ಹೆಚ್​ ಡಿಡಿ, ಸಿದ್ದರಾಮಯ್ಯರನ್ನ ಕೊಂಡಾಡಿದ ಬಿಎಸ್​ವೈ – ಸಿಎಂ, ಸಭಾಧ್ಯಕ್ಷರಿಗೂ ಶಹಬ್ಬಾಸ್​ ಗಿರಿ!

ಹೆಚ್​ ಡಿಡಿ, ಸಿದ್ದರಾಮಯ್ಯರನ್ನ ಕೊಂಡಾಡಿದ ಬಿಎಸ್​ವೈ – ಸಿಎಂ, ಸಭಾಧ್ಯಕ್ಷರಿಗೂ ಶಹಬ್ಬಾಸ್​ ಗಿರಿ!

ವಿಧಾನಸಭಾ ಕಲಾಪದಲ್ಲಿ ಇವತ್ತು ತಮ್ಮ ವಿದಾಯದ ಭಾಷಣ ಮಾಡಿದ ಬಿ.ಎಸ್ ಯಡಿಯೂರಪ್ಪ ಹಲವು ಮಾಹಿತಿಗಳನ್ನ ಹಂಚಿಕೊಂಡಿದ್ದಾರೆ. ಹಿಂದಿನ ಹಲವು ವಿಚಾರಗಳನ್ನ ನೆನಪು ಮಾಡಿಕೊಂಡಿದ್ದಾರೆ. ತಮ್ಮ ರಾಜಕೀಯ ಹಾದಿಯ ಜೊತೆ ಹಲವು ನಾಯಕರನ್ನೂ ಕೂಡ ಹೊಗಳಿದ್ದಾರೆ.

ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಬಿಎಸ್​ವೈ ‘ನೀವು ಸದನವನ್ನ ನಡೆಸಿಕೊಂಡು ಬಂದ ರೀತಿ ಎಲ್ಲರೂ ಮೆಚ್ಚುವಂಥದ್ದು. ಆದ್ರೆ ಮುಂದಿನ ಅಧಿವೇಶನದಲ್ಲಿ ಸಭಾಧ್ಯಕ್ಷರ ಸ್ಥಾನದಲ್ಲಿ ಕುಳಿತುಕೊಳ್ಳದೆ ಮಂತ್ರಿಯಾಗಿ ಒಳ್ಳೊಳ್ಳೆ ಕೆಲಸಗಳನ್ನ ಮಾಡಬೇಕು ಎಂದು ಹಾರೈಸುತ್ತೇನೆ’ ಎಂದ್ರು. ಬಳಿಕ ಮಾತು ಮುಂದುವರಿಸಿ ಮಾತನಾಡಿದ ಬಿಎಸ್​ವೈ ಈ ಸದನಕ್ಕೆ ಹೆಚ್ಚು ಮಹಿಳೆಯರು ಆಯ್ಕೆಯಾಗಿ ಬರಬೇಕು. ಅದಕ್ಕೆ ಪುರುಷ ಸದಸ್ಯರು ಕೂಡ ಸಹಕಾರ ನೀಡಬೇಕು ಎಂದು ಇಂಗಿತ ವ್ಯಕ್ತಪಡಿಸಿದ್ರು.

ಇದನ್ನೂ ಓದಿ : ‘ಯಾರೂ ಜತೆಗಿರಲಿಲ್ಲ.. ನಾನೆಂದೂ ಹಿಂದುರುಗಿ ನೋಡಿಲ್ಲ’ – ವಿದಾಯದ ಭಾಷಣದಲ್ಲಿ ರಾಜಕೀಯ ಹಾದಿ ಬಿಚ್ಚಿಟ್ಟ ಬಿಎಸ್​ವೈ!

ಜೆಡಿಎಸ್ ವರಿಷ್ಠ ಹೆಚ್. ಡಿ ದೇವೇಗೌಡರನ್ನ ಸದನದಲ್ಲಿ ಬಿಎಸ್​ವೈ ಕೊಂಡಾಡಿದ್ರು. ಇವತ್ತು ನಮ್ಮೆಲ್ಲರಿಗೂ ಆದರ್ಶ ಅಂದ್ರೆ ಅದು ಹೆಚ್​.ಡಿ ದೇವೇಗೌಡರು. ಇವತ್ತೂ ಕೂಡ ದೇಶದ, ರಾಜ್ಯದ ವಿಚಾರಗಳ ಬಗ್ಗೆ ಈ ವಯಸ್ಸಿನಲ್ಲೂ ಚಿಂತನೆ ಮಾಡ್ತಾರೆ, ಮಾರ್ಗದರ್ಶನ ನೀಡ್ತಾರೆ ಅಂತಾ ಹೇಳಿದ್ರೆ ಇದಕ್ಕಿಂತ ದೊಡ್ಡ ಆದರ್ಶ ನಮಗೆ ಬೇಕಾಗಿಲ್ಲ. ದೇವೇಗೌಡ್ರನ್ನ ನೋಡಿ ಕಲಿಯುವಂಥದ್ದು ಬಹಳಷ್ಟಿದೆ ಎಂದರು.

ಹಾಗೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯದ ಜನ ಮರೆಯೋಕೆ ಆಗದಂತಹ ಆಡಳಿತ ನೀಡಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಕ್ಕೆ ನೀಡಿರುವ ಸೌಲತ್ತುಗಳನ್ನ ಯಾರೂ ಜೀವನದಲ್ಲಿ ಮರೆಯೋಕೆ ಸಾಧ್ಯವಿಲ್ಲ. ಟೀಕೆಯನ್ನ ಯಾರು ಬೇಕಾದ್ರೂ ಮಾಡಬಹುದು. ಆದ್ರೆ ಪ್ರಾಮಾಣಿಕವಾಗಿ ಅವರು ಮಾಡಿರುವ ಕೆಲಸವನ್ನ ಜನ ಮೆಚ್ಚಿದ್ದಾರೆ. ಮುಂಬರುವ ದಿನಗಳಲ್ಲಿ ಇದರ ಫಲ ಸಿಗುತ್ತದೆ ಎಂದು ಹೇಳಿದ್ರು.

ಇದೇ ವೇಳೆ ಮಾತನಾಡಿದ ಬಿಎಸ್​ವೈ ವಿಪಕ್ಷ ನಾಯಕರು ಕೂಡ ಒಳ್ಳೊಳ್ಳೆ ಕೆಲಸ ಮಾಡಿದ್ದಾರೆ. ಅದ್ರಲ್ಲೂ ಸಿದ್ದರಾಮಯ್ಯನವರ ಕೆಲಸವನ್ನಂತೂ ಯಾವ ರೀತಿಯಲ್ಲಿ ಮೆಚ್ಚಬೇಕೋ ಗೊತ್ತಾಗ್ತಿಲ್ಲ. ಸದನದಲ್ಲಿ ಬಂದು ಇಲ್ಲಿ ನಿಂತಾಗ ಅನೇಕ ಸಂಗತಿಗಳ ಬಗ್ಗೆ ಅಧ್ಯಯನ ಮಾಡಿ ಮಾರ್ಗದರ್ಶನ ನೀಡುವ ರೀತಿಯನ್ನ ಯಾರೂ ಅಲ್ಲಗಳೆಯೋಕೆ ಸಾಧ್ಯವಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ರು.

ಈ ವೇಳೆ ಯಡಿಯೂರಪ್ಪನವರ ಬಗ್ಗೆ ಮಾತನಾಡಿದ ಸ್ಪೀಕರ್ ಕಾಗೇರಿ ‘1983 ರಿಂದ ಸದನದಲ್ಲಿ ಸಕ್ರಿಯವಾಗಿ ಹೇಗೆ ಕೆಲಸ ಮಾಡಿದ್ದಾರೆ ಅನ್ನೋದನ್ನ ನಾವೆಲ್ಲಾ ನೋಡಿದ್ದೇವೆ. ನಾನು 94ರಲ್ಲಿ ಶಾಸಕನಾಗಿ ಆಯ್ಕೆಯಾಗಿ ಬಂದಾಗ ಪ್ರತಿಪಕ್ಷದ ನಾಯಕರಾಗಿದ್ದರು. 94ನೇ ಇಸವಿಯಿಂದ ನಾನು ನೋಡಿದಂತೆ ಈ ಸದನದ ಗೌರವ ಹೆಚ್ಚಿಸೋದಕ್ಕೆ ಅನೇಕರು ಕಾರಣೀಕರ್ತರಾಗಿದ್ದಾರೆ. ಆದ್ರೆ ಯಡಿಯೂರಪ್ಪವನವರು ಈ ಘನದ ಗೌರವ ಹೆಚ್ಚಿಸೋದಕ್ಕೆ ಕೊಟ್ಟಿರುವ ಕೊಡುಗೆ ನಿರಂತರವಾಗಿ ಸದನದಲ್ಲಿ ಭಾಗಿಯಾಗೋದು. ಎಲ್ಲರೂ ಮಾತನಾಡುವುದನ್ನ ಕೇಳಿಸಿಕೊಳ್ಳೋದು. ಅದರ ಮೂಲಕ ಸರ್ಕಾರದಲ್ಲಿ ಯೋಜನೆಗಳನ್ನ ರೂಪಿಸುವುದು. ಪ್ರತಿಪಕ್ಷದಿಂದ ಆಡಳಿತ ಪಕ್ಷಕ್ಕೆ ಹೇಳುವುದು. ಹೀಗೆ ಹತ್ತಾರು ದೃಷ್ಟಿಕೋನಗಳಲ್ಲಿ ಮಾಡಿರುವ ಕೆಲಸ ಅವಿಸ್ಮರಣೀಯವಾಗಿರುವಂಥದ್ದು. ಪಕ್ಷ ಕಟ್ಟಿರುವುದು, ಜನರನ್ನ ಎಚ್ಚರಿಸಿರುವುದು. ಸರ್ಕಾರ ರಚನೆ ಮಾಡಿರುವುದು, ಸರ್ಕಾರವನ್ನ ನಡೆಸಿರೋದು ಸೇರಿದಂತೆ ಎಲ್ಲಾ ಅನುಭವದ ಮಾತುಗಳನ್ನ ನಮ್ಮ ಜೊತೆ ಹಂಚಿಕೊಂಡಿದ್ದಾರೆ. ಹೀಗಾಗಿ ಸದನದಲ್ಲಿ ಎಲ್ಲರೂ ಕರತಾಡನದ (ಚಪ್ಪಾಳೆ) ಮೂಲಕ ಅಭಿನಂದಿಸಬೇಕೆಂದು ಕೋರಿಕೊಂಡ್ರು.

 

suddiyaana