ಪೋಕ್ಸೋ ಕೇಸ್‌ನಲ್ಲಿ BSYಗೆ ಕೊಂಚ ರಿಲೀಫ್!‌ – ಸುಪ್ರೀಂಕೋರ್ಟ್​​ನಿಂದ ಮಹತ್ವದ ಆದೇಶ

ಪೋಕ್ಸೋ ಕೇಸ್‌ನಲ್ಲಿ BSYಗೆ ಕೊಂಚ ರಿಲೀಫ್!‌ – ಸುಪ್ರೀಂಕೋರ್ಟ್​​ನಿಂದ ಮಹತ್ವದ ಆದೇಶ

ಪೋಕ್ಸೋ ಕೇಸ್‌ಗೆ ಸಂಬಂಧಿಸಿದಂತೆ ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪಗೆ ಸುಪ್ರೀಂಕೋರ್ಟ್ ಕೊಂಚ ರಿಲೀಫ್‌ ಕೊಟ್ಟಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಮಧ್ಯಂತರ ತಡೆ ನೀಡಿದೆ.

ಇದನ್ನೂ ಓದಿ: ಹೈಕಮಾಂಡ್‌ ಹೇಳಿದಾಗ ಡಿಕೆಶಿ ಸಿಎಂ ಆಗುತ್ತಾರೆ ಎಂದ ಸಿದ್ಧರಾಮಯ್ಯ! – ವರ್ಕೌಟ್‌ ಆಯ್ತಾ ಬ್ರೇಕ್‌ಫಾಸ್ಟ್‌ ಮೀಟಿಂಗ್‌?

ಕಳೆದ ವರ್ಷದ 17 ವರ್ಷದ ಯುವತಿಗೆ ಬಿಎಸ್ ಯಡಿಯೂರಪ್ಪ ಅವರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಸಂತ್ರಸ್ತೆಯ ತಾಯಿಯೇ ಈ ಬಗ್ಗೆ ಆರೋಪಿಸಿದ್ದರು. ಮಾರ್ಚ್ 14, 2024ರಂದು ಸದಾಶಿವನಗರ ಪೊಲೀಸರಿಂದ ಬಿಎಸ್​​ವೈ ವಿರುದ್ಧ ಪ್ರಕರಣ ದಾಖಲಾಗಿತ್ತು. ನಂತರ, ಮುಂದಿನ ತನಿಖೆಗಾಗಿ ಇದನ್ನು ಸಿಐಡಿ‌ಗೆ ವರ್ಗಾಯಿಸಲಾಗಿತ್ತು. ಸಿಐಡಿ ಮರು FIR ದಾಖಲಿಸಿ, ತನಿಖೆ ನಡೆಸಿ ಚಾರ್ಜ್​​ಶೀಟ್​​ ಸಲ್ಲಿಸಿತ್ತು. ಯಡಿಯೂರಪ್ಪ ಅವರ ವಿರುದ್ಧ ದಾಖಲಾಗಿದ್ದ ಪ್ರಕರಣ ರದ್ದುಪಡಿಸಲು ನವೆಂಬರ್ 13ರಂದು ಕರ್ನಾಟಕ ಹೈಕೋರ್ಟ್​​ ನಿರಾಕಾರಿಸಿತ್ತು. ಆ ಬೆನ್ನಲ್ಲೇ ಬಿಎಸ್​​ವೈ ಸುಪ್ರೀಂಕೋರ್ಟ್​​ ಮೊರೆ ಹೋಗಿದ್ದರು. ಇದೀಗ ಬಿಎಸ್‌ವೈ ಗೆ ಸುಪ್ರೀಂ ಕೋರ್ಟ್‌ ಕೊಂಚ ರಿಲೀಫ್‌ ನೀಡಿದೆ.

ಯಡಿಯೂರಪ್ಪ ಪರ ವಾದಿಸಿದ ಹಿರಿಯ ವಕೀಲರಾದ ಸಿಧಾರ್ಥ ಲೂಥ್ರಾ ಮತ್ತು ಸಿಧಾರ್ಥ ದಾವೆ ಅವರು, ಹೈಕೋರ್ಟ್​​ನ ಫೆ.7, 2025ರ ತೀರ್ಪನ್ನು ತಪ್ಪಾಗಿ ಅರ್ಥೈಸಲಾಗಿದೆ. ಹಿಂದಿನ ಸುತ್ತಿನ ತೀರ್ಪಿನ ಕಾರಣ ನೀಡಿ ಹೈಕೋರ್ಟ್ ಪರಿಗಣಿಸಿಲ್ಲ. ಯಡಿಯೂರಪ್ಪ ಅವರ ಅರ್ಜಿಯನ್ನು ಅರ್ಹತೆ ಆಧಾರದಲ್ಲಿ ಪರಿಗಣಿಸಿಲ್ಲ. ಅವರು 88 ವರ್ಷದ ಹಿರಿಯ ವ್ಯಕ್ತಿ, ನಾಲ್ಕು ಬಾರಿ ಮುಖ್ಯಮಂತ್ರಿ. ರಾಜಕೀಯ ದ್ವೇಷದಿಂದ ನರಳುತ್ತಿದ್ದಾರೆ ಎಂದು ಕೋರ್ಟ್​​ ಗಮನಕ್ಕೆ ತಂದಿದ್ದಾರೆ. ಈ ವೇಳೆ, ಹೈಕೋರ್ಟ್​​ನಲ್ಲಿ ಹೊಸದಾಗಿ ತೀರ್ಮಾನಿಸಲು ಏಕೆ ಸೂಚಿಸಬಾರದು ಎಂದು ಪೀಠ ಪ್ರತಿವಾದಿಗಳನ್ನು ಪ್ರಶ್ನಿಸಿದೆ. ಬಳಿಕ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೈಸಿಂಗ್ ಜೊಯ್‌ಮಾಲ್ಯ ಅವರನ್ನೊಳಗೊಂಡ ಪೀಠ ಪ್ರಕರಣದ ವಿಚಾರಣೆಗೆ ಮಧ್ಯಂತರ ತಡೆ ನೀಡಿದೆ. ಸಿಐಡಿ ಮತ್ತು ಸಂತ್ರಸ್ತ ಬಾಲಕಿಗೆ ನೋಟಿಸ್​​ ಜಾರಿ ಮಾಡಿದೆ.

Shwetha M