17 ವರ್ಷದ ಬಳಿಕ BSNLಗೆ ಲಾಭ – 262 ಕೋಟಿ ರೂ. ಲಾಭ ಮಾಡಿದ್ದೇಗೆ?
JIO, ಏರ್ಟೈಲ್ಗೆ ಬಿಗ್ ಶಾಕ್!

17 ವರ್ಷದ ಬಳಿಕ BSNLಗೆ ಲಾಭ – 262 ಕೋಟಿ ರೂ. ಲಾಭ ಮಾಡಿದ್ದೇಗೆ?JIO, ಏರ್ಟೈಲ್ಗೆ ಬಿಗ್ ಶಾಕ್!

ಬಿಎಸ್‌ಎನ್ಎಲ್‌.. ಒಂದ್‌ ಕಾಲದಲ್ಲಿ ಎಲ್ಲರ ಮೊಬೈಲ್‌ನಲ್ಲಿ ರಾರಾಜಿಸಿದ ಸಿಮ್‌.. ಹಳ್ಳಿ ಹಳ್ಳಿಯೂ ಈ ಬಿಎಸ್‌ಎನ್‌ಎಲ್ ತಲುಪಿತ್ತು. ಬೇಸಿಕ್ ಸೆ ಟ್ ಮೊಬೈಲ್‌ನಲ್ಲಿ ಒಬ್ಬರಿಂದ ಒಬ್ಬರ ಜೊತೆ ಮಾತನಾಡೋಕೆ ಈ ಬಿಎಸ್‌ಎನ್‌ಎಲ್‌ ಸಹಾಯ ಮಾಡಿತ್ತು. ಆದ್ರೆ ಸರ್ಕಾರಿ ಸ್ವಾಮ್ಯದ ಈ ಕಂಪನಿ  ಖಾಸಗಿ ಟೆಲಿಕಾಂ ಕಂಪನಿಗಳ ತೀವ್ರ ಸ್ಪರ್ಧೆಯಿಂದಾಗಿ ಮೂಲೆ ಗುಂಪಾಗಿತ್ತು. ಸೋಲಿನ ಸುಳಿಯುಲ್ಲಿ ಸಿಲುಕಿತ್ತು. ಜನರಿಗೆ ಸೇವೆ ಕೂಡವಲ್ಲಿ BSNL  ಹಿಂದೆ ಉಳಿದು ಬಿಟ್ಟಿತ್ತು. ಬಿಎಸ್‌ಎನ್‌ಎಲ್ ಕಥೆ ಮುಗಿದೇ ಹೋಯ್ತು ಎನ್ನುವಾಗ ಬರೊಬ್ಬರಿ 17 ವರ್ಷಗಳ ಬಳಿಕ ಮತ್ತೆ ಎದ್ದು ಬಂದಿದೆ. ಸೋಲಿನಲ್ಲಿದ್ದ ಸಂಸ್ಥೆ ಮತ್ತೆ ಲಾಭದ ಹಾದಿಗೆ ಮರಳಿದೆ.

ಹೌದು.. 2007ರ ಬಳಿಕ ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ ಬಿಎಸ್ ಎನ್ಎಲ್ ಲಾಭ ನೋಡಿದ್ದು,  ಮೂರನೇ ತ್ರೈಮಾಸಿಕದಲ್ಲಿ 262 ಕೋಟಿ ರೂ. ಲಾಭ ಗಳಿಸಿದೆ. ಖಾಸಗಿ ವಲಯದ ಟೆಲಿಕಾಂ ದೈತ್ಯ ಸಂಸ್ಥೆಗಳಾದ ಜಿಯೋ ಮತ್ತು ಏರ್‌ಟೆಲ್‌ ಸಂಸ್ಥೆಗಳು ತಮ್ಮ ದರ ಏರಿಕೆ ಮಾಡಿದ ಬಳಿಕ ಬಿಎಸ್ಎನ್ ಎಲ್ ನತ್ತ ಮರಳುತ್ತಿರುವ ಗ್ರಾಹಕರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದ್ದು, ಇದು ಸಂಸ್ಛೆಯ ಲಾಭಕ್ಕೆ ಕಾರಣವಾಗಿದೆ. ಮಾತ್ರವಲ್ಲದೇ ಬಿಎಸ್‌ಎನ್‌ಎಲ್ ಮತ್ತೆ ಮಾರುಕಟ್ಟೆಯಲ್ಲಿ ತನ್ನ ಖದರ್ ತೋರಿಸೋಕೆ ರೆಡಿಯಾಗಿದೆ.

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಬಿಎಸ್‌ಎನ್‌ಎಲ್‌ನ ಸಿಎಂಡಿ ಎ. ರಾಬರ್ಟ್ ಜೆ. ರವಿ ಈ ತ್ರೈಮಾಸಿಕದಲ್ಲಿ ನಮ್ಮ ಆರ್ಥಿಕ ಕಾರ್ಯಕ್ಷಮತೆಯಿಂದ ನಾವು ಸಂತೋಷಗೊಂಡಿದ್ದೇವೆ, ಇದು ನಾವೀನ್ಯತೆ, ಗ್ರಾಹಕ ತೃಪ್ತಿ ಮತ್ತು ಆಕ್ರಮಣಕಾರಿ ನೆಟ್‌ವರ್ಕ್ ವಿಸ್ತರಣೆಯ ಮೇಲಿನ ನಮ್ಮ ಗಮನವನ್ನು ಪ್ರತಿಬಿಂಬಿಸುತ್ತದೆ. ಈ ಪ್ರಯತ್ನಗಳೊಂದಿಗೆ, ಹಣಕಾಸು ವರ್ಷದ ಅಂತ್ಯದ ವೇಳೆಗೆ ಶೇ.20% ಮೀರುವ ಆದಾಯದ ಬೆಳವಣಿಗೆ ಸುಧಾರಿಸುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ” ಎಂದು ತಿಳಿಸಿದ್ದಾರೆ.

2024ರ  ಜುಲೈನಲ್ಲಿ ರಿಲಯನ್ಸ್ ಜಿಯೋ ತನ್ನ ಟ್ಯಾರಿಫ್ ಬೆಲೆಗಳನ್ನು ಹೆಚ್ಚಿಸಿಕೊಂಡಿತ್ತು. ಇದಾದ ನಂತರ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ತಮ್ಮ ಟ್ಯಾರಿಫ್ ಬೆಲೆಗಳನ್ನು ಏರಿಕೆ ಮಾಡಿದ್ದವು. ಬೆಲೆ ಏರಿಕೆ ಬೆನ್ನಲ್ಲೇ ಬಿಎಸ್‌ಎನ್‌ಎಲ್ ತನ್ನ ನೆಟ್‌ವರ್ಕ್‌ಗೆ ಬರೋ ಬಳಕೆದಾರರಿಗೆ ಆಫರ್ ಘೋಷಣೆ ಮಾಡಿತ್ತು. ಈ ಎಲ್ಲಾ ಬೆಳವಣಿಗೆಯಿಂದಾಗಿ ಬಳಕೆದಾರರು ಬಿಎಸ್‌ಎನ್‌ಎಲ್‌ ನತ್ತ ಮುಖ ಮಾಡಿದರು. ಮತ್ತೊಂದೆಡೆ ಬಿಎಸ್‌ಎನ್‌ಎಲ್ 4ಜಿ ನೆಟ್‌ವರ್ಕ್ ಅಳವಡಿಕೆಗೆ ಮುಂದಾಗಿದ್ದು, ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲು ಸಹ ಆರಂಭಿಸಿತ್ತು.  ಇದರಿಂದಾಗಿ ಬಿಎಸ್‌ಎನ್ಎಲ್ ಬಳಕೆದಾರರ ಸಂಖ್ಯೆ ಏರಿಕೆಯಾಯ್ತು.

ಈ ಬಾರಿಯ ಆರ್ಥಿಕ ವರ್ಷ ಮೂರನೇ ತ್ರೈಮಾಸಿಕದಲ್ಲಿ  ಬಿಎಸ್‌ಎನ್‌ಎಲ್ 262 ಕೋಟಿ ರೂಪಾಯಿ ಲಾಭ ಗಳಿಸಿದೆ. ಈ ಹಣಕಾಸಿನ ವರ್ಷದ  ಅಂತ್ಯಕ್ಕೆ ಲಾಭದ ಪ್ರಮಾಣ ಶೇ.20ಕ್ಕೂ ಅಧಿಕವಾಗಲಿದೆ ಎಂದು ಬಿಎಸ್‌ಎನ್ಎಲ್ ವಿಶ್ವಾಸ  ವ್ಯಕ್ತಪಡಿಸಿದೆ. 2024ರಲ್ಲಿ ರಿಲಯನ್ಸ್ ಜಿಯೋ ಬೆಲೆ ಏರಿಕೆ ಮಾಡಿದ್ದರಿಂದಲೇ ಬಿಎಸ್‌ಎನ್‌ಎಲ್ ಲಾಭಕ್ಕೆ ಹಿಂದಿರುಗಿದೆ ಎಂದು ನೆಟ್ಟಿಗರು ಕಮೆಂಟ್ ಮಾಡುವ ಮೂಲಕ ಮುಕೇಶ್ ಅಂಬಾನಿ ಫೋಟೋ ಹಂಚಿಕೊಳ್ಳುತ್ತಿದ್ದಾರೆ. ಆದ್ರೆ ಕಳೆದ ಎರಡು ತಿಂಗಳಿನಿಂದ ಬಿಎಸ್‌ಎನ್‌ಎಲ್ ಬಳಕೆದಾರರು ಮತ್ತೆ ಖಾಸಗಿ ಟೆಲಿಕಾಂ ನೆಟ್‌ವರ್ಕ್‌ಗೆ ಹಿಂದಿರುಗುತ್ತಿರುವ ಬಗ್ಗೆ ವರದಿಯಾಗಿದೆ.

ಬಿಎಸ್‌ಎನ್‌ಎಲ್ ತನ್ನ ಹಣಕಾಸು ವೆಚ್ಚ ಮತ್ತು ಒಟ್ಟಾರೆ ವೆಚ್ಚವನ್ನು ಕಡಿಮೆ ಮಾಡಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ 1,800 ಕೋಟಿ ರೂ.ಗಳಿಗಿಂತ ಹೆಚ್ಚು ನಷ್ಟದಲ್ಲಿ ಇಳಿಕೆಗೆ ಕಾರಣವಾಗಿದೆ. ತನ್ನ ಮೊಬಿಲಿಟಿ ಸೇವೆಗಳ ಆದಾಯವು 15% ರಷ್ಟು ಬೆಳೆದರೆ, ಎಫ್‌ಟಿಟಿಎಚ್  ಆದಾಯವು 18% ರಷ್ಟು ಹೆಚ್ಚಾಗಿದೆ. ಅಂತೆಯೇ ಲೀಸ್ಡ್ ಲೈನ್ ಸೇವೆಗಳ ಆದಾಯವು ಹಿಂದಿನ ವರ್ಷದ ತ್ರೈಮಾಸಿಕಕ್ಕಿಂತ 14% ಹೆಚ್ಚಾಗಿದೆ ಎನ್ನಲಾಗಿದೆ.

 ಕೇಂದ್ರದಿಂದ ಬಿಎಸ್ಎನ್‌ಎಲ್‌ಗೆ 6000 ಕೋಟಿ ರೂ.

ಈ ತಿಂಗಳ ಆರಂಭದಲ್ಲಿ, ಭಾರತ್ ಸಂಚಾರ್ ನಿಗಮ್ ಲಿಮಿಟೆಡ್   ಮತ್ತು ಮಹಾನಗರ ಟೆಲಿಫೋನ್ ನಿಗಮ್ ಲಿಮಿಟೆಡ್ ನ 4G ನೆಟ್‌ವರ್ಕ್ ವಿಸ್ತರಣೆಯನ್ನು ವೇಗಗೊಳಿಸಲು ಕೇಂದ್ರ ಸಚಿವ ಸಂಪುಟ ಸುಮಾರು 6,000 ಕೋಟಿ ರೂಪಾಯಿಗಳ ಹಣಕಾಸು ಪ್ಯಾಕೇಜ್ ಅನ್ನು ಅನುಮೋದಿಸಿತ್ತು. ಈ ಯೋಜನೆಯಡಿಯಲ್ಲಿ, ಸಂಸ್ಥೆಯ ಸಂಪರ್ಕ ಜಾಲವನ್ನು ಸುಧಾರಿಸಲು ಮತ್ತು ಗ್ರಾಹಕರಿಗೆ ಉತ್ತಮ ನೆಟ್‌ವರ್ಕ್ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ಸುಮಾರು ಒಂದು ಲಕ್ಷ 4G ಸೈಟ್‌ಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿತ್ತು. ಒಟ್ನಲ್ಲಿ ಬಿಎಸ್‌ಎನ್‌ಎಲ್‌ ಮತ್ತೆ ಲಾಭದ ಟ್ಯಾಕ್‌ಗೆ ಮರುಳಿದ್ದು, ಗ್ರಾಹಕರಿಗೆ ಇನ್ನೂ ಉತ್ತಮ ಸೇವೆಯನ್ನ ನೀಡಿದ್ರೆ ಖಾಸಗಿ ಕಂಪನಿಗಳನ್ನ ಹಿಂದಿಕ್ಕೊದು ಪಕ್ಕಾ.

Kishor KV