ಶೆಟ್ಟರ್ ಸೋಲಿಸುವುದಾಗಿ ಬಿಎಸ್‌ವೈ ಸವಾಲು -ಅಂದು ಕೆಜೆಪಿ ಕಟ್ಟಿದವರು ಇಂದು ನನ್ನ ವಿರುದ್ಧ ತಿರುಗಿಬಿದ್ದಿದ್ಯಾಕೆ ಎಂದ ಶೆಟ್ಟರ್..!
ಚುನಾವಣಾ ಅಖಾಡಲ್ಲಿ ಮಾಜಿ ಸಿಎಂಗಳ ನಡುವಿನ ಮಾತಿನ ಸಮರ ಜೋರಾಗಿಯೇ ಸಾಗುತ್ತಿದೆ. ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿ ಕಣಕ್ಕಿಳಿದಿರುವ ಜಗದೀಶ್ ಶೆಟ್ಟರ್ ವಿರುದ್ಧ ಬಿ.ಎಸ್ ಯಡಿಯೂರಪ್ಪ ರೋಶಾವೇಶದಿಂದ ಮಾತನಾಡಿದ್ದಾರೆ. ‘ನನ್ನ ರಕ್ತದಲ್ಲಿ ಬರೆದುಕೊಡ್ತೇನೆ. ಯಾವ ಕಾರಣಕ್ಕೂ ಶೆಟ್ಟರ್ ಈ ಕ್ಷೇತ್ರದಿಂದ ಗೆಲ್ಲಲು ಸಾಧ್ಯವಿಲ್ಲ’ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಹಿರಂಗವಾಗಿ ಘೋಷಣೆ ಮಾಡಿದ್ದಾರೆ. ಬಿಎಸ್‌ವೈ ಹೇಳಿಕೆಗೆ ಶೆಟ್ಟರ್ ಕೂಡಾ ಗುಡುಗಿದ್ದಾರೆ.
ಇದನ್ನೂ ಓದಿ: ಮತಶಿಕಾರಿ ಜೊತೆ ದೋಸೆ ತಯಾರಿ – ಮೈಲಾರಿ ಹೋಟೆಲ್‌ನಲ್ಲಿ ದೋಸೆ ಹಾಕಿದ ಪ್ರಿಯಾಂಕಾ ಗಾಂಧಿ
ಜಗದೀಶ್ ಶೆಟ್ಟರ್ ಅನ್ನು ಸೋಲಿಸುವುದೇ ನಮ್ಮ ಗುರಿ ಎಂದು ಬಿ.ಎಸ್ ಯಡಿಯೂರಪ್ಪ ಕರೆ ನೀಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರನ್ನು ಸೋಲಿಸುವ ಜವಾಬ್ದಾರಿ ನಾನು ತೆಗೆದುಕೊಳ್ಳುತ್ತೇನೆ. ಅಥಣಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ ಸವದಿಯವರನ್ನು ಸೋಲಿಸುವ ಜವಾಬ್ದಾರಿ ಕ್ಷೇತ್ರದ ಜನ ತೆಗೆದುಕೊಳ್ಳಿ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕಾರ್ಯಕರ್ತರಲ್ಲಿ ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿ ಜಗದೀಶ್ ಶೆಟ್ಟರ್, ‘ಯಾಕೆ ಈ ಬಡಪಾಯಿ ಮೇಲೆ ಮುಗಿ ಬಿದ್ದಿದ್ದಾರೆ, ಸಣ್ಣ ವ್ಯಕ್ತಿ ಮೇಲೆ ಯಾಕೆ ಅಟ್ಯಾಕ್ ಮಾಡ್ತಾರೆ’ ಎಂದು ಶೆಟ್ಟರ್ ಪ್ರಶ್ನಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ‘ನಾನು ಸವದಿ ಇತ್ತೀಚೆಗೆ ಕಾಂಗ್ರೆಸ್ ಸೇರಿದ್ದೇವೆ. ಆಯನೂರು ಮಂಜುನಾಥ ಕೂಡ ಜೆಡಿಎಸ್ ಸೇರಿದ್ದಾರೆ. ಇದರ ಜೊತೆಗೆ ಯಡಿಯೂರಪ್ಪ ಆಪ್ತ ಸಂತೋಷ್ ಕೂಡ ಜೆಡಿಎಸ್ ಸೇರಿದ್ದಾರೆ. ರಾಜಕೀಯದಲ್ಲಿ ಬೇರೆ ಪಕ್ಷಕ್ಕೆ ಹೋಗೋದು ಸಹಜ ಪ್ರಕ್ರಿಯೆ. ಬಿಜೆಪಿಯವರು ಜಗದೀಶ್ ಶೆಟ್ಟರ್ ಕಾಂಗ್ರೆಸ್‌ಗೆ ಸೇರಿರೋದು ಅಪರಾಧ ಎನ್ನುವ ಹಾಗೆ ಪ್ರಶ್ನೆ ಮಾಡುತ್ತಿದ್ದಾರೆ ಎಂದರು. ‘ ಯಡಿಯೂರಪ್ಪ ಅವರ ಬಗ್ಗೆ ನನಗೆ ಗೌರವ ಇದೆ. ಅವರೇ ಕೆಜೆಪಿ ಕಟ್ಟಿದ್ದರು. ಐಡಿಯಾಲಜಿ ಬಗ್ಗೆ ಮಾತಾಡೋಕೆ ಅವರಿಗೆ ನೈತಿಕತೆ ಇಲ್ಲ. ಕಾಂಗ್ರೆಸ್‌ನಿಂದ ಬಂದು ಬಿಜೆಪಿ ಸರ್ಕಾರ ಮಾಡಿರೋದು ಯಾವ ಐಡಿಯಾಲಜಿ. ನಾನು ಪಕ್ಷದ್ರೋಹಿ ಕೆಲಸ ಮಾಡಿಲ್ಲ’ ಎನ್ನುವ ಮೂಲಕ ಯಡಿಯೂರಪ್ಪ ಅವರಿಗೆ ತಿರುಗೇಟು ನೀಡಿದ್ದಾರೆ. ‘ಯಡಿಯೂರಪ್ಪ ಬಗ್ಗೆ ನಾನು ಎಂದು ಟೀಕೆ ಮಾಡಿಲ್ಲ. ಇದೇ ಯಡಿಯೂರಪ್ಪ ಜಗದೀಶ್ ಶೆಟ್ಟರ್‌ಗೆ ಟಿಕೆಟ್ ಕೊಡಬೇಕು ಎಂದಿದ್ರು. ಅವರು ನನ್ನ ಟಿಕೆಟ್ ಬಗ್ಗೆ ಬಹಳ ಪ್ರಯತ್ನ ಮಾಡಿದ್ದಾರೆ. ಅವರ ಟೀಕೆ ನನಗೆ ಆಶೀರ್ವಾದ. ಯಡಿಯೂರಪ್ಪ ಅವರು ನನಗೆ ಟಿಕೆಟ್ ಕೊಡಸ್ತೀನಿ ಎಂದು ಅಸಹಾಯಕರಾದರು. ನಾನು ನೇರವಾಗಿ ಮಾತಾಡಿದ್ದು ಬಿಎಲ್ ಸಂತೋಷ್ ಬಗ್ಗೆ. ಆದ್ರೆ, ಅವರು ಈ ಬಗ್ಗೆ ಎಲ್ಲಿಯೂ ಮಾತಾಡಿಲ್ಲ. ಮತ್ತೊಬ್ಬರ ಹೆಗಲ ಮೇಲೆ ಗುಂಡು ಇಟ್ಟು ಹೊಡೆದಿದ್ದಾರೆ. ಯಡಿಯೂರಪ್ಪ ಮಾತಾಡೋಕೆ ಸಂತೋಷ್ ಕಾರಣ ಎಂದು ಬಿಎಲ್ ಸಂತೋಷ್ ವಿರುದ್ದ ಶೆಟ್ಟರ್ ಗರಂ ಆಗಿದ್ದಾರೆ. ಒಬ್ಬ ಲಿಂಗಾಯತ ನಾಯಕನ ವಿರುದ್ದ ಮತ್ತೊಬ್ಬ ಲಿಂಗಾಯತ ನಾಯಕನನ್ನ ಬೈಸಿದ್ದಾರೆ. ಅವರ ಬೈಗುಳದಿಂದಲೇ ನಾನು ಗೆಲ್ತೀನಿ, ಯಡಿಯೂರಪ್ಪ ಕೆಜಿಪಿ ಕಟ್ಟಿದಾಗ ಬೊಮ್ಮಾಯಿಗೆ ಬೈದಿದ್ರು. ಈಗ ಅವರು ಸಿಎಂ. ನಾನು ಹಿಂದಿನ ಚುನಾವಣೆಗಿಂತ ಹೆಚ್ಚಿನ ಮತಗಳ ಅಂತರದಲ್ಲಿ ಗೆಲ್ತೀನಿ ಎಂದು ಶೆಟ್ಟರ್ ಭರವಸೆ ವ್ಯಕ್ತಪಡಿಸಿದ್ದಾರೆ.