160 ತೂಗು ಸೇತುವೆ ನಿರ್ಮಿಸಿದ ಸುಳ್ಯದ ಸೇತುವೆ ಮನುಷ್ಯ ಇನ್ನಿಲ್ಲ – ಡಾ. ಗಿರೀಶ್ ಭಾರದ್ವಾಜ್ ವಿಧಿವಶ

160 ತೂಗು ಸೇತುವೆ ನಿರ್ಮಿಸಿದ ಸುಳ್ಯದ ಸೇತುವೆ ಮನುಷ್ಯ ಇನ್ನಿಲ್ಲ – ಡಾ. ಗಿರೀಶ್ ಭಾರದ್ವಾಜ್ ವಿಧಿವಶ

ಭಾರತದ ಸೇತುವೆ ಮನುಷ್ಯ, ಸುಳ್ಯದ ವಿಶ್ವೇಶ್ವರಯ್ಯ, ಪದ್ಮಶ್ರೀ ಡಾ. ಗಿರೀಶ್ ಭಾರದ್ವಾಜ್ ಅವರು ನಿಧನರಾಗಿದ್ದಾರೆ. ಡಾ. ಗಿರೀಶ್ ಅವರು ದೇಶದ ವಿವಿಧ ಭಾಗಗಳಲ್ಲಿ 160ಕ್ಕೂ ಹೆಚ್ಚು ತೂಗು ಸೇತುವೆಗಳನ್ನು ನಿರ್ಮಿಸಿ ಗ್ರಾಮೀಣ ಸಂಪರ್ಕ ಕಲ್ಪಿಸಿಕೊಟ್ಟಿದ್ದರು.

ಡಾ. ಗಿರೀಶ್ ಭಾರದ್ವಾಜ್. ಈ ಹೆಸರನ್ನು ನಮ್ಮ ಕರುನಾಡು ಮರೆಯುವುದಿಲ್ಲ. ಅಷ್ಟೇ ಯಾಕೆ ಇವರು ಭಾರತದ ಹೆಮ್ಮೆಯ ಪುತ್ರ. ಇವರನ್ನು ಭಾರತದ ಸೇತುವೆ ಮನುಷ್ಯ ಎಂದೇ ಕರೆಯಲಾಗುತ್ತದೆ. ಅದೆಷ್ಟೋ ಹಳ್ಳಿಗಳ ಜನ ಇವರನ್ನು ಅನುದಿನವೂ ನೆನೆಯುತ್ತಾರೆ. ನಮ್ಮ ನಾಡಿನ ಹೆಮ್ಮೆಯ ತಂತ್ರಜ್ಞ, ಪದ್ಮಶ್ರೀ ಪುರಸ್ಕೃತ ಡಾ. ಗಿರೀಶ್ ಭಾರದ್ವಾಜ್ ತಮ್ಮ 76ನೇ ವಯಸ್ಸಿಗೆ ನಿಧನರಾಗಿದ್ದಾರೆ. ಮಂಗಳವಾರ ಮುಂಜಾನೆ ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇತ್ತೀಚೆಗಷ್ಟೇ ಉತ್ತರಾಖಂಡ ಪ್ರವಾಸ ಮುಗಿಸಿ ವಾಪಸಾಗಿದ್ದ ಅವರಿಗೆ ತೀವ್ರ ಹೃದಯ ಸಂಬಂಧಿ ಸಮಸ್ಯೆ ಕಾಣಿಸಿಕೊಂಡಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರೂ ಕೂಡಾ ಚಿಕಿತ್ಸೆ ಫಲಕಾರಿಯಾಗಲಿಲ್ಲ.

ಸುಳ್ಯದ ಸಿರಿ ಡಾ. ಗಿರೀಶ್ ಭಾರದ್ವಾಜ್

1950ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅರಂಬೂರಿನಲ್ಲಿ ಜನಿಸಿದರು. ಗ್ರಾಮೀಣ ಬದುಕಿನ ಸಂಕಷ್ಟಗಳನ್ನು ಹತ್ತಿರದಿಂದ ನೋಡಿದ್ದ ಅವರು, 1973ರಲ್ಲಿ ಮಂಡ್ಯದ ಪಿ.ಇ.ಎಸ್. ಕಾಲೇಜಿನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಮುಗಿಸಿದರು. ತನ್ನ ಮುಂದೆ ಅನೇಕ ಅವಕಾಶಗಳಿದ್ದರೂ ತಂದೆಯ ಮಾತಿಗೆ ಬೆಲೆಕೊಟ್ಟು ಹುಟ್ಟೂರಲ್ಲೇ ಉಳಿದರು. ಮೊದಲು ಸಣ್ಣದೊಂದು ಗ್ಯಾರೇಜ್ ತೆರೆದು ಹಳ್ಳಿಗರ ತಾಂತ್ರಿಕ ಕಷ್ಟಗಳಿಗೆ ಸ್ಪಂದಿಸಿದರು. 1989ರ ಆ ಸಮಯ. ಮಳೆಗಾಲದಲ್ಲಿ ಪಯಸ್ವಿನಿ ನದಿ ಉಕ್ಕಿ ಹರಿಯುವಾಗ ಅರಂಬೂರು ಗ್ರಾಮಸ್ಥರು ಸುಳ್ಯ ಪಟ್ಟಣಕ್ಕೆ ಬರಲಾಗದೆ ಪರದಾಡುತ್ತಿದ್ದರು. ಸರ್ಕಾರದಿಂದಲೂ ಯಾವುದೇ ಸಹಾಯ ಸಿಗದಿದ್ದಾಗ, ಊರಿನ ಜನ ಬಂದು ನಿಂತಿದ್ದು ಇದೇ ಗಿರೀಶ್ ಅವರ ಮುಂದೆ. ಆಗ ಗ್ರಾಮೀಣ ಭಾಗದಲ್ಲಿ ‘ತೂಗು ಸೇತುವೆ’ ಅನ್ನೋ ಪರಿಕಲ್ಪನೆಯೇ ಇರಲಿಲ್ಲ. ಊರವರ ಈ ಕಷ್ಟವನ್ನು ಒಂದು ದೊಡ್ಡ ಸವಾಲಾಗಿ ಸ್ವೀಕರಿಸಿದ ಅವರು, 40 ಜನ ಉತ್ಸಾಹಿ ಯುವಕರನ್ನು ಸೇರಿಸಿಕೊಂಡು ಕೇವಲ ಕೆಲವೇ ದಿನಗಳಲ್ಲಿ ದೇಶವೇ ಮೆಚ್ಚುವಂತಹ ಮೊದಲ ತೂಗು ಸೇತುವೆ ನಿರ್ಮಿಸಿಯೇ ಬಿಟ್ಟರು. ಅಚ್ಚರಿಯ ವಿಚಾರ ಅಂದರೆ, 35 ವರ್ಷಗಳಾದರೂ ಆ ಸೇತುವೆ ಇಂದಿಗೂ ಸಾರ್ವಜನಿಕರ ಬಳಕೆಗೆ ಸುಭದ್ರವಾಗಿ ನಿಂತಿದೆ. ಆ ಒಂದು ಯಶಸ್ಸು ಗಿರೀಶ್ ಅವರನ್ನು ಸುಳ್ಯದಿಂದ ಕಾಶ್ಮೀರದವರೆಗೂ ಕೊಂಡೊಯ್ಯಿತು. ಕರ್ನಾಟಕ, ಕೇರಳ, ಒಡಿಶಾ, ಆಂಧ್ರಪ್ರದೇಶದಂತಹ ರಾಜ್ಯಗಳ ದುರ್ಗಮ ಕೊಳ್ಳಗಳಲ್ಲಿ, ಸ್ಥಳೀಯವಾಗಿ ಸಿಗುವ ವಸ್ತುಗಳನ್ನೇ ಬಳಸಿಕೊಂಡು ಅತ್ಯಂತ ಕಡಿಮೆ ವೆಚ್ಚದಲ್ಲಿ ಬರೋಬ್ಬರಿ 160ಕ್ಕೂ ಹೆಚ್ಚು ತೂಗು ಸೇತುವೆಗಳನ್ನು ಅವರು ನಿರ್ಮಿಸಿಕೊಟ್ಟಿದ್ದಾರೆ. ಈ ಸಾಧನೆ ಎಂಥದ್ದು ಎಂದರೆ, ಒಡಿಶಾ ಮತ್ತು ಆಂಧ್ರದಲ್ಲಿ ಇವರು ಕಟ್ಟಿದ ಸೇತುವೆಗಳನ್ನು ನೋಡಿ ಅಂದಿನ ಸಿಎಂ ಚಂದ್ರಬಾಬು ನಾಯ್ಡು ಅವರೇ ಇವರ ಕಾಲಿಗೆ ನಮಸ್ಕರಿಸಿದ್ದರು. ಇಷ್ಟೇ ಅಲ್ಲ, ಜಮ್ಮು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ (LoC) ಪೂಂಛ್ ವಲಯದಲ್ಲಿ ಸೇತುವೆ ನಿರ್ಮಿಸಲು ಖುದ್ದು ಭಾರತೀಯ ಸೇನೆಯೇ ಇವರ ತಾಂತ್ರಿಕ ಮಾರ್ಗದರ್ಶನ ಪಡೆದಿತ್ತು. ಇಷ್ಟೆಲ್ಲಾ ಸಾಧನೆ ಮಾಡಿದರೂ ಅವರು ಯಾವತ್ತೂ ತಮ್ಮ ಜ್ಞಾನವನ್ನು ವ್ಯಾಪಾರ ಮಾಡಿಕೊಳ್ಳಲಿಲ್ಲ. ನಕ್ಷೆ ಸಿದ್ಧಪಡಿಸುವುದರಿಂದ ಹಿಡಿದು ಸರ್ವೇ ಮಾಡುವವರೆಗೂ ನಯಾಪೈಸೆ ಸಂಭಾವನೆ ಪಡೆಯದ ಈ ನಿಸ್ವಾರ್ಥ ಜೀವಿ, ಹಳ್ಳಿಗರ ಬಳಿ ದುಡ್ಡಿಲ್ಲ ಅಂದಾಗ ತಮ್ಮ ಜೇಬಿನಿಂದಲೇ ಹಣ ಹಾಕಿ ಸೇತುವೆ ಕಟ್ಟಿಕೊಟ್ಟ ಅಪರೂಪದ ಉದಾಹರಣೆಗಳಿವೆ. ಇವರ ಈ ನಿಸ್ವಾರ್ಥ ಸಂಪರ್ಕ ಕ್ರಾಂತಿಯನ್ನು ಗುರುತಿಸಿ ಕೇಂದ್ರ ಸರ್ಕಾರ 2017ರಲ್ಲಿ ‘ಪದ್ಮಶ್ರೀ’ ಪ್ರಶಸ್ತಿ ನೀಡಿ ಗೌರವಿಸಿತ್ತು. ಪತ್ನಿ ಉಷಾ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ. ಡಾ. ಗಿರೀಶ್ ಭಾರದ್ವಾಜ್ ಕರ್ನಾಟಕ ರಾಜ್ಯ ಕಂಡ ಶ್ರೇಷ್ಠ ತಂತ್ರಜ್ಞ. ಇವರ ಸಾಧನೆಯ ಹಾದಿ ಇಂದಿನ ಯುವಕರಿಗೆ ಸ್ಪೂರ್ತಿ.

Sulekha

Leave a Reply

Your email address will not be published. Required fields are marked *