿ ಹೆಡ್​​ಲೈನ್ ನೀಡುವಂಥಾ ಘೋಷಣೆಗಳನ್ನೇನೂ ನಿರ್ಮಲಾ ಸೀತಾರಾಮನ್ ಮಾಡಿಲ್ಲ. ಚುನಾವಣೆಗೂ ಮುನ್ನ ಮೋದಿ ಸರ್ಕಾರದ ಗಿಫ್ಟ್​​ ಎಂಬಂತಾ ಯಾವುದೇ ಹೊಸ ಯೋಜನೆಗಳನ್ನ ಘೋಷಿಸಿಲ್ಲ. ಆದ್ರೆ, ಬಜೆಟ್ ಮಂಡನೆ ವೇಳೆ ಜನರ ಗಮನ ಸೆಳೆಯುವಂಥಾ ಕೆಲ ಸ್ಟೇಟ್​ಮೆಂಟ್​​ಗಳನ್ನ ನಿರ್ಮಲಾ ಸೀತಾರಾಮನ್ ಕೊಟ್ಟಿದ್ದಾರೆ. ಜಾತಿ ರಾಜಕೀಯಕ್ಕೆ ಹೊಸ ಡೆಫಿನಿಶನ್ ಕೊಡೋ ಪ್ರಯತ್ನವನ್ನ ಮೋದಿ ಮಾಡಿದ್ದಾರೆ. ಹೊಸ ಟಾರ್ಗೆಟ್​​ನ್ನ ಇಟ್ಟುಕೊಂಡು ಒಂದಷ್ಟು ಪ್ಲ್ಯಾನ್​​ಗಳನ್ನ ಕೂಡ ರಿವೀಲ್ ಮಾಡಿದ್ದಾರೆ.

ಇದನ್ನೂ ಓದಿ: ತೆರಿಗೆ ಮಿತಿ ಯಥಾಸ್ಥಿತಿ, ಅಭಿವೃದ್ಧಿಯೇ ಮಂತ್ರ! – ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್‌ನಲ್ಲಿ ಯಾರಿಗುಂಟು ಲಾಭ?

ಪ್ರತಿ ಬಾರಿಯೂ ಮೋದಿ ಸರ್ಕಾರ ಬಜೆಟ್ ಮಂಡನೆ ವೇಳೆ ಹಣಕಾಸು ಸಚಿವರು ಒಂದಷ್ಟು ಅಟ್ರಾಕ್ಟಿವ್​​ ಘೋಷಣೆಗಳನ್ನ ಮಾಡ್ತಾರೆ. ಹೇಗೆ ಈ ಬಾರಿಯ ಲೋಕಸಭೆ ಚುನಾವಣೆಗಾಗಿ ಬಿಜೆಪಿ ಅಬ್​​ಕೀ ಬಾರ್ ಚಾರ್​ ಸೋ ಪಾರ್ ಅನ್ನೋ ಘೋಷವಾಕ್ಯವನ್ನ ಇಟ್ಟುಕೊಂಡಿದ್ಯೋ ಅಂಥದ್ದೇ ಒಂದಷ್ಟು ಅಟ್ರಾಕ್ಟಿವ್​​ ಸ್ಟೇಟ್​​ಮೆಂಟ್​ಗಳನ್ನ ಬಜೆಟ್​​ ವೆಳೆಯೂ ನೀಡಿದ್ದಾರೆ. ದೇಶದಲ್ಲಿ ಒಟ್ಟು 4 ಪ್ರಮುಖ ಜಾತಿಗಳಿವೆ. 4 ಬಡವರು, ಮಹಿಳೆಯರು, ಯುವಕರು ಮತ್ತು ರೈತರು. ಇವು ದೇಶದ ಪ್ರಮುಖ ಜಾತಿಗಳಾಗಿದ್ದು, ಈ ಜಾತಿಗೆ ಸೇರಿದ ಜನರ ಕಲ್ಯಾಣವೇ ನಮ್ಮ ಗುರಿ ಅಂತಾ ನಿರ್ಮಲಾ ಸೀತಾರಾಮನ್ ಅವರು ಹೇಳಿದ್ದಾರೆ. ಈ ಮೂಲಕ ಜಾತಿ ರಾಜಕೀಯವನ್ನ ಹೊಸ ದಿಕ್ಕಿಗೆ ಎಳೆಯೋ ಪ್ರಯತ್ನಕ್ಕೆ ಮೋದಿ ಕೈ ಹಾಕಿದ್ದಾರೆ. ಕಳೆದ ಕೆಲ ತಿಂಗಳುಗಳಿಂದ ದೇಶಾದ್ಯಂತ ಜಾತಿ ಗಣತಿ ಬಗ್ಗೆ ಭಾರಿ ಚರ್ಚೆಯಾಗ್ತಾ ಇದೆ. ಅದ್ರಲ್ಲೂ ವಿಪಕ್ಷ ನಾಯಕರಂತೂ ದೇಶದಲ್ಲಿ ಮತ್ತೊಮ್ಮೆ ಜಾತಿ ಗಣತಿ ಮಾಡಬೇಕು ಅಂತಾ ಆಗ್ರಹಿಸ್ತಿವೆ. ಕಾಂಗ್ರೆಸ್​ ಅಧಿಕಾರದಲ್ಲಿರೋ ರಾಜ್ಯಗಳಲ್ಲಿ ಮುಖ್ಯಮಂತ್ರಿ ಜಾತಿ ಗಣತಿ ನಡೆಸೋದಾಗಿ ಹೇಳ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಕೂಡ ಜಾತಿ ಗಣತಿ ಪರವಾಗಿ ಮಾತನಾಡಿದ್ದಾರೆ. ಲೋಕಸಭೆ ಚುನಾವಣೆ ಹೊತ್ತಲ್ಲೇ ಜಾತಿಗಣತಿ ವಿಚಾರವನ್ನ ಮೋದಿ ಸರ್ಕಾರದ ವಿರುದ್ಧ ವಿಪಕ್ಷಗಳು ಅಸ್ತ್ರವನ್ನಾಗಿಸಿಕೊಂಡಿವೆ. ಆದ್ರೆ ವಿಪಕ್ಷಗಳ ಜಾತಿ ಅಸ್ತ್ರಕ್ಕೆ ಕೌಂಟರ್​ ಕೊಡೋಕೆ ಜಾತಿ ರಾಜಕಾರಣಕ್ಕೇ ಹೊಸ ಡೆಫಿನಿಶನ್ ನೀಡೋ ಪ್ರಯತ್ನವನ್ನ ಮೋದಿ ಮಾಡ್ತಾ ಇದ್ದಾರೆ. ಇದೇ ಕಾರಣಕ್ಕಾಗಿ ಬಜೆಟ್​​ನಲ್ಲಿ ಬಡವರು, ಮಹಿಳೆಯರು, ಯುವಕರು, ರೈತರು ಈ ನಾಲ್ಕು ಜಾತಿಗಳ ಶ್ರೇಯೋಭಿವೃದ್ಧಿಯೇ ನಮ್ಮ ಗುರಿ ಅಂತಾ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಇಲ್ಲಿ ನಿರ್ದಿಷ್ಟವಾಗಿ ಜಾತಿಯನ್ನ ಪ್ರಸ್ತಾಪಿಸದೆ ನಾಲ್ಕು ವರ್ಗಗಳ ಜನರನ್ನ ಎನ್​ಕ್ಯಾಶ್ ಮಾಡೋಕೆ ಮೋದಿ ಸರ್ಕಾರ ಮುಂದಾಗಿದೆ. ಬಡವರು ಎಂದ ಕೂಡಲೇ ಅಲ್ಲಿ ಹಿಂದುಳಿದ ಸಮುದಾಯಗಳ ಜನರು ಬಂದ್ರು. ಇನ್ನು ಮಹಿಳೆಯರು ಇತ್ತೀಚಿನ ವರ್ಷಗಳಲ್ಲಿ ಬಿಜೆಪಿಯ ದೊಡ್ಡ ಸ್ಟ್ರೆಂತ್ ಆಗಿದ್ದಾರೆ. ಮೋದಿಗೆ, ಬಿಜೆಪಿಗೆ ಮತ ನೀಡೋ ಮಹಿಳೆಯರ ಸಂಖ್ಯೆ ದೇಶದಲ್ಲಿ ಹೆಚ್ಚಾಗ್ತಾನೆ ಇದೆ. ಇನ್ನು ಭಾರತದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಯುವಕರೇ ಇದ್ದು, ಹೀಗಾಗಿ ಉದ್ಯೋಗ ಸೃಷ್ಟಿ ವಿಚಾರದಲ್ಲಿ ಮೋದಿ ಸರ್ಕಾರ ಮತ್ತೊಮ್ಮೆ ಯುವಕರ ವೋಟ್​​ಗಳ ಮೇಲೆ ಕಣ್ಣಿಟ್ಟಿದೆ. ಕಳೆದ 9 ವರ್ಷದಿಂದಲೂ ಉದ್ಯೋಗ ಸೃಷ್ಟಿಯೇ ಮೋದಿ ಸರ್ಕಾರಕ್ಕೆ ಎದುರಾಗಿರೋ ಅತೀ ದೊಡ್ಡ ಸವಾಲುಗಳಲ್ಲಿ ಒಂದು. ದೇಶದಲ್ಲಿ ಸಾಕಷ್ಟು ನಿರೋದ್ಯೋಗ ಸಮಸ್ಯೆ ಇದ್ದು, ಹೀಗಾಗಿ ನಿರ್ಮಲಾ ಸೀತಾರಾಮನ್​ ಡಿಫೈನ್ ಮಾಡಿರೋ ನಾಲ್ಕು ಜಾತಿಗಳ ಪೈಕಿ ಯುವರನ್ನ ಕೂಡ ಸೇರಿಸಿಕೊಂಡಿದ್ದಾರೆ. ಇನ್ನು ರೈತರನ್ನ ಕೂಡ ಮೋದಿ ತಮ್ಮ ಸ್ಪೆಷಲ್ ಜಾತಿ ಲಿಸ್ಟ್​ಗೆ ಸೇರಿಸಿಕೊಂಡಿದ್ದು, ಈಗಾಗಲೇ 4 ಕೋಟಿ ರೈತರಿಗೆ ಪಿಎಂ ಫಸಲ್ ಬಿಮಾ ಬೆಳೆ ವಿಮೆ ನೀಡಲಾಗಿದೆ. 11.8 ಕೋಟಿ ರೈತರಿಗೆ ಪಿಎಂ ಕಿಸಾನ್ ಯೋಜನೆ ಮೂಲಕ ಹಣಕಾಸಿನ ನೆರವು ನೀಡಿರೋದಾಗಿ ಬಜೆಟ್​​ ವೇಳೆ ನಿರ್ಮಲಾ ಸೀತಾರಾಮನ್ ಮಾಹಿತಿ ನೀಡಿದ್ದಾರೆ. ಅಂತೂ ಈ ಹೊಸ ಜಾತಿ ಪಟ್ಟಿ ಮೂಲಕ ಒಂದೇ ಕಲ್ಲಿನಲ್ಲಿ ಎರಡು ಮಾವಿನ ಹಣ್ಣು ಉದುರಿಸೋಕೆ ಮೋದಿ ಪ್ಲ್ಯಾನ್ ಮಾಡಿದ್ದಾರೆ. ಒಂದು ಬಡವರು, ಮಹಿಳೆಯರು, ಯುವಕರು ಮತ್ತು ರೈತರ ಮನಸ್ಸಿನ ಜೊತೆಗೆ ಮತವನ್ನ ಬುಟ್ಟಿಗೆ ಹಾಕೊಳ್ಳೋ ಯತ್ನ. ಮತ್ತೊಂದು ವಿಪಕ್ಷಗಳ ಜಾತಿ ಗಣತಿ ಅಸ್ತ್ರಕ್ಕೆ ಕೌಂಟರ್​ ಕೊಡೋದು ಜಾತಿ ವಿಚಾರದಲ್ಲಿ ಚುನಾವಣೆಯಲ್ಲಿ ಹೊಡೆತ ಬೀಳದಂತೆ ನೋಡಿಕೊಳ್ಳೋದು. ಹೀಗಾಗಿ ಜಾತಿ ಅನ್ನೋ ಪದಕ್ಕೆ ಮೋದಿ ಹೊಸ ಅರ್ಥ ಕಲ್ಪಿಸೋ ಪ್ರಯತ್ನ ಮಾಡ್ತಾ ಇದ್ದಾರೆ.

ಇನ್ನು ಈ ಮಧ್ಯಂತರ ಬಜೆಟ್​​ನಲ್ಲಿ ಕಳೆದ 9 ವರ್ಷಗಳಲ್ಲಿ ಮೋದಿ ಸರ್ಕಾರದ ಸಾಧನೆ ಏನು ಅನ್ನೋದನ್ನೇ ನಿರ್ಮಲಾ ಸೀತಾರಾಮನ್​ ಹೆಚ್ಚು ಹೈಲೈಟ್ ಮಾಡಿದ್ರು. 10 ಲಕ್ಷ ಮಹಿಳೆಯರು ಈಗಾಗಲೇ ಲಕ್ಷಪತಿ ದೀದಿಗಳಾಗಿದ್ದಾರೆ. 10 ವರ್ಷಗಳಲ್ಲಿ ಮಹಿಳೆಯರಲ್ಲಿ ಉನ್ನತ ಶಿಕ್ಷಣ ಪ್ರಮಾಣ ಶೇ.28ರಷ್ಟು ಹೆಚ್ಚಳವಾಗಿದೆ.  ದೇಶದ ಜನರ ಸರಾಸರಿ ಆದಾಯ ಶೇ.50ರಷ್ಟು ಹೆಚ್ಚಳವಾಗಿದೆ. ಈ ರೀತಿಯ ಹಲವು ಅಂಶಗಳನ್ನ ನಿರ್ಮಲಾ ಸೀತಾರಾಮನ್ ಪ್ರಸ್ತಾಪಿಸಿದ್ರು. ಈ ಬಾರಿ ಜನಪ್ರೀಯ ಬಜೆಟ್ ಕೊಡದಿದ್ರೂ, ಪ್ರಧಾನಿ ಮೋದಿ ಮತ್ತು ಸರ್ಕಾರದ ಜನಪ್ರೀಯತೆಯನ್ನ ಇನ್ನಷ್ಟು ಹೆಚ್ಚಿಸೋಕೆ ಪ್ರಯತ್ನ ಪಟ್ರು. ಯಾಕೆ ಈ ಮಾತನ್ನ ಹೇಳ್ತಾ ಇದ್ದೀನಿ ಅಂದ್ರೆ, ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ಒಟ್ಟು 42 ಬಾರಿ ಮೋದಿ ಹೆಸರನ್ನ ಉಲ್ಲೇಖಿಸಿದ್ರು. 42 ಬಾರಿ ಟ್ಯಾಕ್ಸ್​ ಅನ್ನೋ ಪದವನ್ನ ಹೇಳಿದ್ರು. 35 ಬಾರಿ ಪಾಲಿಸಿ, 24 ಬಾರಿ ಭಾರತ್ ಮತ್ತು 14 ಬಾರಿ ಅಭಿವೃದ್ಧಿ ಪದವನ್ನ ತಮ್ಮ ಒಂದು ಗಂಟೆ ಸಮಯದ ಮಂಡನೆಯಲ್ಲಿ ಪ್ರಸ್ತಾಪಿಸಿದ್ರು. ಆದ್ರೆ ಯುವಕರು ಮತ್ತು ಉದ್ಯೋಗ ಪದಗಳನ್ನ ಅಷ್ಟಾಗಿ ಹೈಲೈಟ್ ಮಾಡಿಲ್ಲ. ನಿಮಗೆ ಗೊತ್ತಿರಲಿ, ಸದ್ಯ ಭಾರತದಲ್ಲಿ ಯುವಕರ ನಿರುದ್ಯೋಗದ ಪ್ರಮಾಣ 24%ನಷ್ಟಿದೆ. ಆಂದ್ರೆ ಬಾಂಗ್ಲಾದೇಶಕ್ಕಿಂತಲೂ ಹೆಚ್ಚು. ಬಾಂಗ್ಲಾದಲ್ಲಿ ಯುವಕರ ನಿರುದ್ಯೋಗ ಪ್ರಮಾಣ 12%ನಷ್ಟಿರೋದು. ಆದ್ರೆ ಬಜೆಟ್​​ನಲ್ಲಿ ಉದ್ಯೋಗ ಕಲ್ಪಿಸೋ ವಿಚಾರವನ್ನ ಯಾವುದೇ ಪ್ರಮುಖ ಘೋಷಣೆಗಳನ್ನ ಮಾಡಿಲ್ಲ ಅಂತಾ ವಿಪಕ್ಷಗಳು ಆರೋಪಿಸ್ತಿವೆ.

ಇವೆಲ್ಲದ್ರ ಮಧ್ಯೆಯೇ ಬಜೆಟ್ ಮಂಡನೆ ಆರಂಭದಲ್ಲೇ ನಿರ್ಮಲಾ ಸೀತಾರಾಮನ್ ಇನ್ನೊಂದು ಪ್ರಮುಖ ಸ್ಲೋಗನ್​​ನನ್ನ ಕೂಡ ಹೇಳಿದರು. ವಿಕ್ಸಿತ್ ಭಾರತ್ ಅನ್ನೋದಾಗಿ. ಅಂದ್ರೆ ವಿಕಾಸ ಭಾರತ. 2047ರ ವೇಳೆಗೆ ವಿಕಸಿತ ಭಾರತದ ನಿರ್ಮಾಣವಾಗಲಿದೆ. ಭಾರತ ಅಭಿವೃದ್ಧಿ ಹೊಂದಿದ ದೇಶವಾಗಲಿದೆ ಅಂತಾ ಅರ್ಥ. 2019ರಲ್ಲಿ ಮೋದಿ ಸರ್ಕಾರ ವಿಕಸಿತ ಭಾರತಕ್ಕೆ 2030ರ ಟಾರ್ಗೆಟ್ ಇಟ್ಕೊಂಡಿದ್ರು. ಆದ್ರೀಗ ಇದು 2047ಕ್ಕೆ ಮುಂದೂಡಿಕೆಯಾಗಿದೆ. ಆದ್ರೆ ವಿಕಸಿತ ಭಾರತದ ರೋಡ್​ಮ್ಯಾಪ್​ ಏನು ಅನ್ನೋದನ್ನ ಬಜೆಟ್​​​ನಲ್ಲಿ ಮೋದಿ ಸರ್ಕಾರ ಪ್ರಸ್ತಾಪಿಸಿಲ್ಲ. ಈ ಬಾರಿಯ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದ್ರೆ ಮುಂದಿನ ಜುಲೈನಲ್ಲಿ ನಡೆಯೋ ಪೂರ್ಣ ಪ್ರಮಾಣದ ಬಜೆಟ್​​ನಲ್ಲಿ ವಿಕಸಿತ ಭಾರತಕ್ಕೆ ರೋಡ್​​ಮ್ಯಾಪ್ ಸಿದ್ಧಪಡಿಸೋ ಸಾಧ್ಯತೆ ಇದೆ.

ಇಲ್ಲಿ ಇನ್ನೊಂದು ಇಂಪಾರ್ಟೆಂಟ್ ವಿಚಾರವನ್ನ ಹೇಳಲೇಬೇಕು. ಲೋಕಸಭೆ ಚುನಾವಣೆಗೂ ಮುನ್ನ ನಡೆದ ಈ ಮಧ್ಯಂತರ ಬಜೆಟ್​​ ಜನಪ್ರೀಯ ಬಜೆಟ್ ಅಂತೂ ಆಗಿರಲಿಲ್ಲ. ದೊಡ್ಡ ದೊಡ್ಡ ಘೋಷಣೆಗಳನ್ನಂತೂ ಮಾಡಿಲ್ಲ. ಅದಕ್ಕೆ ಕಾರಣ, ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಗೆದ್ದು ಮತ್ತೊಮ್ಮೆ ಅಧಿಕಾರಕ್ಕೇರೋದು ಗ್ಯಾರಂಟಿ ಅನ್ನೋದು ಈಗಾಗ್ಲೇ ಪ್ರಧಾನಿ ಮೋದಿಗೆ ಕನ್ಫರ್ಮ್ ಆಗಿದೆ. ಎಷ್ಟು ಸೀಟು ಬರಬಹುದು ಅನ್ನೋ ವಿಚಾರದಲ್ಲಿ ಮಾತ್ರ ಬಿಜೆಪಿಗರು ಈಗ ಲೆಕ್ಕಾಚಾರ ಹಾಕ್ತಿದ್ದಾರೆ. ಹೀಗಾಗಿ ಬಜೆಟ್​ ಮೂಲಕ ಚುನಾವಣೆ ಗೆಲ್ಲೋ ಪ್ರಯತ್ನ ಮಾಡಬೇಕಾದ ಅವಶ್ಯಕತೆಯೇ ಇಲ್ಲ ಅನ್ನೋದು ಈಗಿನ ಮೋದಿ ಸರ್ಕಾರಕ್ಕೆ ಅರ್ಥವಾಗಿದೆ. ಆದ್ರೆ 2019ರ ಲೋಕಸಭೆ ಚುನಾವಣೆಗೆ ಮುನ್ನ ನಡೆದ ಇದೇ ಮಧ್ಯಂತರ ಬಜೆಟ್​​ನಲ್ಲಿ ಪಿಯೂಶ್ ಗೋಯೆಲ್​ ಅವರು ಮಹತ್ವದ ಯೋಜನೆಗಳನ್ನ ಘೋಷಣೆ ಮಾಡಿದ್ರು. ಅದು ಭಾರಿ ಜನಪ್ರೀಯ ಬಜೆಟ್ ಅಂತಾನೆ ಕರೆಸಿಕೊಂಡಿತ್ತು. ಯಾಕಂದ್ರೆ ಆ ಬಜೆಟ್​ಗೂ ಮುನ್ನ ನಡೆದ ಮೂರು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋತಿತ್ತು. ಪ್ರಧಾನಿ ಮೋದಿಗೆ ಭಾರಿ ಹಿನ್ನಡೆಯಾಗಿತ್ತು. ಹೀಗಾಗಿ ಲೋಕಸಭೆ ಚುನಾವಣೆಗೂ ಮುನ್ನ ಜನಪ್ರೀಯ ಬಜೆಟ್ ಮಂಡನೆ ಅನಿವಾರ್ಯವಾಗಿತ್ತು. ಆದ್ರೆ, ಈ ಬಾರಿ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಮಧ್ಯಂತರ ಬಜೆಟ್​​ಗೂ ಮುನ್ನ ಪಂಚರಾಜ್ಯಗಳ ಪೈಕಿ ಮೂರು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೇರಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲೂ ಮೋದಿ ಗೆಲ್ಲೋದು ಆಲ್​ಮೋಸ್ಟ್​ ಖಾತರಿಯಾಗಿದೆ. ಹೀಗಾಗಿ ನಿರ್ಮಲಾ ಸೀತಾರಾಮನ್ ಜನಪ್ರೀಯ ಬಜೆಟ್​​ ಮಂಡನೆ ಮಾಡೋಕೆ ಹೋಗಿಲ್ಲ. ಬಜೆಟ್ ಮೂಲಕವೂ ವೋಟು ಜೇಬಿಗಿಳಿಸೋ ಅನಿವಾರ್ಯತೆಯಲ್ಲಿ ಈಗ ಬಿಜೆಪಿ ಇಲ್ಲ.

Sulekha