ಬಲಿಷ್ಠರಿಗೆ ಟಿಕೆಟ್ ತಪ್ಪಿಸಿ ಸೈಡ್ ಲೈನ್ ಮಾಡಿದ್ರಾ ಬಿಎಸ್‌ವೈ ಮತ್ತು ಪುತ್ರ?

ಬಲಿಷ್ಠರಿಗೆ ಟಿಕೆಟ್ ತಪ್ಪಿಸಿ ಸೈಡ್ ಲೈನ್ ಮಾಡಿದ್ರಾ ಬಿಎಸ್‌ವೈ ಮತ್ತು ಪುತ್ರ?

ಚುನಾವಣೆಗಳ ಹೊಸ್ತಿಲಲ್ಲಿ ಪಕ್ಷಗಳಲ್ಲಿ ಭಿನ್ನಮತ ಸ್ಫೋಟವಾಗೋದು ಕಾಮನ್. ಟಿಕೆಟ್ ವಂಚಿತರು ಪಕ್ಷದ ವಿರುದ್ಧ ತಿರುಗಿಬೀಳೋದು, ಬಂಡಾಯ ಸ್ಪರ್ಧೆ ಮಾಡೋದು ಕೂಡ ಸಹಜವೇ. ಹಾಗೇ ಈ ಸಲದ ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್, ಬಿಜೆಪಿ, ಜೆಡಿಎಸ್​ನಲ್ಲೂ ಇದೇ ಆಗ್ತಿದೆ. ಆದ್ರೆ ಬಿಜೆಪಿಯಲ್ಲಿ ಮಾತ್ರ ಈ ಸಲ ಟಿಕೆಟ್ ಮಿಸ್ ಮಾಡಿಕೊಂಡವ್ರು ಪಕ್ಷಕ್ಕಿಂತ ಹೆಚ್ಚು ಬಿಎಸ್ ಯಡಿಯೂರಪ್ಪ ಮತ್ತು ಪುತ್ರನ ವಿರುದ್ಧ ಸಿಡಿದೆದ್ದಿದ್ದಾರೆ. ತಮಗೆ ಟಿಕೆಟ್ ಸಿಗದೇ ಇರೋದಕ್ಕೆ ಬಿಎಸ್​ವೈ ಅವ್ರೇ ಕಾರಣ ಎಂದು ಬಹಿರಂಗವಾಗೇ ಆಕ್ರೋಶ ಹೊರ ಹಾಕಿದ್ದಾರೆ. ಒಬ್ಬರ ಹಿಂದೆ ಒಬ್ಬರಂತೆ ಟಿಕೆಟ್ ಮಿಸ್ ಆದ ಆಕಾಂಕ್ಷಿಗಳು ಬುಸುಗುಡುತ್ತಲೇ ಇದ್ದಾರೆ. ಇದೀಗ ಚಿತ್ರದಲ್ಲೂ ಅಸಮಾಧಾನದ ಕಟ್ಟೆ ಒಡೆದಿದೆ. ಶಾಸಕ ಎಂ.ಚಂದ್ರಪ್ಪ ಮತ್ತು ಅವರ ಮಗ ರಘುಚಂದನ್ ಅವರು ಯಡಿಯೂರಪ್ಪ ಮತ್ತು ವಿಜಯೇಂದ್ರ ವಿರುದ್ಧವೇ ಬಂಡಾಯವೆದ್ದಿದ್ದಾರೆ. ಅಷ್ಟಕ್ಕೂ ಟಿಕೆಟ್ ಹಂಚಿಕೆಯಲ್ಲಿ ಬಿಎಸ್​ವೈ ಕೈವಾಡ ಇದ್ಯಾ..? ಪ್ರಭಾವಿ ನಾಯಕರಿಗೆ ಟಿಕೆಟ್ ತಪ್ಪಿಸಿದ್ರಾ..? ಪಕ್ಷದವ್ರನ್ನ ಸೈಡ್​ಲೈನ್ ಮಾಡ್ತಿದ್ದಾರಾ..? ಈ ಕುರಿತ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ತವರಿನಲ್ಲಿ ಆರ್‌ಸಿಬಿಗೆ ಹೀನಾಯ ಸೋಲು – ಚಿನ್ನಸ್ವಾಮಿಯಲ್ಲಿ ಗೆದ್ದು ಬೀಗಿದ ಕೆಕೆಆರ್​ ಟೀಮ್​​

ಲೋಕಸಭಾ ಚುನಾವಣೆ ದಿನಾಂಕ ಘೋಷಣೆಗೂ ಮುನ್ನವೇ ಬಿಜೆಪಿ ಟಿಕೆಟಿಗಾಗಿ ನಡೆಯುತ್ತಿದ್ದ ಲಾಬಿ ಅಷ್ಟಿಷ್ಟಲ್ಲ. ಬಿಜೆಪಿಯು ಎಲ್ಲಾ 25 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಯನ್ನು ಅಂತಿಮಗೊಳಿಸಿದೆ. ಕೋಲಾರ, ಮಂಡ್ಯ ಮತ್ತು ಹಾಸನದಲ್ಲಿ ಜೆಡಿಎಸ್ ಸ್ಪರ್ಧಿಸುತ್ತಿದೆ. ಆದ್ರೆ ಬಿಜೆಪಿಯಲ್ಲಿ ಆಕಾಂಕ್ಷಿಗಳ ಆಕ್ರೋಶ ಹೆಚ್ಚಾಗಿದೆ. ನಮಗೆ ಟಿಕೆಟ್ ಕೈತಪ್ಪಿದ್ದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರಿಂದ ಎಂದು ಕೆಲವರು ನೇರವಾಗಿ ಆರೋಪಿಸಿದ್ದಾರೆ, ಬಹಿರಂಗವಾಗಿಯೇ ಆಕ್ರೋಶ ಹೊರಹಾಕಿದ್ದಾರೆ. ಪಕ್ಷದಲ್ಲಿ ತಮ್ಮ ವಿರುದ್ಧ ಬಿಜೆಪಿ ನಾಯಕರು ಸಿಡಿದೇಳುತ್ತಿದ್ದಂತೆ ಇದ್ರಲ್ಲಿ ನನ್ನ ಕೈವಾಡ ಏನೂ ಇಲ್ಲ ಅಂತಾ ಯಡಿಯೂರಪ್ಪ ಸ್ಪಷ್ಟೀಕರಣ ನೀಡಿದ್ದಾರೆ. ಆದ್ರೂ ಕೂಡ ಅಸಮಾಧಾನ ತಣಿದಿಲ್ಲ. ಹೀಗೆ ಟಿಕೆಟ್ ಮಿಸ್ ಆದವರ ಪೈಕಿ ಅತೀ ಹೆಚ್ಚು ಸಿಟ್ಟಾಗಿರೋ ನಾಯಕ ಅಂದ್ರೆ ಅದು ಕೆ.ಎಸ್ ಈಶ್ವರಪ್ಪ.

ಈಶ್ವರಪ್ಪ, ಚಂದ್ರಪ್ಪ ಆಕ್ರೋಶ! 

ಹಿರಿಯ ಬಿಜೆಪಿ ನಾಯಕ ಈಶ್ವರಪ್ಪ ತಮ್ಮ ಪುತ್ರ ಕಾಂತೇಶ್ ಗೆ ಹಾವೇರಿ ಕ್ಷೇತ್ರದ ಟಿಕೆಟ್ ನಿರೀಕ್ಷೆಯಲ್ಲಿದ್ದರು. ಸಂಭಾವ್ಯರ ಪಟ್ಟಿಯಲ್ಲಿ ಅವರ ಹೆಸರೂ ಇತ್ತು, ರಾಜ್ಯ ಬಿಜೆಪಿ ಶಿಫಾರಸು ಪಟ್ಟಿಯಲ್ಲಿ ಅವರ ಹೆಸರು ಇದ್ದರೂ, ಬಿಜೆಪಿ ವರಿಷ್ಠರು ಕೊನೆಗೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಟಿಕೆಟ್ ನೀಡಿದ್ರು. ಪುತ್ರನಿಗೆ ಟಿಕೆಟ್ ತಪ್ಪಿಸಿದ್ದು ಯಡಿಯೂರಪ್ಪ ಮತ್ತು ಅವರ ಪುತ್ರ ಎಂದು ನೇರವಾಗಿ ಆರೋಪಿಸಿರುವ ಈಶ್ವರಪ್ಪ, ಶಿವಮೊಗ್ಗದಲ್ಲಿ ಬಂಡಾಯವಾಗಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಈಗಾಗ್ಲೇ ಪ್ರಚಾರ ಆರಂಭಿಸಿರುವ ಈಶ್ವರಪ್ಪ, ಬಿಎಸ್​ವೈ ಮತ್ತು ಪುತ್ರ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಮತ್ತೊಂದೆಡೆ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಲ್ಲಿ ಒಬ್ಬರಾಗಿದ್ದವರು ಹೊಳಲ್ಕೆರೆ ಬಿಜೆಪಿ ಶಾಸಕ ಎಂ.ಚಂದ್ರಪ್ಪ ಪುತ್ರ ರಘುಚಂದನ್‍. ಆದರೆ, ಬಿಜೆಪಿಯು ಗೋವಿಂದ ಕಾರಜೋಳ ಅವರಿಗೆ ಚಿತ್ರದುರ್ಗದ ಬಿಜೆಪಿ ಟಿಕೆಟ್ ನೀಡಿದೆ. ನನ್ನ ಮಗನಿಗೆ ಟಿಕೆಟ್ ಕೈತಪ್ಪಿದ್ದು ಯಡಿಯೂರಪ್ಪನವರಿಂದ ಎಂದು ಚಂದ್ರಪ್ಪ ಆರೋಪಿಸಿದ್ದಾರೆ. ನಾನು ಯಡಿಯೂರಪ್ಪ ಕುಟುಂಬಕ್ಕೆ ತೋರಿದ ನಿಷ್ಠೆ ಸಾರ್ಥಕವಾಯಿತು ಎಂದು ಚಂದ್ರಪ್ಪ ವ್ಯಂಗ್ಯವಾಡಿದ್ದಾರೆ.

ಇಲ್ಲಿ ಈಶ್ವರಪ್ಪ ಬಿಜೆಪಿಯ ಕಟ್ಟಾ ನಿಷ್ಠಾವಂತ ನಾಯಕ. ಹೀಗಿದ್ರೂ ಯಡಿಯೂರಪ್ಪ ವಿರುದ್ಧವೇ ತೊಡೆ ತಟ್ಟಿದ್ದಾರೆ. ಬಿ.ವೈ ರಾಘವೇಂದ್ರ ವಿರುದ್ಧ ಸ್ಪರ್ಧೆ ಮಾಡ್ತಿದ್ದು, ಶಿವಮೊಗ್ಗದಿಂದ ಗೆದ್ದೇ ಗೆಲ್ತೇನೆ ಎಂದಿದ್ದಾರೆ.  ಈಶ್ವರಪ್ಪ, ಚಂದ್ರಪ್ಪ ಹೊರತಾಗಿಯೂ ಹಲವು ನಾಯಕರು ಬಿಎಸ್​ವೈ ವಿರುದ್ಧ ಬೊಟ್ಟು ಮಾಡ್ತಿದ್ದಾರೆ. ಕೊಪ್ಪಳದ ಹಾಲೀ ಸಂಸದ ಕರಡಿ ಸಂಗಣ್ಣ ಅವರಿಗೆ ಟಿಕೆಟ್ ಕೈತಪ್ಪಿದ್ದು, ಡಾ. ಬಸವರಾಜ್‌ ಕ್ಯಾವಟೂರು ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಪರೋಕ್ಷವಾಗಿ ಟಿಕೆಟ್ ತಪ್ಪಲು ಯಡಿಯೂರಪ್ಪನವರೇ ಕಾರಣ ಎಂದು ಆರೋಪಿಸಿರುವವರಲ್ಲಿ ಸಂಗಣ್ಣ ಕೂಡಾ ಒಬ್ಬರು.

ಟಿಕೆಟ್ ಮಿಸ್ ಹಿಂದೆ BSY ಕೈವಾಡ?    

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಂಸದ ಡಿ.ವಿ.ಸದಾನಂದ ಗೌಡ ಅವರನ್ನೂ ಬಿಜೆಪಿ ಈ ಬಾರಿ ಕೈಬಿಟ್ಟಿತ್ತು. ಗೌಡ್ರಿಗೆ ಟಿಕೆಟ್ ಫೈನಲ್ ಎಂದೇ ಆಗಿತ್ತು, ಆದರೆ, ಅಲ್ಲಿಂದ ಶೋಭಾ ಕರಂದ್ಲಾಜೆಗೆ ಬಿಜೆಪಿ ಟಿಕೆಟ್ ನೀಡಿದೆ. ಕೊನೆಯ ಹಂತದಲ್ಲಿ ನಡೆದ ಈ ರಾಜಕೀಯ ವಿದ್ಯಮಾನದಿಂದ ವಿಚಲಿತರಾದ ಸದಾನಂದ ಗೌಡ್ರು, ಯಡಿಯೂರಪ್ಪನವರನ್ನು ಗುರಿಯಾಗಿಸಿದ್ದರು. ಇನ್ನು ತುಮಕೂರು ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಜೆ. ಮಾಧುಸ್ವಾಮಿಗೆ ಟಿಕೆಟ್ ಮಿಸ್ ಆಗಿದೆ. ವಿ.ಸೋಮಣ್ಣಗೆ ಟಿಕೆಟ್ ನೀಡಲಾಗಿದೆ. ಮಾಧುಸ್ವಾಮಿ ಕೂಡಾ ಪರೋಕ್ಷವಾಗಿ ಯಡಿಯೂರಪ್ಪನವರನ್ನೇ ಟಾರ್ಗೆಟ್ ಮಾಡಿ ಮಾತನಾಡಿದ್ರು. ಇನ್ನು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಮೇಲೆ ಮಾಜಿ ಸಚಿವ ಸಿಟಿ ರವಿ ಕಣ್ಣಿಟ್ಟಿದ್ದರು. ಆದರೆ, ಶೋಭಾ ಕರಂದ್ಲಾಜೆ ಮತ್ತು ಸಿಟಿ ರವಿ ಬೆಂಬಲಿಗರ ನಡುವೆ ಸಮರ ನಡೆದಿತ್ತು. ಹೀಗಾಗಿ ಇಬ್ಬರಿಗೂ ಟಿಕೆಟ್ ನೀಡದ ಹೈಕಮಾಂಡ್, ಕೋಟ ಶ್ರೀನಿವಾಸ್ ಪೂಜಾರಿ ಅವರಿಗೆ ಕ್ಷೇತ್ರದಲ್ಲಿ ಮಣೆ ಹಾಕಿದೆ. ಆದರೆ, ಶೋಭಾ ಕರಂದ್ಲಾಜೆ ಅವರಿಗೆ ಯಡಿಯೂರಪ್ಪ ಅವರು ಡಿವಿ ಸದಾನಂದಗೌಡ ಅವರು ಹಾಲಿ ಸಂಸದರಾಗಿರುವ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಟಿಕೆಟ್ ಕೊಡಿಸಿದ್ದಾರೆ ಎನ್ನಲಾಗುತ್ತಿದೆ. ಈ ಎಲ್ಲಾ ವಿಚಾರವಾಗಿ ಸಿಟಿ ರವಿ ಯಡಿಯೂರಪ್ಪ ಅವರ ವಿರುದ್ಧ ಪರೋಕ್ಷವಾಗಿ ಆಕ್ರೋಶ ಹೊರಹಾಕಿದ್ದಾರೆ.

ಸದ್ಯ ಕರ್ನಾಟಕದಲ್ಲಿ ಬಿಜೆಪಿ ಟಿಕೆಟ್ ಕೈತಪ್ಪಿದ ಪ್ರಬಲ ಆಕಾಂಕ್ಷಿಗಳು ಬಂಡಾಯ ಏಳುತ್ತಿದ್ದು, ಬಿಜೆಪಿ ಪಾಲಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಅದರಲ್ಲೂ ಯಡಿಯೂರಪ್ಪ ಮತ್ತು ವಿಜಯೇಂದ್ರ ವಿರುದ್ಧವೇ ಸಿಡಿದೇಳುತ್ತಿದ್ದಾರೆ. ಇದು ಚುನಾವಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆಯೂ ಹೆಚ್ಚಿದೆ.

Shwetha M