ಶೋಭಾ ಕರಂದ್ಲಾಜೆ ಬೆನ್ನಿಗೆ ನಿಂತ ಬಿ.ಎಸ್ ಯಡಿಯೂರಪ್ಪ – ವಿರೋಧಿ ಬಣಕ್ಕೆ ಬಿಎಸ್‌ವೈ ಶಾಕ್

ಶೋಭಾ ಕರಂದ್ಲಾಜೆ ಬೆನ್ನಿಗೆ ನಿಂತ ಬಿ.ಎಸ್ ಯಡಿಯೂರಪ್ಪ – ವಿರೋಧಿ ಬಣಕ್ಕೆ ಬಿಎಸ್‌ವೈ ಶಾಕ್

ಲೋಕಸಭಾ ಚುನಾವಣೆಗೆ ಟಿಕೆಟ್ ಘೋಷಣೆಗೂ ಮುನ್ನವೇ ಚಿಕ್ಕಮಗಳೂರು ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟವಾಗಿದೆ. ಶೋಭಾ ಕರಂದ್ಲಾಜೆ ಅವರಿಗೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಟಿಕೆಟ್ ನೀಡಬಾರದು ಎಂಬ ಕೂಗು ರಾಷ್ಟ್ರ ಮಟ್ಟದಲ್ಲಿ ಸಂಚಲನ ಸೃಷ್ಟಿಸಿದೆ. ಈಗಾಗ್ಲೇ ಹೊಸಬರಿಗೆ ಟಿಕೆಟ್ ನೀಡುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹ ಸಚಿವ ಅಮಿಷ್ ಶಾಗೆ ಪತ್ರ ಬರೆಯಲಾಗಿತ್ತು. ಪತ್ರ ಚಳವಳಿ ಬೆನ್ನಲ್ಲೇ ಗೋಬ್ಯಾಕ್ ಶೋಭಾ ಪೋಸ್ಟರ್ ಅಭಿಯಾನ ಶುರುವಾಗಿದೆ. ಇದು ತೀವ್ರ ಸ್ವರೂಪ ಪಡೆದ ಬೆನ್ನಲ್ಲೇ ಮಾಜಿ ಸಿಎಂ ಬಿ.ಎಸ್​ ಯಡಿಯೂರಪ್ಪ ಮಧ್ಯೆ ಪ್ರವೇಶಿಸಿದ್ದಾರೆ. ಶೋಭಾ ಕರಂದ್ಲಾಜೆ ಬೆನ್ನಿಗೆ ನಿಲ್ಲುವ ಮೂಲಕ ಎದುರಾಳಿಗಳಿಗೆ ಖಡಕ್ ಸಂದೇಶ ರವಾನಿಸಿದ್ದಾರೆ.

ಇದನ್ನೂ ಓದಿ: ಬಿಜೆಪಿಗೆ ಬಿಸಿತುಪ್ಪವಾದ ಉಡುಪಿ ಚಿಕ್ಕಮಗಳೂರು ಕ್ಷೇತ್ರ – ಕಾರ್ಯಕರ್ತರ ಬೆಂಬಲ ಶೋಭಾಗೋ..? ಸಿಟಿ ರವಿಗೋ..?

ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಟಿಕೆಟ್​ಗಾಗಿ ಬಿಜೆಪಿಯಲ್ಲಿ ಪೈಪೋಟಿ ತಾರಕಕ್ಕೇರಿದೆ. ಬಿಜೆಪಿ ಕಾರ್ಯಕರ್ತರ ಒಂದು ಬಣದ ‘ಶೋಭಾ ಹಠಾವೋ ಬಿಜೆಪಿ ಬಚಾವೋ’ ಅಭಿಯಾನ ನಡೆಸ್ತಿದೆ. ಹೀಗಾಗಿ ಖುದ್ದು ಅಖಾಡಕ್ಕೆ ಇಳಿದಿರುವ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಚಿಕ್ಕಮಗಳೂರಿಗೆ ಭೇಟಿ ನೀಡಿ ಬಿಜೆಪಿ ನಾಯಕರ ಜತೆ ಸಭೆ ನಡೆಸಿದ್ದಾರೆ. ಚಿಕ್ಕಮಗಳೂರು ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ ಸೇರಿ ಹಲವರು ಭಾಗಿಯಾಗಿದ್ದು, ಶೋಭಾ ಗೋಬ್ಯಾಕ್ ಅಭಿಯಾನದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಹಾಗೇ  ಇಂಥ ಅಭಿಯಾನಗಳಿಗೆ ಹೆದರಬೇಕಿಲ್ಲ. ಶೋಭಾ ಕರಂದ್ಲಾಜೆ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ. ಇದು ಷಡ್ಯಂತ್ರದ ಒಂದು ಭಾಗವಾಗಿದೆ. ಇನ್ನು ಮೂರು ದಿನದ ಒಳಗೆ ಎಲ್ಲವೂ ಗೊತ್ತಾಗುತ್ತೆ. 3 ದಿನದಲ್ಲಿ ಮೊದಲ ಪಟ್ಟಿ ಬಿಡುಗಡೆ ಆಗಬಹುದು. ಶೋಭಾ ಕರಂದ್ಲಾಜೆ ಮೋದಿ ಸಂಪುಟದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಈ ಬಾರಿಯೂ ಶೋಭಾ ಕರಂದ್ಲಾಜೆ ಗೆಲ್ಲುತ್ತಾರೆ ಎನ್ನುವ ಮೂಲಕ ಶೋಭಾ ಕರಂದ್ಲಾಜೆ ಅವರಿಗೆ ಈ ಬಾರಿ ಉಡುಪಿ-ಚಿಕ್ಕಮಗಳೂರು ಟಿಕೆಟ್​ ಎನ್ನುವುದನ್ನು ಖಚಿತಪಡಿಸಿದ್ದಾರೆ. ಈ ಮೂಲಕ ವಿರೋಧಿ ಬಣಕ್ಕೆ ಶಾಕ್ ಕೊಟ್ಟಿದ್ದಾರೆ.

ಬಿಜೆಪಿ ಕಾರ್ಯಕರ್ತರೇ ಸಂಸದೆ ವಿರುದ್ಧ ಅಭಿಯಾನ ಆರಂಭಿಸಿದ್ದು, ಬಿಜೆಪಿಗೆ ನುಂಗಲಾರದ ತುತ್ತಾಗಿತ್ತು. ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಭಾರೀ ಮುಜುಗರಕ್ಕೂ ಕಾರಣವಾಗಿತ್ತು. ಹೀಗಾಗಿ ಸ್ವತಃ ಯಡಿಯೂರಪ್ಪ ಮಧ್ಯೆ ಪ್ರವೇಶ ಮಾಡಿ ಟಿಕೆಟ್​​ ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ಆದ್ರೆ ಅಭಿಯಾನಕ್ಕೆ ಸೊಪ್ಪು ಹಾಕದ ಶೋಭಾ ಕರಂದ್ಲಾಜೆ ಎದುರಾಳಿಗಳಿಗೆ ಸರಿಯಾಗೇ ತಿರುಗೇಟು ಕೊಟ್ಟಿದ್ದಾರೆ.

ಹಣವಿದೆ ಎಂಬ ಅಹಂಕಾರ, ದರ್ಪ, ದುಡ್ಡಿನ ಮದ ಹೀಗೆಲ್ಲಾ ಮಾಡಿಸುತ್ತೆ. ಗಂಡಸರಿಗೆ ನನ್ನ ಹತ್ತಿರವೇ ಎಲ್ಲಾ ಅಧಿಕಾರ ಇರಬೇಕು ಎಂಬುದು ಇರುತ್ತದೆ ಎಂದು ಟಿಕೆಟ್ ತಪ್ಪಿಸಲು ಪ್ರಯತ್ನಿಸುತ್ತಿರುವವರಿಗೆ ಖಡಕ್ ಉತ್ತರ ಕೊಟ್ಟಿದ್ದಾರೆ. ಏನೇ ಷಡ್ಯಂತ್ರ ನಡೆಸಿದರೂ ಹಿರಿಯರು ನನ್ನ ಜೊತೆ ಇದ್ದಾರೆ, ಬಿಜೆಪಿ ಪಕ್ಷದ ಹೈ ಕಮಾಂಡ್‌ಗೆ ಗೋ ಬ್ಯಾಕ್ ನಡೆಸಿದವರ ಬಗ್ಗೆ ಸಂಪೂರ್ಣ ವರದಿ ತಲುಪಿದ್ದು, ಕೇಂದ್ರ ವರಿಷ್ಠರು ಎಲ್ಲದಕ್ಕೂ ಉತ್ತರ ಕೊಡುತ್ತಾರೆ ಎಂದಿದ್ದಾರೆ. ಇದರ ನಡುವೆ ಜೈಲಿನಲ್ಲಿರುವ ಭಜರಂಗದಳದ ಕಾರ್ಯಕರ್ತರನ್ನ ಭೇಟಿಯಾಗಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಆಲ್ದೂರು ಗ್ರಾಮದಲ್ಲಿ ಫೆಬ್ರವರಿ 9ರಂದು ಅನ್ಯಕೋಮಿನ ಯುವಕನ ಮೇಲೆ ಹಲ್ಲೆ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಜೈಲು ಸೇರಿದ್ದ ಬಜರಂಗದಳ ಕಾರ್ಯಕರ್ತರನ್ನು ಕೇಂದ್ರ ಸಚಿವೆ ಶೋಭಾ ಭೇಟಿ ಮಾಡಿದ್ದಾರೆ. ನಗರದ ರತ್ನಗಿರಿ ರಸ್ತೆಯಲ್ಲಿರುವ ಜಿಲ್ಲಾ ಕೇಂದ್ರ ಕಾರಾಗೃಹಕ್ಕೆ ತೆರಳಿ ಯೋಗಕ್ಷೇಮ ವಿಚಾರಿಸಿದ್ದಾರೆ. ಜೊತೆಗೆ ಕಾನೂನು ಪ್ರಕ್ರಿಯೆ ಬಗ್ಗೆ ಚರ್ಚೆ ಮಾಡಿದ್ದಾರೆ.

2019ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿಯೂ ಗೋ ಬ್ಯಾಕ್ ಶೋಭಾ ಅಭಿಯಾನ ನಡೆದಿತ್ತು. ಶೋಭಾ ಕರಂದ್ಲಾಜೆಗೆ ಟಿಕೆಟ್ ನೀಡಬಾರದು ಎಂದು ಪತ್ರ ಚಳವಳಿ ಸಹ ನಡೆಸಲಾಗಿತ್ತು. ಆದರೆ ಪಕ್ಷ ಅವರಿಗೆ ಟಿಕೆಟ್ ನೀಡಿತ್ತು. ಚುನಾವಣೆಯಲ್ಲಿ ಶೋಭಾ ಕರಂದ್ಲಾಜೆ 3 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದು ಸಂಸದರಾಗಿದ್ದರು. ಬಳಿಕ ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಸಚಿವರೂ ಆದರು. ಆದ್ರೀಗ ಮತ್ತೊಮ್ಮೆ ಗೋ ಬ್ಯಾಕ್ ಶೋಭಾ ಅಭಿಯಾನ ಸದ್ದು ಮಾಡ್ತಿದೆ. ಶೋಭಾ ಬೆನ್ನಿಗೆ ಬಿಎಸ್​ವೈ ನಿಂತಿದ್ದು ಎದುರಾಳಿಗಳಿಗೆ ಶಾಕ್ ಕೊಟ್ಟಿದ್ದಾರೆ. ಆದ್ರೆ ಈ ಭಿನ್ನಮತ ಇಷ್ಟಕ್ಕೇ ತಣಿಯುತ್ತಾ ಅಥವಾ ಟಿಕೆಟ್ ಘೋಷಣೆ ಬಳಿಕ ಮತ್ತಷ್ಟು ಸ್ಫೋಟವಾಗುತ್ತಾ ಅನ್ನೋದನ್ನ ಕಾದು ನೋಡ್ಬೇಕು.

 

Sulekha