ಮಂತ್ರಾಲಯಕ್ಕೆ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಪೋಷಕರ ಭೇಟಿ – ಬೀಗರ ಜೊತೆ ರಾಯರ ದರ್ಶನ ಪಡೆದ ಸುಧಾಮೂರ್ತಿ
ರಿಷಿ ಸುನಕ್ ಬ್ರಿಟನ್ ಪ್ರಧಾನಿ ಆದಾಗಿನಿಂದ ಭಾರತದಲ್ಲಿ ಸಖತ್ ಸುದ್ದಿಯಾಗಿದ್ದಾರೆ. ವಿಶೇಷವೆಂದರೆ ಅವರು ಭಾರತದ ಖ್ಯಾತ ಉದ್ಯಮಿಗಳಾದ ಇನ್ಫೋಸಿಸ್ ನಾರಾಯಣ ಮೂರ್ತಿ ಅವರ ಮಗಳಾದ ಅಕ್ಷತಾ ಮೂರ್ತಿಯನ್ನು ವಿವಾಹವಾಗಿದ್ದಾರೆ. ಅಲ್ಲದೆ ಇತ್ತೀಚೆಗೆ ದೆಹಲಿಯಲ್ಲಿ ನಡೆದ ಜಿ.20 ಶೃಂಗಸಭೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಹಿಂದೂ ದೇವಾಲಯಗಳಿಗೆ ದಂಪತಿ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ಜಿ-20 ಶೃಂಗಸಭೆ ಹಿನ್ನೆಲೆ ಬೆಂಗಳೂರಿಗೆ ಆಗಮಿಸಿದ್ದ ಬ್ರಿಟನ್ ಪ್ರಧಾನಿ ರಿಷಿ ಸುನಾಕ್ ಅವರ ಪೋಷಕರು ಭಾರತದಲ್ಲೇ ಉಳಿದುಕೊಂಡಿದ್ದು ರಾಯರ ದರ್ಶನ ಪಡೆದಿದ್ದಾರೆ.
ಇದನ್ನೂ ಓದಿ : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸೆ. 9,10ರಂದು ಜಿ20 ಶೃಂಗಸಭೆ – ಜೋ ಬೈಡೆನ್ ಭದ್ರತಾ ಪಡೆಗೆ 400 ರೂಮ್ ಬುಕ್!
ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ಜಿ-20 ಶೃಂಗಸಭೆಯಲ್ಲಿ(G20) ಭಾಗಿಯಾಗಲು ಭಾರತಕ್ಕೆ ಬಂದಿದ್ದ ಬ್ರಿಟನ್ ಪ್ರಧಾನಿ ರಿಷಿ ಸುನಕ್ ದಂಪತಿ ಜೊತೆ ರಿಷಿ ಸುನಕ್(Rishi Sunak) ಅವರ ತಂದೆ-ತಾಯಿ ಕೂಡ ಭಾರತಕ್ಕೆ ಬಂದಿದ್ದಾರೆ. ಸದ್ಯ ರಿಷಿ ಸುನಕ್ ಅವರ ಕುಟುಂಬಸ್ಥರು ಅನೇಕ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ಶೃಂಗಸಭೆ ವೇಳೆ ದೆಹಲಿಯ ಅಕ್ಷರಧಾಮ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದ ರಿಷಿ ಸುನಕ್ ದಂಪತಿ ಫೋಟೋಗಳು ವೈರಲ್ ಆಗಿದ್ದವು. ಬಳಿಕ ರಿಷಿ ಸುನಕ್ ಅವರ ತಾಯಿ ಉಷಾ ಸುನಕ್ ಅವರು ತಮ್ಮ ಬೀಗತಿ ಸುಧಾಮೂರ್ತಿ ಅವರೊಂದಿಗೆ ಬೆಂಗಳೂರಿನ ಶಾಸಕ ಉದಯ ಗರುಡಾಚಾರ್ ಅವರ ಮನೆಯಲ್ಲಿ ಕೃಷ್ಣ ಜನ್ಮಾಷ್ಟಮಿಯಲ್ಲಿ ಭಾಗಿಯಾಗಿದ್ದು ಜನರ ಮೆಚ್ಚುಗೆಗೆ ಕಾರಣವಾಗಿತ್ತು. ಇದೀಗ ರಿಷಿ ಸುನಾಕ್ ಅವರ ಪೋಷಕರು ಮಂತ್ರಾಲಯದ ರಾಯರ ದರ್ಶನ ಮಾಡಿದ್ದಾರೆ.
ರಿಷಿ ಸುನಕ್ ಅವರ ಪೋಷಕರಾದ ಯಶ್ವೀರ್ ಸುನಕ್ ಹಾಗೂ ಉಷಾ ಸುನಕ್ ಅವರು ಮಂತ್ರಾಲಯ ರಾಯರ ದರ್ಶನ ಪಡೆದಿದ್ದಾರೆ. ಇವರೊಂದಿಗೆ ಇನ್ಫೋಸಿಸ್ ಮುಖ್ಯಸ್ಥೆ ಹಾಗೂ ಬೀಗತಿಯಾಗಿರುವ ಸುಧಾಮೂರ್ತಿ ಅವರು ಕೂಡ ಜೊತೆ ಆಗಮಿಸಿದ್ದರು. ಮೊದಲು ರಾಯರ ದರ್ಶನ ಪಡೆದು, ಬಳಿಕ ಮಂತ್ರಾಲಯದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರ ಆಶಿರ್ವಾದ ಪಡೆದರು. ಸುಧಾಮೂರ್ತಿ ಹಾಗೂ ರಿಷಿ ಸುನಕ್ ಪೋಷಕರಿಗೆ ಶ್ರೀಗಳು ಆಶೀರ್ವಚನ ಮಾಡಿದರು. ನಂತರ ಪರಿಮಳ ಪ್ರಸಾದ ಹಾಗೂ ಮಂತ್ರಾಕ್ಷತೆ ನೀಡಿ ಆಶಿರ್ವದಿಸಿದರು. ಮತ್ತೊಂದೆಡೆ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರಿಗೆ ಮಂತ್ರಾಕ್ಷತೆ, ಪರಿಮಳ ಪ್ರಸಾದ ತಲುಪಿಸಲು ತಿಳಿಸಿದರು.