ಮಕ್ಕಳಿಗಾಗಿ ಬಿಎಸ್ ವೈ & ಹೆಬ್ಬಾಳ್ಕರ್ ಒಳ ಒಪ್ಪಂದ?

ಮಕ್ಕಳಿಗಾಗಿ ಬಿಎಸ್ ವೈ & ಹೆಬ್ಬಾಳ್ಕರ್ ಒಳ ಒಪ್ಪಂದ?

ರಾಜಕೀಯದಲ್ಲಿ ಯಾರೂ ಶತ್ರುಗಳಲ್ಲ ಯಾರೂ ಮಿತ್ರರಲ್ಲ ಅನ್ನೋ ಮಾತಿದೆ. ಅದ್ರಲ್ಲೂ ಚುನಾವಣೆ, ಗೆಲುವಿನ ಲೆಕ್ಕಾಚಾರ ಅಂತಾ ಬಂದಾಗ ಅದೆಂಥದ್ದೇ ವೈರತ್ವ ಮರೆತು ಸ್ನೇಹ ಮಾಡಿಕೊಳ್ತಾರೆ. ಅದಕ್ಕಿಂತ್ಲೂ ಅಚ್ಚರಿ ಅಂದ್ರೆ ಅಭ್ಯರ್ಥಿಯ ಗೆಲುವಿಗಾಗಿ ಒಳಒಪ್ಪಂದ ಮಾಡಿಕೊಳ್ಳೋದು. ಇದೀಗ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ಒಳಒಪ್ಪಂದ ನಡೆದಿದೆ ಎಂಬ ಸ್ಫೋಟಕ ಆರೋಪ ಕೇಳಿ ಬಂದಿದೆ. ಈ ಆರೋಪ ಮಾಡಿರೋದು ಬಿಜೆಪಿಯ ರೆಬೆಲ್ ಲೀಡರ್ಸ್ ಕೆ.ಎಸ್ ಈಶ್ವರಪ್ಪ ಮತ್ತು ಬಸನಗೌಡ ಪಾಟೀಲ್ ಯತ್ನಾಳ್. ಯಡಿಯೂರಪ್ಪ ಮತ್ತು ಪುತ್ರರ ವಿರುದ್ಧ ಸದಾ ಬುಸುಗುಡುವ ಯತ್ನಾಳ್ ಮತ್ತು ಪುತ್ರನಿಗೆ ಟಿಕೆಟ್ ಮಿಸ್ ಆಗಿದ್ದಕ್ಕೆ ಕೆರಳಿ ಕೆಂಡವಾಗಿರುವ ಈಶ್ವರಪ್ಪ ಇಂಥಾದ್ದೊಂದು ಗಂಭೀರ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: BJP ಸಂಸದ ಶ್ರೀನಿವಾಸ್ ಪ್ರಸಾದ್ ಸೋದರ ಸೇರಿ 30 ಮುಖಂಡರು ಕಾಂಗ್ರೆಸ್ ಸೇರ್ಪಡೆ

ಒಳ ಒಪ್ಪಂದ ರಾಜಕೀಯ! 

ಉಡುಪಿ ಜಿಲ್ಲೆ ಬೈಂದೂರಿನಲ್ಲಿ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಈಶ್ವರಪ್ಪ, ಯಡಿಯೂರಪ್ಪನವರು ಕೇಂದ್ರೀಯ ಮಂಡಳಿಯ ಸದಸ್ಯರಾಗಿದ್ದಾರೆ, ಒಬ್ಬ ಮಗ ಸಂಸದ, ಇನ್ನೊಬ್ಬ ಮಗ ಶಾಸಕ ಮತ್ತು ರಾಜ್ಯಾಧ್ಯಕ್ಷ, ಆದರೂ ಇವರ ಅಧಿಕಾರದ ಆಸೆ ಕಮ್ಮಿಯಾಗುತ್ತಿಲ್ಲ. ಹೊಂದಾಣಿಕೆ ರಾಜಕಾರಣ ಬಿಜೆಪಿಗೂ ತಗುಲಿಕೊಂಡಿದ್ದು ದುರಂತವೇ ಸರಿ. ಬಿಜೆಪಿ ಎನ್ನುವುದು ಒಬ್ಬರು ಕಟ್ಟಿದ ಪಕ್ಷವಲ್ಲ ಎಂದು ಕಿಡಿ ಕಾರಿದ್ದಾರೆ. ಹಾಗೇ ಕಳೆದ ಬಾರಿಯ ಚುನಾವಣೆಯಲ್ಲೂ ಹೊಂದಾಣಿಕೆ ರಾಜಕಾರಣ ಮಾಡಿಕೊಂಡರು. ಶಿಕಾರಿಪುರದಲ್ಲಿ ಡಮ್ಮಿ ಕ್ಯಾಂಡಿಡೇಟ್ ಅನ್ನು ಕಾಂಗ್ರೆಸ್ಸಿನಿಂದ ಹಾಕಿಸಿಕೊಂಡರು. ವರುಣಾದಲ್ಲಿ ಸಿದ್ದರಾಮಯ್ಯನವರಿಗೆ ಸೋಲಾಗದಂತೆ ನೋಡಿಕೊಂಡರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅದೇ ರಾಜಕೀಯ ಮಾಡುತ್ತಿದ್ದಾರೆ. ಆರು ತಿಂಗಳ ಹಿಂದೆಯೇ ಗೀತಾ ಶಿವರಾಜ್ ಕುಮಾರ್ ಅವರು ಅಭ್ಯರ್ಥಿ ಎಂದು ಹೇಳಿಕೊಂಡು ಬರುತ್ತಿದ್ದರು. ಆ ಮೂಲಕ, ತಮ್ಮ ಪುತ್ರ ರಾಘವೇಂದ್ರ ಸೋಲಬಾರದು ಎನ್ನುವುದು ಯಡಿಯೂರಪ್ಪನವರ ಉದ್ದೇಶ ಎಂದು ಈಶ್ವರಪ್ಪ ಆರೋಪಿಸಿದ್ದಾರೆ. ಹಾಗೇ ಬಿಜೆಪಿ ನಾಯಕ ಯತ್ನಾಳ್ ಅವರು ಯಡಿಯೂರಪ್ಪ ಬೆಳಗಾವಿಯಲ್ಲಿ ಒಳ ಒಪ್ಪಂದ ಮಾಡಿಕೊಂಡಿರಬಹುದು ಎನ್ನುವ ಶಂಕೆ ವ್ಯಕ್ತ ಪಡಿಸಿದ್ದಾರೆ. ರಾಜ್ಯದ ಬಿಜೆಪಿಯಲ್ಲಿ ಅಪ್ಪ ಮಕ್ಕಳು ಬಿಟ್ಟು, ಬೇರೆ ಯಾರೂ ಏನನ್ನೂ ಮಾಡಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬಾಗಲಕೋಟೆಯಲ್ಲಿ ಸ್ಪರ್ಧಿಸಲು ನನಗೂ ಕರೆಗಳು ಬಂದಿದ್ದವು, ಆದರೆ ಸ್ಥಳೀಯರಿಗೆ ಆದ್ಯತೆ ಸಿಗಬೇಕೆಂದು ನಾನು ಅದನ್ನು ಒಪ್ಪಲಿಲ್ಲ ಎಂದಿದ್ದಾರೆ.

ಇಷ್ಟಕ್ಕೇ ಸುಮ್ಮನಾಗದ ಯತ್ನಾಳ್, ಬೆಳಗಾವಿಯಲ್ಲಿ ಒಳ ಒಪ್ಪಂದದ ಶಂಕೆಯಿದೆ. ಸ್ಥಳೀಯ ನಾಯಕತ್ವ ಗಟ್ಟಿಯಿದ್ದಾಗ ಅಲ್ಲಿನ ಮುಖಂಡರಿಗೆ ಆದ್ಯತೆಯಿಂದ ಟಿಕೆಟ್ ನೀಡಬೇಕು. ಅಲ್ಲಿ ಜಗದೀಶ್ ಶೆಟ್ಟರ್ ಅವರನ್ನು ಬಲಿಪಶು ಮಾಡಲಾಗುತ್ತಿದೆಯೋ, ಅಥವಾ ಒಳ ಒಪ್ಪಂದವಾಗಿದೆಯೋ ಎನ್ನುವುದು ಗೊತ್ತಿಲ್ಲ. ಹೆಬ್ಬಾಳ್ಕರ್ ಅವರಿಗೆ ಅನುಕೂಲವಾಗಲಿ ಎನ್ನುವ ಕುತುಂತ್ರ ಇದ್ದರೂ ಇರಬಹುದು, ಅಪ್ಪ ಮಕ್ಕಳು ಬಿಟ್ಟು ಬೇರೆ ಯಾರು ಈ ರೀತಿ ಮಾಡಲು ಸಾಧ್ಯ ಎಂದು ಯತ್ನಾಳ್ ಆರೋಪಿಸಿದ್ದಾರೆ. ಅಸಲಿಗೆ ಕಾಂಗ್ರೆಸ್‌ನಿಂದ ಮತ್ತೆ ಮರಳಿ ಬಿಜೆಪಿ ಗೂಡಿಗೆ ಸೇರಿದ್ದ ಜಗದೀಶ್‌ ಶೆಟ್ಟರ್‌ ಧಾರವಾಡ ಲೋಕಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದರು. ಆದರೆ ಬಿಜೆಪಿ ಹೈಕಮಾಂಡ್‌ ಕೊನೇ ಗಳಿಗೆಯಲ್ಲಿ ಈ ಕ್ಷೇತ್ರದ ಟಿಕೆಟ್‌ ಅನ್ನು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರಿಗೆ ಘೋಷಣೆ ಮಾಡಿತು. ಆಗ ಶೆಟ್ಟರ್‌ ತುಸು ಮುನಿಸಿಕೊಂಡಿದ್ದು, ನಂತರ ಅವರ ಕಣ್ಣು ಹೋಗಿದ್ದೇ ಬೆಳಗಾವಿ ಕ್ಷೇತ್ರದ ಟಿಕೆಟ್‌ ಮೇಲೆ. ಬೆಳಗಾವಿ ಟಿಕೆಟ್ ಜೊತೆಗೆ ಇದೀಗ ಸಾಹುಕಾರನ ಬೆಂಬಲವೂ ಶೆಟ್ಟರ್​ಗೆ ಸಿಕ್ಕಿದೆ.

ಶೆಟ್ಟರ್​ ಗೆ ಸಾಹುಕಾರ್ ಬಲ!  

ಬೆಳಗಾವಿಯಲ್ಲಿ ಕಾಂಗ್ರೆಸ್‌ನಿಂದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಪುತ್ರ ಕಣದಲ್ಲಿದ್ದಾರೆ. ಬಿಜೆಪಿ ಅಭ್ಯರ್ಥಿ ಜಗದೀಶ್‌ ಶೆಟ್ಟರ್‌ ಹಾಗೂ ಕಾಂಗ್ರೆಸ್‌ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್‌ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ‌ ಲಕ್ಷ್ಮೀ ಹೆಬ್ಬಾಳ್ಕರ್‌ ಪುತ್ರನನ್ನು ಸೋಲಿಸಲು ಬಿಜೆಪಿ ಅಭ್ಯರ್ಥಿ ಜೊತೆ ಸಾಹುಕಾರ ರಮೇಶ್‌ ಜಾರಕಿಹೊಳಿ ಫೀಲ್ಡಿಗಿಳಿದಿದ್ದು, ಅವರು ಜಗದೀಶ ಶೆಟ್ಟರ್‌ ಪರ ಭರ್ಜರಿ ಪ್ರಚಾರಕ್ಕೆ ಮುಂದಾಗಿದ್ದಾರೆ. ಬೆಳಗಾವಿ ಲೋಕಸಭಾ ವ್ಯಾಪ್ತಿಯ ಗೋಕಾಕ್‌ನಲ್ಲಿ ರಮೇಶ್‌ ಜಾರಕಿಹೊಳಿ ಹಾಗೂ ಅರಭಾವಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿಯನ್ನು ಜಗದೀಶ್‌ ಶೆಟ್ಟರ್‌ ಭೇಟಿ ಮಾಡಿ ಪ್ರಚಾರಕ್ಕೆ ಬರುವಂತೆ ಮನವಿ ಮಾಡಿದ್ದಾರೆ. ಈ ಮೂಲಕ ಶೆಟ್ಟರ್‌ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಪುತ್ರನನ್ನ ಸೋಲಿಸಲು ರಣತಂತ್ರ ಹೆಣೆಯುತ್ತಿದ್ದಾರೆ. ಹೀಗೆ ಜಗದೀಶ್‌ ಶೆಟ್ಟರ್‌ ಗೋಕಾಕ್‌ ಮತ್ತು ಅರಭಾವಿ ಎರಡು ಮತಕ್ಷೇತ್ರದಲ್ಲಿ ಮತಗಳನ್ನು ಸೆಳೆಯಲು ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ. ಇನ್ನು ಕಳೆದ ಎರಡು ದಿನದ ಹಿಂದೆ ಗೋಕಾಕ್‌, ಅರಭಾವಿಯಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಪುತ್ರನ ಪರ ಪ್ರಚಾರಕ್ಕಿಳಿದಿದ್ದರು.

ಸದ್ಯ ಬೆಳಗಾವಿ ಮತ್ತು ಶಿವಮೊಗ್ಗ ಎರಡೂ ಕ್ಷೇತ್ರಗಳೂ ಹೈವೋಲ್ಟೇಜ್ ಕಣಗಳೇ. ಶಿವಮೊಗ್ಗದಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಪುತ್ರ ಕಣದಲ್ಲಿದ್ರೆ ಅತ್ತ ಬೆಳವಾಗಿಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಅಖಾಡದಲ್ಲಿದ್ದಾರೆ. ಇಬ್ಬರೂ ನಾಯಕರಿಗೆ ತಮ್ಮ ಮಕ್ಕಳ ಗೆಲುವು ಪ್ರತಿಷ್ಠೆಯಾಗಿದೆ. ಹೀಗಾಗಿ ಜಾತಿ ಲೆಕ್ಕಾಚಾರದ ಮೇಲೆ ಒಳಒಪ್ಪಂದವಾಗಿದೆ ಅನ್ನೋದು ಈಶ್ವರಪ್ಪ ಮತ್ತು ಯತ್ನಾಳ್ ಆರೋಪ. ಆದ್ರೆ ಯಾರು ಏನೇ ಹೇಳಿದ್ರೂ ಕೊನೆಗೆ ಉತ್ತರ ಕೊಡೋದು ಮತದಾರರು ಅನ್ನೋದನ್ನ ಮರೆಯುವಂತಿಲ್ಲ.

Shwetha M